ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಾರ್ಗಸೂಚಿ ದರ ಪರಿಷ್ಕರಣೆ: ವಿಳಂಬವಾದರೂ ಸರಿಯಾದ ತೀರ್ಮಾನ

Published 25 ಸೆಪ್ಟೆಂಬರ್ 2023, 0:30 IST
Last Updated 25 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಮಾರ್ಗಸೂಚಿ ದರ ಪರಿಷ್ಕರಣೆಯಿಂದ ರಾಜ್ಯದ ವರಮಾನ ಹೆಚ್ಚಲಿದೆ. ರಿಯಲ್ ಎಸ್ಟೇಟ್ ವಲಯದ ಹಿತವೂ ಇದರಲ್ಲಿ ಅಡಗಿದೆ

ಸ್ಥಿರಾಸ್ತಿಗಳ ಮೇಲಿನ ಮಾರ್ಗಸೂಚಿ ದರವನ್ನು ಶೇಕಡ 25ರಿಂದ ಶೇಕಡ 30ರವರೆಗೆ ಹೆಚ್ಚು ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನವು ಹೆಚ್ಚುವರಿ ವರಮಾನ ಸಂಗ್ರಹಕ್ಕೆ ನೆರವಾಗಲಿದೆ. ಅಲ್ಲದೆ, ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಕಪ್ಪುಹಣದ ಚಲಾವಣೆಯನ್ನು ಒಂದು ಹಂತದವರೆಗೆ ನಿಯಂತ್ರಿಸುವಲ್ಲಿಯೂ ನೆರವಾಗಬಹುದು. ಮಾರ್ಗಸೂಚಿ ದರ ಅಂದರೆ ನಿರ್ದಿಷ್ಟ ಪ್ರದೇಶದಲ್ಲಿ ಸ್ಥಿರಾಸ್ತಿಯ ಮಾರಾಟಕ್ಕೆ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ದರ.

ಈಗಿನ ಪರಿಷ್ಕರಣೆಯ ಪರಿಣಾಮವಾಗಿ ಸರ್ಕಾರವು ಮುದ್ರಾಂಕ ಶುಲ್ಕದ ಮೂಲಕ ಹೆಚ್ಚುವರಿಯಾಗಿ ₹ 2,000 ಕೋಟಿ ವರಮಾನ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಕಾನೂನಿನ ಪ್ರಕಾರ, ಮಾರ್ಗಸೂಚಿ ದರವನ್ನು ಪ್ರತಿವರ್ಷವೂ ಪರಿಷ್ಕರಣೆ ಮಾಡಬೇಕು. ಆದರೆ, 2019ರ ನಂತರದಲ್ಲಿ, ಅಂದರೆ ಸರಿಸುಮಾರು ನಾಲ್ಕೂವರೆ ವರ್ಷಗಳ ಕಾಲ, ಮಾರ್ಗಸೂಚಿ ದರದ ಪರಿಷ್ಕರಣೆ ಆಗಿರಲಿಲ್ಲ. ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡದೇ ಇದ್ದಿದ್ದಕ್ಕೆ ಕೋವಿಡ್‌ ಸಾಂಕ್ರಾಮಿಕದ ಕಾರಣ ನೀಡಲಾಗಿತ್ತು.

ಇದು ಸರಿಯೋ ತಪ್ಪೋ ಎಂಬುದು ಬೇರೆ ವಿಚಾರ. ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ 2023–24ನೇ ಹಣಕಾಸು ವರ್ಷದಲ್ಲಿ ₹ 25 ಸಾವಿರ ಕೋಟಿ ವರಮಾನ ಸಂಗ್ರಹಿಸುವ ಗುರಿಯನ್ನು ಹಣಕಾಸು ಖಾತೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ನಿಗದಿ ಮಾಡಿದ್ದಾರೆ. ಮಾರ್ಗಸೂಚಿ ದರ ನಿಗದಿಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧರಿಸಿದ ವೈಜ್ಞಾನಿಕ ಹಾಗೂ ತಾರ್ಕಿಕ ವ್ಯವಸ್ಥೆಯೊಂದನ್ನು ರೂಪಿಸುವ ಭರವಸೆಯನ್ನು ಕೂಡ ಮುಖ್ಯಮಂತ್ರಿ ನೀಡಿದ್ದರು. ಹೊಸ ದರವು ರಾಜ್ಯದಾದ್ಯಂತ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.

ವಾಸ್ತವದಲ್ಲಿ, ಇಂದು ಸ್ಥಿರಾಸ್ತಿಯು ಮಾರಾಟವಾಗುವ ನೈಜ ಮಾರುಕಟ್ಟೆ ಬೆಲೆಗೂ ಮಾರ್ಗಸೂಚಿ ದರಕ್ಕೂ ಬಹಳ ವ್ಯತ್ಯಾಸ ಇದೆ. ಮುದ್ರಾಂಕ ಶುಲ್ಕ ಹಾಗೂ ಬಂಡವಾಳ ವೃದ್ಧಿ ತೆರಿಗೆಯನ್ನು ಪಾವತಿಸುವುದು ಮಾರ್ಗಸೂಚಿ ದರವನ್ನು ಆಧರಿಸಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿರುವ ಪ್ರಕಾರ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆಯು ಮಾರ್ಗಸೂಚಿ ಬೆಲೆಗಿಂತ ಐನೂರು ಪಟ್ಟು ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಯು ಎಕರೆಗೆ ₹ 5 ಲಕ್ಷದಿಂದ ₹ 10 ಲಕ್ಷದವರೆಗೆ ಇದೆ. ಆದರೆ ಮಾರುಕಟ್ಟೆ ಬೆಲೆಯು ಎಕರೆಗೆ ₹ 10 ಕೋಟಿಗೂ ಹೆಚ್ಚಾಗಿದೆ. ಇಂತಹ ಕಡೆಗಳಲ್ಲಿ ಮಾರ್ಗಸೂಚಿ ದರವನ್ನು ಶೇಕಡ 50ರವರೆಗೆ ಹೆಚ್ಚಿಸಲಾಗುತ್ತಿದೆ. ಮಾರ್ಗಸೂಚಿ ದರ ಹಾಗೂ ಮಾರುಕಟ್ಟೆ ಬೆಲೆಯ ಮಧ್ಯದ ಮೊತ್ತವನ್ನು ಸಾಮಾನ್ಯವಾಗಿ ನಗದು ರೂಪದಲ್ಲಿ ಪಾವತಿ ಮಾಡಲಾಗುತ್ತಿದೆ.

ಇದು ಬಂಡವಾಳ ವೃದ್ಧಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕದ ವಂಚನೆಗೆ ಕಾರಣವಾಗುತ್ತಿದೆ. ಸ್ಥಿರಾಸ್ತಿಗಳ ಮಾರಾಟ ನಡೆದಾಗ ಅದರ ಮಾರಾಟ ಬೆಲೆಯನ್ನು ಕಡಿಮೆ ಮಟ್ಟದಲ್ಲಿ ತೋರಿಸುತ್ತಿರುವುದರ ಪರಿಣಾಮವಾಗಿ ಕಪ್ಪುಹಣದ ಸೃಷ್ಟಿಯಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆಯು ಮತ್ತೆ ಮತ್ತೆ ಹೇಳಿದೆ. ಈ ವಹಿವಾಟುಗಳಲ್ಲಿ ಆಸ್ತಿ ಖರೀದಿ ಮಾಡುವವರು ಕಪ್ಪುಹಣವನ್ನು ಸ್ಥಿರಾಸ್ತಿಗಳಲ್ಲಿ ತೊಡಗಿಸುತ್ತಿದ್ದಾರೆ. ಅಂದರೆ, ಆಸ್ತಿ ಮಾರಾಟ ಮಾಡುವವರು ಹಣಕಾಸು ವ್ಯವಸ್ಥೆಯ ಲೆಕ್ಕಕ್ಕೇ ಸಿಗದ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.

ಮಾರ್ಗಸೂಚಿ ದರವನ್ನು ಹೆಚ್ಚು ಮಾಡಿರುವ ಕಾರಣ ಮುದ್ರಾಂಕ ಶುಲ್ಕವೂ ಹೆಚ್ಚಾಗುತ್ತದೆ. ಹೀಗಾಗಿ ಸ್ಥಿರಾಸ್ತಿಗಳ ಬೆಲೆ ತುಸು ಹೆಚ್ಚಳವಾಗುವುದು ಸಹಜ. ಹೀಗಿದ್ದರೂ, ಮಾರ್ಗಸೂಚಿ ದರವನ್ನು ಪರಿಷ್ಕರಿಸಿರುವುದರಲ್ಲಿ ರಾಜ್ಯದ, ರಿಯಲ್ ಎಸ್ಟೇಟ್ ವಲಯದ ಮತ್ತು ಆಸ್ತಿ ಖರೀದಿದಾರರ ಹಿತ ಇದೆ. ಏಕೆಂದರೆ, ದರ ಪರಿಷ್ಕರಣೆಯ ಕಾರಣದಿಂದಾಗಿ ಕಪ್ಪುಹಣದ ಚಲಾವಣೆಯ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗುತ್ತದೆ, ಸರ್ಕಾರದ ವರಮಾನ ಹೆಚ್ಚಾಗುತ್ತದೆ ಹಾಗೂ ವಹಿವಾಟುಗಳಲ್ಲಿ ಒಂದಿಷ್ಟು ಪಾರದರ್ಶಕತೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT