ಮಂಗಳವಾರ, ಆಗಸ್ಟ್ 9, 2022
23 °C

ಸಂಪಾದಕೀಯ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ – ನಿರ್ಧಾರ ಮುಂದೂಡಿದ್ದು ಸಮಂಜಸವಲ್ಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅತ್ಯುನ್ನತ ಸಂಸ್ಥೆಯಾಗಿರುವ ಜಿಎಸ್‌ಟಿ ಮಂಡಳಿಯ ಸಭೆಯು ಕಳೆದ ವಾರ ನಡೆದಿದೆ. ಮಂಡಳಿಯ ಸಭೆಯಲ್ಲಿ ಕೆಲವು ಪ್ರಮುಖ ವಿಚಾರಗಳು ಚರ್ಚೆಗೆ ಬಂದಿದ್ದವು. ಜಿಎಸ್‌ಟಿ ವ್ಯವಸ್ಥೆಯ ಜಾರಿಯಿಂದ ರಾಜ್ಯಗಳಿಗೆ ಆಗಬಹುದಾದ ನಷ್ಟಕ್ಕೆ ಪರಿಹಾರ ನೀಡುವುದನ್ನು ಇನ್ನೂ ಕೆಲವು ವರ್ಷ ಮುಂದುವರಿಸಬೇಕೇ ಎಂಬುದು ಬಹಳ ಪ್ರಮುಖವಾದ ಒಂದು ವಿಚಾರ. ಅಲ್ಲದೆ, ಜಿಎಸ್‌ಟಿ ವಿನಾಯಿತಿ ಪಟ್ಟಿಯಿಂದ ಹೊರಗೆ ಇರುವ ಕೆಲವು ಸೇವೆಗಳು ಹಾಗೂ ಸರಕುಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಇನ್ನೊಂದು ಪ್ರಮುಖ ವಿಚಾರ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದು ಐದು ವರ್ಷಗಳು ತುಂಬಿರುವ ಕಾರಣ ಈ ಸಭೆಯು ಬಹಳ ಪ್ರಮುಖವಾಗಿತ್ತು. ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದು ಕರೆಸಿಕೊಂಡಿರುವ ಜಿಎಸ್‌ಟಿ, ಜಾರಿಯಾದ ದಿನದಿಂದಲೂ ಟೀಕೆಗಳಿಗೆ ಗುರಿಯಾಗಿದೆ. ಇದನ್ನು ತೀರಾ ಅವಸರದಲ್ಲಿ ಜಾರಿಗೆ ತರಲಾಗಿದೆ ಎಂಬ ಟೀಕೆ ಇದೆ. ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶ ಹೊಂದಿರುವ ಇದು, ವಾಸ್ತವದಲ್ಲಿ ವ್ಯವಸ್ಥೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ ಎಂಬ ಮಾತುಗಳನ್ನು ಉದ್ಯಮ ವಲಯದ ಕೆಲವರು ಮತ್ತು ಕೆಲವು ಆರ್ಥಿಕ ತಜ್ಞರು ಹಲವು ಬಾರಿ ಹೇಳಿದ್ದಾರೆ. ವ್ಯವಸ್ಥೆಯನ್ನು ಸರಳಗೊಳಿಸುವ ಹಾಗೂ ನಿಯಮಗಳ ಪಾಲನೆ ಸುಲಲಿತ ಆಗುವ ದಿಸೆಯಲ್ಲಿ ಇನ್ನಷ್ಟು ಕೆಲಸಗಳು ಆಗಬೇಕಿವೆ ಎಂಬುದರಲ್ಲಿ ಅನುಮಾನ ಇಲ್ಲ.

ರಾಜ್ಯಗಳಿಗೆ ಆಗಬಹುದಾದ ವರಮಾನ ನಷ್ಟವನ್ನು ಭರ್ತಿ ಮಾಡಿಕೊಡುವ ವ್ಯವಸ್ಥೆಯು ಇನ್ನೂ ಕೆಲವು ವರ್ಷಗಳವರೆಗೆ ಮುಂದುವರಿಯಬೇಕೇ ಎಂಬ ವಿಚಾರವಾಗಿ ಮಂಡಳಿಯು ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ. ಆಗಸ್ಟ್‌ನಲ್ಲಿ ನಡೆಯಲಿರುವ ಮಂಡಳಿ ಸಭೆಯಲ್ಲಿ ಈ ಬಗ್ಗೆ ಮತ್ತೆ ಚರ್ಚೆ ನಡೆದು ಒಂದು ತೀರ್ಮಾನ ಸಾಧ್ಯವಾಗಬಹುದು ಎಂಬ ನಿರೀಕ್ಷೆ ಇದೆ. ರಾಜ್ಯಗಳಿಗೆ ಪರಿಹಾರ ಕೊಡುವ ವ್ಯವಸ್ಥೆಯು ಜೂನ್‌ 30ಕ್ಕೆ ಕೊನೆಗೊಂಡಿದೆ. ಈ ದಿನಕ್ಕೆ ಮೊದಲೇ ಅದರ ಮುಂದುವರಿಕೆ ಬಗ್ಗೆ ಸ್ಪಷ್ಟ ತೀರ್ಮಾನವನ್ನು ಮಂಡಳಿಯು ಕೈಗೊಳ್ಳಬೇಕಿತ್ತು. ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದು, ಮುಂದೆ ರಾಜ್ಯಗಳಿಗೆ ಜಿಎಸ್‌ಟಿ ನಷ್ಟ ಪರಿಹಾರ ಇರುವುದಿಲ್ಲ ಎಂಬ ಅರ್ಥವನ್ನೂ ಹೊರಡಿಸಬಹುದು. ಪರಿಹಾರ ಕೊಡುವ ವ್ಯವಸ್ಥೆಯನ್ನು ಮುಂದುವರಿಸುವುದು ಬೇಡ ಎನ್ನಲು ಕೇಂದ್ರ ಸರ್ಕಾರಕ್ಕೆ ಹಲವು ಕಾರಣಗಳು ಇವೆ. ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಪರಿಹಾರ ಕೊಡುವ ಉಲ್ಲೇಖ ಜಿಎಸ್‌ಟಿ ಕಾನೂನಿನಲ್ಲಿಯೇ ಇಲ್ಲ ಎಂದು ಕೇಂದ್ರ ವಾದಿಸಬಹುದು. ಆದರೆ, ಕೋವಿಡ್‌ ಸಾಂಕ್ರಾಮಿಕದಿಂದಾಗಿ ವರಮಾನ ಸಂಗ್ರಹಿಸುವ ತಮ್ಮ ಸಾಮರ್ಥ್ಯಕ್ಕೆ ಪೆಟ್ಟು ಬಿದ್ದಿದೆ, ಹಾಗಾಗಿ ಪರಿಹಾರ ವ್ಯವಸ್ಥೆ ಮುಂದುವರಿಯಬೇಕು ಎಂದು ರಾಜ್ಯಗಳು ಹೇಳುತ್ತಿರುವುದರಲ್ಲಿಯೂ ಸತ್ಯವಿದೆ. ಪರಿಹಾರ ಮುಂದುವರಿಸುವ ಬಗ್ಗೆ ಮಂಡಳಿಯು ಸ್ಪಷ್ಟ ತೀರ್ಮಾನವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು. ಇಲ್ಲವಾದರೆ, ರಾಜ್ಯಗಳಿಗೆ ಹಣಕಾಸಿನ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವುದಕ್ಕೆ ಅಡ್ಡಿ ಆಗುತ್ತದೆ.

ಇದುವರೆಗೆ ತೆರಿಗೆ ವ್ಯಾಪ್ತಿಯಲ್ಲಿ ಇಲ್ಲದಿದ್ದ ಕೆಲವು ಉತ್ಪನ್ನಗಳಿಗೆ ತೆರಿಗೆ ವಿಧಿಸಲು ಮಂಡಳಿಯು ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿಗೆ ಬಂದ ನಂತರದಲ್ಲಿ ಪ್ಯಾಕ್ ಮಾಡಲಾಗಿರುವ, ಲೇಬಲ್ ಇರುವ ಮಾಂಸ, ಮೊಸರು, ಹಪ್ಪಳ, ಮಜ್ಜಿಗೆ, ಆಹಾರ ಧಾನ್ಯಗಳು, ಗೋಧಿ ಹಿಟ್ಟು ಮುಂತಾದವು ತೆರಿಗೆ ವ್ಯಾಪ್ತಿಗೆ ಬರಲಿವೆ. ಪ್ಯಾಕ್ ಮಾಡದೆ ಇರುವ ಆಹಾರ ವಸ್ತುಗಳಿಗೆ ವಿನಾಯಿತಿ ಮುಂದುವರಿಯಲಿದೆ. ಹಾಲಿನ ಉತ್ಪನ್ನಗಳು ಸೇರಿದಂತೆ ಹತ್ತುಹಲವು ಆಹಾರ ವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರುವುದರಿಂದ ವರಮಾನ ಸಂಗ್ರಹವು ಹೆಚ್ಚಳ ಕಾಣಬಹುದು. ಆದರೆ, ಅದರಿಂದಾಗಿ ಮನೆಬಳಕೆ ವಸ್ತುಗಳ ಹಣದುಬ್ಬರ ಪ್ರಮಾಣ ಜಾಸ್ತಿ ಆಗುವ ಸಾಧ್ಯತೆಯೂ ಇದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಈಗಾಗಲೇ ಮಿತಿ ಮೀರಿ ಬೆಳೆದಿದೆ. ಹಣದುಬ್ಬರ ನಿಯಂತ್ರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರ ಹೆಚ್ಚಳದಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಸ್ತವದಲ್ಲಿ, ಜಿಎಸ್‌ಟಿ ವ್ಯವಸ್ಥೆಯ ಮೂಲಕ ಸಂಗ್ರಹ ಆಗುತ್ತಿರುವ ವರಮಾನದ ಮೊತ್ತವು ಈಚಿನ ತಿಂಗಳುಗಳಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಇದೆ. ಇಂತಹ ಸಂದರ್ಭದಲ್ಲಿ ಕೆಲವು ಅತ್ಯಗತ್ಯ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರ ಅಗತ್ಯ ನಿಜಕ್ಕೂ ಇತ್ತೇ ಎಂಬ ಬಗ್ಗೆ ಮಂಡಳಿಯು ಪುನಃ ಅವಲೋಕನ ನಡೆಸುವ ಅಗತ್ಯವಿದೆ. ತೆರಿಗೆ ವಿನಾಯಿತಿ ಇರುವ ವಸ್ತುಗಳ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡುವ ಸೂಚನೆಯನ್ನು ಕೇಂದ್ರ ನೀಡಿದೆ. ತಕ್ಷಣಕ್ಕೆ ಇದರ ಅಗತ್ಯವಿದೆಯೇ ಎಂಬುದನ್ನೂ ಮಂಡಳಿಯು ಪರಾಮರ್ಶಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು