ಗುರುವಾರ , ಮೇ 19, 2022
21 °C

ಸಂಪಾದಕೀಯ | ಅತಿವೃಷ್ಟಿ: ವಿಳಂಬ ಮಾಡದೆ ಪರಿಹಾರ ಕ್ರಮಗಳನ್ನು ಕೈಗೊಳ್ಳಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕೆರೆ–ಕಟ್ಟೆಗಳೇನೋ ಮೈದುಂಬಿಕೊಂಡಿವೆ. ಆದರೆ, ಕೊಯ್ಲಿಗೆ ಬಂದಿದ್ದ ಫಸಲು ಮಳೆಯಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರಾಜ್ಯದ ಹಲವು ಭಾಗಗಳ ರೈತರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಕಾಫಿ, ಕಾಳುಮೆಣಸು ಹಾಗೂ ಅಡಿಕೆ ಬೆಳೆಯಲ್ಲಿ ಈಗಾಗಲೇ ಕೊಳೆರೋಗ ಕಾಣಿಸಿಕೊಂಡ ವರದಿಗಳಿವೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭತ್ತದ ಕಟಾವು ಮಾಡಲು ಮಳೆ ಬಿಡುವನ್ನೇ ನೀಡುತ್ತಿಲ್ಲ. ಕೊಯ್ಲು ಮಾಡಿದ ಭತ್ತವನ್ನು ಸಂಗ್ರಹಿಸಿಡಲು ಸೂಕ್ತ ಸೌಲಭ್ಯಗಳಿಲ್ಲದೆ ಬೆಳೆದ ಬೆಳೆ ಮಳೆಯಲ್ಲಿ ನೆನೆದು ಕಪ್ಪುಬಣ್ಣಕ್ಕೆ ತಿರುಗುತ್ತಿದೆ. ಜತೆಗೆ ಮೊಳಕೆ ಸಹ ಒಡೆಯುತ್ತಿದೆ. ಹೀಗಿದ್ದೂ ಭತ್ತದ ಖರೀದಿ ಕೇಂದ್ರಗಳನ್ನು ಇನ್ನೂ ಆರಂಭಿಸಿಲ್ಲ. ಮುಂಗಾರಿನ ಹಂಗಾಮು ಮುಗಿದ ಮೇಲೆ ಕಾಟಾಚಾರಕ್ಕೆ ಖರೀದಿ ಕೇಂದ್ರಗಳನ್ನು ತೆರೆದರೆ ಏನು ಪ್ರಯೋಜನ ಎನ್ನುವ ರೈತರ ಪ್ರಶ್ನೆಯಲ್ಲಿ ಹುರುಳಿಲ್ಲದೆ ಇಲ್ಲ. ಚಾಮರಾಜನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಮತ್ತಿತರ ಜಿಲ್ಲೆಗಳ ಹಲವೆಡೆ ಮಳೆಯಿಂದಾಗಿ ರಾಗಿ ಫಸಲು ಚಾಪೆ ಹಾಸಿದಂತೆ ಸಂಪೂರ್ಣವಾಗಿ ನೆಲಕ್ಕೊರಗಿ ಮಲಗಿದೆ. ಕಲಬುರಗಿ ಪ್ರದೇಶದಲ್ಲಿ ತೊಗರಿ ಬೆಳೆ ಹೂವು ಬಿಡುವ ಸಂದರ್ಭವೂ ಇದಾಗಿದ್ದು, ಮಳೆಯಿಂದ ಹೂವು ಉದುರಿಹೋಗುತ್ತಿದೆ. ಇದರಿಂದ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಆಗಲಿದೆ ಎಂದು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬೆಳೆದು ನಿಂತಿದ್ದ ಈರುಳ್ಳಿ, ತರಕಾರಿ ಬೆಳೆ ಸಹ ಹಾನಿಗೊಳಗಾಗಿದೆ.

ಈ ಅಕಾಲಿಕ ಮಳೆಯಿಂದ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ತರಹದ ವ್ಯತಿರಿಕ್ತ ಪರಿಣಾಮಗಳು ಉಂಟಾಗಿರುವುದು ಸುಸ್ಪಷ್ಟ. ಮಳೆಚಕ್ರ ಇತ್ತೀಚಿನ ವರ್ಷಗಳಲ್ಲಿ ದಿಕ್ಕು ತಪ್ಪಿದ್ದು, ಹವಾಮಾನ ಬದಲಾವಣೆಯ ‘ಬಿಸಿ’ ಜೋರಾಗಿಯೇ ತಟ್ಟುತ್ತಿದೆ. ಸ್ಥಳೀಯ ಮಟ್ಟದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳೇನು ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಈಗ ಮುಖ್ಯವಾಗಿದೆ. ಬೆಳೆ ಪದ್ಧತಿ ಹಾಗೂ ಬಿತ್ತನೆ ಅವಧಿಯಲ್ಲಿ ಬದಲಾವಣೆ ಏನಾದರೂ ಅಗತ್ಯವೇ ಎನ್ನುವ ವಿಷಯವಾಗಿ ತಜ್ಞರು ವಿಶ್ಲೇಷಿಸಿ ಬೆಳಕು ಚೆಲ್ಲಬೇಕಿದೆ. ಆದರೆ, ಇವುಗಳೆಲ್ಲ ದೀರ್ಘಾವಧಿಯಲ್ಲಿ ಪರಿಹಾರವನ್ನು ಒದಗಿಸಬಹುದಾದ ಕ್ರಮಗಳು. ಬೆಳೆ ಹಾನಿಯನ್ನು ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕಾಗಿರುವುದು ತಕ್ಷಣಕ್ಕೆ ಆಗಬೇಕಿರುವ ಕೆಲಸ. ರಾಜ್ಯದಲ್ಲಿ ಬಿತ್ತನೆಯಾಗಿರುವ ಬೆಳೆಗಳ ಕುರಿತು ನಿಖರ ಮಾಹಿತಿಯನ್ನು ಕಲೆಹಾಕಲು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಇತ್ತೀಚೆಗೆ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿವೆ. ಆ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೆ ತಂದಿದ್ದರೆ ಕೃಷಿ ಇಲಾಖೆಯ ಬಳಿ ಈಗ ಬಿತ್ತನೆಯಾದ ಪ್ರಮಾಣ ಹಾಗೂ ಮಳೆಯಿಂದ ಹಾನಿಯಾದ ಬೆಳೆಯ ಪ್ರಮಾಣದ ನಿಖರ ಲೆಕ್ಕಾಚಾರ ಇರುತ್ತಿತ್ತು. ಇದರಿಂದ ಪರಿಹಾರ ವಿತರಿಸುವ ಕೆಲಸ ವಿಳಂಬವಿಲ್ಲದೆ ನಡೆಯಲು ಸಾಧ್ಯವಿತ್ತು. ಆದರೆ, ಸರ್ಕಾರದ ಹೊಣೆ ಹೊತ್ತವರಿಗೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಇರುವಂತಹ ಉತ್ಸಾಹ, ಆಡಳಿತದಲ್ಲಿ ಸುಧಾರಣೆ ತರುವಲ್ಲಿ ಇದ್ದಂತಿಲ್ಲ. ಹೀಗಾಗಿ ಇಂತಹ ಯೋಜನೆಗಳೆಲ್ಲ ಕುಂಟುತ್ತಾ ಸಾಗುತ್ತವೆ.

ಸಂಕಟದ ಇಂತಹ ಸಮಯದಲ್ಲಿ ಜನರ ನೆರವಿಗೆ ನಿಲ್ಲಬೇಕಿದ್ದ ಆಡಳಿತ ಯಂತ್ರವು ಚುನಾವಣೆ ಮತ್ತು ಬಿಟ್‌ಕಾಯಿನ್‌ ಜಪದಲ್ಲಿ ಸಂಪೂರ್ಣವಾಗಿ ಮೈಮರೆತಿದೆ. ಕೋವಿಡ್‌ ಸಮಯದ ಲಾಕ್‌ಡೌನ್‌ನಿಂದ ತೊಂದರೆ ಹಾಗೂ ಅಪಾರ ನಷ್ಟ ಅನುಭವಿಸಿದ್ದ ರೈತವರ್ಗ ಈಗ ಅತಿವೃಷ್ಟಿಯಿಂದ ಕಂಗಾಲಾಗಿ ಕುಳಿತಿದೆ. ಕೃಷಿ ಚಟುವಟಿಕೆಗಳ ಆರ್ಥಿಕ ಬಂಡಿ ನಿಂತಲ್ಲೇ ನಿಂತಿರುವ ಈ ಹೊತ್ತಿನಲ್ಲಿ ಸರ್ಕಾರ ಮೈಕೊಡವಿ ಎದ್ದು ನಿಲ್ಲಬೇಕು. ‘ನಿಮ್ಮೊಂದಿಗೆ ನಾವಿದ್ದೇವೆ’ ಎನ್ನುವ ಸಂದೇಶ ರೈತರನ್ನು ಮುಟ್ಟುವಂತೆ ಮಾಡಬೇಕು. ವಿಳಂಬವಿಲ್ಲದೆ ಸಮೀಕ್ಷೆ ಕಾರ್ಯ ನಡೆಸಿ, ತ್ವರಿತಗತಿಯಲ್ಲಿ ಪರಿಹಾರದ ವ್ಯವಸ್ಥೆ ಮಾಡಬೇಕು. ಕೊಯ್ಲು ಮಾಡಿದ ಫಸಲು ಖರೀದಿಸಲು ಖರೀದಿ ಕೇಂದ್ರಗಳನ್ನೂ ಆದ್ಯತೆಯ ಮೇಲೆ ತೆರೆಯಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಮಳೆಯಿಂದ ಬಹುತೇಕ ರಸ್ತೆಗಳು ಓಡಾಡಲು ಆಗದಷ್ಟು ಹಾಳಾಗಿವೆ. ಅದರಲ್ಲೂ ರಾಜಧಾನಿಯಲ್ಲಿ ಸಂಚಾರ ಎನ್ನುವುದು ದುಸ್ತರವಾಗಿದೆ. ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನೂ ಬೇಗ ಮುಗಿಸಿ, ಸಂಚಾರ ದಟ್ಟಣೆಯನ್ನು ಹೋಗಲಾಡಿಸಬೇಕು. ಈ ದಿಸೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಚುರುಕಿನಿಂದ ಕಾರ್ಯಪ್ರವೃತ್ತವಾಗುವಂತೆ ಮುಖ್ಯಮಂತ್ರಿ ಚಾಟಿ ಬೀಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು