ಬೆಂಗಳೂರು: ಅಗ್ಗದ ಊರೆನ್ನುವ ಸಮೀಕ್ಷೆಗಳು ಮತ್ತು ಕಟು ವಾಸ್ತವ

ಮಂಗಳವಾರ, ಏಪ್ರಿಲ್ 23, 2019
31 °C

ಬೆಂಗಳೂರು: ಅಗ್ಗದ ಊರೆನ್ನುವ ಸಮೀಕ್ಷೆಗಳು ಮತ್ತು ಕಟು ವಾಸ್ತವ

Published:
Updated:
Prajavani

ವಿಶ್ವದ ಅತ್ಯಂತ ಅಗ್ಗದ ನಗರಗಳಲ್ಲಿ ಬೆಂಗಳೂರು ಐದನೇ ಸ್ಥಾನದಲ್ಲಿದೆ ಎನ್ನುವ ‘ದಿ ಎಕಾನಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌’ ಸಂಸ್ಥೆಯ ವರದಿ ಆಕರ್ಷಕವಾಗಿದೆ. ಆದರೆ, ವಾಸ್ತವ ಮಾತ್ರ ಅಧ್ಯಯನದ ಮುಖ್ಯಾಂಶಗಳಷ್ಟು ಸುಂದರವಾಗಿಲ್ಲ, ಸರಳವಾಗಿಲ್ಲ. ವಿಶ್ವದ 133 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಆಹಾರ, ಪಾನೀಯ, ಬಟ್ಟೆ, ಮನೆ ಬಾಡಿಗೆ, ಸಾರಿಗೆ, ಶಿಕ್ಷಣ ಹಾಗೂ ಮನರಂಜನೆಗೆ ಆಗುವ ಖರ್ಚುಗಳನ್ನು ಪರಿಗಣಿಸಿ ಅಗ್ಗದ ನಗರಗಳ ಪಟ್ಟಿ ತಯಾರಿಸಲಾಗಿದೆ. ಸರಕು–ಸೇವೆಗಳು ಸೇರಿದಂತೆ ಒಟ್ಟು 160 ಉತ್ಪನ್ನ ಮತ್ತು ಸೇವೆಗಳ ಬೆಲೆಗಳ ತೌಲನಿಕ ಅಧ್ಯಯನದ ನಂತರ ವಿಶ್ವದ ಬೇರೆ ಬೇರೆ ಭಾಗಗಳ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಜೀವನೋಪಾಯ ದುಬಾರಿಯಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಕಾಗದದ ಮೇಲಿನ ಈ ತೀರ್ಮಾನಗಳು ರಾಜಧಾನಿಯ ಜನಸಾಮಾನ್ಯರ ಪಾಲಿಗೆ ವಸ್ತುಸ್ಥಿತಿಯ ವಿರೋಧಾಭಾಸದಂತೆ ಕಾಣಿಸಿದರೆ ಆಶ್ಚರ್ಯವೇನಿಲ್ಲ. ಜನಜೀವನದ ಬಗ್ಗೆ ನಡೆಯುವ ಇಂಥ ಸಮೀಕ್ಷೆಗಳು ಜನಸಾಮಾನ್ಯರನ್ನು ಹೊರಗಿಟ್ಟು ನಡೆಯುತ್ತವೆ ಎಂದು ದುಡಿಯುವ ವರ್ಗಕ್ಕೆ ಅನ್ನಿಸಿದರೆ ಅದು ಅಸಹಜವೂ ಅಲ್ಲ. ಐ.ಟಿ–ಬಿ.ಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವವರ ಪಾಲಿಗೆ ಬೆಂಗಳೂರು ಸುಂದರವಾಗಿ ಕಾಣಿಸಿದರೂ, ಮಧ್ಯಮ ವರ್ಗದ ಪಾಲಿಗೆ ನಗರಜೀವನ ತಂತಿಯ ಮೇಲಿನ ನಡಿಗೆಯೇ ಸರಿ. ಒಂದು ವರ್ಗದ ಜೀವನ ಶೈಲಿಯನ್ನಷ್ಟೇ ಪ್ರತಿನಿಧಿಸುವ ಇಂಥ ಸಮೀಕ್ಷೆಗಳು ಹೊರಜಗತ್ತಿಗೆ ಬೆಂಗಳೂರನ್ನು ರಮಣೀಯವಾಗಿ ಚಿತ್ರಿಸುತ್ತವೆ. ವಿವಿಧ ಭಾಗಗಳ ಜನರು, ವಿಶೇಷವಾಗಿ ಉದ್ಯೋಗಾಕಾಂಕ್ಷಿ ಯುವಜನರು ಬೆಂಗಳೂರಿನತ್ತ ಮುಖ ಮಾಡಲು ಪ್ರೇರೇಪಿಸುತ್ತವೆ. ಇದರಿಂದ ಮಹಾನಗರದ ಬೊಜ್ಜಿನ ಒತ್ತಡ ಇನ್ನಷ್ಟು ಹೆಚ್ಚುತ್ತದೆಯೇ ಹೊರತು, ಬೇರೆ ಉಪಯೋಗಗಳೇನೂ ಇಲ್ಲ.

ಆಹಾರ, ಶಿಕ್ಷಣ ಹಾಗೂ ಆರೋಗ್ಯ ನಾಗರಿಕರ ಮೂಲಭೂತ ಅವಶ್ಯಕತೆಗಳು. ಬೆಳಗಿನ ಉಪಾಹಾರ ಮತ್ತು ಕಾಫಿಗೆ ಕನಿಷ್ಠ ₹ 50–70 ಬೇಕು. ವಿರೋಧಾಭಾಸವೆಂದರೆ, ಅನೇಕ ಕಾರ್ಮಿಕರ ದಿನದ ದುಡಿಮೆ ₹ 200ರ ಆಸುಪಾಸಿನಲ್ಲಿರುತ್ತದೆ. ಈ ದುಡಿಮೆಯೂ ಖಚಿತವಾದುದಲ್ಲ. ನಿಯಮಿತ ಉದ್ಯೋಗವಿಲ್ಲದ ಲಕ್ಷಾಂತರ ಜನರು ಈ ಮಹಾನಗರದಲ್ಲಿದ್ದಾರೆ. ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಪುರುಷರ ತಿಂಗಳ ಸಂಬಳ ₹ 6 ಸಾವಿರದಿಂದ 10 ಸಾವಿರದಷ್ಟಿರುತ್ತದೆ. ಮನೆಮಂದಿಯೆಲ್ಲ ದುಡಿದರಷ್ಟೇ ಎರಡು ಹೊತ್ತಿನ ಊಟ ಎನ್ನುವ ಸ್ಥಿತಿ ಇಂಥವರದು. ಶಿಕ್ಷಣದ ವಿಷಯಕ್ಕೆ ಬಂದರೆ ಶಾಲಾಶುಲ್ಕ ಹಾಗೂ ಡೊನೇಷನ್‌ಗಳು ಜನಸಾಮಾನ್ಯರಷ್ಟೇ ಅಲ್ಲ, ನಿಯಮಿತ ಹಾಗೂ ಸಮಾಧಾನಕರ ಆದಾಯವುಳ್ಳವರನ್ನೂ ಕಂಗೆಡಿಸುವಂತಹವು. ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕನಸುಗಳನ್ನೆಲ್ಲ ತ್ಯಾಗ ಮಾಡುವ, ಸಾಲ ಮಾಡಿ ಶಾಲಾಶುಲ್ಕ ಭರಿಸುವ ಪೋಷಕರ ಸಂಖ್ಯೆ ದೊಡ್ಡದಿದೆ. ಆರೋಗ್ಯ ಕ್ಷೇತ್ರ ಕೂಡ ಜನಸಾಮಾನ್ಯರ ಪಾಲಿಗೆ ನೆಮ್ಮದಿ ತರುವಂತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿನ ದರದ ಪಟ್ಟಿ ಜನಸಾಮಾನ್ಯರ ಅನಾರೋಗ್ಯ ವನ್ನು ಮತ್ತಷ್ಟು ತೀವ್ರಗೊಳಿಸುವಂತಿದೆ. ಸರ್ಕಾರಿ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋದರೆ, ಅಲ್ಲಿ ಕೂಡ ಯಾವುದೂ ಉಚಿತವಾಗಿ ಸಿಗುವಂತಿಲ್ಲ. ಹೋಗಲಿ, ಸಾರ್ವಜನಿಕ ಸಾರಿಗೆಯಾದರೂ ಕೈಗೆಟಕುವಂತಿದೆಯೇ ಎಂದರೆ ಅದೂ ಇಲ್ಲ. ಚೆನ್ನೈ, ಮುಂಬೈ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಬಸ್ಸು–ಮೆಟ್ರೊ ಪ್ರಯಾಣದರ ದುಬಾರಿ. ಬಸ್ಸುಗಳಿಗೆ ಕಾಯುತ್ತಾ, ಜನಸಂದಣಿಯಲ್ಲಿ ಏಗುತ್ತಾ, ಟ್ರಾಫಿಕ್‌ ಚಕ್ರವ್ಯೂಹಗಳಲ್ಲಿ ನಿಟ್ಟುಸಿರುಬಿಡುತ್ತಾ ಸಾಗುವ ಸ್ಥಿತಿ ಜೀವನದ ಬಗ್ಗೆ ನಿರಾಸಕ್ತಿ ಉಂಟುಮಾಡುವಷ್ಟು ಘೋರವಾಗಿರುತ್ತದೆ. ಮನೆ ಬಾಡಿಗೆ ಬಗ್ಗೆ ಹೇಳುವಂತೆಯೇ ಇಲ್ಲ. ದುಡಿಮೆಯ ಶೇಕಡ 30ರಿಂದ 40ರಷ್ಟನ್ನು ಮನೆ ಬಾಡಿಗೆಗೇ ಕೊಡಬೇಕಾದ ಸ್ಥಿತಿ ಇದೆ. ವಾಸ್ತವ ಹೀಗಿರುವಾಗ, ‘ಬೆಂಗಳೂರು ಅಗ್ಗದ ನಗರ’ ಎನ್ನುವ ಸಮೀಕ್ಷೆಗಳು ನಗರ ನಿವಾಸಿಗಳ ಪಾಲಿಗೆ ತಮ್ಮ ದಿನದ ಒತ್ತಡವನ್ನು ಹಗುರ ಮಾಡುವ ವಿನೋದಬರಹದಂತೆ ಕಾಣಿಸಬಹುದು.  

ಬರಹ ಇಷ್ಟವಾಯಿತೆ?

 • 24

  Happy
 • 6

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !