ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಎಚ್‌ಡಿಕೆ ಆರೋಪಕ್ಕೆ ಎಡಿಜಿಪಿ ಎದುರೇಟು: ಬೆದರಿಕೆ ತಂತ್ರ ಸರಿಯಲ್ಲ

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಲೋಕಾಯುಕ್ತದ ವಿಶೇಷ ತನಿಖಾ ದಳದ ಎಡಿಜಿಪಿ ಎಂ.ಚಂದ್ರಶೇಖರ್ ಅವರ ನಡುವಿನ ಜಟಾಪಟಿ ಅನಪೇಕ್ಷಿತವಾಗಿತ್ತು. ಈ ಜಟಾಪಟಿಯು ಸಭ್ಯತೆಯ ಎಲ್ಲೆಯನ್ನು ಮೀರಿದೆ. ಆರೋಪಿ ಸ್ಥಾನದಲ್ಲಿ ನಿಂತಿರುವ ಕುಮಾರಸ್ವಾಮಿ ಅವರು ತನಿಖಾಧಿಕಾರಿಯ ಬಗ್ಗೆ ಬಹಿರಂಗವಾಗಿ ಆಡಿರುವ ಮಾತು ಅವರ ಸ್ಥಾನದ ಘನತೆಗೆ ತಕ್ಕುದಲ್ಲ. ಅದೇ ರೀತಿ ಚಂದ್ರಶೇಖರ್‌ ಅವರು ತಮ್ಮ ತಂಡದ ಸದಸ್ಯರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವ ಕೆಲವು ಮಾತುಗಳು ಕೆಟ್ಟ ಅರ್ಥವನ್ನು ಧ್ವನಿಸುವಂತಿವೆ. ಅಧಿಕಾರಿಗಳು ಪ್ರಬಲ ರಾಜಕಾರಣಿಗಳನ್ನು ಎದುರುಹಾಕಿಕೊಳ್ಳುವುದನ್ನು ಬಯಸುವುದಿಲ್ಲ. ಆದರೆ ಚಂದ್ರಶೇಖರ್‌ ಬಹಳ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿ ಅವರು ಮಾಡಿದ ಆರೋಪಗಳಿಗೆ ಪ್ರತಿಯಾಗಿ ತಮ್ಮ ಸಹೋದ್ಯೋಗಿಗಳಿಗೆ ಪತ್ರವೊಂದನ್ನು ಬರೆಯುವ ಮೂಲಕ ಚಂದ್ರಶೇಖರ್‌ ಅವರು, ತನಿಖಾಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿಯುವುದಿಲ್ಲ, ಬೆದರುವುದಿಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಎಂಬ ಕಂಪನಿಗೆ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆಯನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಚಂದ್ರಶೇಖರ್‌ ನೇತೃತ್ವದ ಎಸ್‌ಐಟಿ ನಡೆಸುತ್ತಿದೆ.

ಕುಮಾರಸ್ವಾಮಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಎಸ್‌ಐಟಿ ಮುಖ್ಯಸ್ಥರು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿರುವ ಮಾಹಿತಿ ಸೋರಿಕೆಯಾಗಿತ್ತು. ಮಾಹಿತಿ ಸೋರಿಕೆ ಕುರಿತು ರಾಜಭವನದ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿ ಎಡಿಜಿಪಿ ಪತ್ರ ಬರೆದಿದ್ದರು. ಇದು, ಕುಮಾರಸ್ವಾಮಿ ಮತ್ತು ಚಂದ್ರಶೇಖರ್‌ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.

ಬೆಂಗಳೂರಿನ ಗಂಗೇನಹಳ್ಳಿಯಲ್ಲಿ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಾಗ (ಡಿನೋಟಿಫೈ) ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆಯೂ ಲೋಕಾಯುಕ್ತದ ಪೊಲೀಸ್‌ ವಿಭಾಗವು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ಪಾತ್ರ ಈ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಇದೆ, ಈ ಡಿನೋಟಿಫಿಕೇಷನ್‌ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂಬ ಆರೋಪವಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸ್ವಾಧೀನದಲ್ಲಿ 30 ವರ್ಷಗಳಿಂದ ಇದ್ದ ಜಮೀನನ್ನು ಯಡಿಯೂರಪ್ಪ ಅವರು 2007ರಲ್ಲಿ ಕಿರು ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ಡಿನೋಟಿಫೈ ಮಾಡಲಾಯಿತು. ಡಿನೋಟಿಫೈ ಮಾಡಲಾದ ಜಮೀನನ್ನು ಕುಮಾರಸ್ವಾಮಿ ಅವರ ಅತ್ತೆ ಮತ್ತು ಬಾಮೈದನ ಹೆಸರಿಗೆ ವರ್ಗಾಯಿಸಲಾಯಿತು ಎಂಬ ಆರೋಪವಿದೆ. ಈ ವಿಚಾರವಾಗಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆಗೆ ಗುರಿಪಡಿಸಿದ್ದರು.

ರಾಜಭವನದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ  ಕೋರಿ ಚಂದ್ರಶೇಖರ್‌ ಬರೆದಿರುವ ಪತ್ರ ಬಹಿರಂಗವಾದ ನಂತರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ಎಡಿಜಿಪಿ ವಿರುದ್ಧ ಭ್ರಷ್ಟಾಚಾರ ಮತ್ತು ಸುಲಿಗೆಯ ಆರೋಪ ಹೊರಿಸಿದರು. ಕೇಂದ್ರ ಸಚಿವರು ಈ ರೀತಿ ಮಾಡುವ ಮೂಲಕ ಅಧಿಕಾರಿಗಳನ್ನು ಬೆದರಿಸಲು ಹಾಗೂ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ಬಂದವು. ಕುಮಾರಸ್ವಾಮಿ ಅವರ ಬಳಿ ಅಧಿಕಾರಿಯ ವಿರುದ್ಧ ಸಾಕ್ಷ್ಯಗಳು ಇವೆ ಎಂದಾದರೆ, ಅವರು ಅವುಗಳನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಮೊದಲೇ ಸಲ್ಲಿಸಬೇಕಿತ್ತು. ಈಗ ಆರೋಪ ಮಾಡುವ ಮೂಲಕ ಕುಮಾರಸ್ವಾಮಿ ಅವರು, ತನಿಖೆಗೆ ಸಹಕರಿಸುವ ಬದಲು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಬೇಕಾಗಿದೆ.

ಕುಮಾರಸ್ವಾಮಿ ಅವರು ಬಹಿರಂಗವಾಗಿ ಮಾಡಿದ ಆರೋಪಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿದ ಚಂದ್ರಶೇಖರ್‌, ಕಟುವಾದ ಪತ್ರವೊಂದನ್ನು ಬರೆದರು. ಕುಮಾರಸ್ವಾಮಿ ಅವರ ಉದ್ದೇಶವು ಎಸ್‌ಐಟಿ ಸದಸ್ಯರನ್ನು ಬೆದರಿಸುವುದಾಗಿದೆ, ಆರೋಪಿಯು ಯಾವುದೇ ಸ್ಥಾನದಲ್ಲಿ ಇರಲಿ ಆತ ತನಿಖೆಯನ್ನು ಎದುರಿಸಲೇಬೇಕು ಎಂದು ಒತ್ತಿಹೇಳಿದರು. ಎಸ್‌ಐಟಿ ಸಿಬ್ಬಂದಿ ನಿಷ್ಪಕ್ಷಪಾತವಾಗಿ ಇರಬೇಕು ಎಂಬ ಕಿವಿಮಾತು ಹೇಳಿದ ಎಡಿಜಿಪಿ, ಬಾಹ್ಯ ಒತ್ತಡಗಳಿಂದ ಅವರನ್ನು ತಾವು ರಕ್ಷಿಸುವುದಾಗಿ ಭರವಸೆ ನೀಡಿದರು. ಅದರ ಜೊತೆಯಲ್ಲೇ ಅವರು, ಜಾರ್ಜ್‌ ಬರ್ನಾರ್ಡ್‌ ಶಾ ಅವರ ಮಾತುಗಳನ್ನು ಉಲ್ಲೇಖಿಸಿ ಎಸ್‌ಐಟಿ ಸದಸ್ಯರಿಗೆ ಒಂದು ಸಲಹೆ ನೀಡಿದರು: ‘ಹಂದಿಗಳ ಜೊತೆ ಗುದ್ದಾಟಕ್ಕೆ ಹೋಗಲೇಬೇಡಿ. ಹಾಗೆ ಮಾಡಿದರೆ ಇಬ್ಬರಿಗೂ ಗಲೀಜಾಗುತ್ತದೆ. ಆದರೆ ಹಂದಿಯು ಅದರಿಂದ ಖುಷಿ‍ಪಡುತ್ತದೆ’ ಎಂಬುದು ಆ ಮಾತು. ಪತ್ರದಲ್ಲಿ ಚಂದ್ರಶೇಖರ್ ಅವರು ಶಾ ಅವರ ಈ ಮಾತನ್ನು ಉಲ್ಲೇಖಿಸಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಖಂಡಿತವಾಗಿಯೂ ಇದೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ, ಅವರು ಹೊರಿಸಿದ ಆರೋಪಗಳಿಗೆ ಪ್ರತಿಕ್ರಿಯೆ ನೀಡುವಾಗ ಈ ಮಾತುಗಳನ್ನು ಉಲ್ಲೇಖಿಸಿರುವುದು ಸುಸಂಸ್ಕೃತ ನಡೆಯಂತೆ ಕಾಣುವುದಿಲ್ಲ.

ತನಿಖಾಧಿಕಾರಿ ಯಾರಾಗಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಆರೋಪ
ಎದುರಿಸುತ್ತಿರುವ ವ್ಯಕ್ತಿಯು ಹೊಂದಿರುವುದಿಲ್ಲ. ಈ ಮಾತನ್ನು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂಬುದು ಮುಖ್ಯಮಂತ್ರಿಯಾಗಿಯೂ ಕರ್ವವ್ಯ ನಿರ್ವಹಿಸಿರುವ ಕುಮಾರಸ್ವಾಮಿ ಅವರಿಗೆ ತಿಳಿದಿರಬೇಕು. ಚಂದ್ರಶೇಖರ್ ಅವರನ್ನು, ಅವರ ಮೂಲ ಕೇಡರ್ ಆಗಿರುವ ಹಿಮಾಚಲ ಪ್ರದೇಶಕ್ಕೆ ಕಳುಹಿಸಲಾಗುತ್ತದೆ ಎಂಬ ಊಹಾಪೋಹಗಳು ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಉದ್ದೇಶ ಹೊಂದಿವೆ. ಅಲ್ಲದೆ, ಆರೋಪಿಯ ಪರವಾಗಿ ಕೇಂದ್ರ ಸರ್ಕಾರದ ತಾಕತ್ತು ಬಳಕೆಯಾಗುತ್ತದೆ ಎಂಬ ಸಂದೇಶವನ್ನೂ ಅಂತಹ ಊಹಾಪೋಹಗಳು ರವಾನಿಸುತ್ತವೆ. ಪ್ರಬಲ ರಾಜಕಾರಣಿಗಳ ಎದುರು ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಇರುವ, ನ್ಯಾಯಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಧೈರ್ಯವಿರುವ ಅಧಿಕಾರಿಗಳು ದೇಶಕ್ಕೆ ಇನ್ನಷ್ಟು ಸಂಖ್ಯೆಯಲ್ಲಿ ಬೇಕು. ಒಟ್ಟಾರೆಯಾಗಿ ಈ ಘಟನೆಯು ತನಿಖಾ ಪ್ರಕ್ರಿಯೆಯನ್ನು ರಾಜಕಾರಣಿಗಳು
ಗೌರವಿಸಬೇಕಿರುವುದರ, ಅದರ ಮೇಲೆ ಪ್ರಭಾವ ಬೀರುವುದಕ್ಕೆ ಪ್ರಯತ್ನಿಸುವುದರಿಂದ ದೂರ
ಉಳಿಯಬೇಕಿರುವುದರ ಮಹತ್ವವನ್ನು ಬಿಡಿಸಿ ಹೇಳಿದೆ. ತನಿಖೆಯ ಹೊಣೆ ಹೊತ್ತಿರುವವರು ಪ್ರಬಲ ಸ್ಥಾನಗಳಲ್ಲಿ ಇರುವವರನ್ನು ಉತ್ತರದಾಯಿ ಆಗಿಸುವಾಗ ಅತ್ಯುನ್ನತ ಮಟ್ಟದ ಪ್ರಾಮಾಣಿಕತೆಯನ್ನು, ನಿಷ್ಪಕ್ಷಪಾತ ಧೋರಣೆಯನ್ನು ಕಾಯ್ದುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT