ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅಪರಾಧ ಮತ್ತು ಶಿಕ್ಷೆ ಸುಧಾರಣೆಗೆ ಅವಕಾಶ ಇರಲಿ

Last Updated 7 ಡಿಸೆಂಬರ್ 2021, 19:33 IST
ಅಕ್ಷರ ಗಾತ್ರ

ಶಕ್ತಿ ಮಿಲ್ಸ್ ಆವರಣದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯವೊಂದು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ. ಇದು ಸ್ವಾಗತಾರ್ಹ ತೀರ್ಮಾನ. ಆದರೆ, ಈ ಪ್ರಕರಣದ ತೀರ್ಪಿನಲ್ಲಿ ಹೈಕೋರ್ಟ್‌ ಹೇಳಿರುವ ಕೆಲವು ಮಾತುಗಳ ಬಗ್ಗೆ ಮುಂದೆ ಪ್ರಶ್ನೆಗಳು ಮೂಡಬಹುದು. ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್‌ ಸಮೀಪದ ಶಕ್ತಿ ಮಿಲ್ಸ್‌ ಆವರಣದಲ್ಲಿ ಇಬ್ಬರು ಮಹಿಳೆಯರ ಮೇಲೆ ಈ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಘಟನೆ ನಡೆದದ್ದು 2013ರಲ್ಲಿ. ಈ ಅಪರಾಧಕ್ಕಾಗಿ ಇವರಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಇ) ಅಡಿಯಲ್ಲಿ ಇವರಿಗೆ ಶಿಕ್ಷೆ ವಿಧಿಸಲಾಗಿತ್ತು. ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರದಲ್ಲಿ ಐಪಿಸಿಗೆ ತಂದ ತಿದ್ದುಪಡಿಗಳ ಅಡಿಯಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿತ್ತು. ಆದರೆ, ಗಲ್ಲು ಶಿಕ್ಷೆಯನ್ನೇ ಕಡ್ಡಾಯವಾಗಿ ವಿಧಿಸಬೇಕು ಎಂದು ಈ ಸೆಕ್ಷನ್ ಹೇಳುವುದಿಲ್ಲ ಎಂದು ಹೈಕೋರ್ಟ್‌ ಸರಿಯಾಗಿಯೇ ಹೇಳಿದೆ. ಅಪರಾಧಿಗಳಿಗೆ ಮರಣದಂಡನೆಯನ್ನೇ ವಿಧಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುವ ಒತ್ತಾಯಕ್ಕೆ ನ್ಯಾಯಾಲಯಗಳು ಮಣಿಯಬೇಕಾಗಿಲ್ಲ ಎನ್ನುವ ಮಾತನ್ನೂ ಕೋರ್ಟ್‌ ಹೇಳಿದೆ. ಈ ಮಾತಿನ ಅರ್ಥ, ಮರಣದಂಡನೆಯು ಮಾಡಿದ ತಪ್ಪಿನ ತೀವ್ರತೆಗಿಂತ ಹೆಚ್ಚು ಎಂಬುದಾಗಿದೆ.

ಈ ಪ್ರಕರಣದ ಅಪರಾಧಿಗಳಿಗೆ ‘ಜೀವಿತಾವಧಿವರೆಗೆ ಕಠಿಣ ಜೈಲುವಾಸ ವಿಧಿಸಬೇಕು. ಇದರಲ್ಲಿ ವಿನಾಯಿತಿ ಇರಕೂಡದು. ಅವರಿಗೆ ಪೆರೋಲ್ ನೀಡುವಂತೆ ಇಲ್ಲ. ಆಗ ನೊಂದವರಿಗೆ ನ್ಯಾಯ ಸಿಕ್ಕಂತಾಗುತ್ತದೆ’ ಎಂದು ಹೈಕೋರ್ಟ್ ಹೇಳಿದೆ. ಆದರೆ, ಈ ತೀರ್ಪಿನಲ್ಲಿನ ಕೆಲವು ಮಾತುಗಳು ನ್ಯಾಯದಾನದ ವಿಚಾರವಾಗಿ ತಪ್ಪುಕಲ್ಪನೆಗಳನ್ನು ಆಧರಿಸಿ ಆಡಿರುವಂತೆ ಕಾಣಿಸುತ್ತಿವೆ. ಅಪರಾಧಿಗಳು ‘ಸುಧಾರಣೆ ಕಾಣುವ ಹಂತವನ್ನೂ ಮೀರಿದ್ದಾರೆ’, ಅಪರಾಧಿಗಳು ‘ಸಮಾಜದ ಜೊತೆ ಸೇರಿಕೊಳ್ಳಲು ಅರ್ಹರಲ್ಲ’ ಎಂದು ಹೈಕೋರ್ಟ್‌ ಹೇಳಿದೆ. ಮರಣ ದಂಡನೆಯನ್ನು ರದ್ದುಗೊಳಿಸಿದ್ದರೂ, ಈ ಮಾತುಗಳು ಸ್ವೀಕಾರಾರ್ಹ ಅಲ್ಲ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ನಮ್ಮ ಕಾನೂನು ವ್ಯವಸ್ಥೆಯು ದ್ವೇಷ ತೀರಿಸಿಕೊಳ್ಳುವಂತೆ ಇರಬೇಕಾಗಿಲ್ಲ. ನಮ್ಮಲ್ಲಿ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮರಣದಂಡನೆಗೆ ಅವಕಾಶ ಇದೆ ಎಂಬುದು ನಿಜ. ಆದರೆ, ಆದರ್ಶ ನ್ಯಾಯದಾನ ವ್ಯವಸ್ಥೆಯು ಅಪರಾಧಿಯ ಮನಃಪರಿವರ್ತನೆ ಕಡೆಗೆ ಗಮನ ನೀಡುವಂತೆ ಇರಬೇಕು. ಪ್ರತೀ ವ್ಯಕ್ತಿಗೆ ತನ್ನನ್ನು ತಾನು ಸುಧಾರಿಸಿಕೊಳ್ಳುವ ಸಾಮರ್ಥ್ಯ ಹಾಗೂ ಹಕ್ಕು ಇದೆ ಎಂಬ ನೆಲೆಯಲ್ಲಿ ನಮ್ಮ ನ್ಯಾಯಶಾಸ್ತ್ರವು ಕಾರ್ಯ ನಿರ್ವಹಿಸಬೇಕು. ಇಂಥದ್ದೊಂದು ಆಶಯವು ತೀರಾ ಆದರ್ಶಮಯವಾಗಿ ಕಂಡರೂ, ನೈತಿಕವಾಗಿ ಅದು ಸರಿಯಾದ ನಿಲುವು ಆಗುತ್ತದೆ. ನಮ್ಮಲ್ಲಿ ಕೆಲವರು ಜೈಲು ಶಿಕ್ಷೆಯ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅಪರಾಧ ಎಸಗಿದವರಿಗೆ ಜೈಲು ಶಿಕ್ಷೆ ವಿಧಿಸುವುದು ಆ ವ್ಯಕ್ತಿಯನ್ನು ಸಮಾಜದಿಂದ ದೂರ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಅಲ್ಲ. ಬದಲಿಗೆ, ತಪ್ಪು ಮಾಡಿದವರು ತನ್ನ ತಪ್ಪನ್ನು ಅರ್ಥ ಮಾಡಿಕೊಳ್ಳಬೇಕು, ಸಮಾಜದ ಜೊತೆ ಒಂದಾಗಿ ಜೀವಿಸುವುದರ ಮಹತ್ವವನ್ನು ಅರಿಯಬೇಕು ಎಂಬ ಉದ್ದೇಶದಿಂದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಪರಾಧ ಎಸಗಿದ ವ್ಯಕ್ತಿಗೆ ನೀಡುವಮರಣದಂಡನೆಯು ತನ್ನನ್ನು ತಾನು ಸುಧಾರಣೆಗೆ ಒಡ್ಡಿಕೊಳ್ಳುವ ಹಕ್ಕು ಆತನಿಗೆ ಇಲ್ಲ ಎಂದು ಹೇಳುತ್ತದೆ. ಅಲ್ಲದೆ, ಅಪರಾಧಿಗಳು ತಮ್ಮಲ್ಲಿ ತಂದುಕೊಳ್ಳಬಹುದಾದ ಯಾವುದೇ ಸುಧಾರಣೆಯು ಸಮಾಜಕ್ಕೆ ಅಪ್ರಸ್ತುತ ಎಂಬ ಅರ್ಥವನ್ನುಬಹಳ ದೀರ್ಘ ಅವಧಿಯ ಜೈಲುವಾಸದ ಶಿಕ್ಷೆಯು ಧ್ವನಿಸುತ್ತದೆ.

ಅತ್ಯಂತ ದೀರ್ಘ ಅವಧಿಯ ಜೈಲುವಾಸವು ನಿಜವಾದ ನ್ಯಾಯದಾನದ ಪರಿಕಲ್ಪನೆಗೆ ತಕ್ಕುದಾಗಿ ಇಲ್ಲ. ಆದರ್ಶ ಸ್ಥಿತಿಯಲ್ಲಿ, ಅಪರಾಧಿಗೆ ಶಿಕ್ಷೆಯನ್ನೂ ವಿಧಿಸಬೇಕು ಮತ್ತು ಆತನಿಗೆ ಸುಧಾರಣೆಗೆ ತನ್ನನ್ನು ಒಡ್ಡಿಕೊಳ್ಳಬೇಕಾದ ಅಗತ್ಯವನ್ನೂ ಮನಗಾಣಿಸಬೇಕು. ಅಪರಾಧಿಗೆ ನೀಡುವ ಶಿಕ್ಷೆಯು ತಪ್ಪಿಗೆ ಆತನನ್ನು ಉತ್ತರದಾಯಿ ಮಾಡುವುದಲ್ಲದೆ, ಅವನಿಗೆ ತಪ್ಪು ತಿದ್ದಿಕೊಳ್ಳುವ ಅವಕಾಶವನ್ನೂ ಕೊಡುತ್ತದೆ. ಅತ್ಯಂತ ಕಠಿಣವಾದ ಹಾಗೂ ಜೀವನಪೂರ್ತಿ ಜಾರಿಯಲ್ಲಿ ಇರುವ ಶಿಕ್ಷೆಗಳು ಉನ್ನತ ಮಟ್ಟದ ಸಮಾಜವೊಂದಕ್ಕೆ ಹೊಂದಿಕೆಯಾಗವು. 2011ರಲ್ಲಿ 77 ಜನರನ್ನು ಹತ್ಯೆ ಮಾಡಿದ, ನಾರ್ವೆ ದೇಶದ ಆ್ಯಂಡರ್ಸ್‌ ಬ್ರೀವಿಕ್ ಎಂಬ ವ್ಯಕ್ತಿಯು 21 ವರ್ಷಗಳ ಜೈಲುವಾಸವನ್ನು ಅನುಭವಿಸುತ್ತಿದ್ದಾನೆ. ಆ ದೇಶದಲ್ಲಿ ವಿಧಿಸುವ ಅತಿ ದೀರ್ಘ ಅವಧಿಯ ಶಿಕ್ಷೆ ಇದು. ಮರಣದಂಡನೆ ಹಾಗೂ ಅತ್ಯಂತ ದೀರ್ಘ ಅವಧಿಯ ಜೈಲುವಾಸದ ಶಿಕ್ಷೆಗಳು ಅಪರಾಧ ಕೃತ್ಯಗಳನ್ನು ಪೂರ್ಣವಾಗಿ ನಿಗ್ರಹಿಸುವುದೂ ಇಲ್ಲ. ಈ ಮಾತಿಗೆ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಆಧಾರಗಳು ಸಿಗುತ್ತವೆ. ಈ ಬಗೆಯ ಶಿಕ್ಷೆಗಳು ತಪ್ಪು. ಇವು ಶಿಕ್ಷೆಯು ಮಾನವೀಯವಾಗಿ ಇರಬೇಕು ಎಂಬ ಪರಿಕಲ್ಪನೆಗೆ ವಿರುದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT