ಮಂಗಳವಾರ, ಆಗಸ್ಟ್ 4, 2020
23 °C

ಡಾನ್ಸ್ ಬಾರ್‌: ಸುಪ್ರೀಂ ಕೋರ್ಟ್‌ ತೀರ್ಪು ಮಾನವೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹಾರಾಷ್ಟ್ರದಲ್ಲಿ ಡಾನ್ಸ್ ಬಾರ್‌ಗಳನ್ನು ಮತ್ತೆ ಆರಂಭಿಸಲು ಸುಪ್ರೀಂ ಕೋರ್ಟ್ ಗುರುವಾರ ಷರತ್ತುಬದ್ಧ ಒಪ್ಪಿಗೆ ನೀಡಿರುವುದು ಅತ್ಯಂತ ಮಾನವೀಯ ಕ್ರಮ. ನೈತಿಕತೆ ಮತ್ತು ಜೀವನೋಪಾಯದ ವಾದಗಳ ನಡುವೆ ಎರಡನೆಯದಕ್ಕೇ ನ್ಯಾಯಾಲಯ ಆದ್ಯತೆ ನೀಡಿದೆ. ನೈತಿಕತೆ ಎಂಬುದು ಚಲನಶೀಲ ಮೌಲ್ಯವೇ ವಿನಾ ನಿಂತ ನೀರಲ್ಲ ಎಂದು ಸಾರಿದೆ. ನೈತಿಕತೆಯ ಹೆಸರಿನಲ್ಲಿ 14 ವರ್ಷಗಳ ಹಿಂದೆ ಮುಚ್ಚಲಾಗಿದ್ದ ಸಾವಿರಾರು ಡಾನ್ಸ್ ಬಾರ್‌ಗಳ ನಿಷೇಧ ಯಾವುದೋ ಒಂದು ರೂಪದಲ್ಲಿ ಈವರೆಗೆ ಮುಂದುವರಿದಿದೆ. ಡಾನ್ಸ್ ಬಾರ್‌ಗಳು ಸಾರ್ವಜನಿಕ ನೈತಿಕತೆಗೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುತ್ತವೆ ಎಂಬ ಮಹಾರಾಷ್ಟ್ರ ಸರ್ಕಾರದ ವಾದವನ್ನು ಆಧಾರರಹಿತ ಎಂದು ನ್ಯಾಯಾಲಯ ತಳ್ಳಿಹಾಕಿದೆ. ಅಂತಿಮ ತೀರ್ಪನ್ನು ಬಾಕಿ ಇರಿಸಿ ಈ ನಿಷೇಧವನ್ನು ಸುಪ್ರೀಂ ಕೋರ್ಟ್ ಐದು ವರ್ಷಗಳ ಹಿಂದೆಯೇ ತೆರವುಗೊಳಿಸಿತ್ತು. ನ್ಯಾಯಾಲಯದ ಈ ಆದೇಶವನ್ನು ವಿಫಲಗೊಳಿಸಲು ರಂಗೋಲಿ ಕೆಳಗೆ ತೂರಿದ ರಾಜ್ಯ ಸರ್ಕಾರ, ಡಾನ್ಸ್ ಬಾರ್ ಲೈಸೆನ್ಸ್‌ಗಳ ನೀಡಿಕೆಗೆ ‘ಅಕ್ಷರಶಃ ಅಸಾಧ್ಯ’ ಎನಿಸುವ ಷರತ್ತುಗಳನ್ನು ವಿಧಿಸಿತ್ತು. ಈ ನಡೆಯು ಸಂವಿಧಾನಬಾಹಿರ ಎಂದು ನ್ಯಾಯಾಲಯ ಸಾರಿರುವುದು ಸೂಕ್ತವಾಗಿದೆ. ಸಾಮಾಜಿಕ ನೈತಿಕತೆಯ ಗುಣಮಾನಗಳು ಕಾಲ ಸರಿದಂತೆ ಬದಲಾಗುತ್ತವೆ. ಹಿಂದೆ ಅನೈತಿಕ ಎಂದು ಭಾವಿಸಿದ್ದು ಇಂದು ಅಂತಹ ಹಣೆಪಟ್ಟಿಯಿಂದ ಮುಕ್ತವಾಗಿರಬಹುದು. ಘನತೆಯುಳ್ಳ ನೃತ್ಯ ಪ್ರದರ್ಶನಗಳಿಗೆ ಇಂದು ಸಮಾಜದ ಒಪ್ಪಿಗೆ ಇದೆ. ಸರ್ಕಾರಗಳು ಅಶ್ಲೀಲ ನೃತ್ಯವನ್ನು ನಿಷೇಧಿಸಬಹುದು. ಆದರೆ ತಾನೇ ಕಲ್ಪಿಸಿಕೊಂಡ ನೈತಿಕತೆಯನ್ನು ಸಮಾಜದ ಮೇಲೆ ಹೇರುವಂತಿಲ್ಲ. ‘ಸಾಮಾಜಿಕ ನಿಯಂತ್ರಣ’ಕ್ಕೆ ಕೈ ಹಾಕುವಂತಿಲ್ಲ. ತಾನು ಜಾರಿಗೊಳಿಸುವ ಕಾಯ್ದೆ ಕಾನೂನುಗಳು ಸಂವಿಧಾನವನ್ನು ಉಲ್ಲಂಘಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವುದು ಗಮನಾರ್ಹ.

‘ಡಾನ್ಸ್ ಬಾರ್‌ಗಳನ್ನು ಮುಚ್ಚದಿರಿ, ಬದಲಾಗಿ ಮಹಿಳೆಯ ಸುರಕ್ಷತೆಗೆ ಗಮನ ಹರಿಸಿ’ ಎಂದು ಸುಪ್ರೀಂ ಕೋರ್ಟ್‌  2013ರಲ್ಲಿಯೇ ಹೇಳಿತ್ತು. ನಿಷೇಧವನ್ನು ತೆರವುಗೊಳಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ‘ರೋಗಕ್ಕಿಂತ ಮದ್ದೇ ಭಯಂಕರ’ ಎಂದು ನಿಷೇಧದ ಕ್ರಮವನ್ನು ಬಣ್ಣಿಸಿತ್ತು. ಬಾರ್ ಹೆಣ್ಣುಮಕ್ಕಳ ದುಡಿಯುವ ಸ್ಥಿತಿಗತಿಗಳನ್ನು ಸುಧಾರಿಸಿ, ಅವರಿಗೆ ಸುರಕ್ಷತೆ ಕಲ್ಪಿಸುವುದು ಹೆಚ್ಚು ಸೂಕ್ತ ಕ್ರಮವೇ ವಿನಾ ನಿಷೇಧವಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ಮೇಲ್ಮನವಿಯನ್ನು ತಳ್ಳಿಹಾಕಿತ್ತು. ಯಾವುದೇ ವೃತ್ತಿಯನ್ನು ಅವಲಂಬಿಸುವ ಮತ್ತು ಜೀವಿಸುವ ಹಕ್ಕುಗಳನ್ನು ಸಂವಿಧಾನವೇ ಒದಗಿಸಿದೆ. ಪರಸ್ಪರ ಹೆಣೆದುಕೊಂಡಿರುವ ಈ ಹಕ್ಕುಗಳು ಡಾನ್ಸ್ ಬಾರ್ ಸನ್ನಿವೇಶದಲ್ಲಿ ಸ್ವಚ್ಛಂದ ಅಥವಾ ಅನಿರ್ಬಂಧಿತ ಅಲ್ಲ. ಆದರೆ ಪರಿಣಾಮವನ್ನು ದೂಷಿಸುವ ಬದಲು ಕಾರ್ಯಕಾರಣವನ್ನು ಗುರುತಿಸಿ ಗುಣಪಡಿಸುವುದೇ ಸರಿ ದಾರಿ. ಬಾರ್‌ಗಳಲ್ಲಿ ನರ್ತಿಸುವ ಮಹಿಳೆಯರ ಜೀವನೋಪಾಯವನ್ನು ಸ್ಥಗಿತಗೊಳಿಸಿ ಅವರನ್ನು ಇತರೆ ಶೋಷಣೆಗಳಿಗೆ ದೂಡುವುದು ತಪ್ಪು. ಬಾರ್ ಡಾನ್ಸರ್ ಕೂಡ ಮನುಷ್ಯಜೀವಿ. ಆಕೆಗೂ ಹಸಿವು ನೀರಡಿಕೆಗಳುಂಟು. ಅವುಗಳನ್ನು ನೀಗಿಸಿಕೊಳ್ಳಬೇಕು. ತನ್ನ ಕುಟುಂಬದ ಖರ್ಚು ವೆಚ್ಚವನ್ನು ಭರಿಸಬೇಕು. ಆಕೆಯನ್ನು ಈ ಬಲೆಯಿಂದ ಹೊರತಂದು ಹೊಸ ಬದುಕಿಗೆ ಹೂಡಲು ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡುವುದು ಸರಿಯಾದ ದಾರಿಯೇ ವಿನಾ ಕೇವಲ ಕಾಯ್ದೆ ಕಾನೂನಿನಿಂದ ಉಪಯೋಗ ಇಲ್ಲ. ಎತ್ತ ಕಡೆಯಿಂದ ನೋಡಿದರೂ ಈಕೆಯ ಘನತೆಯನ್ನು ಮರಳಿ ಗಳಿಸಿಕೊಡುವ ಹೊಣೆ ಸರ್ಕಾರದ್ದೇ ಎಂದಿತ್ತು ನ್ಯಾಯಾಲಯ. ಈ ವಿವೇಕದ ಮಾತುಗಳನ್ನು ಸರ್ಕಾರ ಮತ್ತು ಸಮಾಜ ನಡೆಸಿಕೊಡುವುದು ಇಂದಿನ ತುರ್ತು ಅಗತ್ಯ. ಸಮೀಕ್ಷೆಯೊಂದರ ಪ್ರಕಾರ, ಮುಂಬೈಯ 75 ಸಾವಿರಕ್ಕೂ ಹೆಚ್ಚು ಬಾರ್ ಡಾನ್ಸರ್‌ಗಳ ಪೈಕಿ ಶೋಷಿತ ವರ್ಗಗಳಿಗೆ ಸೇರಿದ ಅನಕ್ಷರಸ್ಥರು ಮತ್ತು ಮುಚ್ಚಿ ಹೋದ ಜವಳಿ ಗಿರಣಿಗಳಲ್ಲಿ ಉದ್ಯೋಗಗಳನ್ನು ಕಳೆದುಕೊಂಡ ಕಾರ್ಮಿಕರ ಮಕ್ಕಳದೇ ದೊಡ್ಡಪಾಲು. ಇವರ‍್ಯಾರೂ ಈ ಕಸುಬನ್ನು ಷೋಕಿಗಾಗಿ ಆರಿಸಿಕೊಂಡವರಲ್ಲ. ಕುಟುಂಬಗಳನ್ನು ಸಲಹುವುದು ಇವರ ಹೆಗಲೇರಿದ ಹೊಣೆ. ಡಾನ್ಸ್ ಬಾರ್ ದಾರಿ ಮುಚ್ಚಿದ ನಂತರ ಮೈ ಮಾರಿಕೊಳ್ಳುವ ದಂಧೆಗೆ ಇಳಿದ ಅನೇಕ ಪ್ರಕರಣಗಳು ವರದಿಯಾಗಿವೆ. ಹೆಣ್ಣುದೇಹವು ಗಂಡಾಳಿಕೆಯ ರಾಜಕಾರಣದ ಆಟಿಕೆ. ಉಪವಾಸ- ಬಾರ್ ಡಾನ್ಸಿಂಗ್ ಎಂಬ ಬಾಣಲೆ-ಬೆಂಕಿಯ ಎರಡೇ ಆಯ್ಕೆಗಳನ್ನು ಆಕೆಯ ಮುಂದೆ ಇಟ್ಟಿರುವುದು ಹುಸಿ ನೈತಿಕತೆಯನ್ನು ನಟಿಸುವ ಆಷಾಢಭೂತಿ ಸಮಾಜದ ಕಡುಕ್ರೌರ್ಯ. ರೋಚಕ ‘ಐಟಂ ನಂಬರ್’ಗಳನ್ನು ಬೆಳ್ಳಿತೆರೆಯ ಮೇಲೆ ನೋಡಿ ಚಪ್ಪರಿಸುವ ಗಂಡಾಳಿಕೆಯ ಸಮಾಜ, ಬಡಪಾಯಿ ಬಾರ್ ಡಾನ್ಸರ್‌ಗಳನ್ನು ನೈತಿಕತೆಯ ಶೂಲಕ್ಕೆ ಏರಿಸುತ್ತದೆ. ಇದು ಬೂಟಾಟಿಕೆಯಲ್ಲದೆ ಇನ್ನೇನೂ ಅಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು