ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕಡತ ವಿಲೇವಾರಿಗೆ ಕಾಲಮಿತಿ ಇರಲಿ; ವಿಳಂಬ ಧೋರಣೆ ಅಕ್ಷಮ್ಯ

Published 5 ಫೆಬ್ರುವರಿ 2024, 19:12 IST
Last Updated 5 ಫೆಬ್ರುವರಿ 2024, 19:12 IST
ಅಕ್ಷರ ಗಾತ್ರ

ಆಡಳಿತ ವ್ಯವಸ್ಥೆಯ ಯಾವುದೇ ಹಂತದಲ್ಲಿ ವಿಳಂಬಕ್ಕೆ ಅವಕಾಶವಿಲ್ಲದಂತೆ ಕಡತ ವಿಲೇವಾರಿ ಸಾಧ್ಯವಾದರೆ ಭ್ರಷ್ಟಾಚಾರದ ನಿಯಂತ್ರಣ ಮತ್ತು ಜನಸ್ನೇಹಿ ಆಡಳಿತಕ್ಕೆ ಅನುಕೂಲವಾಗುತ್ತದೆ. ಕಡತ ವಿಲೇವಾರಿ ತ್ವರಿತಗತಿಯಲ್ಲಿ ಆಗುತ್ತಿದೆ ಎಂದಾದರೆ, ಆಡಳಿತ ಚುರುಕಾಗಿದೆ ಎಂದರ್ಥ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷಕ್ಕೂ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಉಳಿದಿವೆ. ಈ ವಿಷಯದ ಬಗ್ಗೆ ಸಂಪುಟ ಸಭೆಯಲ್ಲೂ ಚರ್ಚೆ ನಡೆದಿದೆ. ರಾಜ್ಯದ ನಗರ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸ್ಥಳೀಯ ಆಡಳಿತದ ಹೊಣೆ ನಿಭಾಯಿಸುವ ನಗರಾಭಿವೃದ್ಧಿ ಇಲಾಖೆಯಲ್ಲಿ 16,155 ಕಡತಗಳು ವಿಲೇವಾರಿಗೆ ಬಾಕಿ ಉಳಿದಿವೆ. ಈ ವಿಚಾರದಲ್ಲಿ 39 ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ತೀರಾ ಹಿಂದುಳಿದಿರುವುದನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸಂಪುಟ ಸಭೆಯಲ್ಲಿ ಮಂಡಿಸಿರುವ ಅಂಕಿಅಂಶಗಳು ತಿಳಿಸುತ್ತವೆ. ಕಂದಾಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗೃಹ, ವಾಣಿಜ್ಯ ಮತ್ತು ಕೈಗಾರಿಕೆ, ಲೋಕೋಪಯೋಗಿ ಇಲಾಖೆಗಳು ಬೃಹತ್‌ ಪ್ರಮಾಣದ ಕಡತಗಳ ರಾಶಿಯನ್ನು ಬಾಕಿ ಇರಿಸಿಕೊಂಡಿವೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಆಡಳಿತವು ಚುರುಕು ಪಡೆದಿಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಈ ವಿಳಂಬ ಧೋರಣೆಯು ರಾಜ್ಯದ ಅಭಿವೃದ್ಧಿಗೆ ತೊಡರುಗಾಲಾಗಿ ಪರಿಣಮಿಸಿದೆ. ಇದನ್ನು ಹೀಗೆಯೇ ಮುಂದುವರಿಯಲು ಬಿಡಬಾರದು.

ಭೌತಿಕ ಸ್ವರೂಪದ ಕಡತ ವಿಲೇವಾರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಉದ್ದೇಶಪೂರ್ವಕ ವಿಳಂಬ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಕಾರಣಕ್ಕಾಗಿ ತಂತ್ರಜ್ಞಾನ ಆಧಾರಿತ ಇ–ಆಫೀಸ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯ ಮೂಲಕ ಸಂಪೂರ್ಣವಾಗಿ ಕಡತ ವಿಲೇವಾರಿ ಮಾಡುವ ಪ್ರಕ್ರಿಯೆ ಎಲ್ಲ ಇಲಾಖೆಗಳಲ್ಲೂ ಇನ್ನೂ ಆರಂಭವಾಗಿಲ್ಲ. ಈಗ ಭೌತಿಕ ಸ್ವರೂಪದ (ಎಫ್‌ಎಂಎಸ್‌) 43,404 ಮತ್ತು ಇ–ಆಫೀಸ್‌ನಲ್ಲಿ 94,492 ಕಡತಗಳು ಬಾಕಿ ಇವೆ. ಇ–ಆಫೀಸ್‌ ವ್ಯವಸ್ಥೆಯಲ್ಲೂ ವಿಳಂಬ ಧೋರಣೆ ಮುಂದುವರಿದಿರುವುದಕ್ಕೆ ಈ ಅಂಕಿ ಅಂಶಗಳು ಸಾಕ್ಷ್ಯ ಒದಗಿಸುತ್ತವೆ. ವಿಳಂಬಕ್ಕೆ ಅವಕಾಶ ಇಲ್ಲದಂತೆ ನಾಗರಿಕರಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಸರ್ಕಾರದ ಸೇವೆಗಳನ್ನು ಒದಗಿಸುವುದಕ್ಕಾಗಿ ‘ಸಕಾಲ’ ಕಾಯ್ದೆ ಜಾರಿಯಲ್ಲಿದೆ. ಎಲ್ಲ ಇಲಾಖೆಗಳ ಬಹುತೇಕ ಸೇವೆಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಆದರೆ, ಅಧಿಕಾರಿಗಳು ಯಾವ ಭೀತಿಯೂ ಇಲ್ಲದೆ ಕಡತಗಳನ್ನು ದೀರ್ಘ ಕಾಲ ಬಾಕಿ ಇರಿಸಿಕೊಂಡು ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ.

ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ದೂರನ್ನೇ ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್‌ ಪಕ್ಷವು ಅಧಿಕಾರದ ಗದ್ದುಗೆ ಹಿಡಿದಿದೆ. ಆದರೆ, ಸರ್ಕಾರದ ಅಧಿಕಾರದ ಚುಕ್ಕಾಣಿಯನ್ನು ಹಿಡಿದವರು ಬದಲಾದರೂ ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾವಣೆ ಆಗಿಲ್ಲ ಎಂಬುದನ್ನು ಕಡತ ವಿಲೇವಾರಿಯಲ್ಲಿನ ವಿಳಂಬ ಧೋರಣೆಯು ಸಾಬೀತುಪಡಿಸುತ್ತದೆ. ಅರ್ಜಿಗಳನ್ನು, ಕಡತಗಳನ್ನು ದೀರ್ಘ ಕಾಲ ಬಾಕಿ ಇರಿಸಿಕೊಂಡು ಜನರನ್ನು ಸತಾಯಿಸಿ, ಅವರು ಹತಾಶರಾಗುವಂತೆ ಮಾಡುವುದು ಸರ್ಕಾರಿ ನೌಕರರ ಚಾಣಾಕ್ಷ ತಂತ್ರ. ಆ ಮೂಲಕ, ಲಂಚ ಕೊಡುವುದು ಅನಿವಾರ್ಯ ಎಂಬ ಸ್ಥಿತಿಯನ್ನು ಸೃಷ್ಟಿಸುತ್ತಾರೆ. ಬೃಹತ್‌ ಪ್ರಮಾಣದಲ್ಲಿ ಕಡತಗಳು ಬಾಕಿ ಉಳಿದಿರುವುದಕ್ಕೆ ಸಚಿವರು ಮತ್ತು ಅಧಿಕಾರಿಗಳು ಸಮಾನ ಹೊಣೆಗಾರರು. ನಿಯಮಿತವಾಗಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿ, ಸಚಿವರು ನಿಗಾ ವಹಿಸಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಸರ್ಕಾರಿ ನೌಕರರ ವರ್ಗಾವಣೆ, ಕಾಮಗಾರಿಗಳ ಗುತ್ತಿಗೆ ಸೇರಿದಂತೆ ‘ಲಾಭದಾಯಕ’ ಎನಿಸಿದ ಕಡತಗಳಿಗೆ ಎಲ್ಲ ಇಲಾಖೆಗಳಲ್ಲೂ ಶರವೇಗದಲ್ಲಿ ಮುಕ್ತಿ ದೊರಕುತ್ತದೆ. ಅದೇ ಮಾದರಿಯನ್ನು ಉಳಿದ ಕಡತಗಳಿಗೂ ಏಕೆ ಅನ್ವಯಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾದ ಹೊಣೆಗಾರಿಕೆ ಅಧಿಕಾರದ ಚುಕ್ಕಾಣಿ ಹಿಡಿದವರ ಮೇಲಿದೆ. ಬಾಕಿ ಇರುವ ಕಡತಗಳಲ್ಲಿ ಶೇಕಡ 10ರಷ್ಟನ್ನು ಈ ತಿಂಗಳ ಅಂತ್ಯದೊಳಗೆ ವಿಲೇವಾರಿ ಮಾಡುವಂತೆ ಮುಖ್ಯ ಕಾರ್ಯದರ್ಶಿ ಗಡುವು ನೀಡಿದ್ದಾರೆ. ಸರ್ಕಾರದ ಕ್ರಮವು ಇಷ್ಟಕ್ಕೆ ಸೀಮಿತ ಆಗಬಾರದು. ಗ್ರಾಮಗಳಿಂದ ವಿಧಾನಸೌಧದವರೆಗೆ ಎಲ್ಲ ಹಂತಗಳಲ್ಲೂ ಕಡತ ವಿಲೇವಾರಿ ಮೇಲೆ ನಿಗಾ ಇಡುವಂತಹ ಬಿಗಿಯಾದ ವ್ಯವಸ್ಥೆ ರೂಪಿಸಬೇಕು. ದುರುದ್ದೇಶದಿಂದ ವಿಳಂಬ ಮಾಡುವವರನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಂಬಂಧಿಸಿದ ಇಲಾಖೆಗಳ ಸಚಿವರನ್ನೂ ಉತ್ತರದಾಯಿಗಳನ್ನಾಗಿ ಮಾಡಬೇಕು. ಕಡತಗಳನ್ನು ಬಾಕಿ ಇರಿಸಿಕೊಂಡು ಜನಹಿತಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಚಾಟಿ ಬೀಸುವ ಕೆಲಸವನ್ನು ಮುಖ್ಯಮಂತ್ರಿಯವರೇ ಖುದ್ದಾಗಿ ಕೈಗೆತ್ತಿಕೊಂಡರಷ್ಟೇ ಬದಲಾವಣೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT