ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಸಮೀಪವಿರುವ ಬೈಸರನ್ ಎಂಬ ಪ್ರವಾಸಿ ಸ್ಥಳದಲ್ಲಿ ಭಯೋತ್ಪಾದಕರು ನಡೆಸಿದ ಹೇಯ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಕ್ರೂರವಾದ ದಾಳಿ ಇದಾಗಿದೆ. ಕೋಮುವಾದಿ ಮನಃಸ್ಥಿತಿಯಿಂದ ನಾಗರಿಕರ ಮೇಲೆ ನಡೆಸಿದ ಈ ದಾಳಿ ಖಂಡನೀಯ. ಸಂತ್ರಸ್ತರಲ್ಲಿ ಕರ್ನಾಟಕ ಮತ್ತು ಇತರ ಹಲವು ರಾಜ್ಯಗಳವರು ಇದ್ದಾರೆ. ವಿದೇಶದ ಪ್ರಜೆಗಳಿಬ್ಬರು ಕೂಡ ಮೃತಪಟ್ಟಿದ್ದಾರೆ. ಕಾಶ್ಮೀರದ ಪ್ರವಾಸೋದ್ಯಮವು ಈಚಿನ ಎರಡು ವರ್ಷಗಳಲ್ಲಿ ಚೇತರಿಕೆ ಕಂಡಿತ್ತು. ಅದನ್ನು ಹಾಳುಗೆಡಹುವುದೇ ಈ ದಾಳಿಯ ಮುಖ್ಯ ಉದ್ದೇಶ ಎಂಬುದರಲ್ಲಿ ಸಂದೇಹವೇನೂ ಇಲ್ಲ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸುಮಾರು ಐದು ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಕಳೆದ ವರ್ಷ ಒಂದು ಕೋಟಿ ಪ್ರವಾಸಿಗರು ಬಂದಿದ್ದರು. ಪಾಕಿಸ್ತಾನವನ್ನು ನೆಲೆಯಾಗಿರಿಸಿಕೊಂಡಿರುವ ಲಷ್ಕರ್–ಎ–ತಯ್ಯಬಾ ಉಗ್ರಗಾಮಿ ಸಂಘಟನೆಗೆ ನಿಷ್ಠೆ ಹೊಂದಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್ಎಫ್) ಎಂಬ ಗುಂಪು ಈ ದುಷ್ಕೃತ್ಯದ ಹೊಣೆ ಹೊತ್ತಿದೆ. ಹಾಗಾಗಿ, ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ದಾಳಿ ನಡೆಸಲಾಗಿದೆ. ಭಾರತಕ್ಕೆ ಮುಜುಗರ ಆಗಲಿ ಎಂಬುದು ದಾಳಿಯ ಇನ್ನೊಂದು ಉದ್ದೇಶವಾಗಿರಬಹುದು. ಕಾಶ್ಮೀರದಲ್ಲಿ ಭಯೋತ್ಪಾದನೆ ಇನ್ನೂ ಇದೆ ಎಂಬ ಸಂದೇಶ ಸಾರುವ ಗುರಿಯೂ ಉಗ್ರರಿಗೆ ಇದ್ದಿರಬಹುದು. ಬಲೂಚ್ ಪ್ರತ್ಯೇಕತಾವಾದಿಗಳು ಜಫ್ಫರ್ ಎಕ್ಸ್ಪ್ರೆಸ್ ಅನ್ನು ಮಾರ್ಚ್ನಲ್ಲಿ ಅಪಹರಿಸಿದ ಕೃತ್ಯದಲ್ಲಿ ಭಾರತದ ಕೈವಾಡವೂ ಇದೆ ಎಂಬ ಭಾವನೆ ಪಾಕಿಸ್ತಾನದ ಸೇನೆಯ ಪ್ರಮುಖರು ಮತ್ತು ಇತರರಲ್ಲಿ ಇದೆ. ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದು ಸಾಬೀತಾದರೆ ತಕ್ಕ ಪ್ರತಿಕ್ರಿಯೆಯನ್ನು ಭಾರತ ನೀಡಬೇಕಾಗುತ್ತದೆ.

ದಾಳಿಯಿಂದಾಗಿ ಇಡೀ ದೇಶ ಆಘಾತಗೊಂಡಿದೆ, ಕೃತ್ಯವನ್ನು ಇಡೀ ದೇಶ ಖಂಡಿಸಿದೆ. ಇಂತಹ ಕೃತ್ಯ ಮರುಕಳಿಸುವುದಿಲ್ಲ ಎಂಬುದನ್ನು ಸರ್ಕಾರವು ಖಾತರಿಪಡಿಸಬೇಕು. ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಸರ್ಕಾರವು ಈ ಹಿಂದೆ ಹೇಳಿಕೊಂಡಿತ್ತು. ಆದರೆ ಇದು ನಿಜವಲ್ಲ. ಅಲ್ಲೊಂದು–ಇಲ್ಲೊಂದು ಭಯೋತ್ಪಾದನಾ ಕೃತ್ಯಗಳು ನಡೆದಿವೆ ಮತ್ತು ಎನ್ಕೌಂಟರ್ಗಳು ಆಗಾಗ ನಡೆಯುತ್ತಲೇ ಇವೆ. ಪ್ರತಿಯೊಂದು ಇಂಚು ನೆಲ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಭದ್ರತಾ ಪಡೆಗಳು ರಕ್ಷಿಸಲು ಸಾಧ್ಯವಿಲ್ಲ ಎಂದು ಆಡಳಿತದಲ್ಲಿದ್ದವರು ಈ ಹಿಂದೆ ಹೇಳಿದ್ದಿದೆ. ಹಾಗಿದ್ದರೂ ಪಹಲ್ಗಾಮ್ ಪ್ರಮುಖ ಪ್ರವಾಸಿ ತಾಣವಾಗಿದ್ದು ಇಲ್ಲಿಗೆ ವಿಶೇಷ ಗಮನ ಹರಿಸಬೇಕಿತ್ತು. ಗುಪ್ತಚರ ವ್ಯವಸ್ಥೆಯ ವೈಫಲ್ಯವೂ ಇಲ್ಲಿ ಎದ್ದು ಕಾಣುವಂತಿದೆ. ಇಂತಹ ಹೀನ ನರಮೇಧ ನಡೆಸಿ ತಮ್ಮ ಆರ್ಥಿಕತೆಯನ್ನು ಹಾಳು ಮಾಡಿದವರ ಮೇಲೆ ಸ್ಥಳೀಯರಿಗೆ ಸಹಾನುಭೂತಿ ಇರಲು ಸಾಧ್ಯವಿಲ್ಲ. ಜಮ್ಮು–ಕಾಶ್ಮೀರದಲ್ಲಿ ಬುಧವಾರ ಬಂದ್ ನಡೆಸಲಾಗಿದೆ. ಸರ್ಕಾರವು ಜನರೊಂದಿಗಿನ ಸಂಬಂಧವನ್ನು ಹೆಚ್ಚು ನಿಕಟಗೊಳಿಸಬೇಕು. ಸಾರ್ವಜನಿಕರ ವಿಶ್ವಾಸವನ್ನು ಗಳಿಸಲು ಹೆಚ್ಚು ಪ್ರಯತ್ನಗಳನ್ನು ಮಾಡಬೇಕು. ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನ ನೀಡುವ ಭರವಸೆ ಈಡೇರಿಸುವುದಕ್ಕಾಗಿ ಸರ್ಕಾರ ಈವರೆಗೆ ಏನನ್ನೂ ಮಾಡಿಲ್ಲ. ಇಲ್ಲಿ ಕಳೆದ ವರ್ಷ ವಿಧಾನಸಭಾ ಚುನಾವಣೆ ನಡೆದಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದ್ದರು. ಮತದಾನವು ಶಾಂತಿಯುತವಾಗಿ ನಡೆದಿತ್ತು. ಜನರು ಸರ್ಕಾರವೊಂದನ್ನು ಆಯ್ಕೆ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಅಲ್ಲಿನ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಿ ಲೆಫ್ಟಿನೆಂಟ್ ಗವರ್ನರ್ಗೆ ಹೆಚ್ಚಿನ ಅಧಿಕಾರ ನೀಡಿದೆ. ಭದ್ರತಾ ಪಡೆಗಳನ್ನು ಹೆಚ್ಚಾಗಿ ನಿಯೋಜಿಸುವುದರಿಂದ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ. ಜನರ ಜೊತೆಗೆ ಹೆಚ್ಚಿನ ನಂಟು ಬೆಳೆಸಿಕೊಳ್ಳುವ ಮೂಲಕ ಜನರ ವಿಶ್ವಾಸವನ್ನು ಹೆಚ್ಚಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.