ಶುಕ್ರವಾರ, ಜೂನ್ 25, 2021
21 °C

ಸಂಪಾದಕೀಯ: ಮಾತಿನ ಸಾಂತ್ವನವೂ ದುಬಾರಿ; ಧಿಮಾಕಿಗೆ ಬೇಕು ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕಿನ ಬೇಗೆಯಿಂದ ದೇಶವೇ ಕಂಗೆಟ್ಟಿದ್ದರೂ ಕೆಲವು ರಾಜಕಾರಣಿಗಳ ಅಧಿಕಾರ ಮದ ಮಾತ್ರ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಆಹಾರ ಸಚಿವ ಉಮೇಶ ಕತ್ತಿ ಅವರು ರೈತರೊಬ್ಬರ ಪ್ರಶ್ನೆಗೆ ಬೇಜವಾಬ್ದಾರಿಯಿಂದ ಉತ್ತರಿಸಿರುವುದು ಉದಾಹರಣೆಯಂತಿದೆ. ಪಡಿತರ ಅಕ್ಕಿ ಕಡಿತಗೊಳಿಸಿರುವ ಸರ್ಕಾರದ ನಿರ್ಧಾರದಿಂದ ಆತಂಕಗೊಂಡು ಫೋನ್‌ ಮಾಡಿರುವ ರೈತರೊಬ್ಬರು, ‘ಹೀಗಾದರೆ ನಾವು ಉಪವಾಸ ಇರೋದಾ ಅಥವಾ ಸತ್ತುಹೋಗೋದಾ’ ಎಂದು ಕೇಳಿದಾಗ, ‘ಸತ್ತುಹೋದರೆ ಒಳ್ಳೆಯದು’ ಎಂದು ಸಚಿವರು ಅಪ್ಪಣೆ ಕೊಡಿಸಿದ್ದಾರೆ.

‘ಸತ್ತು ಹೋಗೋದಾ ಎಂದು ಕೇಳಿದವರಿಗೆ ಏನನ್ನುವುದು? ಬದುಕು ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ’ ಎನ್ನುವ ಸಚಿವರ ಮಾತನ್ನು ಗಮನಿಸಿದರೆ, ಉಮೇದಿನಲ್ಲಿ ಅವರು ಬಾಯಿ ತಪ್ಪಿ ಮಾತನಾಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಜನಸಾಮಾನ್ಯರ ಹಿತದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ವ್ಯಕ್ತಿಯೊಬ್ಬ ಹೀಗೆ ಧಿಮಾಕಿನಿಂದ ಉತ್ತರಿಸಲಿಕ್ಕೆ ಸಾಧ್ಯ. ರಾಜ್ಯದ ಪ್ರತಿಯೊಬ್ಬರೂ ಇದೇ ರೀತಿ ಕೇಳಿದರೆ ಎಷ್ಟು ಮಂದಿಗೆ ಉತ್ತರ ಕೊಡುವುದು ಎಂದು ಸಚಿವರು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ ಎನ್ನುವುದಾದರೆ, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಆರಾಮಾಗಿ ಇರುವುದಕ್ಕೆ ಅವಕಾಶವಿದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಇರಬೇಕಾದ ಮೊದಲ ಅರ್ಹತೆ, ಜನರ ಅಹವಾಲನ್ನು ಸಾವಧಾನದಿಂದ ಕೇಳಿಸಿಕೊಳ್ಳುವುದು. ದಿನದ ಯಾವುದೇ ವೇಳೆಯಲ್ಲಿ ಹಾಗೂ ಎಂತಹುದೇ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಪ್ರಜಾಪ್ರತಿನಿಧಿ ಓಗೊಡುವಂತಿರಬೇಕು. ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಸಚಿವ ಸ್ಥಾನದಲ್ಲಿ ಇರುವವರಂತೂ ಮತ್ತಷ್ಟು ಸಂವೇದನಾಶೀಲರೂ ಜನಪರ ಕಾಳಜಿಯುಳ್ಳವರೂ ಆಗಿರಬೇಕು. ಅಂಥ ತಾಳ್ಮೆ ಇಲ್ಲದವರು ಸಚಿವ ಸ್ಥಾನದಂತಹ ಜವಾಬ್ದಾರಿಗಳನ್ನು ವಹಿಸಿಕೊಳ್ಳಬಾರದು.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಓರ್ವ ಜನಪ್ರತಿನಿಧಿಯ ಕಾರ್ಯನಿರ್ವಹಣೆ ಹೇಗಿರಬಾರದು ಎನ್ನುವುದಕ್ಕೆ ಉಮೇಶ ಕತ್ತಿ ಉದಾಹರಣೆಯಾಗಿದ್ದರೆ, ಹೇಗಿರಬೇಕು ಎನ್ನುವುದಕ್ಕೆ ಕಲಬುರ್ಗಿ ಸಂಸದ ಡಾ. ಉಮೇಶ ಜಾಧವ ಮಾದರಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳಿಗೆ ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ತೀವ್ರ ಕೊರತೆಯಿರುವುದು ಗಮನಕ್ಕೆ ಬಂದಾಗ, ಔಷಧಿ ಪೂರೈಕೆಗೆ ಅವರು ವಹಿಸಿರುವ ಶ್ರಮ ಶ್ಲಾಘನೀಯ.

ತಮ್ಮಲ್ಲಿಗೆ ಬಂದ ಅಹವಾಲನ್ನು ಮತ್ತೊಬ್ಬ ಅಧಿಕಾರಿಗೆ ಹೊತ್ತುಹಾಕುವ ಕೆಲಸವನ್ನು ಜಾಧವ ಅವರು ಮಾಡಬಹುದಿತ್ತು. ಅದರ ಬದಲಿಗೆ, ಖುದ್ದಾಗಿ ಬೆಂಗಳೂರಿನ ಔಷಧ ನಿಯಂತ್ರಕರ ಕೊಠಡಿಗೆ ನಸುಕಿನ 1 ಗಂಟೆಯಲ್ಲಿ ತಲುಪಿ, ಅಗತ್ಯವಿದ್ದ ಚುಚ್ಚುಮದ್ದುಗಳನ್ನು ಅಧಿಕಾರಿಗಳಿಂದ ಪಡೆದದ್ದು ಮಾತ್ರವಲ್ಲದೆ, ಆ ಔಷಧಿಯನ್ನು ವಿಮಾನದ ಮೂಲಕ ಕಲಬುರ್ಗಿಗೆ ಕೊಂಡೊಯ್ದಿದ್ದಾರೆ. ಸಂಸದರ ಈ ನಡವಳಿಕೆ ಎಲ್ಲ ಜನಪ್ರತಿನಿಧಿಗಳಿಗೂ ಅನುಕರಣೀಯ. ಅಧಿಕಾರಿಗಳಿಗೆ ಹೇಳಿ ಕೆಲಸ ಮಾಡಿಸುವುದರ ಜೊತೆಗೆ, ಸ್ವಯಂ ಜನಪ್ರತಿನಿಧಿಗಳೂ ಜನರ ಸಮಸ್ಯೆಗಳಿಗೆ ಖುದ್ದು ಸ್ಪಂದಿಸಿದಾಗ ಆಡಳಿತ ಯಂತ್ರ ಚುರುಕಾಗುತ್ತದೆ ಹಾಗೂ ಜನರಿಗೂ ತಾವು ಆರಿಸಿದ ಪ್ರತಿನಿಧಿಗಳು ಕಷ್ಟ ಕಾಲದಲ್ಲಿ ತಮ್ಮೊಂದಿಗಿರುತ್ತಾರೆ ಎನ್ನುವ ಭಾವನೆ ಉಂಟಾಗುತ್ತದೆ.

ಇದನ್ನೂ ಓದಿ: ಅಕ್ಕಿ ಕೇಳಿದ ರೈತನಿಗೆ ‘ಸಾಯುವುದು ಒಳ್ಳೆಯದು’ ಎಂದ ಸಚಿವ ಉಮೇಶ್ ಕತ್ತಿ

ಕೊರೊನಾ ಸೋಂಕು ಜನಸಾಮಾನ್ಯರ ನೆಮ್ಮದಿಯನ್ನು ಕಸಿದುಕೊಂಡಿರುವ ಸಂದರ್ಭದಲ್ಲಿ, ಸರ್ಕಾರವನ್ನು ಪ್ರತಿನಿಧಿಸುವವರು ಜನರಿಗೆ ಧೈರ್ಯ ತುಂಬುವ ಮಾತುಗಳನ್ನಾಡುವುದು ಅಗತ್ಯ. ಬಿಕ್ಕಟ್ಟಿನ ಸಂದರ್ಭದಲ್ಲಿ ಸಣ್ಣದೊಂದು ಸಾಂತ್ವನದ ಮಾತು ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ದುರದೃಷ್ಟವಶಾತ್‌, ಇಂಥ ಮಾನವೀಯ ನಡವಳಿಕೆ ನಮ್ಮ ಶಾಸಕರು ಮತ್ತು ಸಚಿವರಲ್ಲಿ ಕಡಿಮೆಯಾಗುತ್ತಿದೆ. ಅಧಿಕಾರವು ಜನರ ಸೇವೆಗೆ ಬಳಕೆಯಾಗಬೇಕೇ ಹೊರತು ಅವರ ಮೇಲೆ ದಬ್ಬಾಳಿಕೆ ನಡೆಸಲು ಅಲ್ಲ ಎನ್ನುವುದನ್ನು ಸರ್ಕಾರದ ಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದೆ ಯಾರಾದರೂ ಉದ್ಧಟತನದಿಂದ ವರ್ತಿಸಿದರೆ, ಅವರ ಕಿವಿ ಹಿಂಡುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು. ಹೊಣೆಗೇಡಿತನದಿಂದ ಮಾತನಾಡುವುದು, ಪ್ರತಿಭಟನೆ ವ್ಯಕ್ತವಾದ ನಂತರ ಕ್ಷಮೆ, ವಿಷಾದ ವ್ಯಕ್ತಪಡಿಸುವುದು ಸಾಮಾನ್ಯ ಎನ್ನುವಂತಾಗುವುದು ಜನಪರ ಆಡಳಿತದ ಲಕ್ಷಣವಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು