ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜಾರ್ಖಂಡ್‌: ಸರ್ಕಾರ ರಚನೆ ವಿಳಂಬ, ರಾಜ್ಯಪಾಲರ ನಡವಳಿಕೆ ಪ್ರಶ್ನಾರ್ಹ

Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಮಹಾಮೈತ್ರಿಕೂಟದಿಂದ ಹೊರಗೆ ಬಂದು ಕಳೆದ ಭಾನುವಾರ ರಾಜೀನಾಮೆ ನೀಡಿದರು. ಬಳಿಕ, ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೇರಿದರು. ಬಿಹಾರದ ಮುಖ್ಯಮಂತ್ರಿಯಾಗಿ ಭಾನುವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು. ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ₹ 600 ಕೋಟಿ ಮೌಲ್ಯದ ಆಸ್ತಿ ಖರೀದಿಗೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆಯಾಗಿದೆ ಎಂಬ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬುಧವಾರ ವಿಚಾರಣೆಗೆ ಒಳಗಾದರು. ಅಂದು ಸಂಜೆ ಅವರನ್ನು ಇ.ಡಿ ಬಂಧಿಸಿತು. ಅದಕ್ಕೂ ಮುಂಚೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನಾಗಿ ಚಂಪೈ ಸೊರೇನ್‌ ಅವರನ್ನು ಆಯ್ಕೆ ಮಾಡಲಾಗಿತ್ತು.

ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ, ರಾಜ್ಯಪಾಲರು ಅವರನ್ನು ಸರ್ಕಾರ ರಚನೆಗೆ ತಕ್ಷಣವೇ ಆಹ್ವಾನಿಸಲಿಲ್ಲ. ಪ್ರತಿಜ್ಞಾ ವಿಧಿ ಸ್ವೀಕರಿಸಲು ಚಂಪೈ ಅವರು ಶುಕ್ರವಾರ ದವರೆಗೆ ಕಾಯಬೇಕಾಯಿತು. ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿಯತನಕ ಜಾರ್ಖಂಡ್‌ ರಾಜ್ಯಕ್ಕೆ ಮುಖ್ಯಮಂತ್ರಿ ಇಲ್ಲದಂತಹ ಸಾಂವಿಧಾನಿಕ ಬಿಕ್ಕಟ್ಟು ಕೂಡ ಸೃಷ್ಟಿಯಾಯಿತು. ಬಿಹಾರದಲ್ಲಿ ನಿತೀಶ್‌ ಅವರು ತಕ್ಷಣವೇ ಪ್ರಮಾಣವಚನ ಸ್ವೀಕರಿಸಲೇಬೇಕಾದ ಅಗತ್ಯ ಇರಲಿಲ್ಲ. ಏಕೆಂದರೆ ಅವರು ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು. ಆದರೆ, ಹೇಮಂತ್‌ ಸೊರೇನ್‌ ಅವರು ಬಂಧನಕ್ಕೆ ಒಳಗಾಗಿದ್ದರು. ಹಾಗಿದ್ದರೂ ರಾಜ್ಯಪಾಲರು ಸರ್ಕಾರ ರಚನೆಗೆ ಚಂಪೈ ಅವರಿಗೆ ಅವಕಾಶ ನೀಡಲು ವಿಳಂಬ ಮಾಡಿದ್ದು ಏಕೆ ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡು ಬಿಜೆಪಿಯೇತರ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಅಥವಾ ಕಿರುಕುಳ ಕೊಡುತ್ತಿದೆ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪವನ್ನು ಈ ನಡವಳಿಕೆಯು ಪುಷ್ಟೀಕರಿಸಿದೆ. ರಾಜ್ಯಪಾಲರ ನಡವಳಿಕೆಯ ಬಗ್ಗೆ ಸಂಸತ್ತಿನಲ್ಲಿಯೂ ಪ್ರಸ್ತಾಪ ಆಗಿದೆ; ವಿರೋಧ ಪ‍ಕ್ಷಗಳ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದ್ದಾರೆ. 

ಚಂಪೈ ಅವರು ಪ್ರಮಾಣವಚನ ಸ್ವೀಕರಿಸಿದ್ದರೂ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರನ್ನು ಹೈದರಾಬಾದ್‌ಗೆ ಕರೆತರಲಾಗಿದೆ. ಐದನೇ ತಾರೀಕಿನಂದು ಅವರು ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಅಲ್ಲಿಯವರೆಗೂ ಶಾಸಕರು ಹೈದರಾಬಾದ್‌ನಲ್ಲಿಯೇ ಇರಲಿದ್ದಾರೆ ಎಂದು ಮೈತ್ರಿಕೂಟದ ಮುಖಂಡರು ಹೇಳಿದ್ದಾರೆ. ‘ಶಾಸಕರನ್ನು ಬಿಜೆಪಿ ಖರೀದಿಸಿ ಸರ್ಕಾರ ಉರುಳುವಂತೆ ಮಾಡಬಹುದು’ ಎಂಬ ಭೀತಿಯು ಆಡಳಿತಾರೂಢ ಮೈತ್ರಿಕೂಟಕ್ಕೆ ಇದೆ. ಒಂದು ಪಕ್ಷದ ಶಾಸಕರಿಗೆ ಆಮಿಷ ಒಡ್ಡಿ ಅಥವಾ ಅವರನ್ನು ಬೆದರಿಸಿ ಸರ್ಕಾರವನ್ನು ಉರುಳಿಸುವ ಕೆಟ್ಟ ಪ್ರವೃತ್ತಿ ಒಂದೆರಡು ದಶಕಗಳಿಂದ ಇದೆ. ಆಡಳಿತಾರೂಢ ಪಕ್ಷದ ಶಾಸಕರನ್ನೇ ಬಳಸಿಕೊಂಡು ಬೇರೊಂದು ಪಕ್ಷವು ಸರ್ಕಾರವನ್ನು ಉರುಳಿಸಿ, ತನ್ನ ನೇತೃತ್ವದಲ್ಲೇ ಸರ್ಕಾರ ಸ್ಥಾಪಿಸುವುದು ನೈತಿಕ ದಿವಾಳಿತನದ ಪರಾಕಾಷ್ಠೆ. ಇಂತಹ ಪ್ರವೃತ್ತಿಯ ಆರಂಭವು ಕರ್ನಾಟಕದಲ್ಲಿಯೇ ಆಯಿತು ಎಂಬುದು ನಮ್ಮ ರಾಜ್ಯದ ರಾಜಕಾರಣದ ಮೇಲೆ ಇರುವ ಕರಿಚುಕ್ಕೆ. ಯಾವ ಪಕ್ಷದ ಚಿಹ್ನೆಯಡಿ ಆರಿಸಿ ಬಂದಿದ್ದಾರೆಯೋ ಆ ಪಕ್ಷಕ್ಕೆ ನಿಷ್ಠವಾಗಿ ಕೆಲವು ಶಾಸಕರು ಇರುವುದಿಲ್ಲ, ಬೇರೊಂದು ಪಕ್ಷಕ್ಕೆ ಹೋಗಲು ಸದಾ ಸಿದ್ಧರಿರುತ್ತಾರೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ.

ಜಾರ್ಖಂಡ್‌ನಲ್ಲಿ, ಬಿಹಾರದಲ್ಲಿ ಮತ್ತು ಇತರ ಕೆಲವು ರಾಜ್ಯಗಳಲ್ಲಿ ನಡೆದಿರುವುದು ಪ್ರಜಾಸತ್ತೆಯ ಅಪಹಾಸ್ಯವೇ ಹೌದು. ಸಾರ್ವತ್ರಿಕ ಚುನಾವಣೆ ಸನಿಹವಾಗಿರುವ ಈ ಹೊತ್ತಿನಲ್ಲಿ ವಿರೋಧ ಪಕ್ಷಗಳ ನೇತೃತ್ವದ ಸರ್ಕಾರಗಳನ್ನು ಉರುಳಿಸುವ ಪ್ರಯತ್ನವು ನೈತಿಕ ರಾಜಕಾರಣ ಅಲ್ಲ. ಹಾಗೆಯೇ, ಹೇಮಂತ್‌ ಸೊರೇನ್‌ ಅವರ ಬಂಧನದ ವಿಚಾರದಲ್ಲಿಯೂ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಹಲವು ಪ್ರಶ್ನೆಗಳನ್ನು ಎತ್ತಿವೆ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ಮಂಡಿಯೂರಿಸಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿವೆ.

ಅಕ್ರಮವನ್ನು ಯಾರೇ ಎಸಗಿದ್ದರೂ ಅವರು ಕಾನೂನು ಕ್ರಮವನ್ನು ಎದುರಿಸಲೇಬೇಕು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ, ರಾಜಕೀಯ ಕಾರಣಗಳಿಗಾಗಿ ಕೆಲವೇ ಕೆಲವರನ್ನು ಆಯ್ದು, ತನಿಖೆಗೆ ಒಳಪಡಿಸಲಾಗಿದೆ ಎಂಬ ಭಾವನೆ ಬರುವಂತೆ ತನಿಖಾ ಸಂಸ್ಥೆಗಳ ನಡವಳಿಕೆ ಇರಬಾರದು. ತನಿಖಾ ಸಂಸ್ಥೆಗಳ ನಡವಳಿಕೆಯು ಸ್ವತಂತ್ರವಾಗಿಯೂ ನಿಷ್ಪಕ್ಷಪಾತವಾಗಿಯೂ ಇರಬೇಕು ಎಂಬುದು ಒಂದು ಆದರ್ಶವಷ್ಟೇ ಅಲ್ಲ, ವ್ಯವಸ್ಥೆಗೆ ಅದು ಅನಿವಾರ್ಯವೂ ಹೌದು. ಜೊತೆಗೆ, ತನಿಖಾ ಸಂಸ್ಥೆಯು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಇದೆ ಎಂಬುದು ತನಿಖೆಗೆ ಒಳಗಾದವರಿಗೂ ಮನವರಿಕೆ ಆಗಬೇಕು. ಆಗ ಕೇಂದ್ರ ಸರ್ಕಾರದತ್ತ ಯಾರೂ ಬೊಟ್ಟು ತೋರುವುದು ಸಾಧ್ಯವಾಗುವುದಿಲ್ಲ. ಆದರೆ, ಈಗ ಆ ರೀತಿ ಇಲ್ಲ ಎಂಬುದು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT