ಮಂಗಳವಾರ, ಏಪ್ರಿಲ್ 20, 2021
32 °C
ಈ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ತಕ್ಷಣ ಕ್ರಮ ಜರುಗಿಸಬೇಕು

ಸರ್ಕಾರ– ಶಿಕ್ಷಕರ ತಿಕ್ಕಾಟದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸ ಶೈಕ್ಷಣಿಕ ವರ್ಷವನ್ನು ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಈ ಸಲ ನೆಮ್ಮದಿಯಿಂದ ಸ್ವಾಗತಿಸುವ ವಾತಾವರಣ ಇದ್ದಂತೆ ಕಾಣುತ್ತಿಲ್ಲ. ವರ್ಷದ ಆರಂಭದಲ್ಲೇ ಗೊಂದಲಗಳು ಭುಗಿಲೆದ್ದಿವೆ. ಶಾಲೆ ಆರಂಭವಾಗುವುದಕ್ಕೆ ಮೊದಲೇ ಮುಗಿಯಬೇಕಾದ ವರ್ಗಾವಣೆ ಪ್ರಕ್ರಿಯೆ ಜುಲೈ ತಿಂಗಳಲ್ಲೂ ನಡೆಯುತ್ತಿದೆ. ಇನ್ನೊಂದೆಡೆ, ಪದವೀಧರ ಶಿಕ್ಷಕರ ನೇಮಕದ ವಿಚಾರದಲ್ಲಿ ಸರ್ಕಾರ ರೂಪಿಸಿರುವ ನಿಯಮಗಳು ಪ್ರಾಥಮಿಕ ಶಿಕ್ಷಕರನ್ನು ಕೆರಳಿಸಿವೆ. ಹಲವು ಶಾಲೆಗಳಲ್ಲಿ ಶಿಕ್ಷಕರು 6ರಿಂದ 8ನೇ ತರಗತಿವರೆಗೆ ಪಾಠ ಮಾಡುವುದನ್ನು ನಿಲ್ಲಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಈ ತಿಂಗಳ 9ರಿಂದ ರಾಜ್ಯದಾದ್ಯಂತ ಶಾಲೆ ಬಂದ್‌ ಮಾಡಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಚ್ಚರಿಕೆಯನ್ನೂ ನೀಡಿದೆ. ಹೊಸ ಶೈಕ್ಷಣಿಕ ವರ್ಷದ ಪಾಠಗಳನ್ನು ಉತ್ಸಾಹದಿಂದ ಕಲಿಯಬೇಕಿದ್ದ ವಿದ್ಯಾರ್ಥಿಗಳ ಮೇಲೆ ಈ ಗೊಂದಲ ಪರಿಣಾಮ ಬೀರಲಿದೆ. ವರ್ಗಾವಣೆಗೆ ಅರ್ಜಿ ಸಲ್ಲಿಸಿ ಕಾದು ಕುಳಿತಿರುವ ಶಿಕ್ಷಕರು ಅರೆಮನಸ್ಸಿನಿಂದ ಪಾಠ ಮಾಡುವುದರ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳೇ ಎದುರಿಸಬೇಕು. ಸಾಮಾನ್ಯವಾಗಿ ವರ್ಷಾರಂಭದಲ್ಲಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ಪೂರೈಕೆಯ ವಿಳಂಬ ಎದ್ದು ಕಾಣುತ್ತದೆ. ಈ ಸಲ ಅದರ ಜೊತೆಗೆ, ಶಿಕ್ಷಕರು ಮತ್ತು ಸರ್ಕಾರದ ನಡುವಣ ಸಾಮರಸ್ಯದ ಕೊರತೆಯಿಂದ ಉದ್ಭವವಾಗಿರುವ ಹೊಸ ಸಮಸ್ಯೆಗಳೂ ವಿದ್ಯಾರ್ಥಿಗಳನ್ನು ಕಾಡುತ್ತಿವೆ. ಶಿಕ್ಷಕರ ವರ್ಗಾವಣೆಯು ಪ್ರತಿವರ್ಷದ ಪ್ರಕ್ರಿಯೆ. ಅದನ್ನು ಪಾರದರ್ಶಕವಾಗಿ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರವು ಪೂರ್ಣ ಪ್ರಕ್ರಿಯೆ
ಯನ್ನು ಆನ್‌ಲೈನ್‌ನಲ್ಲಿ ನಡೆಸುತ್ತಿದೆ. ಆನ್‌ಲೈನ್‌ನಲ್ಲೂ ಹಲವು ಗೊಂದಲಗಳು ಕಾಡುತ್ತಿರುವುದು ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಲು ಕಾರಣ ಎನ್ನಲಾಗುತ್ತಿದೆ. ಅಧಿಕಾರಿಗಳನ್ನು ಕೇಳಿದರೆ, ಎಲ್ಲವೂ ವೇಳಾಪಟ್ಟಿಯಂತೆ ನಡೆಯುತ್ತಿವೆ ಎನ್ನುತ್ತಾರೆ. ಎಷ್ಟೋ ಶಾಲೆಗಳಲ್ಲಿ  ಸರಿಯಾಗಿ ಪಾಠವೇ ಆರಂಭವಾಗಿಲ್ಲ. ವೇಳಾಪಟ್ಟಿಯ ಪ್ರಕಾರ ಆಗಸ್ಟ್‌ ಮೊದಲ ವಾರದವರೆಗೂ ವರ್ಗಾವಣೆ ನಡೆಯುತ್ತಿದ್ದರೆ ಶಾಲೆಗಳಲ್ಲಿ ಪಾಠಗಳು ವ್ಯವಸ್ಥಿತ ವಾಗಿ ನಡೆಯಲು ಸಾಧ್ಯವೇ? ಸೆಪ್ಟೆಂಬರ್‌ನಲ್ಲಿ ಮೊದಲ ಸೆಮಿಸ್ಟರ್‌ ಪರೀಕ್ಷೆಗಳು ನಡೆಯಬೇಕು. ಆಗಸ್ಟ್‌ನಲ್ಲೂ ಶಿಕ್ಷಕರು ವರ್ಗಾವಣೆ ಆಗುತ್ತಿದ್ದರೆ ಈ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ತಯಾರಾಗುವುದು ಹೇಗೆ? ವರ್ಗಾವಣೆ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶಾಲೆ ಆರಂಭಕ್ಕಿಂತ ಮುಂಚೆಯೇ ಪೂರ್ಣವಾಗುವಂತೆ ಏಕೆ ನಿಗದಿಪಡಿಸುತ್ತಿಲ್ಲ?

ಸರ್ಕಾರವು ಈಗ ಪದವೀಧರ ಶಿಕ್ಷಕರನ್ನು 6ರಿಂದ 8ನೇ ತರಗತಿಗೆ ನೇಮಿಸುತ್ತಿರುವುದು ಶಿಕ್ಷಕರಲ್ಲಿ ಗೊಂದಲವನ್ನು ಹೆಚ್ಚಿಸಿದೆ. ಮಾಧ್ಯಮಿಕ ಶಿಕ್ಷಣದಲ್ಲಿ ಹೊಸ ಮತ್ತು ಪರಿಷ್ಕೃತ ಪಠ್ಯಗಳು ಬಂದಿದ್ದು, ಅಲ್ಲಿ ಬಿ.ಇಡಿ ಮತ್ತು ಇತರ ಉನ್ನತ ಶಿಕ್ಷಣ ಪಡೆದ ಪದವೀಧರರನ್ನು ನೇಮಿಸಿದರೆ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎನ್ನುವುದು ಸರ್ಕಾರದ ವಾದ. ಪ್ರಾಥಮಿಕ ಶಿಕ್ಷಕರು ಇನ್ನು ಮುಂದೆ 6ರಿಂದ 8ನೇ ತರಗತಿಯ ಬೋಧನೆಗೆ ಬಡ್ತಿ ಪಡೆಯಬೇಕಿದ್ದರೆ ಪರೀಕ್ಷೆ ಬರೆದು ತೇರ್ಗಡೆ ಆಗಬೇಕು ಎನ್ನುವುದು ಹೊಸ ನಿಯಮ. ಶಿಕ್ಷಕರ ಗುಣಮಟ್ಟ ಹೆಚ್ಚಬೇಕು ಎನ್ನುವುದು ಅಪೇಕ್ಷಣೀಯವೇ. ಆದರೆ ಈಗಿರುವ ನಿಯಮಗಳ ಪ್ರಕಾರ, ಬಿ.ಇಡಿ ಆಗಿರುವ ಪ್ರಾಥಮಿಕ ಶಿಕ್ಷಕರು ಯಾವುದೇ ಪರೀಕ್ಷೆ ಬರೆಯದೆ ಹೈಸ್ಕೂಲ್‌ ಬೋಧನೆಗೆ ಬಡ್ತಿ ಪಡೆಯಬಹುದು. ‘ಹೈಸ್ಕೂಲ್‌ಗೆ ಪಾಠ ಹೇಳಲು ನಮ್ಮ ಗುಣಮಟ್ಟ ಸಾಕಾಗುತ್ತದೆ; ಈ ಗುಣಮಟ್ಟ 6ರಿಂದ 8ನೇ ತರಗತಿಗೆ ಸಾಲುವುದಿಲ್ಲವೇ’ ಎನ್ನುವ ಶಿಕ್ಷಕರ ಸಂಘದ ಪ್ರಶ್ನೆ ತರ್ಕಬದ್ಧವಾಗಿಯೇ ಇದೆ. ಗುಣಮಟ್ಟಕ್ಕೆ ಸಂಬಂಧಿಸಿದ ಸರ್ಕಾರದ ನಿಯಮಗಳು ತಾರತಮ್ಯರಹಿತ ಆಗಿರಬೇಕು ಎಂದು ಅವರು ವಾದಿಸುವುದರಲ್ಲಿ ತಪ್ಪಿಲ್ಲ. ಪ್ರಾಥಮಿಕವಾಗಲೀ, ಮಾಧ್ಯಮಿಕವಾಗಲೀ ಕಲಿಸುವವರಿಗೆ ಅರ್ಹತೆಯಷ್ಟೇ ಅನುಭವವೂ ಮುಖ್ಯ ಎನ್ನುವುದನ್ನೂ ಅಲ್ಲಗಳೆಯಲಾ
ಗದು. ಈ ಕುರಿತ ತಮ್ಮ ಹಲವು ಬೇಡಿಕೆಗಳ ಬಗ್ಗೆ ಪ್ರಾಥಮಿಕ ಶಿಕ್ಷಕರು ಸರ್ಕಾರದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಕಳೆದ ನವೆಂಬರ್‌ನಲ್ಲಿ ಅವರು ನಡೆಸಿದ ಬೃಹತ್‌ ಸಮಾವೇಶದಲ್ಲಿ, ಪ್ರಾಥಮಿಕ ಶಿಕ್ಷಣ ಖಾತೆಯನ್ನೂ ಹೊಂದಿದ್ದ ಮುಖ್ಯಮಂತ್ರಿ ಭಾಗವಹಿಸಿದ್ದರು. ಪದವೀಧರ ಶಿಕ್ಷಕರನ್ನು 6ರಿಂದ 8ನೇ ತರಗತಿಯ ಬೋಧನೆಗೆ ನೇಮಿಸುವಾಗ ಶೇಕಡ 75ರಷ್ಟು ಪಾಲನ್ನು ಈಗಿರುವ ಪ್ರಾಥಮಿಕ ಶಿಕ್ಷಕರಿಗೆ ಹೊಸ ಪರೀಕ್ಷೆಯಿಲ್ಲದೆ ನೀಡಬೇಕು ಎನ್ನುವುದು ಶಿಕ್ಷಕರ ಪ್ರಮುಖ ಬೇಡಿಕೆಯಾಗಿತ್ತು. ಮುಖ್ಯ
ಮಂತ್ರಿ ಈ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಶೈಕ್ಷಣಿಕ ವರ್ಷಆರಂಭವಾಗುವುದಕ್ಕೆ ಮುನ್ನವೇ ಸರ್ಕಾರವು ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು, ನೇಮಕಾತಿ ಯಲ್ಲಿ ತಾರತಮ್ಯವನ್ನು ಹೋಗಲಾಡಿಸಬೇಕಿತ್ತು. ಹೊಸ ನಿಯಮಗಳನ್ನು ಅಳವಡಿಸುವಾಗ ಅಧಿಕಾರಿಗಳು ಮುಂಜಾಗ್ರತೆ ವಹಿಸಿದ್ದರೆ ಇಂತಹ ಅಕಾಲ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಸರ್ಕಾರ ಈಗಲಾದರೂ ಈ ಕಡೆಗೆ ಗಮನಹರಿಸಿ, ಬಿಕ್ಕಟ್ಟನ್ನು ತಕ್ಷಣ ಬಗೆಹರಿಸಬೇಕು. ಶಿಕ್ಷಕರು ಮತ್ತು ಸರ್ಕಾರದ ನಡುವಣ ತಿಕ್ಕಾಟದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಉಂಟಾಗಬಾರದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು