ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲತಾಯಂದಿರ ಸಮೀಕ್ಷೆ ನಡೆಸಿ, ಹಕ್ಕುಗಳನ್ನು ರಕ್ಷಿಸಿ

Last Updated 11 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈಗಲೂ ಬಾಲ್ಯವಿವಾಹ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ. ಅದರಲ್ಲೂ ಚಾಮರಾಜನಗರ, ಬಾಗಲಕೋಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚು. ಬಾಲ್ಯವಿವಾಹವನ್ನು ತಡೆಯಲು ಸರ್ಕಾರ ಕಾನೂನುಗಳನ್ನು ರೂಪಿಸಿ, ಅಗತ್ಯ ಬಿದ್ದಾಗ ಕಾನೂನಿಗೆ ತಿದ್ದುಪಡಿಗಳನ್ನು ತಂದಿದ್ದರೂ ಈ ಪಿಡುಗನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಚೈಲ್ಡ್ ರೈಟ್‍ ಟ್ರಸ್ಟ್‌ನ ಪ್ರಯತ್ನದಿಂದಾಗಿ, ಸರ್ಕಾರದ ಹಿರಿಯ ಅಧಿಕಾರಿಗಳ ಮುಂದೆ ಬಾಲ ತಾಯಂದಿರು ತಮ್ಮ ಅಳಲನ್ನು ತೋಡಿಕೊಳ್ಳಲು ಇತ್ತೀಚೆಗೆ ಒಂದು ಅವಕಾಶ ಸಿಕ್ಕಿದೆ. 'ಮದುವೆಯಾಗಿ ಗಂಡನ ಮನೆಯಲ್ಲಿದ್ದೇವೆ. ನಮ್ಮನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ನಾವು ಮನೆಯಲ್ಲಿ ಕಾಯಂ ಸೊಸೆಯಂದಿರಾಗಿ ದುಡಿಯುತ್ತಿದ್ದೇವೆ. ನಮಗೆ ಆರ್ಥಿಕ ಸ್ವಾವಲಂಬನೆ ಇಲ್ಲ. ನಮ್ಮ ಬಾಲ್ಯ ಕಸಿದುಕೊಳ್ಳಲಾಗಿದೆ. ನಮ್ಮಲ್ಲಿ ಕೆಲವರಿಗೆ ಲೈಂಗಿಕ ಸೋಂಕೂ ಇದೆ' ಎಂದು ಈ ಬಾಲತಾಯಂದಿರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿರುವುದು ಈ ಸಾಮಾಜಿಕ ಪಿಡುಗಿನ ಭೀಕರತೆಯನ್ನು ಎತ್ತಿತೋರಿಸಿದೆ. ಆ ಸಭೆಯಲ್ಲಿ ಬರೀ ಆರು ಮಂದಿ ಬಾಲತಾಯಂದಿರು ಹಾಜರಿದ್ದರೂ, ರಾಜ್ಯದಾದ್ಯಂತ ಬಾಲತಾಯಂದಿರ ಸಂಖ್ಯೆ ಸುಮಾರು 5 ಲಕ್ಷಕ್ಕೂ ಹೆಚ್ಚಿದೆ ಎನ್ನುವುದು ಒಂದು ಅಂದಾಜು. ಚೈಲ್ಡ್ ರೈಟ್‍ ಟ್ರಸ್ಟ್ ಈ ಮೂರು ವರ್ಷಗಳಲ್ಲಿ ಕೇವಲ ಐದು ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿಯೇ 3,000 ಬಾಲ್ಯವಿವಾಹಗಳ ಲೆಕ್ಕ ಸಿಕ್ಕಿದೆ. ಸರ್ಕಾರವೇ ಮುಂದೆ ನಿಂತು ಬಾಲತಾಯಂದಿರ ಸಮೀಕ್ಷೆ ನಡೆಸಬೇಕಾದ ತುರ್ತು ಅಗತ್ಯವಿದೆ ಎನ್ನುವುದನ್ನು ಇದು ಒತ್ತಿ ಹೇಳುತ್ತಿದೆ. ಎಳವೆಯಲ್ಲೇ ಮಕ್ಕಳನ್ನು ಹೆರುವ ಈ ತಾಯಂದಿರ ಆರೋಗ್ಯ ಮತ್ತು ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರಿನ ಕೆಲವು ಜಿಲ್ಲೆಗಳಲ್ಲಿ ಈಗಲೂ ಹೆಣ್ಣುಮಕ್ಕಳು ಋತುಮತಿಯರಾಗುವುದಕ್ಕೆ ಮೊದಲೇ ಮದುವೆ ಮಾಡಿಕೊಡಲಾಗುತ್ತದೆ. 18–19ರ ಹರೆಯದಲ್ಲಿ 2-3 ಮಕ್ಕಳ ಸಂಸಾರ ಹೊಂದುವ ಈ ಬಾಲತಾಯಂದಿರಿಗೆ ತಮ್ಮ ಯಾವ ಹಕ್ಕುಗಳ ಅರಿವೂ ಇರುವುದಿಲ್ಲ. ಅಪೌಷ್ಟಿಕತೆ, ಲೈಂಗಿಕ ಸೋಂಕು ಈ ಎಳೆಯ ಜೀವಗಳನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ವೋಟ್‍ಬ್ಯಾಂಕ್‍ ರಾಜಕೀಯದ ಅಂಗವಾಗಿ ಮುಖಂಡರು ನಡೆಸುವ ಸಾಮೂಹಿಕ ವಿವಾಹಗಳಲ್ಲೂ ಬಾಲ್ಯವಿವಾಹಗಳು ನಡೆದಿರುವುದು ವರದಿಯಾಗಿದೆ. ಈ ಸಮಾರಂಭಗಳಲ್ಲಿ ಕಾನೂನಿನ ತೊಡಕನ್ನು ಪರಿಹರಿಸುವುದಕ್ಕಾಗಿ ಸರ್ಕಾರಿ ವೈದ್ಯರೇ ಒತ್ತಡಕ್ಕೆ ಒಳಗಾಗಿ ಹೆಣ್ಣುಮಕ್ಕಳ ವಯಸ್ಸನ್ನು ಹೆಚ್ಚು ತೋರಿಸುವುದೂ ನಡೆದಿದೆ. ನೈಜ ವಯಸ್ಸನ್ನು ತೋರಿಸುವ ಜನನ ಪ್ರಮಾಣ ಪತ್ರ ಅಥವಾ ಶಾಲಾ ದಾಖಲೆಗಳ ಬದಲಾಗಿ ಹುಟ್ಟಿದ ದಿನಾಂಕವನ್ನು ತಿದ್ದಿದ ಪ್ರಮಾಣಪತ್ರಗಳನ್ನು ಬಳಸುವುದು ಯಥೇಚ್ಛವಾಗಿ ಕಂಡುಬರುತ್ತಿದೆ. ಹೀಗೆ ಬಾಲ್ಯವಿವಾಹಕ್ಕೆ ಒಳಗಾದ ಹೆಣ್ಣುಮಕ್ಕಳು ಗರ್ಭಿಣಿಯರಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಹೋದರೆ, ವೈದ್ಯರು ಚಿಕಿತ್ಸೆ ನಿರಾಕರಿಸುವ ಕಾರಣಕ್ಕೆ ವಯಸ್ಸನ್ನು ತಪ್ಪಾಗಿ ನಮೂದಿಸಲಾಗುತ್ತದೆ. ಈ ತಾಯಂದಿರು ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಕಾರಣಕ್ಕಾಗಿಯೂ ಅವರ ವಯಸ್ಸನ್ನು ಹೆಚ್ಚು ತೋರಿಸಲು ಕುಟುಂಬದ ಸದಸ್ಯರೇ ಪ್ರಯತ್ನಿಸುತ್ತಾರೆ. ಇದೊಂದು ವಿಷವರ್ತುಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಿ ನಿಖರ ಸಮೀಕ್ಷೆಯೊಂದನ್ನು ನಡೆಸಬೇಕಾದ ಅಗತ್ಯವಿದೆ. ನಿಖರ ಅಂಕಿ ಅಂಶಗಳು ಲಭ್ಯವಾದರೆ ಈ ಬಾಲತಾಯಂದಿರ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಸೂಕ್ತ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಗ್ರಾಮಮಟ್ಟದಲ್ಲಿ ಬಾಲ್ಯವಿವಾಹಗಳನ್ನು ತಡೆಯಲು ಅಂಗನವಾಡಿ ಕಾರ್ಯಕರ್ತರು, ಪಿ.ಡಿ.ಒಗಳು, ಶಾಲಾ ಮುಖ್ಯೋಪಾಧ್ಯಾಯರು, ತಾಲ್ಲೂಕು ವೈದ್ಯಾಧಿಕಾರಿಗಳನ್ನು ಬಾಲ್ಯವಿವಾಹ ತಡೆ ಅಧಿಕಾರಿಗಳನ್ನಾಗಿ ನೇಮಿಸಿದ್ದರೂ ಅವರು ಈ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿಲ್ಲ. ಅವರಿಗೆ ಬೇರೆ ಜವಾಬ್ದಾರಿಗಳೂ ಇರುವುದು ಇದಕ್ಕೆ ಕಾರಣ. ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಹಲವು ಸಲ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು ಬಾಲ್ಯವಿವಾಹಗಳನ್ನು ತಡೆದಿದ್ದರೂ ಕೆಲವು ದಿನಗಳ ಬಳಿಕ ಗುಟ್ಟಾಗಿ ಅಂತಹ ಮದುವೆಗಳು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆಯುವುದಿದೆ. ತಳಮಟ್ಟದ ಅಧಿಕಾರಿಗಳಿಗೆ ಈ ವಿಷಯದಲ್ಲಿ ಚುರುಕು ಮುಟ್ಟಿಸುವ ಕೆಲಸ ಇಲಾಖೆಯ ಉನ್ನತ ಅಧಿಕಾರಿಗಳಿಂದ ನಡೆಯಬೇಕಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಾಲತಾಯಂದಿರನ್ನು ಗುರುತಿಸಿ ಅವರ ಆರೋಗ್ಯ ಮತ್ತು ಹಕ್ಕುಗಳ ರಕ್ಷಣೆಗೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT