ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಬಿಲ್ಕಿಸ್‌ ಬಾನು ಪ್ರಕರಣ; ಅಪರಾಧಿಗಳ ಬಿಡುಗಡೆ ಹೀನ ಕೃತ್ಯ

Last Updated 24 ಅಕ್ಟೋಬರ್ 2022, 7:25 IST
ಅಕ್ಷರ ಗಾತ್ರ

ಬಿಲ್ಕಿಸ್‌ ಬಾನು ಪ್ರಕರಣದ 11 ಅಪರಾಧಿಗಳನ್ನುಸೆರೆಮನೆಯಿಂದ ‘ಉತ್ತಮ ನಡತೆ’ಯ ಆಧಾರದಲ್ಲಿ ಬಿಡುಗಡೆ ಮಾಡಿದ ವಿಚಾರದಲ್ಲಿ ಗುಜರಾತ್‌ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ; ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಆಗಿರುವ ವಿವಾದ ಮತ್ತು ಅದಕ್ಕೆ ಬಂದಿರುವ ಟೀಕೆಗಳನ್ನು ಪುಷ್ಟೀಕರಿಸುವ ರೀತಿಯಲ್ಲಿವೆ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ಅಂಶಗಳು. ಇದೇ ಆಗಸ್ಟ್‌ 15ರಂದು ಗೋಧ್ರಾ ಜೈಲಿನಿಂದ ಬಿಡುಗಡೆಯಾದ, ಅತ್ಯಾಚಾರ ಮತ್ತು ಹತ್ಯೆ ಮಾಡಿರುವ ಈ 11 ಅಪರಾಧಿಗಳನ್ನು ಜೈಲಿನಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗಿದೆ ಎಂಬ ವಿವರಗಳು ಆಘಾತಕಾರಿಯಾಗಿವೆ.

2002ರಲ್ಲಿ ಗೋಧ್ರಾದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಈ 11 ಮಂದಿ, ಬಿಲ್ಕಿಸ್‌ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಮತ್ತು ಅವರ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ್ದರು. ಹತ್ಯೆಗೆ ಒಳಗಾದವರಲ್ಲಿ ಎರಡು ವರ್ಷದ ಹಸುಳೆಯೂ ಸೇರಿತ್ತು. ಸಿಬಿಐ ವಿಶೇಷ ನ್ಯಾಯಾಲಯವು ಎಲ್ಲ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್‌ ಸರ್ಕಾರದ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿ ಮತ್ತು ಅದರ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಿರುವುದು ತಪ್ಪು ಮತ್ತು ನಿರ್ಲಜ್ಜೆಯ ನಡೆ. ಗುಜರಾತ್‌ ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಸರ್ಕಾರವೂ ಅನುಮೋದಿಸಿತ್ತು ಎಂಬ ವಿಚಾರ ಈಗ ಬಯಲಿಗೆ ಬಂದಿದೆ. ಆದರೆ, ಈವರೆಗೆ ಈ ವಿಚಾರದಲ್ಲಿ ಕೇಂದ್ರವು ಮೌನ ವಹಿಸಿತ್ತು. ಅತ್ಯಾಚಾರದಂತಹ ಹೀನ ಕೃತ್ಯ ಎಸಗಿ ಜೈಲಿಗೆ ಹೋದ ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಬಾರದು ಎಂದು ಕೇಂದ್ರ ಸರ್ಕಾರವೇ ರೂಪಿಸಿರುವ ಮಾರ್ಗಸೂಚಿಯನ್ನು ಈ ಪ್ರಕರಣದಲ್ಲಿ ಉಲ್ಲಂಘಿಸಲು ಕಾರಣವೇನು ಎಂಬುದರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸ್ಪಷ್ಟೀಕರಣ ನೀಡಬೇಕು. ಸಂತ್ರಸ್ತೆ, ಅವರ ಕುಟುಂಬದ ಸದಸ್ಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಮತ್ತು ಬಿಜೆಪಿಯ ಶಾಸಕರೊಬ್ಬರು ಹೇಳಿದಂತೆ ಅಪರಾಧಿಗಳು ‘ಸಂಸ್ಕಾರವಂತ ಬ್ರಾಹ್ಮಣರು’ ಎಂಬುದು ಈ ಪ್ರಕರಣದಲ್ಲಿ ಮಾರ್ಗಸೂಚಿಯು ಅನ್ವಯ ಆಗದಿರಲು ಕಾರಣವೇ?

11 ಅಪರಾಧಿಗಳ ಬಿಡುಗಡೆಯ ಪ್ರಸ್ತಾವದ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಂದ ರಾಜ್ಯ ಸರ್ಕಾರವು ಅಭಿಪ್ರಾಯ ಕೇಳಿತ್ತು. ಸಿಬಿಐ ಮತ್ತು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಸ್ತಾವವನ್ನು ವಿರೋಧಿಸಿದ್ದರು. ಅಪರಾಧಿಗಳಲ್ಲಿ ಒಬ್ಬನಾದ ರಾಧೇಶ್ಯಾಮ್‌ ಶಾ ಎಂಬಾತನ ಬಿಡುಗಡೆಯ ಪ್ರಸ್ತಾವಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಈ ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂಬ ನಿರ್ಧಾರಕ್ಕೆ ಸರ್ಕಾರ ಮೊದಲೇ ಬಂದಿತ್ತು ಎಂಬುದು ಸ್ಪಷ್ಟ. ಕಾಟಾಚಾರಕ್ಕಾಗಿ ಮಾತ್ರ ಪ್ರಕ್ರಿಯೆಯನ್ನು ಅನುಸರಿಸಿತ್ತು ಅಷ್ಟೇ. ತಪ್ಪಿತಸ್ಥರು ಶಿಕ್ಷೆ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ದಿನಗಳನ್ನು ಪರೋಲ್‌ ಮತ್ತು ಫರ್ಲೊ ಮೂಲಕ ಜೈಲಿನಿಂದ ಹೊರಗೆ ಕಳೆದಿದ್ದಾರೆ. ತಪ್ಪಿತಸ್ಥ ರಮೇಶ್‌ಭಾಯ್‌ ಚಂದನ ಎಂಬಾತ ಐದಕ್ಕೂ ಹೆಚ್ಚು ವರ್ಷ ಸೆರೆಮನೆಯಿಂದ ಹೊರಗೆ ಇದ್ದ. ಅಪರಾಧಿಗಳಲ್ಲಿ ಕೆಲವರು ಪರೋಲ್‌ ಅವಧಿ ಮುಗಿದ ಬಳಿಕವೂ ಜೈಲಿಗೆ ಹಿಂದಿರುಗಲು ವಿಳಂಬ ಮಾಡಿದ ಆರೋಪ ಹೊತ್ತಿದ್ದಾರೆ. ಹಾಗಿದ್ದರೂ ಅವರಿಗೆ ಪದೇ ಪದೇ ಪರೋಲ್‌ ನೀಡಲಾಗಿದೆ. ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳಿಗೆ ಸೆರೆಮನೆಯಲ್ಲಿ ವಿಶೇಷ ಸೌಲಭ್ಯವನ್ನು ರಾಜ್ಯ ಸರ್ಕಾರವು ನೀಡಿತ್ತು ಎಂಬುದನ್ನು ಇವೆಲ್ಲವೂ ಸಾಬೀತುಪಡಿಸುತ್ತವೆ.

ಅಪರಾಧಿಗಳಲ್ಲಿ ಕೆಲವರು ಪರೋಲ್‌ನಲ್ಲಿ ಜೈಲಿನಿಂದ ಹೊರಗೆ ಇದ್ದಾಗಲೂ ಅಪರಾಧ ಕೃತ್ಯ ಎಸಗಿದ್ದಾರೆ ಎಂಬುದೂ ಈಗ ತಿಳಿದುಬಂದಿದೆ. ಪರೋಲ್‌ನಲ್ಲಿ ಜೈಲಿನಿಂದ ಹೊರಗೆ ಬಂದಿದ್ದ ಮಿತೇಶ್‌ ಭಟ್‌ ಎಂಬಾತನ ಮೇಲೆ ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದ ಪ್ರಕರಣದಲ್ಲಿ 2020ರ ಜೂನ್‌ನಲ್ಲಿ ಆರೋಪಪಟ್ಟಿ ದಾಖಲಾಗಿದೆ. ಹೀಗಿದ್ದರೂ ಈ ವ್ಯಕ್ತಿಯನ್ನು ‘ಸನ್ನಡತೆ’ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ಗುಜರಾತ್ ಸರ್ಕಾರವು ಅದನ್ನು ಸಮರ್ಥನೆ ಕೂಡ ಮಾಡಿಕೊಳ್ಳುತ್ತಿದೆ. ಇತರರ ಮೇಲೆಯೂ ದೂರುಗಳು ಮತ್ತು ಪ್ರಕರಣಗಳು ಇವೆ. ಈ ಎಲ್ಲ ಗಂಭೀರ ಉಲ್ಲಂಘನೆಗಳನ್ನು ನಿರ್ಲಕ್ಷಿಸಿ, ಎಲ್ಲ ಆಕ್ಷೇಪಗಳನ್ನು ಬದಿಗೆ ಸರಿಸಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ. ಗುಜರಾತ್ ಸರ್ಕಾರದ ನಿರ್ಧಾರವು ಪೂರ್ವಗ್ರಹದಿಂದ ಕೂಡಿದ್ದಾಗಿದೆ, ನ್ಯಾಯ ಮತ್ತು ನೈತಿಕತೆಗೆ ವಿರುದ್ಧವಾದುದಾಗಿದೆ. ಸರ್ಕಾರವು ಮಾಡಿರುವುದು ಘೋರವಾದ ಮತ್ತು ಸರಿಪಡಿಸಿಕೊಳ್ಳಲೇಬೇಕಾದ ತಪ್ಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT