ಬುಧವಾರ, ಜೂನ್ 16, 2021
28 °C

ಅಲ್ಪ ಮೊತ್ತದ ಪರಿಹಾರ ಅರ್ಹರಿಗೆ ಬೇಗ ತಲುಪಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ನ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಮುದಾಯಗಳಿಗೆ ರಾಜ್ಯ ಸರ್ಕಾರವು ₹ 1,250 ಕೋಟಿ ಮೊತ್ತದ ಪರಿಹಾರವನ್ನು ಘೋಷಿಸಿದೆ. ಕೃಷಿಕರು, ಕಟ್ಟಡ ಕಾರ್ಮಿಕರು, ಆಟೊ–ಟ್ಯಾಕ್ಸಿ ಚಾಲಕರು, ಬೀದಿ ಬದಿಯ ವ್ಯಾಪಾರಿಗಳು, ಶ್ರಮಿಕರು ಹಾಗೂ ಕಲಾವಿದರಿಗೆ ಇದರಿಂದ ನೆರವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಲಾಕ್‌ಡೌನ್‌ನಿಂದ ಲಕ್ಷಾಂತರ ಕುಟುಂಬಗಳ ಬದುಕೇ ಮೂರಾಬಟ್ಟೆ ಆಗಿರುವ ಈ ಸನ್ನಿವೇಶದಲ್ಲಿ ಘೋಷಿಸಿರುವ ಪರಿಹಾರ ಅಲ್ಪವಾದರೂ ಕೆಲವರಿಗೆ ತಕ್ಷಣಕ್ಕೆ ಒಂದಿಷ್ಟು ಸಮಾಧಾನ ತರಬಹುದು. ಆದರೆ, ಯಾವುದೇ ತಾಂತ್ರಿಕ ನೆಪ ಹೇಳದೆ ಎಷ್ಟು ಸಾಧ್ಯವೋ ಅಷ್ಟು ಬೇಗ ಅರ್ಹ ಫಲಾನುಭವಿಗಳಿಗೆ ಘೋಷಿತ ಪರಿಹಾರದ ಮೊತ್ತ ಸಿಗುವಂತೆ ನೋಡಿಕೊಳ್ಳಬೇಕು. ಆರ್ಥಿಕ ಇಲಾಖೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಈ ದಿಸೆಯಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು. ಕಟ್ಟಕಡೆಯ ಫಲಾನುಭವಿಗೂ ಪರಿಹಾರ ತಲುಪಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈ ಹೊತ್ತಿನ ಅವರ ಆದ್ಯತೆ ಆಗಬೇಕು. ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ ಕೆಟ್ಟದಾಗಿದೆ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಬಡವರ ಕಣ್ಣೀರು ಒರೆಸಲು ಬೇಕಾಗಿರುವ ಹಣವನ್ನು, ಸಾಲ ಮಾಡಿಯಾದರೂ ಸರಿಯೇ ಹೊಂದಿಸಿಕೊಳ್ಳಲೇಬೇಕು. ಕಳೆದ ವರ್ಷ ಲಾಕ್‌ಡೌನ್‌ ಜಾರಿಯಾದಾಗಲೂ ರಾಜ್ಯ ಸರ್ಕಾರ ಪರಿಹಾರವನ್ನು ಘೋಷಿಸಿತ್ತು. ಆಗ ಎಷ್ಟೋ ಜನ ಅರ್ಹರು ಪರಿಹಾರದಿಂದ ವಂಚಿತರಾದರು ಎಂಬ ದೂರುಗಳು ಕೇಳಿಬಂದಿದ್ದವು. ಈ ಸಲ ಅಂತಹ ಆಕ್ಷೇಪಗಳಿಗೆ ಆಸ್ಪದ ಇಲ್ಲದಂತೆ ಎಚ್ಚರಿಕೆ ವಹಿಸಬೇಕು. ವಿಳಂಬಕ್ಕೂ ಎಡೆಮಾಡಿಕೊಡಬಾರದು.

ಸರ್ಕಾರವೇ ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ, ಒಟ್ಟು ಪರಿಹಾರದ ಮೊತ್ತವು 4.34 ಕೋಟಿ ಫಲಾನುಭವಿಗಳಲ್ಲಿ ಊಟ, ಪಡಿತರ ಇಲ್ಲವೆ ನಗದು ರೂಪದಲ್ಲಿ ಹರಿದು ಹಂಚಿಹೋಗಲಿದೆ. ಅಂದರೆ ತಲಾ ₹ 290 ನೆರವು. ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಇಷ್ಟು ಸಣ್ಣ ನೆರವಿನಿಂದ ಯಾರ ಸಂಕಟವನ್ನೂ ಕಡಿಮೆ ಮಾಡಲು ಸಾಧ್ಯವಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲದ ತಲಾ ಪರಿಹಾರ ಮೊತ್ತದಲ್ಲೂ ಗಣನೀಯವಾಗಿ ಇಳಿಕೆಯಾಗಿದೆ. ಕೋವಿಡ್‌ನಿಂದ ಕಂಗೆಟ್ಟ ಯಾವುದೇ ಬಡ ಕುಟುಂಬ ಕೇವಲ ₹ 3,000 ಪರಿಹಾರದಿಂದ ಹೇಗೆ ಚೇತರಿಸಿಕೊಳ್ಳಲು ಸಾಧ್ಯ? ರಾಜ್ಯ ಸರ್ಕಾರ ಸದ್ಯ ಘೋಷಿಸಿರುವ ಪರಿಹಾರವನ್ನು ಒಂದು ತುರ್ತು ಕ್ರಮವಾಗಿಯಷ್ಟೇ ಪರಿಭಾವಿಸಬೇಕು. ಶ್ರಮಿಕ ಸಮುದಾಯಗಳು ಮತ್ತೆ ಬದುಕು ಕಟ್ಟಿಕೊಳ್ಳಲು ಏನೇನು ಮಾಡಬೇಕು ಎಂಬ ವಿಷಯವಾಗಿ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ಆ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ವಿರೋಧ ಪಕ್ಷಗಳ ಮುಖಂಡರು ದೂರುತ್ತಿರುವಂತೆ ಇದೊಂದು ಕಾಟಾಚಾರದ ಪರಿಹಾರ ಆಗುತ್ತದೆ ಅಷ್ಟೆ. ‘ಬಡ ಕುಟುಂಬಕ್ಕೆ ತಲಾ ಹತ್ತು ಕೆ.ಜಿ. ಅಕ್ಕಿ ವಿತರಣೆ ಮಾಡಬೇಕು ಮತ್ತು ದುಡಿಯುವ ವರ್ಗದವರಿಗೆ ತಲಾ ₹ 10 ಸಾವಿರ ಪರಿಹಾರ ನೀಡಬೇಕು’ ಎಂಬ ಒತ್ತಾಯ ಕೂಡ ಇದೆ. ನ್ಯಾಯಯುತವಾಗಿರುವ ಈ ಬೇಡಿಕೆಯನ್ನು ಈಡೇರಿಸುವ ದಿಸೆಯಲ್ಲಿ ಸರ್ಕಾರ ಮುಕ್ತಮನಸ್ಸಿನಿಂದ ಯೋಚಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಂತಹ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಕೆಲಸವನ್ನೂ ನೀಡಬೇಕು. ಹಸಿದ ಹೊಟ್ಟೆಯನ್ನು ತುಂಬಿಸುವುದು ಎಲ್ಲಕ್ಕಿಂತಲೂ ಮೊದಲು ಆಗಬೇಕಿರುವ ತುರ್ತಿನ ಕೆಲಸ. ಶ್ರಮಿಕರ ನೆರವಿಗೆ ವ್ಯಯಿಸುವ ಹಣವನ್ನು ‘ಆರ್ಥಿಕ ಹೊರೆ’ಯ ಪರಿಭಾಷೆಯಲ್ಲಿ ನೋಡದೆ, ತನ್ನ ಹೊಣೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ಏಕೆಂದರೆ, ಕೋವಿಡ್‌ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಏರುತ್ತಿದ್ದಾಗಲೂ ಕೈಕಟ್ಟಿ ಕುಳಿತು, ಪರಿಸ್ಥಿತಿ ಕೈಮೀರಿದಾಗ ಲಾಕ್‌ಡೌನ್‌ ವಿಧಿಸಿದ್ದು ಇದೇ ಸರ್ಕಾರ. ಶ್ರಮಿಕರ ಬದುಕನ್ನು ಪರೋಕ್ಷವಾಗಿ ಸಂಕಷ್ಟಕ್ಕೆ ನೂಕಿದ ಮೇಲೆ ಅವರ ನೆರವಿಗೆ ಧಾವಿಸಬೇಕಾದದ್ದು ಆಡಳಿತ ವ್ಯವಸ್ಥೆಯ ನೈತಿಕ ಕರ್ತವ್ಯ ಕೂಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು