ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ನಿರ್ಮಾಣ ಪುನಶ್ಚೇತನಕ್ಕೆ ನಿಧಿ ಪರಿಣಾಮಕಾರಿಯಾಗಿ ಜಾರಿಯಾಗಲಿ

Last Updated 12 ನವೆಂಬರ್ 2019, 2:45 IST
ಅಕ್ಷರ ಗಾತ್ರ

ರಿಯಲ್‌ ಎಸ್ಟೇಟ್‌ ವಲಯಕ್ಕೆ ಚೈತನ್ಯ ತುಂಬಲು ಕೇಂದ್ರ ಸರ್ಕಾರವು ₹ 25 ಸಾವಿರ ಕೋಟಿ ಮೊತ್ತದ ಪರ್ಯಾಯ ಹೂಡಿಕೆ ನಿಧಿ (ಎಐಎಫ್‌) ಸ್ಥಾಪಿಸಿದೆ. ಗೃಹ ನಿರ್ಮಾಣ ಕ್ಷೇತ್ರದ ಬಹುದಿನಗಳ ನಿರೀಕ್ಷೆಗೆ ಈ ರೂಪದಲ್ಲಿ ಸ್ಪಂದನ ದೊರೆತಿದೆ. ಹಣಕಾಸಿನ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿರುವ ಯೋಜನೆಗಳಿಂದ ಅನೇಕರ ಕನಸಿನ ಮನೆಯ ಹಂಬಲ ನನಸಾಗುವ ಸಾಧ್ಯತೆ ಅನಿರ್ದಿಷ್ಟವಾಗಿ ಮುಂದಕ್ಕೆ ಹೋಗುತ್ತಲೇ ಇತ್ತು. ಇದರಿಂದಾಗಿ, ಸಾಲ ಮರುಪಾವತಿ ಮತ್ತು ಮನೆ ಬಾಡಿಗೆ ಪಾವತಿಯು ಹೆಚ್ಚುವರಿ ಹೊರೆಯಾಗಿ ಪರಿಣಮಿಸಿತ್ತು. ಈ ನಿಧಿಯ ನೆರವಿನಿಂದ ಗೃಹ ನಿರ್ಮಾಣ ಕಾಮಗಾರಿಗಳು ವೇಗ ಪಡೆಯುವ ಸಾಧ್ಯತೆ ಇದೆ.

ಗೃಹ ಸಾಲಕ್ಕೆ ಸಲ್ಲಿಸಿದ ಅರ್ಜಿಗಳನ್ನು ಹೊಸದಾಗಿ ಪರಿಗಣಿಸಲು ಅಥವಾ ಸಾಲದ ಮೊತ್ತ ಹೆಚ್ಚಿಸಲು ಗೃಹ ಸಾಲಗಾರರು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಲು ಸಹ ಸರ್ಕಾರ ಸೂಚಿಸಿದೆ. ಹೀಗಾಗಿ ಮನೆ ಖರೀದಿದಾರರ ಸಂಕಷ್ಟ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಡಿಮೆ ವೆಚ್ಚದ ಮನೆ ನಿರ್ಮಾಣ ಮತ್ತು ಮಧ್ಯಮ ಆದಾಯ ವರ್ಗದವರಿಗಾಗಿ ಇರುವ ವಸತಿ ಯೋಜನೆಗಳಿಗೆ ಪುನಶ್ಚೇತನ ನೀಡುವುದು ಈ ನಿಧಿಯ ಉದ್ದೇಶ.

ಸ್ಥಗಿತಗೊಂಡಿರುವ 1,600ಕ್ಕೂ ಹೆಚ್ಚು ಯೋಜನೆಗಳಲ್ಲಿ ₹ 3.5 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಿದೆ ಎಂಬುದು ರಿಯಲ್‌ ಎಸ್ಟೇಟ್‌ ವಲಯದ ಅಂದಾಜು. ಇವುಗಳನ್ನು ಪೂರ್ಣಗೊಳಿಸಲು ₹55 ಸಾವಿರ ಕೋಟಿಯಿಂದ ₹ 80 ಸಾವಿರ ಕೋಟಿ ಬೇಕಿದೆ. ಈ ಮೊತ್ತಕ್ಕೆ ಹೋಲಿಸಿದರೆ ಪರ್ಯಾಯ ನಿಧಿಗೆ ನಿಗದಿ ಮಾಡಿರುವ ಮೊತ್ತ ಸಾಲದು. ಹೀಗಾಗಿ, ನಿಧಿ ಸ್ಥಾಪನೆಯ ಪರಿಣಾಮ ಸೀಮಿತವಾಗಿರಲಿದೆ ಎಂಬ ವಾದವೂ ಇದೆ. ಕಪ್ಪುಹಣ ಚಲಾವಣೆಯ ಕಳಂಕ, ವಿಳಂಬದ ಅಪಖ್ಯಾತಿಗೆ ಒಳಗಾದ ಈ ವಲಯದ ಪುನಶ್ಚೇತನಕ್ಕೆ ತೆರಿಗೆದಾರರ ಹಣ ಬಳಸುವುದು ಎಷ್ಟು ಸಮಂಜಸ ಎನ್ನುವ ಪ್ರಶ್ನೆಯೂ ವ್ಯಕ್ತವಾಗಿದೆ.

ಗೃಹ ನಿರ್ಮಾಣ ವಲಯದಲ್ಲಿ ಉದ್ಯೋಗ ಅವಕಾಶಗಳು ವಿಪುಲವಾಗಿವೆ. ವಸತಿ ನಿರ್ಮಾಣ ಕ್ಷೇತ್ರವು ಆರ್ಥಿಕತೆ ಮೇಲೆ ಬಹುಬಗೆಯಲ್ಲಿ ಪ್ರಭಾವ ಬೀರುತ್ತದೆ. ಬ್ಯಾಂಕ್‌, ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ), ಸಿಮೆಂಟ್‌, ಉಕ್ಕು, ಪೆಯಿಂಟ್‌, ಹಾರ್ಡ್‌ವೇರ್‌ ವಲಯಗಳಿಗೂ ಈ ನಿಧಿಯಿಂದ ಪ್ರಯೋಜನ ದೊರೆಯಲಿದೆ. ಹೀಗಾಗಿ ಎಐಎಫ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮುತುವರ್ಜಿ ವಹಿಸಬೇಕಾಗಿದೆ.

ಯೋಜನೆಗಳ ಉದ್ದೇಶ ಒಳ್ಳೆಯದಾಗಿದ್ದರೂ ಜಾರಿ ಹಂತದಲ್ಲಿನ ವೈಫಲ್ಯಗಳಿಂದಾಗಿ ಅವು ವಿಫಲಗೊಳ್ಳುವುದೇ ಹೆಚ್ಚು. ಎಐಎಫ್‌ ಕೂಡ ಅದೇ ಹಾದಿ ಹಿಡಿಯದಂತೆ ಎಚ್ಚರ ವಹಿಸಬೇಕು. ಖಾಸಗಿ ಹೂಡಿಕೆದಾರರೂ ಇದರಲ್ಲಿ ಭಾಗಿದಾರರಾಗಲು ಅವಕಾಶ ಮಾಡಿಕೊಡುವ ಹಣಕಾಸು ಸಚಿವಾಲಯದ ಚಿಂತನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ. ನಿಧಿಯು ತ್ವರಿತಗತಿಯಲ್ಲಿ ಸದ್ಬಳಕೆಯಾಗುವಂತೆ ಸರ್ಕಾರ ಕಾಲಮಿತಿ ವಿಧಿಸಿದರೆ ಒಳಿತು.

ವಸೂಲಾಗದ ಸಾಲ (ಎನ್‌ಪಿಎ) ಎಂದು ಪರಿಗಣಿಸಿದ ಮತ್ತು ಸಾಲ ವಸೂಲಾತಿ ಕೋರ್ಟ್‌ ಮುಂದಿರುವ ಯೋಜನೆಗಳೂ ಹಣಕಾಸು ನೆರವು ಪಡೆಯಲಿರುವುದು ಸಕಾರಾತ್ಮಕ ಬೆಳವಣಿಗೆ. ಗೃಹ ನಿರ್ಮಾಣ ಕ್ಷೇತ್ರಕ್ಕೆ ಸೆಪ್ಟೆಂಬರ್‌ ತಿಂಗಳಲ್ಲಿ ಘೋಷಣೆಯಾಗಿದ್ದ ನೆರವಿನ ಯೋಜನೆಯ ಪ್ರಯೋಜನ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅವುಗಳಲ್ಲಿ ಕೆಲವು ನಿಬಂಧನೆಗಳನ್ನು ಈಗ ಸಡಿಲಿಸಲಾಗಿದೆ. ಆದರೆ, ಪುನಶ್ಚೇತನಕ್ಕೆ ಈ ವಿನಾಯಿತಿ ಸಾಕಾಗದು ಎಂಬ ಮಾತೂ ಇದೆ. ಈ ಕೊರಗು ನಿವಾರಣೆಯತ್ತಲೂ ಸರ್ಕಾರ ಗಮನಹರಿಸಬೇಕು. ಮನೆ ಖರೀದಿದಾರರು ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಇನ್ನಷ್ಟು ಸರಳವಾಗಿ ಸಾಲ ಸೌಲಭ್ಯ ಸಿಗುವಂತಾಗಬೇಕು. ತೆರಿಗೆ ರಿಯಾಯಿತಿ ಬೇಕೆಂಬ ಬೇಡಿಕೆಯೂ ಇದೆ. ಈ ಬಗೆಯ ನಿರೀಕ್ಷೆ ಮತ್ತು ಬೇಡಿಕೆಗಳ ಸಾಧಕ–ಬಾಧಕ ಕುರಿತು ಸರ್ಕಾರ ಪರಾಮರ್ಶೆ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT