ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ ಸಾಧನೆಯ ಸುದೀರ್ಘಹೋರಾಟಕ್ಕೆ ಸಂದ ಜಯ

Last Updated 7 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದು. ಸಂವಿಧಾನ ನೀಡಿರುವ ಸಮಾನತೆಯ ಹಕ್ಕನ್ನು ಈ ತೀರ್ಪು ಮತ್ತೊಮ್ಮೆ ಎತ್ತಿ ಹಿಡಿದಿದೆ.ಸರಿ– ತಪ್ಪುಗಳ ಕುರಿತಾಗಿ ಸಮಾಜ ಕಟ್ಟಿಕೊಂಡ ನೈತಿಕತೆಯ ವಿಚಾರಧಾರೆಗಳು ಸಂವಿಧಾನಾತ್ಮಕ ಹಕ್ಕುಗಳನ್ನು ತುಳಿಯಬಾರದು ಎಂಬ ಮಹತ್ವದ ಸಂದೇಶ ಇಲ್ಲಿದೆ.ವೈಯಕ್ತಿಕ ಸ್ವಾತಂತ್ರ್ಯದ ಗಡಿಗಳನ್ನು ಈ ತೀರ್ಪಿನ ಮೂಲಕ ವಿಸ್ತರಿಸಲಾಗಿದೆ.

ಲೈಂಗಿಕ ಭಾವನೆಗಳು ಹಾಗೂ ಲಿಂಗತ್ವ ಅಭಿವ್ಯಕ್ತಿಯು ವ್ಯಕ್ತಿಯ ಅಸ್ಮಿತೆಯ ಅಂತರ್ಗತ ಭಾಗ. ಹೀಗಾಗಿ ಸಲಿಂಗಕಾಮವನ್ನು ಅಪರಾಧವೆಂದು 158 ವರ್ಷಗಳಿಂದ ಪರಿಗಣಿಸಿಕೊಂಡು ಬಂದಿರುವುದು ಅತಾರ್ಕಿಕ, ಅಸಮರ್ಥನೀಯ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಹೇಳಿರುವುದು ಸರಿಯಾದದ್ದು.ಕಾಲಕ್ರಮೇಣ ಈ ಅತಾರ್ಕಿಕ ಕಾನೂನಿನ ವಿಚಾರ ಸಾರ್ವಜನಿಕ ಪ್ರಜ್ಞೆಯಲ್ಲಿ ಇಳಿದಿದ್ದಲ್ಲದೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ತೀವ್ರ ರೀತಿಯ ಪೂರ್ವಗ್ರಹಗಳ ವರ್ತನೆಗಳಿಗೂ ಕಾರಣವಾಗಿದೆ. ಬಹುಸಂಖ್ಯಾತ ವಾದಗಳ ಬಲದಲ್ಲಿ ನಲುಗಿದ ಸಮುದಾಯ ಇದು.

‘ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಭೀತಿಯ ಬದುಕು ನಡೆಸುವಂತೆ ಹಕ್ಕುಗಳನ್ನು ನಿರಾಕರಿಸಿದ ಇತಿಹಾಸದ ತಪ್ಪಿಗೆ ಕ್ಷಮೆ ಕೋರಬೇಕಾಗಿದೆ’ ಎಂಬಂಥ ತೀವ್ರ ನುಡಿಗಳನ್ನೂ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಹೇಳಿದ್ದಾರೆ. ಈಗಲಾದರೂಅಧಿಕಾರಸ್ಥರ ಕಿರುಕುಳದ ವಾತಾವರಣದಿಂದಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರಿಗೆ ವಿಮೋಚನೆ ಸಿಕ್ಕರೆ ಅದೇ ದೊಡ್ಡದು. ಇದರಿಂದ ಇತಿಹಾಸದ ತಪ್ಪಿಗೆ ಸಾಕಷ್ಟು ಪರಿಹಾರ ಸಿಕ್ಕಂತಾಗುತ್ತದೆ ಎಂದು ಭಾವಿಸಬಹುದು.ತಮ್ಮದಲ್ಲದ ತಪ್ಪಿಗೆ ಸಮಾಜದಿಂದ ಕಿರುಕುಳಕ್ಕೊಳಗಾಗಿ ತಾರತಮ್ಯ ಅನುಭವಿಸಿದ ಈ ಸಮುದಾಯದವರ 17 ವರ್ಷಗಳ ಹೋರಾಟಕ್ಕೆ ಫಲಸಿಕ್ಕಿದೆ ಎಂಬುದು ಸ್ವಾಗತಾರ್ಹ.

‘ಲೈಂಗಿಕ ಭಾವನೆಗಳು ಅಪರಾಧವಲ್ಲ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಇತರ ನಾಗರಿಕರಂತೆಯೇ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ’ ಎಂದುಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ. ಇದು ಮಾನವ ಹಕ್ಕುಗಳ ಇತಿಹಾಸದಲ್ಲಿ ಮಹತ್ವದ ತೀರ್ಪು. ಜಗತ್ತಿನಲ್ಲಿ ಬಹುತೇಕ ಎಲ್ಲಾ ಆಧುನಿಕ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಗಳು ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾನ ನಾಗರಿಕರಾಗಿಯೇ ಭಾವಿಸಿವೆ. ಭಾರತವೂ ಆ ರಾಷ್ಟ್ರಗಳ ಸಾಲಿಗೆ ಈಗ ಸೇರ್ಪಡೆಯಾದಂತಾಯಿತು.

ಲೈಂಗಿಕತೆ, ವ್ಯಕ್ತಿಯ ಹಕ್ಕುಗಳ ಭಾಗ ಎಂದುಈ ಹಿಂದೆಖಾಸಗಿತನದ ಹಕ್ಕಿನ ಮೇಲೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲೂ ಹೇಳಲಾಗಿತ್ತು. ಸೆಕ್ಷನ್ 377ರ ಸಿಂಧುತ್ವದ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳದೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ವಿವೇಚನೆಯನ್ನು ಸುಪ್ರೀಂ ಕೋರ್ಟ್‌ಗೇ ಕೇಂದ್ರ ಸರ್ಕಾರವೂ ಬಿಟ್ಟುಕೊಟ್ಟಿತ್ತು. ರಾಜಕೀಯ ಪಕ್ಷಗಳ ನಾಯಕರಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಒಮ್ಮತದ ನಿಲುವು ಇಲ್ಲ. ಸಾಂಪ್ರದಾಯಿಕ ಮತದಾರರ ಬೆಂಬಲ ಕಳೆದುಕೊಳ್ಳುವ ಹಿಂಜರಿಕೆ ಇದಕ್ಕೆ ಕಾರಣ ಇರಬಹುದು. ಈಗ, ವಯಸ್ಕ ವ್ಯಕ್ತಿಗಳ ನಡುವೆ ಪರಸ್ಪರ ಸಮ್ಮತಿಯ ಲೈಂಗಿಕತೆ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಪೀಠ ಸರ್ವಸಮ್ಮತ ತೀರ್ಪು ನೀಡಿದೆ.

ಈ ವಿಚಾರದಲ್ಲಿ ಇದು ಅಂತಿಮ ಮಾತು.ನಿಸರ್ಗದತ್ತವಾಗಿಯೇ ವಿಭಿನ್ನ ಬಗೆಗಳ ಲೈಂಗಿಕ ಆಸಕ್ತಿ ಹೊಂದಿದವರು ಅವಮಾನ, ನಾಚಿಕೆ, ಆತ್ಮವಿಶ‍್ವಾಸ ಕುಸಿತದಿಂದ ನರಳಬೇಕಿಲ್ಲ ಎಂಬುದು ಇಲ್ಲಿ ಸ್ಪಷ್ಟ. ತಾವು ಅನುಭವಿಸಿದ ಖಿನ್ನತೆ, ಮಾನಸಿಕ ಸಮಸ್ಯೆ, ಆತ್ಮಹತ್ಯೆ ಯತ್ನಗಳಂತಹ ವಿಚಾರಗಳ ಬಗ್ಗೆ ಹಲವು ಅರ್ಜಿದಾರರು ಕೋರ್ಟ್‌ಗೆ ನಿವೇದನೆ ಮಾಡಿಕೊಂಡಿದ್ದರು. ಈ ಸಮುದಾಯ ಅನುಭವಿಸುವ ಸಾಮಾಜಿಕ ಪೂರ್ವಗ್ರಹಗಳು ಹಾಗೂ ಕಳಂಕ ಇನ್ನಾದರೂ ತಪ್ಪಬೇಕು. ಬದಲಾಗುತ್ತಿರುವ ಜಗತ್ತಿನ ಅಗತ್ಯಗಳಿಗೆ ಸ್ಪಂದಿಸುವ ನಮ್ಮ ಸಂವಿಧಾನದ ಪರಿವರ್ತನಶೀಲ ಪಾತ್ರವನ್ನು ಕೋರ್ಟ್ ಎತ್ತಿಹಿಡಿದಿದೆ.

ಸಲಿಂಗ ಸಂಬಂಧಗಳಿಗೆ ಸಂಬಂಧಿಸಿದಂತೆ ಮದುವೆ, ದತ್ತು ಪಡೆದುಕೊಳ್ಳುವ ಹಕ್ಕು, ಉತ್ತರಾಧಿಕಾರದಂತಹ ವಿಚಾರಗಳ ನಿರ್ವಹಣೆಗೆ ಕಾನೂನುಗಳಲ್ಲೂ ಬದಲಾವಣೆಗಳನ್ನುತರಬೇಕಾಗಿದೆ. ಇದು ಮುಂದಿನ ದಿನಗಳಲ್ಲಿ ಇರುವಂತಹ ದೊಡ್ಡ ಸವಾಲು. ಇದನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ಉಪಕ್ರಮಗಳನ್ನು ನಮ್ಮ ಸಂಸತ್‌ ಬರಲಿರುವ ದಿನಗಳಲ್ಲಿ ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT