ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬ್ಯಾಂಕಿಂಗ್‌ಗೆ ಕಾರ್ಪೊರೇಟ್ ವಲಯ;ಹಿತಾಸಕ್ತಿ ಸಂಘರ್ಷಕ್ಕೆ ದಾರಿಯಾಗದೇ?

Last Updated 26 ನವೆಂಬರ್ 2020, 20:28 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಆಂತರಿಕ ಕಾರ್ಯಕಾರಿ ಸಮಿತಿಯೊಂದು ಸಲ್ಲಿಸಿರುವ ವರದಿಯಲ್ಲಿ ಇರುವ ಒಂದು ಶಿಫಾರಸು ದೇಶದಲ್ಲಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ– 1949ಕ್ಕೆ ಸೂಕ್ತ ತಿದ್ದುಪಡಿ ತಂದ ಬಳಿಕ, ದೊಡ್ಡ ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಪ್ರವರ್ತಕ ಪಾತ್ರ ವಹಿಸಲು ಅವಕಾಶ ಕೊಡಬಹುದು ಎಂಬುದು ಆ ಶಿಫಾರಸು. ಇದರ ಜೊತೆಯಲ್ಲೇ ಇರುವ ಇನ್ನೊಂದು ಶಿಫಾರಸನ್ನು ಕೂಡ ಸೂಕ್ಷ್ಮವಾಗಿ ಗಮನಿಸಬೇಕು. ಖಾಸಗಿ ಬ್ಯಾಂಕ್‌ಗಳ ಪ್ರವರ್ತಕರಿಗೆ ಗರಿಷ್ಠ ಶೇಕಡ 26ರಷ್ಟರವರೆಗೆ ಷೇರುಗಳನ್ನು ಹೊಂದಲು 15 ವರ್ಷಗಳ ಅವಧಿಯಲ್ಲಿ ಅವಕಾಶ ಕಲ್ಪಿಸಬಹುದು ಎಂಬುದು ಆ ಶಿಫಾರಸು. ಈಗಿರುವ ನಿಯಮಗಳ ಅನ್ವಯ ಖಾಸಗಿ ಬ್ಯಾಂಕ್‌ಗಳ ಪ್ರವರ್ತಕರು ಶೇಕಡ 15ರಷ್ಟು ಷೇರುಗಳನ್ನು ಮಾತ್ರ ಹೊಂದಲು ಅವಕಾಶ ನೀಡಲಾಗಿದೆ. ಎರಡೂ ಶಿಫಾರಸುಗಳು ಕಾರ್ಯರೂಪಕ್ಕೆ ಬಂದರೆ, ಕಾರ್ಪೊರೇಟ್‌ ಕಂಪನಿಗಳು ಬ್ಯಾಂಕ್‌ ಪ್ರವರ್ತಕ ಆಗಬಹುದು ಹಾಗೂ ಅವು ಗರಿಷ್ಠ ಶೇಕಡ 26ರಷ್ಟು ಷೇರುಗಳನ್ನು ಹೊಂದಲು ಕೂಡ ಅವಕಾಶ ಸಿಗುತ್ತದೆ.

ದೇಶದ ಕಾರ್ಪೊರೇಟ್‌ ವಲಯವು ಬ್ಯಾಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದಿದೆ. ಕಾರ್ಪೊರೇಟ್‌ ವಲಯವು ಬ್ಯಾಂಕ್‌ಗಳಿಂದ ಸಾಲ ಪಡೆಯುವುದು, ಮರಳಿಸುವುದು ನಿರಂತರ ಹಾಗೂ ಸಹಜ ಪ್ರಕ್ರಿಯೆ ಎಂಬುದು ನಿಜ. ಕೆಲವು ಕಾರ್ಪೊರೇಟ್‌ ಕಂಪನಿಗಳು ಸಾಲ ಮರುಪಾವತಿಯಲ್ಲಿ ವಿಫಲವಾಗಿದ್ದೂ ಇದೆ. ಸಾಲ ಪಡೆಯುವ ವಲಯವೊಂದಕ್ಕೆ ಬ್ಯಾಂಕಿಂಗ್ ಪರವಾನಗಿ ನೀಡಿ, ಇನ್ನೊಬ್ಬರಿಗೆ ಸಾಲ ಕೊಡುವ ಅವಕಾಶವನ್ನು ಅದಕ್ಕೇ ನೀಡಬಹುದೆ? ಬ್ಯಾಂಕ್‌ ಪ್ರವರ್ತಕ ಕಾರ್ಪೊರೇಟ್‌ ಕಂಪನಿಗಳು ತಮ್ಮದೇ ಸಮೂಹದ ಇನ್ನೊಂದು ಕಂಪನಿಗೆ ಸಾಲ ಕೊಟ್ಟು, ಆ ಕಂಪನಿ ಸಾಲ ಮರುಪಾವತಿಯಲ್ಲಿ ವಿಫಲವಾದರೆ? ಇಂತಹ ಸನ್ನಿವೇಶಗಳು ಹಿತಾಸಕ್ತಿಗಳ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತವೆ. ದೇಶದಲ್ಲಿನ ಕಾರ್ಪೊರೇಟ್ ಆಡಳಿತ ಸಂಸ್ಕೃತಿಯು ಅಂತರರಾಷ್ಟ್ರೀಯ ಮಟ್ಟಕ್ಕೆ ಅನುಗುಣವಾಗಿ ಇಲ್ಲ ಎಂಬುದನ್ನು ಕೆಲವು ರೇಟಿಂಗ್ಸ್‌ ಸಂಸ್ಥೆಗಳು ಹೇಳಿವೆ. ಹೀಗಿರುವಾಗ ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್ ಪ್ರವರ್ತಕ ಆಗಲು ಅವಕಾಶ ಕೊಡುವ ವಿಚಾರವಾಗಿ ಅವಸರಪಡಬೇಕಾದ ಅಗತ್ಯ ಇಲ್ಲ.

ಕಾರ್ಪೊರೇಟ್ ವಲಯಕ್ಕೆ ಬ್ಯಾಂಕಿಂಗ್ ಪರವಾನಗಿ ಕೊಡಬೇಕಾದ ತುರ್ತು ಈಗ ಏನಿದೆ ಎಂಬುದರ ವಿವರ ತಕ್ಷಣಕ್ಕೆ ಲಭ್ಯವಿಲ್ಲ. ತೀರಾ ಈಚಿನ ದಿನಗಳಲ್ಲಿ ಖಾಸಗಿ ವಲಯದ ಎರಡು ಬ್ಯಾಂಕ್‌ಗಳು ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ್ದವು. ಒಂದು ಬ್ಯಾಂಕ್‌ಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಮೂಲಕ ಹಣ ಹೂಡಿಕೆ ಮಾಡಿ, ಆ ಬ್ಯಾಂಕ್‌ಗೆ ಆಸರೆ ಕಲ್ಪಿಸಲಾಯಿತು. ಇನ್ನೊಂದು ಬ್ಯಾಂಕನ್ನು ವಿದೇಶಿ ಮೂಲದ ಒಂದು ಬ್ಯಾಂಕ್‌ ಜೊತೆ ವಿಲೀನ ಮಾಡಲಾಗುತ್ತಿದೆ. ಈ ಎರಡು ಬ್ಯಾಂಕ್‌ಗಳ ವಿಚಾರವಾಗಿ ನಡೆದ ವಿದ್ಯಮಾನಗಳು ಸಾರ್ವಜನಿಕರು ಬ್ಯಾಂಕ್‌ಗಳ ಮೇಲೆ ಇರಿಸಿರುವ ನಂಬಿಕೆಗೆ ಚ್ಯುತಿ ತರುವಂಥವು. ಹಾಗಾಗಿ, ಖಾಸಗಿ ವಲಯದ ಬ್ಯಾಂಕುಗಳಲ್ಲಿ ಅತ್ಯುನ್ನತ ಮಟ್ಟದ ಕಾರ್ಪೊರೇಟ್ ಆಡಳಿತ ಸಂಸ್ಕೃತಿ ನೆಲೆಯೂರುವಂತೆ ಮಾಡಬೇಕಿರುವುದು ಈ ಹೊತ್ತಿನ ತುರ್ತು; ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶ ನೀಡುವ ತುರ್ತು ಸದ್ಯಕ್ಕಂತೂ ಕಾಣುತ್ತಿಲ್ಲ.

ಮುಂದುವರಿದ ಅರ್ಥ ವ್ಯವಸ್ಥೆಗಳು ಸಾಲ ಪಡೆಯುವವರು ಹಾಗೂ ಸಾಲ ಕೊಡುವವರ ನಡುವೆ ವಿಭಜಕವೊಂದು ಇರುವಂತೆ ನೋಡಿಕೊಳ್ಳುತ್ತವೆ ಎಂದು ಆಂತರಿಕ ಸಮಿತಿಯ ಶಿಫಾರಸಿನ ವಿಚಾರವಾಗಿ ಕೆಲವು ಅರ್ಥಶಾಸ್ತ್ರಜ್ಞರು ಪ್ರತಿಕ್ರಿಯೆ ನೀಡಿದ್ದಾರೆ. ಈ ಶಿಫಾರಸು ಮಾಡುವ ಮೊದಲು ಆಂತರಿಕ ಸಮಿತಿಯು ಬೇರೆ ಬೇರೆ ಕ್ಷೇತ್ರಗಳ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಅವರ ಪೈಕಿ ಒಬ್ಬರನ್ನು ಹೊರತುಪಡಿಸಿದರೆ ಇತರ ಎಲ್ಲರೂ ಈ ಆಲೋಚನೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾತು ಆಂತರಿಕ ಸಮಿತಿಯ ವರದಿಯಲ್ಲೇ ಉಲ್ಲೇಖವಾಗಿದೆ. ಹೀಗಿದ್ದರೂ ಸಮಿತಿಯು ಈ ಶಿಫಾರಸನ್ನು ತನ್ನ ವರದಿಯ ಭಾಗವಾಗಿಸಿದ್ದು ಸೋಜಿಗವೇ ಸರಿ. ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಪ್ರವರ್ತಕ ಆಗಲು ಅವಕಾಶ ನೀಡಿದರೆ, ಅವು ಅಪಾರ ಬಂಡವಾಳವನ್ನೂ ತರುತ್ತವೆ ಎಂಬ ವಾದವಿದೆ. ಆದರೆ, ದೇಶದ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಇನ್ನಷ್ಟು ಹೆಚ್ಚುವಂತೆ ಮಾಡಿ, ಬ್ಯಾಂಕ್‌ಗಳು ತಮಗೆ ಅಗತ್ಯವಿರುವ ಹೆಚ್ಚಿನ ಬಂಡವಾಳವನ್ನು ಮಾರುಕಟ್ಟೆಗಳಿಂದಲೇ ಸಂಗ್ರಹಿಸುವ ವ್ಯವಸ್ಥೆಗೆ ಒತ್ತು ನೀಡಬಹುದು. ಆ ಮೂಲಕ, ಬ್ಯಾಂಕ್‌ಗಳು ಸಾರ್ವಜನಿಕರಿಗೆ ಇನ್ನಷ್ಟು ಹೆಚ್ಚು ಉತ್ತರದಾಯಿ ಆಗುವಂತೆ ನೋಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT