ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸ್ಮಶಾನದ ಕೊರತೆ ನೀಗಲು ತುರ್ತು ಸ್ಪಂದನ ಬೇಕಿದೆ

Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಪ್ರತೀ ಹಳ್ಳಿಗೆ ಕನಿಷ್ಠ ಒಂದಾದರೂ ಸಾರ್ವಜನಿಕ ಸ್ಮಶಾನವನ್ನು ಒದಗಿಸುವ ಕೆಲಸವನ್ನು ಸರ್ಕಾರ ತಡಮಾಡದೇ ಕಾರ್ಯರೂಪಕ್ಕೆ ತರಬೇಕಿದೆ.

2011ರ ಜನಗಣತಿ ಪ್ರಕಾರ, ರಾಜ್ಯದಲ್ಲಿ 29,340 ಗ್ರಾಮಗಳಿವೆ. ಈ ಪೈಕಿ 7,069 ಗ್ರಾಮಗಳಲ್ಲಿ ಅಂತ್ಯಸಂಸ್ಕಾರಕ್ಕೆ ಅಧಿಕೃತವಾಗಿ ಕಾಯ್ದಿರಿಸಿದ ಸ್ಮಶಾನದ ಸೌಲಭ್ಯವೇ ಇಲ್ಲ ಎಂದು ರಾಜ್ಯ ಸರ್ಕಾರವು ವಿಧಾನ ಪರಿಷತ್‌ಗೆ ತಿಳಿಸಿದೆ. ಸ್ಮಶಾನದ ಕೊರತೆ ಹೊಸ ಸಮಸ್ಯೆಯೇನೂ ಅಲ್ಲ. ಕೆಲವು ಗ್ರಾಮಗಳ ಜನರು ದಶಕಗಳಿಂದಲೂ ಸ್ಮಶಾನಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ‘ವ್ಯಕ್ತಿಯೊಬ್ಬ ಮೃತಪಟ್ಟಾಗ ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶ ದೊರಕಿಸುವುದು ಕೂಡ ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಸೇರುತ್ತದೆ’ ಎಂದು ನ್ಯಾಯಾಲಯಗಳು ಹಲವು ಬಾರಿ ಹೇಳಿವೆ. ಸ್ಮಶಾನದ ಕೊರತೆಯು ರಾಜ್ಯದ ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಜಮೀನು ಹೊಂದಿರುವ ಕುಟುಂಬಗಳು ಅನಿವಾರ್ಯವಾಗಿ ತಮ್ಮ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತವೆ. ಆದರೆ, ಸಾರ್ವಜನಿಕ ಸ್ಮಶಾನಗಳೇ ಇಲ್ಲದ ಹಳ್ಳಿಗಳಲ್ಲಿ ಭೂರಹಿತ ಕುಟುಂಬಗಳಲ್ಲಿ ಸಾವು ಸಂಭವಿಸಿದಾಗ ಆ ಕುಟುಂಬಗಳು ಅನುಭವಿಸುವ ಪಡಿಪಾಟಲು ಹೇಳತೀರದು. ಈ ವಿಚಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ಸಮುದಾಯಗಳ ಸ್ಥಿತಿ ಇನ್ನೂ ಶೋಚನೀಯ. ಸಾರ್ವಜನಿಕ ಸ್ಮಶಾನಗಳನ್ನು ಹೊಂದಿರುವ ಹಳ್ಳಿಗಳಲ್ಲೂ ಸಮಸ್ಯೆಗಳಿಗೆ ಕೊನೆ ಇಲ್ಲ. ಹಲವೆಡೆ ಬಲಾಢ್ಯರು ಸ್ಮಶಾನದ ಜಮೀನುಗಳನ್ನೇ ಒತ್ತುವರಿ ಮಾಡಿಕೊಂಡಿರುವ ಉದಾಹರಣೆಗಳಿವೆ. ಸ್ಮಶಾನಗಳನ್ನು ಎಲ್ಲರೂ ಮುಕ್ತವಾಗಿ ಬಳಸಲು ಅವಕಾಶ ಇಲ್ಲದಂತಹ ಸ್ಥಿತಿ ಕೆಲವು ಹಳ್ಳಿಗಳಲ್ಲಿ ಈಗಲೂ ಇದೆ. ಸ್ಮಶಾನಗಳ ಕೊರತೆ ಸಮಸ್ಯೆಯ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿಗಳ ಮುಂದೆ ಧರಣಿ ನಡೆಸುವುದು ಸಾಮಾನ್ಯ ಸಂಗತಿಯಂತಾಗಿದೆ. ಇದೇ ಉದ್ದೇಶದಿಂದ ಚುನಾವಣಾ ಬಹಿಷ್ಕಾರ, ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಘೇರಾವ್‌ ಹಾಕುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇವೆ. ಆದರೆ, ಪ್ರತಿಫಲ ದೊರಕಿದ್ದು ಕಡಿಮೆ. ಇದೇ ವಿಷಯ ಹಳ್ಳಿಗಳಲ್ಲಿ ಆಗಾಗ ಸಂಘರ್ಷಕ್ಕೂ ಎಡೆಮಾಡುತ್ತಿದೆ. ರೋಸಿ ಹೋದ ಜನರು ಮೃತದೇಹಗಳನ್ನು ಇರಿಸಿಕೊಂಡೇ ಧರಣಿ ನಡೆಸುವುದು, ರಸ್ತೆಯ ಬದಿಗಳಲ್ಲೇ ಅಂತ್ಯಸಂಸ್ಕಾರ ನಡೆಸುವ ಮೂಲಕ ಆಕ್ರೋಶ ಹೊರಹಾಕುವುದೂ ನಡೆಯುತ್ತಿದೆ.

ಎಲ್ಲ ಹಳ್ಳಿಗಳು, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಮಶಾನಗಳನ್ನು ಒದಗಿಸುವ ದಿಸೆಯಲ್ಲಿ ರಾಜ್ಯ ಸರ್ಕಾರದಿಂದ ಆಗಾಗ ಆದೇಶ, ಸುತ್ತೋಲೆಗಳು ಹೊರಬೀಳುತ್ತಲೇ ಇವೆ. ಪ್ರತೀ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ 60 ಚದರ ಅಡಿಗಳಷ್ಟು ಜಾಗವನ್ನು ಕಾಯ್ದಿರಿಸಬೇಕು ಎಂದು ರಾಜ್ಯ ಸರ್ಕಾರವು 2014ರ ನವೆಂಬರ್‌11ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ನಿರೀಕ್ಷಿತ ಪ್ರಗತಿ ಕಾಣದ ಕಾರಣದಿಂದ 2019ರಲ್ಲಿ ಮತ್ತೊಮ್ಮೆ ಸುತ್ತೋಲೆಯೊಂದನ್ನು ಹೊರಡಿಸಿದ್ದ ಕಂದಾಯ ಇಲಾಖೆ, ‘ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್‌ 71’ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಬಳಸಿ ಸ್ಮಶಾನಕ್ಕಾಗಿ ಜಮೀನು ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ನಿರ್ದೇಶನ ನೀಡಿತ್ತು. ಮಾರ್ಗಸೂಚಿ ದರದ ಮೂರು ಪಟ್ಟು ದರ ನೀಡಿ ಸ್ಮಶಾನಕ್ಕಾಗಿ ಜಮೀನು ಖರೀದಿಸುವುದಕ್ಕೂ ಈ ಸುತ್ತೋಲೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅನಿವಾರ್ಯ ಆದಲ್ಲಿ ಧರ್ಮಾಧಾರಿತ ಸ್ಮಶಾನಗಳ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗಾಗಿ ಸ್ಮಶಾನ ಒದಗಿಸಲು ಅಗತ್ಯ ಇರುವ ಕಡೆಗಳಲ್ಲಿ ಜಮೀನು ಖರೀದಿಸಲು ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ ಅನುದಾನ ಬಳಕೆ ಮಾಡಲು ಅವಕಾಶ ಕಲ್ಪಿಸಿ 2015ರ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. ಇಷ್ಟೆಲ್ಲ ನಿರ್ಧಾರಗಳನ್ನು ಕೈಗೊಂಡಿದ್ದರೂ ರಾಜ್ಯದ 7,069 ಗ್ರಾಮಗಳಲ್ಲಿ ಇನ್ನೂ ಸಾರ್ವಜನಿಕ ಸ್ಮಶಾನ ಇಲ್ಲ ಎಂಬ ಸಂಗತಿಯು ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಆಡಳಿತ ವ್ಯವಸ್ಥೆಯ ಬದ್ಧತೆ ಹಾಗೂ ಕಾರ್ಯವೈಖರಿಗೆ ಕನ್ನಡಿ ಹಿಡಿಯುವಂತಿದೆ. ರಾಜ್ಯ ಮಟ್ಟದಲ್ಲಿ ಆದೇಶ, ಸುತ್ತೋಲೆ ಹೊರಡಿಸಿ, ಅನುದಾನ ಒದಗಿಸಿದರೂ ಕೆಳಹಂತದ ಅಧಿಕಾರಿಗಳು ಸ್ಮಶಾನಕ್ಕೆ ಜಮೀನು ಕಾಯ್ದಿರಿಸುವ ವಿಚಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ ಎಂಬುದನ್ನು ಈ ಅಂಕಿಅಂಶಗಳು ರುಜುವಾತುಪಡಿಸುವಂತಿವೆ. ಎಲ್ಲ ಗ್ರಾಮಗಳಿಗೆ ಸ್ಮಶಾನಗಳನ್ನು ಒದಗಿಸುವ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಸಮರ್ಥನೀಯವಲ್ಲ. ಪ್ರತೀ ಹಳ್ಳಿಗೆ ಕನಿಷ್ಠ ಒಂದಾದರೂ ಸಾರ್ವಜನಿಕ ಸ್ಮಶಾನವನ್ನು ಒದಗಿಸುವ ಕೆಲಸವನ್ನು ಸರ್ಕಾರ ತಡಮಾಡದೇ ಕಾರ್ಯರೂಪಕ್ಕೆ ತರಬೇಕಿದೆ. ಆ ಮೂಲಕ ಮೃತ ವ್ಯಕ್ತಿಗಳಿಗೆ ಗೌರವಪೂರ್ಣ ವಿದಾಯ ಹೇಳಲು ಅವಕಾಶ ಕಲ್ಪಿಸುವ ಗುರುತರವಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT