ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನಾಗರಿಕರ ವೈಯಕ್ತಿಕ ದತ್ತಾಂಶ ರಕ್ಷಿಸದ ದತ್ತಾಂಶ ಸಂರಕ್ಷಣಾ ಕಾಯ್ದೆ

Published 13 ಆಗಸ್ಟ್ 2023, 23:31 IST
Last Updated 13 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಸಂಸತ್ತು ಅಂಗೀಕರಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಕೂಡ ಮಾಡಿರುವ ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಕಾಯ್ದೆಯು ಹಲವು ಪರಿಷ್ಕರಣೆಗಳಿಗೆ ಒಳಗಾಗಿದ್ದರೂ ಮಹತ್ವದ ಕೆಲವು ವಿಚಾರಗಳಲ್ಲಿ ಲೋಪಗಳು ಉಳಿದಿವೆ. ಜನರ ವೈಯಕ್ತಿಕ ದತ್ತಾಂಶಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದು ಕಾಯ್ದೆಯ ಗುರಿಯೇ ಹೊರತು ಅವುಗಳನ್ನು ಹೇಗೆ ರಕ್ಷಿಸಬಹುದು ಎಂಬುದಲ್ಲ. ವೈಯಕ್ತಿಕ ದತ್ತಾಂಶಗಳನ್ನು ರಕ್ಷಿಸುವುದಕ್ಕೆ ಏನೇನು ಮಾಡಬಹುದು ಎಂಬುದಕ್ಕಿಂತ ದತ್ತಾಂಶ ಬಳಕೆಗೆ ವಿನಾಯಿತಿಗಳನ್ನು ಹೇಗೆ ನೀಡಬಹುದು ಎಂಬುದರತ್ತ ಹೆಚ್ಚು ಗಮನಹರಿಸಲಾಗಿದೆ. ಹೆಸರೇ ಹೇಳುವಂತೆ ದತ್ತಾಂಶ ಸಂರಕ್ಷಣೆಯೇ ಕಾಯ್ದೆಯ ಮುಖ್ಯ ಗುರಿ ಆಗಬೇಕಿತ್ತು. ಒಬ್ಬ ವ್ಯಕ್ತಿಗೆ ಸಂಬಂಧಿಸಿದ ದತ್ತಾಂಶವನ್ನು ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯು ಕಾನೂನುಬದ್ಧ ಉದ್ದೇಶಕ್ಕೆ ಬಳಸುವಾಗ ವ್ಯಕ್ತಿಯ ಸಮ್ಮತಿ ಪಡೆದಿರಬೇಕು ಎಂಬುದನ್ನು ಕಾಯ್ದೆಯು ಖಾತರಿಪಡಿಸಬೇಕಿತ್ತು. ಸರ್ಕಾರವು ತನಗೆ ಮತ್ತು ತನ್ನ ಅಧೀನದಲ್ಲಿರುವ ಸಂಸ್ಥೆಗಳಿಗೆ ಜನರ ದತ್ತಾಂಶ ಬಳಸುವುದಕ್ಕೆ ಹಲವು ವಿನಾಯಿತಿಗಳನ್ನು ಕೊಟ್ಟುಕೊಳ್ಳುವ ಮೂಲಕ ಕಾಯ್ದೆಯನ್ನು ತೀರಾ ದುರ್ಬಲಗೊಳಿಸಿದೆ. ನ್ಯಾಯಾಂಗದ ನಿಬಂಧನೆಗಳು ಅಥವಾ ಸಂಸದೀಯ ನಿಯಂತ್ರಣ ಇಲ್ಲದೆಯೇ ಸರ್ಕಾರವು ದತ್ತಾಂಶವನ್ನು ಸಂಗ್ರಹಿಸಿ ತನಗೆ ಬೇಕಾದಂತೆ ಬಳಸಿಕೊಳ್ಳುವುದಕ್ಕೆ ಕಾಯ್ದೆಯು ಅವಕಾಶ ಒದಗಿಸಿದೆ. ಹೀಗೆ ಸಂಗ್ರಹಿಸಲಾದ ದತ್ತಾಂಶವನ್ನು ವ್ಯಕ್ತಿಗಳ ಮೇಲಿನ ಕಣ್ಗಾವಲು ಮತ್ತು ನಿಗಾಕ್ಕೆ ದುರ್ಬಳಕೆ ಮಾಡುವ ಅವಕಾಶವನ್ನು ಕಾಯ್ದೆಯು ಕೊಟ್ಟಿದೆ. 

ಸರ್ಕಾರ ನೀಡುವ ಸೌಲಭ್ಯಗಳು, ಸಹಾಯಧನಗಳು, ಪರವಾನಗಿಗಳು ಮುಂತಾದವುಗಳಿಗೆ ವ್ಯಕ್ತಿಯ ಸಮ್ಮತಿ ಇಲ್ಲದೆಯೇ ದತ್ತಾಂಶವನ್ನು ಬಳಸಬಹುದಾಗಿದೆ ಎಂದು ಕಾಯ್ದೆಯು ಹೇಳುತ್ತಿದೆ. ಒಂದು ಉದ್ದೇಶಕ್ಕಾಗಿ ಸಂಗ್ರಹಿಸಿದ ದತ್ತಾಂಶವನ್ನು ಆ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂಬುದು ದತ್ತಾಂಶ ಸಂರಕ್ಷಣೆಯ ಮೂಲ ತತ್ವವಾಗಿದೆ. ಆದರೆ, ಇಲ್ಲಿ ಆ ತತ್ವದ ವಿಚಾರದಲ್ಲಿಯೇ ರಾಜಿ ಮಾಡಿಕೊಳ್ಳಲಾಗಿದೆ. ಸರ್ಕಾರವು ಒಬ್ಬ ವ್ಯಕ್ತಿಯ ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಅನಿಸಿದರೆ ಅದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದು ಕೂಡ ಕಷ್ಟವಾಗಲಿದೆ. ಏಕೆಂದರೆ, ‘ಸದುದ್ದೇಶದ ಬಳಕೆ’ ಎಂಬುದರ ಅಡಿಯಲ್ಲಿ ಈ ದುರ್ಬಳಕೆಯು ಸೇರಿಕೊಳ್ಳಬಹುದು. ಕೆಲವು ವ್ಯಕ್ತಿಗಳು ಅಥವಾ ಸಂಸ್ಥೆಗಳ ದತ್ತಾಂಶ ಬಳಕೆಗೆ ಸಮ್ಮತಿ ಪಡೆದುಕೊಳ್ಳುವ ಅಗತ್ಯ ಇಲ್ಲ ಎಂದು ಅಧಿಸೂಚನೆ ಹೊರಡಿಸುವ ಅವಕಾಶವನ್ನು ಕಾಯ್ದೆಯು ಸರ್ಕಾರಕ್ಕೆ ನೀಡಿದೆ. ಭಾರಿ ಪ್ರಮಾಣದ ದತ್ತಾಂಶವನ್ನು ಸರ್ಕಾರವು ಬಳಸಿಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗಬಹುದು ಮತ್ತು ಅಂತಹ ಸಂದರ್ಭದಲ್ಲಿ ಹೊರಗಿನ ಸಂಸ್ಥೆಯ ನೆರವು ಸರ್ಕಾರಕ್ಕೆ ಬೇಕಾಗಬಹುದು. ಆಗ ಬೇರೆ ಸಂಸ್ಥೆಗಳ ನೆರವನ್ನು ಸರ್ಕಾರ  ಪಡೆಯಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಅವಕಾಶವನ್ನು ಸರ್ಕಾರಕ್ಕೆ ನೀಡಲಾಗಿದೆ. ಇದು ವೈಯಕ್ತಿಕ ದತ್ತಾಂಶದ ಗೋಪ್ಯತೆ ಮತ್ತು ಖಾಸಗಿತನದ ಹಕ್ಕಿನ ಉಲ್ಲಂಘನೆ ಆಗುತ್ತದೆ. 

ಜನರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಸ್ವತಂತ್ರ ನಿಯಂತ್ರಣ ವ್ಯವಸ್ಥೆಗೆ ಕಾಯ್ದೆಯು ಅವಕಾಶ ಕಲ್ಪಿಸಿಲ್ಲ. ದತ್ತಾಂಶ ಸಂರಕ್ಷಣಾ ಮಂಡಳಿ ಸ್ಥಾಪನೆಯ ಪ್ರಸ್ತಾವ ಕಾಯ್ದೆಯಲ್ಲಿ ಇದೆ. ಆದರೆ, ಅದರ ಸದಸ್ಯರನ್ನು ನೇಮಿಸುವ ಮತ್ತು ವಜಾ ಮಾಡುವ ಅಧಿಕಾರವನ್ನು ಕಾಯ್ದೆಯು ಸರ್ಕಾರದ ಕೈಯಲ್ಲಿಯೇ ಇರಿಸಿದೆ. ಹಾಗೆಯೇ ಸದಸ್ಯರ ಕರ್ತವ್ಯದ ನಿಯಮ ಮತ್ತು ನಿಬಂಧನೆಗಳನ್ನು ಸರ್ಕಾರವೇ ನಿರ್ಧರಿಸಲಿದೆ. ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಸರ್ಕಾರವು ಹಲವು ನಿರ್ಧಾರಗಳ ಮೂಲಕ ಈಗಾಗಲೇ ದುರ್ಬಲಗೊಳಿಸಿದೆ. ಈಗಿನ ಕಾಯ್ದೆಯು ಈ ಆರ್‌ಟಿಐಗೆ ಮಾರಣಾಂತಿಕ ಹೊಡೆತ ಕೊಟ್ಟಿದೆ. ಸಾರ್ವಜನಿಕ ಹುದ್ದೆಯಲ್ಲಿ ಇರುವವರ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಬಹಿರಂಗಪಡಿಸಬೇಕಾದ ಅಗತ್ಯ ಇದ್ದರೂ ಅದನ್ನು ಬಹಿರಂಗಪಡಿಸುವುದನ್ನು ನಿರಾಕರಿಸಲು ಅವಕಾಶ ಕಲ್ಪಿಸಿ ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸಾರ್ವಜನಿಕ ಜೀವನದಲ್ಲಿ ಅಥವಾ ಸರ್ಕಾರದ ಹುದ್ದೆಯಲ್ಲಿ ಇರುವವರಿಗೆ ಕೂಡ ಖಾಸಗಿತನವು ಮೂಲಭೂತ ಹಕ್ಕು ಎಂದು ಸರ್ಕಾರವು ಸಮಜಾಯಿಷಿ ನೀಡಿದೆ. ಸರ್ಕಾರದ ಹುದ್ದೆಯಲ್ಲಿ ಇರುವವರ ಖಾಸಗಿತನದ ಹಕ್ಕಿನ ಬಗ್ಗೆ ಸರ್ಕಾರ ಹೊಂದಿರುವ ಗೌರವವು ಜನರ ಖಾಸಗಿತನದ ಹಕ್ಕಿಗೂ ವಿಸ್ತರಣೆ ಆಗುವುದಿಲ್ಲ ಎಂಬುದು ಮಾತ್ರ ವಿರೋಧಾಭಾಸಕರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT