ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕಾಯುವವರೇ ಕಳ್ಳರಾದರೆ ಜನರಲ್ಲಿ ವಿಶ್ವಾಸ ಹೇಗೆ ಉಳಿದೀತು?

Last Updated 20 ಜನವರಿ 2022, 18:49 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆಯ ಭದ್ರತೆಗೆ ನಿಯೋಜಿತರಾಗಿದ್ದ ಒಬ್ಬ ಹೆಡ್‌ಕಾನ್‌ಸ್ಟೆಬಲ್‌ ಮತ್ತೊಬ್ಬ ಕಾನ್‌ಸ್ಟೆಬಲ್‌ ಡ್ರಗ್ಸ್‌ ಮಾರುತ್ತಿದ್ದಾಗ ಸಿಕ್ಕಿಬಿದ್ದಿರುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಹಿಡಿದ ಕನ್ನಡಿ. ಮುಖ್ಯಮಂತ್ರಿ ಮನೆಯ ಬಳಿಗೇ ಆಟೊ ತರಿಸಿಕೊಂಡು ಡ್ರಗ್ಸ್‌ ಮಾರಲು ಹೊಂಚುಹಾಕುತ್ತಿದ್ದ ತಮ್ಮ ಸಹೋದ್ಯೋಗಿಗಳನ್ನು ಪೊಲೀಸರೇ ಹಿಡಿದುಕೊಟ್ಟಿರುವುದು ಸಮಾಧಾನಕರ. ಆನಂತರದ ಬೆಳವಣಿಗೆ ಮಾತ್ರ ಸಿನಿಮಾದ ಪೊಲೀಸ್‌ ಕತೆಗಳಂತೆ ಬೆಳೆಯುತ್ತಲೇ ಹೋಗುತ್ತಿದೆ. ಡ್ರಗ್ಸ್‌ ಮಾರುತ್ತಿದ್ದ ಪೊಲೀಸರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ತಕ್ಷಣವೇ, ಜಾಮೀನಿನ ಮೇಲೆ ಇಬ್ಬರೂ ಹೊರಗೆ ಬಂದಿದ್ದಾರೆ. ಇಷ್ಟು ಸಲೀಸಾಗಿ ಹೊರಬರುವಂತೆ ಪ್ರಥಮ ವರ್ತಮಾನ ವರದಿ (ಎಫ್ಐಆರ್‌) ದಾಖಲಿಸಿದ ಆರ್‌.ಟಿ. ನಗರ ಠಾಣೆ ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐ ಈ ಇಬ್ಬರನ್ನೂ ಕರ್ತವ್ಯಲೋಪದ ಮೇಲೆ ಅಮಾನತು ಮಾಡಲಾಗಿದೆ. ಅವರ ಮೇಲಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ವ್ಯವಸ್ಥೆಯೇ ತಲೆತಗ್ಗಿಸುವಂತಹ, ಮುಖ್ಯಮಂತ್ರಿಯವರಿಗೇ ಮುಜುಗರ ತಂದಂತಹ ಈ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ ಕೂಡಲೇ ಆರೋಪಿಗಳು ಜಾಮೀನು ಪಡೆದು ಹೊರಬರುತ್ತಾರೆ ಎಂದರೆ, ಕಾನೂನಿನಲ್ಲಿ ಎಷ್ಟು ನ್ಯೂನತೆಗಳು, ಆರೋಪಿಗಳನ್ನು ಬಚಾವು ಮಾಡಬಹುದಾದ ಕಿರಿದಾರಿಗಳು ಇವೆ ಎಂಬುದು ಮೇಲ್ನೋಟಕ್ಕೇ ಕಾಣಿಸುತ್ತದೆ. ಮುಖ್ಯಮಂತ್ರಿಯಾಗುವ ಮುನ್ನ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ‘ಡ್ರಗ್ಸ್‌ ವಿರುದ್ಧ ಸಮರ ಸಾರಿದ್ದೇವೆ. ಈ ಜಾಲವನ್ನು ಬುಡಸಮೇತ ಕಿತ್ತುಹಾಕಿದ್ದೇವೆ’ ಎಂದು ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಅಂತಹ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆದಿದ್ದೂ ನಿಜ. ಹಾಗಂತ, ಡ್ರಗ್ಸ್‌ ಪೆಡ್ಲರ್‌ಗಳು, ಮಾರಾಟ ಜಾಲದ ಜೊತೆ ನಿಕಟ ಸಂಪರ್ಕ ಹೊಂದಿದ್ದ ಪೊಲೀಸರು ಸಿಕ್ಕಿಬಿದ್ದ ಪ್ರಕರಣ ಇದೇ ಮೊದಲನೆಯದಲ್ಲ. 2020ರ ನವೆಂಬರ್‌ನಿಂದ ಈಚೆಗೆ ಇಂತಹ ಐದಾರು ಪ್ರಕರಣಗಳು ಪತ್ತೆಯಾಗಿವೆ. ಡ್ರಗ್ಸ್ ಪೆಡ್ಲರ್‌ಗಳ ಜತೆ ಸಂಪರ್ಕ ಇಟ್ಟುಕೊಂಡಿದ್ದ ಬೆಂಗಳೂರು ಪಶ್ಚಿಮ ವಿಭಾಗದ 14 ಪೊಲೀಸರನ್ನು ವರ್ಗಾವಣೆ ಮಾಡಲಾಗಿತ್ತು. ಡಾರ್ಕ್‌ನೆಟ್ ಮೂಲಕ ಡ್ರಗ್ಸ್‌ ತರಿಸಿಕೊಂಡು ಮಾರಾಟ ಮಾಡುವ ಆರೋಪಿಗಳಿಗೆ ತನಿಖೆಯ ವಿವರಗಳ ಮಾಹಿತಿ ನೀಡುವ ಮೂಲಕ ಸಹಕರಿಸಿದ್ದ ಸದಾಶಿವನಗರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮತ್ತು ಪೆಡ್ಲರ್ ಜತೆ ನಂಟು ಹೊಂದಿದ್ದ ಸಿದ್ಧಾಪುರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಒಬ್ಬರನ್ನು ಅಮಾನತು ಮಾಡಲಾಗಿತ್ತು. ಆರೋಪಿಗಳನ್ನು ಸುಲಿಗೆ ಮಾಡಿದ ಪ್ರಕರಣಗಳಂತೂ ಇಡೀ ವ್ಯವಸ್ಥೆಗೆ ಕಪ್ಪುಚುಕ್ಕೆ. ಇಂತಹ ಪ್ರಕರಣಗಳು ಮುಂದುವರಿದರೆ, ಪೊಲೀಸ್ ವ್ಯವಸ್ಥೆಯಲ್ಲಿ ಜನರಿಗೆ ವಿಶ್ವಾಸ ಉಳಿಯುವುದಾದರೂ ಹೇಗೆ?

ಈ ತರಹದ ಕೃತ್ಯಗಳು ಈಗಿನ ಸರ್ಕಾರದ ಅವಧಿಯಲ್ಲಿ ಮಾತ್ರ ನಡೆದಿವೆ ಎಂದಲ್ಲ. ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ ಎಂದಿನಿಂದ ಶುರುವಾಯಿತೋ ಅಂದಿನಿಂದಲೂ ಪೊಲೀಸ್ ಸಿಬ್ಬಂದಿ ಪೈಕಿ ಒಂದಷ್ಟು ಮಂದಿ ತಮ್ಮ ಕೈಕೆಡಿಸಿಕೊಳ್ಳುತ್ತಿದ್ದಾರೆ. ಆಳುವ ಪಕ್ಷದ ಶಾಸಕರು, ಸಂಸದರು ತಮ್ಮ ಕ್ಷೇತ್ರಕ್ಕೆ ತಮ್ಮ ಜಾತಿಯ, ತಮ್ಮ ಮಾತು ಕೇಳುವ ಅಧಿಕಾರಿ ಬೇಕು ಎಂದು ಪಟ್ಟು ಹಿಡಿದು ಹಾಕಿಸಿಕೊಂಡು ಅದನ್ನೇ ಒಂದು ಸಂಪನ್ಮೂಲ ಕೇಂದ್ರವಾಗಿ ಮಾಡಿಕೊಂಡಿರುವುದು ವ್ಯವಸ್ಥೆ ಹದಗೆಡಲು ಒಂದು ಕಾರಣ. ದುಡ್ಡಿನ ಬೆಳೆ ತೆಗೆಯುವ ಆಯಕಟ್ಟಿನ ಪೊಲೀಸ್ ಹುದ್ದೆಗಳಿಗೆ ಭಾರಿ ಪ್ರಮಾಣದ ಲಂಚ ಕೊಟ್ಟು ಬರಬೇಕಾದ ಸ್ಥಿತಿ ಇದೆ. ವರ್ಷ ತುಂಬಲು ಒಂದು ದಿನ ಬಾಕಿ ಇರುವಾಗಲೇ ಮುಂದಿನ ವರ್ಷದ ಕಪ್ಪಕಾಣಿಕೆ ಸಂದಾಯ ಮಾಡದೇ ಇದ್ದರೆ ಮತ್ತೊಬ್ಬ ಅಧಿಕಾರಿ ಆ ಜಾಗಕ್ಕೆ ಬರುತ್ತಾರೆ ಎಂಬುದು ರಹಸ್ಯವಲ್ಲ. ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿರುವುದನ್ನು ಮನಗಂಡ ಸುಪ್ರೀಂ ಕೋರ್ಟ್‌, ಇದನ್ನು ತಡೆಯುವ ಉದ್ದೇಶಕ್ಕಾಗಿ ಪೊಲೀಸ್‌ ಸಿಬ್ಬಂದಿ ಮಂಡಳಿಯನ್ನು ಎಲ್ಲ ರಾಜ್ಯಗಳೂ ಕಡ್ಡಾಯವಾಗಿ ರಚಿಸಬೇಕು ಎಂದು ಆದೇಶಿಸಿತ್ತು. 2011ರಲ್ಲಿ ಕರ್ನಾಟಕದಲ್ಲೂ ರಚನೆಯಾಗಿತ್ತು. ಡಿವೈಎಸ್‌ಪಿಗಿಂತ ಕೆಳಹಂತದ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ಯನ್ನು ಮಂಡಳಿಯೇ ಮಾಡಬೇಕು; ಒಬ್ಬ ವ್ಯಕ್ತಿ ಕನಿಷ್ಠ ಎರಡು ವರ್ಷ ಒಂದೇ ಸ್ಥಳದಲ್ಲಿ ಕಾರ್ಯ
ನಿರ್ವಹಿಸಿದ್ದರೆ ಮಾತ್ರ ವರ್ಗಾವಣೆ ಮಾಡಬಹುದು ಹಾಗೂ ಸೇವಾ ಜ್ಯೇಷ್ಠತೆ ಆಧರಿಸಿ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಬೇಕು ಎಂಬ ನಿಯಮವೂ ಜಾರಿಗೆ ಬಂತು. 2016ರಲ್ಲಿ ಇದಕ್ಕೆ ತಿದ್ದುಪಡಿ ತಂದ ಸರ್ಕಾರವು ವರ್ಗಾವಣೆ ಅರ್ಹತೆಯ ಕನಿಷ್ಠ ಸೇವಾವಧಿಯನ್ನು ಒಂದು ವರ್ಷಕ್ಕೆ ಇಳಿಸಿತು. ಅಲ್ಲದೆ, ಸದಸ್ಯರ ನೇಮಕಕ್ಕೆ ಇದ್ದ ನಿಯಮಗಳನ್ನು ಸಡಿಲಗೊಳಿಸಿತು. ಹೀಗಾಗಿ ಒಂದು ವರ್ಷತುಂಬುವಷ್ಟರಲ್ಲೇ ವರ್ಗಾವಣೆಗಾಗಿ ಗಂಟು ಸಿದ್ಧಪಡಿಸಿಕೊಳ್ಳುವ ಅನಿವಾರ್ಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಎದುರಾಯಿತು. ವರ್ಷಕ್ಕೊಮ್ಮೆ ಹಣದ ಬೆಳೆ ತೆಗೆಯುವ ಅವಕಾಶ ರಾಜಕಾರಣಿಗಳಿಗೆ ಸಿಕ್ಕಿತು. ಹೀಗಾಗಿ, ಪೊಲೀಸ್ ಸಿಬ್ಬಂದಿ ಮಂಡಳಿ ಎಂದರೆ ಅಧಿಕಾರಸ್ಥರು ಕಳುಹಿಸುವ ಪಟ್ಟಿಗೆ ಸಹಿ ಹಾಕುವ, ಸ್ವೀಕೃತಿ–ರವಾನೆ ಶಾಖೆಯಾದಂತಾಗಿದೆ. ವರ್ಗಾವಣೆ, ಹುದ್ದೆ ದಯಪಾಲಿಸುವಲ್ಲಿನ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ, ಮಂಡಳಿಯ ಉದ್ದೇಶಿತ ಆಶಯವನ್ನು ಜಾರಿ ಮಾಡಿದರೆ ವ್ಯವಸ್ಥೆ ತುಸು ಸರಿದಾರಿಗೆ ಬಂದೀತು. ಹಾಗಂತ, ಇರುವವರೆಲ್ಲರೂ ಭ್ರಷ್ಟರಲ್ಲ. ಯಾರೋ ಒಂದಿಬ್ಬರು ಮಾಡುವ ಕುಕೃತ್ಯಗಳು ಇಡೀ ವ್ಯವಸ್ಥೆಯನ್ನೇ ಸಂಶಯಕ್ಕೆ ದೂಡುತ್ತವೆ. ಇದು ತಪ್ಪಬೇಕು. ದಕ್ಷತೆಯಿಂದ ಕೆಲಸ ನಿರ್ವಹಿಸುವವರಿಗೆ, ಪ್ರಾಮಾಣಿಕರಿಗೆ, ನಾಗರಿಕರ ನೋವು ಆಲಿಸಿ ಸಾಂತ್ವನ ಹೇಳುವ ಸಹೃದಯ ಪೊಲೀಸರ ಬೆಂಬಲಕ್ಕೆ ಸರ್ಕಾರ ಮತ್ತು ಸಾರ್ವಜನಿಕರು ನಿಲ್ಲಬೇಕಾಗಿದೆ. ಆಗಮಾತ್ರ ಪೊಲೀಸ್ ವ್ಯವಸ್ಥೆ ಸುಧಾರಣೆಯಾದೀತು. ಸರ್ಕಾರಕ್ಕೂ ಒಳ್ಳೆಯ ಹೆಸರು, ಜನರಿಗೂ ನೆಮ್ಮದಿ ಸಿಕ್ಕೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT