ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ತರಾತುರಿಯಲ್ಲಿ ನಡೆಸುವುದರಿಂದ ಸಮಸ್ಯೆಗಳೇ ಹೆಚ್ಚು. ಸರ್ಕಾರ ಗೊಂದಲಗಳನ್ನು ಬಗೆಹರಿಸಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಿ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ರಾಜ್ಯದಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಆರಂಭದಲ್ಲೇ ಹಲವು ತೊಡಕುಗಳನ್ನು ಎದುರಿಸಿದೆ. ಆಡಳಿತಾತ್ಮಕ ತೊಡಕುಗಳು ಹಾಗೂ ತರಬೇತಿಯ ಕೊರತೆ ಸೇರಿದಂತೆ, ರಾಜ್ಯದ ಬಹುತೇಕ ಕಡೆಗಳಲ್ಲಿ ಸಮೀಕ್ಷೆಯಲ್ಲಿ ತೊಡಗಿರುವ ಸಮೀಕ್ಷಕರು ಬೇರೆ ಬೇರೆ ರೂಪದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಸಮೀಕ್ಷೆ ನಡೆಸಲು ಅಗತ್ಯವಾದ ಆ್ಯಪ್ ಡೌನ್ಲೋಡ್ ಆಗದಿರುವುದು, ಸರ್ವರ್ ಸ್ಥಗಿತಗೊಳ್ಳುವಿಕೆ, ‘ಒಟಿಪಿ’ ಬಾರದಿರುವುದು ಸೇರಿದಂತೆ ಹಲವು ತೊಡರುಗಳು ಸಮೀಕ್ಷೆ ಸಮಯದಲ್ಲಿ ಕಾಣಿಸಿಕೊಂಡಿವೆ. ಕೆಲವೆಡೆ ಸಮೀಕ್ಷೆ ಇನ್ನೂ ಆರಂಭಗೊಂಡಿಲ್ಲ. ಇವೆಲ್ಲ ಸಮಸ್ಯೆಗಳು ಮಹತ್ವದ ಸಮೀಕ್ಷೆ ನಡೆಸಲು ಅಗತ್ಯವಾದ ಕಾರ್ಯಯೋಜನೆಯ ದೌರ್ಬಲ್ಯ ಹಾಗೂ ಪೂರ್ವಸಿದ್ಧತೆಯಲ್ಲಿನ ಕೊರತೆಯತ್ತ ಬೆರಳುಮಾಡುವಂತಿವೆ. ಸುಮಾರು ಎರಡು ಲಕ್ಷ ಸಮೀಕ್ಷಕರನ್ನು ಬಳಸಿಕೊಂಡು, ಎರಡು ಕೋಟಿ ಕುಟುಂಬಗಳ ಸಮೀಕ್ಷೆ ನಡೆಸುವ ಬೃಹತ್ ಯೋಜನೆಯನ್ನು ಸರ್ಕಾರ ತರಾತುರಿಯಲ್ಲಿ ಆರಂಭಿಸಿದಂತಿದೆ.

ಇಂಥದೊಂದು ಸಮೀಕ್ಷೆ ಆರಂಭಿಸುವ ಮುನ್ನ ಆ್ಯಪ್ ಹಾಗೂ ಪೂರಕ ವ್ಯವಸ್ಥೆಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪರಿಶೀಲನೆಗೆ ಒಳಪಡಿಸಬೇಕಾಗಿತ್ತು. ಸಮೀಕ್ಷೆಯ ಆರಂಭದಲ್ಲಿ ಸಮೀಕ್ಷಕರು ಎದುರಿಸಿರುವ ಗೊಂದಲಗಳನ್ನು ಗಮನಿಸಿದರೆ, ಅವರಿಗೆ ತರಬೇತಿಯ ಕೊರತೆ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ಸಮೀಕ್ಷೆಯನ್ನು ಸುರಳೀತವಾಗಿ ಆರಂಭಗೊಳ್ಳುವಂತೆ ಸರ್ಕಾರ ಎಲ್ಲ ರೀತಿಯ ಎಚ್ಚರಿಕೆ ವಹಿಸಬೇಕಾಗಿತ್ತು.

ತಾಂತ್ರಿಕ ಅಡಚಣೆಯ ಜೊತೆಗೆ, ಸಮೀಕ್ಷೆಯ ಬಗ್ಗೆ ಸಾರ್ವಜನಿಕರಿಗೆ ಇರುವ ತಿಳಿವಳಿಕೆಯ ಕೊರತೆಯೂ ಗಂಭೀರ ಸಮಸ್ಯೆಯಾಗಿದೆ. ಪುನರಾರ್ವತಿತ ಸ್ಪಷ್ಟೀಕರಣಗಳ ನಡುವೆಯೂ, ಈ ಸಮೀಕ್ಷೆಯನ್ನು ‘ಜಾತಿಗಣತಿ’ ಎಂದೇ ಹಲವರು ನಂಬಿದ್ದಾರೆ. ಸಮೀಕ್ಷೆಯು ಒಳಗೊಂಡಿರುವ ಬಹುಮುಖಿ ಉದ್ದೇಶ
ಗಳಲ್ಲಿ ಜಾತಿ ಒಂದು ಉಪ ಉತ್ಪನ್ನವಷ್ಟೇ ಆಗಿದ್ದು, ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಗುರ್ತಿಸಿ, ಅರ್ಹರಿಗೆ ಸವಲತ್ತುಗಳನ್ನು ತಲುಪಿಸುವುದು ಸಮೀಕ್ಷೆಯ ಮುಖ್ಯ ಉದ್ದೇಶ
ವಾಗಿದೆ. ಆದರೆ, ಈ ಉದ್ದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡುವ ವ್ಯಾಪಕ ಪ್ರಯತ್ನಗಳು ನಡೆದಿಲ್ಲ. ‘ಧರ್ಮ’ದ ಜಾಗದಲ್ಲಿ ಏನನ್ನು ಬರೆಸಬೇಕು ಎನ್ನುವುದರ ಬಗ್ಗೆಯೇ ಲಿಂಗಾಯತ, ಒಕ್ಕಲಿಗ, ಕೊಡವರು ಸೇರಿದಂತೆ ಕೆಲವು ಸಮುದಾಯಗಳಲ್ಲಿ ಗೊಂದಲಗಳಿವೆ. ಇಂಥ ಗೊಂದಲಗಳು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆಯೂ ಇವೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯಕ್ ಅವರು, ಧರ್ಮವನ್ನು ಒಂದು ಅಂಶವನ್ನಾಗಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ ನಂತರವೂ ಗೊಂದಲಗಳು ಮುಂದುವರಿದಿವೆ.

ಸಮೀಕ್ಷೆಯ ಉದ್ದೇಶವನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಆಗಿರುವ ವೈಫಲ್ಯವನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಶಾಸಕರು ಹಾಗೂ ಸ್ಥಳೀಯ ಮುಖಂಡರಲ್ಲಿ ಸಮೀಕ್ಷೆಯ ಉದ್ದೇಶಗಳ ಬಗ್ಗೆ ಅರಿವು ಮೂಡಿಸುವುದು ಆಗಬೇಕಾಗಿದ್ದ ಮೊದಲ ಕೆಲಸ. ಅದಕ್ಕೆ ಬದಲಾಗಿ, ರಾಜಕೀಯ ಹಿತಾಸಕ್ತಿಗಳು ಹಾಗೂ ಜಾತಿಗಳ ನಡುವಿನ ಪೈಪೋಟಿಯ ಸಂಕಥನಗಳು ತಪ್ಪುಗ್ರಹಿಕೆಗಳಿಗೆ ಅಗತ್ಯವಾದ ಭೂಮಿಕೆಯನ್ನು ಸೃಷ್ಟಿಸಿವೆ. ಈ ತಪ್ಪುಗ್ರಹಿಕೆಗಳನ್ನು ನಿವಾರಿಸಲು ಪತ್ರಿಕೆಗಳೂ ಒಳಗೊಂಡಂತೆ ಎಲ್ಲ ಮಾಧ್ಯಮಗಳನ್ನು ಆಂದೋಲನದ ರೂಪದಲ್ಲಿ ಸರ್ಕಾರ ಬಳಸಿಕೊಳ್ಳಬೇಕಾಗಿದೆ ಹಾಗೂ ಸಮುದಾಯಗಳನ್ನು ನೇರವಾಗಿ ಸಂಪರ್ಕಿಸಬೇಕಾಗಿದೆ. ಜಯಪ್ರಕಾಶ್ ಹೆಗ್ಡೆ ವರದಿಯನ್ನು ವಿರೋಧಿಸಿದ್ದ ಪ್ರಬಲ ಜಾತಿಗಳು ಈಗಿನ ಸಮೀಕ್ಷೆಯನ್ನೂ ಹಳಿತಪ್ಪಿಸಲು ಪ್ರಯತ್ನಿಸುತ್ತಿವೆ. ಅವರ ಪ್ರತಿಭಟನೆಗಳು ಸಾಂದರ್ಭಿಕವಾಗಿರದೆ, ಸಾಮಾಜಿಕ ಹಾಗೂ ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನಗಳಾಗಿವೆ. ಈ ಒತ್ತಡಗಳಿಗೆ ಮಣಿದು, ಅಂಚಿನ ಸಮುದಾಯಗಳ ಹಿತಾಸಕ್ತಿಯನ್ನು ಸರ್ಕಾರ ಬಲಿಕೊಡಬಾರದು.

ಸಮೀಕ್ಷೆಗಾಗಿ ಈಗಾಗಲೇ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿರುವ ಸರ್ಕಾರ, ಸಮೀಕ್ಷೆಯ ಕಾಲಮಿತಿಯನ್ನು ವಿಸ್ತರಿಸಬೇಕು, ತಿದ್ದುಪಡಿಗಳಿಗೆ ಅವಕಾಶ ಕಲ್ಪಿಸಬೇಕು ಹಾಗೂ ಇಡೀ ಪ್ರಕ್ರಿಯೆ ವೈಜ್ಞಾನಿಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಈ ಸಮೀಕ್ಷೆ ಸಾಮಾಜಿಕ ನ್ಯಾಯದ ಉದ್ದೇಶವನ್ನು ಒಳಗೊಂಡಿದೆಯೇ ಹೊರತು ಪ್ರತಿಷ್ಠೆಯನ್ನಲ್ಲ. ತರಾತುರಿಯಲ್ಲಿ ಸಮೀಕ್ಷೆ ನಡೆಸುವುದರ ಬದಲಾಗಿ, ತಪ್ಪುಗಳನ್ನು ಸರಿಪಡಿಸಿಕೊಂಡು ಸ್ಪಷ್ಟತೆ ಮತ್ತು ದಿಟ್ಟತನದಿಂದ ಸರ್ಕಾರ ಮುಂದುವರಿಯಬೇಕಾಗಿದೆ. ಆಗಷ್ಟೇ ಸಮೀಕ್ಷೆಯ ನೈಜ ಉದ್ದೇಶ ಈಡೇರುವುದು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.