ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಕ್ಸಿಟ್‌ ಹಾದಿ ಸುಗಮಒಗ್ಗಟ್ಟೇ ಬೋರಿಸ್‌ಗೆ ಸವಾಲು

Last Updated 15 ಡಿಸೆಂಬರ್ 2019, 20:23 IST
ಅಕ್ಷರ ಗಾತ್ರ

ಐದು ವರ್ಷಗಳಲ್ಲಿ ನಡೆದ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್‌ನ ಜನರು ಸ್ಪಷ್ಟ ಆದೇಶ ನೀಡಿದ್ದಾರೆ. ಐರೋಪ್ಯ ಒಕ್ಕೂಟದಿಂದ ಹೊರಗೆ ಬರುವ ಪ್ರಕ್ರಿಯೆಯನ್ನು (ಬ್ರೆಕ್ಸಿಟ್‌) ಸುಲಲಿತಗೊಳಿ
ಸಲು ಮತ ನೀಡಿ ಎಂಬ ಕನ್ಸರ್ವೇಟಿವ್‌ ಪಕ್ಷದ ನಾಯಕ, ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಕೋರಿಕೆಗೆ ಬ್ರಿಟನ್‌ನ ಜನರು ಮನ್ನಣೆ ನೀಡಿದ್ದಾರೆ. 650 ಸದಸ್ಯ ಬಲದ ಕೆಳಮನೆಯಲ್ಲಿ ಕನ್ಸರ್ವೇಟಿವ್‌ ಪಕ್ಷವು 365 ಸ್ಥಾನಗಳನ್ನು ಗೆದ್ದುಕೊಂಡಿದೆ. ಪ್ರಮುಖ ವಿರೋಧ ಪಕ್ಷವಾದ ಲೇಬರ್‌ ಪಾರ್ಟಿಯು 203 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಈ ಪಕ್ಷವು ಹೀನಾಯ ಸ್ಥಿತಿಗೆ ತಲುಪಿದೆ. ಕಳೆದ ಚುನಾವಣೆಯಲ್ಲಿ ಈ ಪಕ್ಷವು ಶೇ 40ರಷ್ಟು ಮತಗಳನ್ನು ಗಳಿಸಿತ್ತು. ಆದರೆ, ಈ ಬಾರಿ ಮತಪ್ರಮಾಣಶೇ 8ರಷ್ಟು ಕುಗ್ಗಿದೆ. ಬ್ರೆಕ್ಸಿಟ್‌ ಕಾರಣಕ್ಕಾಗಿ ಅವಧಿಗೆ ಮುನ್ನವೇ ಚುನಾವಣೆಗೆ ಹೋದ ಬೋರಿಸ್‌ ಅವರ ನಿಲುವು ಸ್ಪಷ್ಟವಾಗಿತ್ತು. ಐರೋಪ್ಯ ಒಕ್ಕೂಟದಿಂದ ಹೊರಬರಲು ಅನುವಾಗುವಂತೆ ಕೆಳಮನೆಯಲ್ಲಿ ಬಹುಮತ ಕೊಡಿ, ‘ಆದರೆ–ಹೋದರೆ ಎಂಬುದೆಲ್ಲ ಬೇಡ’ ಎನ್ನುವುದೇ ಅವರ ಘೋಷಣೆಯಾಗಿತ್ತು. 2016ರ ಜನಮತಗಣನೆ
ಯಲ್ಲಿ ಬ್ರೆಕ್ಸಿಟ್‌ ಪರವಾಗಿ ಮತ ಚಲಾಯಿಸಿದ್ದ ಜನರು, 2017ರಲ್ಲಿ ಕನ್ಸರ್ವೇಟಿವ್‌ ಪಕ್ಷಕ್ಕೆ ಬಹುಮತ ಕೊಟ್ಟಿರಲಿಲ್ಲ.

ಆದರೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಕ್ಷವು ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಬಹುದು ಎಂಬ ಸ್ಪಷ್ಟ ಸುಳಿವು ಇರಲಿಲ್ಲ. ಲೇಬರ್‌ ಪಕ್ಷದ ನಾಯಕ ಜೆರೆಮಿ ಕಾರ್ಬಿನ್‌ ಅವರು ಬ್ರೆಕ್ಸಿಟ್‌ ಬಗ್ಗೆ ಸ್ಪಷ್ಟ ನಿಲುವು ತಾಳಲಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬ್ರೆಕ್ಸಿಟ್‌ಗಾಗಿ ಮತ್ತೊಂದು ಜನಮತಗಣನೆ ನಡೆಸಲಿದೆ ಎಂದಿದ್ದರು. ತಮ್ಮ ಎಡಪಂಥೀಯ ನಿಲುವುಗಳನ್ನು ಇನ್ನಷ್ಟು ಬಿಗಿಗೊಳಿಸಿದ ಅವರು, ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆ ಹೇರಿಕೆ, ವಿವಿಧ ಸೇವೆಗಳ ರಾಷ್ಟ್ರೀಕರಣ, ಆರೋಗ್ಯ ಸೇವೆಗೆ ಒತ್ತು, ಮಿತವ್ಯಯ ನೀತಿಯಿಂದ ಹೊರಗೆ ಬಂದು ಸರ್ಕಾರವು ಮಾಡುವ ವೆಚ್ಚಗಳಲ್ಲಿ ಏರಿಕೆ ಅವರ ಭರವಸೆಗಳಾಗಿದ್ದವು. ಆದರೆ, ಬ್ರೆಕ್ಸಿಟ್‌ನ ಗೋಜಲು ಮುಗಿದುಹೋಗಲಿ ಎಂಬ ಮನಃಸ್ಥಿತಿಯಲ್ಲಿ ಜನರು ಇದ್ದಾರೆ ಎಂಬುದು ಅವರಿಗೆ ಅರಿವಾಗಲಿಲ್ಲ.

ಫಲಿತಾಂಶವು ಬ್ರೆಕ್ಸಿಟ್‌ ಹಾದಿಯನ್ನು ಸುಗಮಗೊಳಿಸಿದೆಯಾದರೂ ಬೋರಿಸ್‌ ಅವರಿಗೆ ಮುಂದಿನ ದಿನಗಳು ಅಷ್ಟು ಸುಲಭವೇನೂ ಅಲ್ಲ. ಜನವರಿ 31ರೊಳಗೆ ಬ್ರೆಕ್ಸಿಟ್‌ನಿಂದ ಹೊರ
ಬರುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಅವರು ಮಾಡಿಕೊಳ್ಳಬೇಕು. ಜತೆಗೆ, ಐರೋಪ್ಯ ಒಕ್ಕೂಟದ ಜತೆಗೆ ಬ್ರಿಟನ್‌ನ ಸಂಬಂಧ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಒಪ್ಪಂದಗಳನ್ನು 11 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಬೋರಿಸ್‌ ಹೇಳಿದ್ದಾರೆ. ಅಷ್ಟೊಂದು ಅಲ್ಪಾವಧಿಯಲ್ಲಿ ಇದು ಮುಗಿಯುವುದು ಕಷ್ಟ. ಬ್ರಿಟನ್‌ ಅನ್ನು ಒಗ್ಗಟ್ಟಾಗಿ ಉಳಿಸುವುದು ಅವರ ಮುಂದೆ ಇರುವ ಇನ್ನೊಂದು ಸವಾಲು. ಸ್ಕಾಟಿಷ್‌ ನ್ಯಾಷನಲ್‌ ಪಕ್ಷವು (ಎಸ್‌ಎನ್‌ಪಿ) ಸ್ಕಾಟ್ಲೆಂಡ್‌ನ 59 ಸ್ಥಾನಗಳ ಪೈಕಿ 48ರಲ್ಲಿ ಗೆದ್ದಿದೆ. ಬ್ರೆಕ್ಸಿಟ್‌ ಜನಮತಗಣನೆಯಲ್ಲಿ ‘ವಿರುದ್ಧ’ ಮತಹಾಕಿದ್ದ ಈ ಪ್ರದೇಶವು, ಈ ಬಾರಿಯ ಚುನಾವಣೆಯಲ್ಲಿ ಬ್ರಿಟನ್‌ನ ಮುಖ್ಯ ಪಕ್ಷಗಳೆರಡನ್ನೂ ಮೂಲೆಗೆ ತಳ್ಳಿದೆ. ಬ್ರಿಟನ್‌ನಿಂದ ಸ್ಕಾಟ್ಲೆಂಡ್‌ ಪ್ರತ್ಯೇಕವಾಗಬೇಕು ಎಂಬ ಕೂಗಿಗೆ ಮತ್ತೆ ಬಲ ಬಂದಿದೆ. ಸ್ವತಂತ್ರ ಜನಮತಗಣನೆ ನಡೆಸುವ ಯೋಜನೆಯನ್ನು ಮುಂದಿನ ವಾರ ಪ್ರಕಟಿಸುವುದಾಗಿ ಎಸ್‌ಎನ್‌ಪಿ ನಾಯಕಿ ನಿಕೋಲಾ ಸ್ಟರ್ಜನ್‌ ಘೋಷಿಸಿದ್ದಾರೆ. ‘ಐರೋಪ್ಯ ಒಕ್ಕೂಟದಿಂದ ಸ್ಕಾಟ್ಲೆಂಡ್‌ ಅನ್ನು ಹೊರಗೆ ಒಯ್ಯಲು ಬೋರಿಸ್‌ಗೆ ಜನಾದೇಶ ಸಿಕ್ಕಿಲ್ಲ’ ಎಂದೂ ಅವರು ಹೇಳಿದ್ದಾರೆ. ಬ್ರಿಟನ್‌ನ ಫಲಿತಾಂಶದಿಂದ ಅತಿಹೆಚ್ಚು ನಷ್ಟ ಆಗಿರುವುದು ಲೇಬರ್‌ ಪಕ್ಷಕ್ಕೆ. ಉತ್ತರ ಮತ್ತು ಮಧ್ಯ ಬ್ರಿಟನ್‌ ಆ ಪಕ್ಷದ ಭದ್ರಕೋಟೆ. ಆದರೆ, ಅಲ್ಲಿಯೇ ಆ ಪಕ್ಷಕ್ಕೆ ಈ ಬಾರಿ ಭಾರಿ ಹಿನ್ನಡೆ ಆಗಿದೆ. ಕಾರ್ಮಿಕ ಸಂಘಟನೆಗಳ ಬಲ ಕುಂದಿರುವುದು ಮತ್ತು ಪಕ್ಷವು ಅತಿಯಾಗಿ ಎಡಪಂಥದತ್ತ ವಾಲಿದ್ದು ಕೂಡ ಈ ಸೋಲಿಗೆ ಕಾರಣಗಳು ಎನ್ನಲಾಗುತ್ತಿದೆ. ‘ಬ್ರೆಕ್ಸಿಟ್‌ಗಿಂತ ರಾಷ್ಟ್ರೀಯ ಆರೋಗ್ಯ ಯೋಜನೆಯೇ ನಮಗೆ ಹೆಚ್ಚು ಮುಖ್ಯ’ ಎಂದು ಫಲಿತಾಂಶದ ಬಳಿಕ ಬೋರಿಸ್‌ ಹೇಳಿದ್ದಾರೆ. ಈ ನೀತಿಯು ಲೇಬರ್‌ ಪಕ್ಷದ ನೆಲೆಯನ್ನು ಇನ್ನಷ್ಟು ಶಿಥಿಲಗೊಳಿಸಬಹುದು. ಜನಾದೇಶ ಸ್ಪಷ್ಟವಾಗಿದ್ದರೂ ದೇಶದ ಮುಂದಿರುವ ಗೋಜಲುಗಳನ್ನು ಬಿಡಿಸುವುದು ಸುಲಭವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT