ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು: ಮಹತ್ವದ ಪಾಠ ಹೇಳಿದ ಆದೇಶ

Published 12 ಮೇ 2024, 20:01 IST
Last Updated 12 ಮೇ 2024, 20:01 IST
ಅಕ್ಷರ ಗಾತ್ರ

ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವ ಮೂಲಕ ಸುಪ್ರೀಂ ಕೋರ್ಟ್ ಒಂದು ತಪ್ಪನ್ನು ಸರಿಪಡಿಸುವ ಕೆಲಸ ಮಾಡಿದೆ. ಜೊತೆಯಲ್ಲೇ, ಚುನಾವಣೆಯ ಅಭಿಯಾನಗಳಲ್ಲಿ ಭಾಗಿಯಾಗುವ ಅವರ ರಾಜಕೀಯ ಮತ್ತು ಪ್ರಜಾತಾಂತ್ರಿಕ ಹಕ್ಕನ್ನು ರಕ್ಷಿಸುವ ಕೆಲಸವನ್ನೂ ಮಾಡಿದೆ. ನ್ಯಾಯಾಲಯವು ಕೇಜ್ರಿವಾಲ್ ಅವರ ಬಂಧನದ ಹಿಂದಿನ ಕಾನೂನಿನ ಆಯಾಮಗಳನ್ನು ಹಾಗೂ ರಾಜಕೀಯ ಆಯಾಮಗಳನ್ನು ಪ್ರತ್ಯೇಕವಾಗಿ ಸಿದೆ. ಬಂಧನದ ಕಾನೂನು ಆಯಾಮಗಳ ಬಗ್ಗೆ ಕೋರ್ಟ್ ಯಾವುದೇ ತೀರ್ಮಾನ ಹೇಳಿಲ್ಲವಾದರೂ ತಮ್ಮ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವ ಅವರ ಹಕ್ಕನ್ನು ನಿರಾಕರಿಸಲು ಆಗುವುದಿಲ್ಲ ಎಂಬುದನ್ನು ಅದು ಸ್ಪಷ್ಟಪಡಿಸಿದೆ. ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಕೊನೆಗೊಳ್ಳುವ ದಿನವಾದ ಜೂನ್‌ 1ರವರೆಗೆ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ನೀಡುವ ಸಂದರ್ಭದಲ್ಲಿ ಒಂದಿಷ್ಟು ಷರತ್ತುಗಳನ್ನು ಕೂಡ ವಿಧಿಸಲಾಗಿದೆ. ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಕಚೇರಿಗೆ ಭೇಟಿ ನೀಡುವಂತಿಲ್ಲ, ದಿನನಿತ್ಯದ ಕೆಲಸಗಳ ವಿಚಾರದಲ್ಲಿ ಯಾವುದೇ ಕಡತಕ್ಕೆ ಸಹಿ ಹಾಕುವಂತಿಲ್ಲ. ಅಂದರೆ, ಇಲ್ಲಿ ಜಾಮೀನು ದೊರೆತಿರುವುದು ಎಎಪಿ ನಾಯಕ ಕೇಜ್ರಿವಾಲ್ ಅವರಿಗೇ ವಿನಾ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗಲ್ಲ ಎನ್ನಬಹುದು.

ಲೋಕಸಭಾ ಚುನಾವಣೆಯಲ್ಲಿ ಎಲ್ಲರಿಗೂ ನ್ಯಾಯ ಸಮ್ಮತವಾದ ಅವಕಾಶಗಳು ಸಿಗಬೇಕು ಎಂಬುದರ ಕಡೆ ಕೋರ್ಟ್‌ನ ಗಮನ ಇತ್ತು. ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡುವ ಮೂಲಕ ಕೋರ್ಟ್‌, ಅವರ ಬಂಧನ ಹಾಗೂ ಬಲವಂತವಾಗಿ ಅವರನ್ನು ಚುನಾವಣಾ ಕಣದಿಂದ ಹೊರಹಾಕಿದ್ದ ಕ್ರಮವು ಚುನಾವಣಾ ಕಣದ ಹದವನ್ನು ಕೆಡಿಸುತ್ತದೆ ಎಂಬುದನ್ನು ಗುರುತಿಸುವ ಕೆಲಸ ಮಾಡಿದೆ. ಅಷ್ಟರ ಮಟ್ಟಿಗೆ ಈ ತೀರ್ಮಾನವು ಕೇಜ್ರಿವಾಲ್ ಅವರ ಬಂಧನದ ಬಗ್ಗೆ, ಅದರಲ್ಲೂ ಮುಖ್ಯವಾಗಿ ಬಂಧಿಸಿದ ಸಂದರ್ಭದ ಬಗ್ಗೆ ಕೋರ್ಟ್‌ನ ಅಭಿಪ್ರಾಯ ಎನ್ನ ಬಹುದು. ಮತ ಚಲಾಯಿಸುವುದು ಹಾಗೂ ಚುನಾ ವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಮೂಲಭೂತ ಹಕ್ಕು ಅಲ್ಲದಿರುವ ಕಾರಣ, ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವುದು ರಾಜಕಾರಣಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿದಂತೆ ಆಗುತ್ತದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಮಂಡಿಸಿದ್ದ ವಾದವನ್ನು ಕೋರ್ಟ್ ಒಪ್ಪಿಲ್ಲ. ಹೆಚ್ಚು ಸಮಗ್ರವಾದ ಹಾಗೂ ಉದಾರವಾದಿಯಾದ ದೃಷ್ಟಿಕೋನವು ಸಮರ್ಥನೀಯ ಎಂದು ಕೋರ್ಟ್‌ ಹೇಳಿದೆ. ಏಕೆಂದರೆ, ಚುನಾವಣೆಯ ಕಾರಣದಿಂದಾಗಿ ಸೃಷ್ಟಿಯಾಗಿರುವ ಸಂದರ್ಭವು ಗಮನಾರ್ಹ ಎಂದು ಅದು ಹೇಳಿದೆ. ಕೇಜ್ರಿವಾಲ್ ಅವರು ಆರೋಪಗಳನ್ನು ಎದುರಿಸುತ್ತಿದ್ದರೂ, ಅವರು ಒಬ್ಬ ಮುಖ್ಯಮಂತ್ರಿ ಹಾಗೂ ಒಬ್ಬ ನಾಯಕ; ಅವರು ಮತ್ತೆ ಮತ್ತೆ ತಪ್ಪು ಮಾಡಿರುವ ವ್ಯಕ್ತಿ ಅಲ್ಲ ಎಂದು ಅದು ಹೇಳಿದೆ. 2022ರ ಆಗಸ್ಟ್‌ನಿಂದಲೂ ತನಿಖೆಯು ಬಾಕಿ ಇದೆ ಎಂಬುದನ್ನು ಕೂಡ ಕೋರ್ಟ್ ಉಲ್ಲೇಖಿಸಿದೆ.

ಚುನಾವಣೆಯಲ್ಲಿ ಭಾಗಿಯಾಗುವ ಹಕ್ಕನ್ನು ಕೋರ್ಟ್‌ ಗುರುತಿಸುವ ಕೆಲಸ ಮಾಡಿಲ್ಲದಿರಬಹುದು. ಆದರೆ ಅದು ಚುನಾವಣೆಯಲ್ಲಿ ಭಾಗಿಯಾಗುವುದರ ಮಹತ್ವವನ್ನು ಒತ್ತಿಹೇಳುವ ಕೆಲಸ ಮಾಡಿದೆ. ಕೇಜ್ರಿವಾಲ್ ಅವರು ತಮ್ಮ ಬಂಧನವನ್ನು ಪ್ರಶ್ನಿಸಿದ್ದಾರೆ. ಅದರ ಬಗ್ಗೆ ಕೋರ್ಟ್‌ ತನ್ನ ತೀರ್ಮಾನ ಹೇಳಬೇಕಿದೆ. ಈಗ ಅವರಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯವನ್ನು ಕಲ್ಪಿಸಬೇಕು ಎಂದು ಕೋರ್ಟ್ ತೀರ್ಮಾನ ನೀಡಿದೆ. ಪ್ರಜಾತಾಂತ್ರಿಕ ಹಕ್ಕುಗಳ ಬಗ್ಗೆ ವಾದಿಸಿದ್ದ ಇ.ಡಿ., ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದರೆ ಕ್ರಿಮಿನಲ್‌ ವ್ಯಕ್ತಿಗಳು ರಾಜಕೀಯಕ್ಕೆ ಸೇರುವುದನ್ನು ಉತ್ತೇಜಿಸುವ ಕೆಲಸ ಆಗುತ್ತದೆ ಎಂದು ಹೇಳಿತ್ತು. ಪ್ರಜಾತಾಂತ್ರಿಕ ಹಕ್ಕುಗಳ ಬಗ್ಗೆ, ರಾಜಕೀಯ ಮತ್ತು ಅದರ ಪ್ರಕ್ರಿಯೆಗಳ ಬಗ್ಗೆ ಚರ್ಚಿಸುವುದು ಇ.ಡಿ. ಕೆಲಸ ಅಲ್ಲ. ಇ.ಡಿ. ವಾದವನ್ನು ಕೋರ್ಟ್ ತಿರಸ್ಕರಿಸಿರುವುದು ಸರಿಯಾಗಿಯೇ ಇದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ಮಹತ್ವವನ್ನು, ಪ್ರಮುಖ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಭಾಗಿಯಾಗುವ ಹಕ್ಕು ನಿರಾಕರಿಸಿದರೆ ಅಂತಹ ಚುನಾವಣೆಯು ಮುಕ್ತವಾಗಿ, ನ್ಯಾಯಸಮ್ಮತವಾಗಿ ಇರುವುದಿಲ್ಲ ಎಂಬುದನ್ನು ಕೋರ್ಟ್ ಸರಿಯಾಗಿಯೇ ಗುರುತಿಸಿದೆ. ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿರುವುದು ಪೂರ್ವನಿದರ್ಶನ ಆಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಆದರೆ ಅದು ಬಹಳ ಮುಖ್ಯವಾದ ಪ್ರಜಾತಾಂತ್ರಿಕ ತತ್ವವನ್ನು ಮತ್ತೆ ಸ್ಪಷ್ಟಪಡಿಸುವ ಕೆಲಸ ಮಾಡಿದೆ. ವಿರೋಧ ಪಕ್ಷಗಳು ಇಲ್ಲದ ಅಥವಾ ವಿರೋಧ ಪಕ್ಷಗಳ ಬಲ ಕುಂದಿದ ಸಂದರ್ಭದ ಚುನಾವಣೆಯ ವಿರುದ್ಧದ ನಿರ್ಣಯ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT