ಬದುಕು ಮತ್ತು ಕೆಲಸದ ನಡುವೆ ಸಮತೋಲನ ಕಳೆದುಹೋದರೆ ಉದ್ಯೋಗಿಗೂ ನಷ್ಟ, ಕಂಪನಿಗೂ ನಷ್ಟ

ಲಾರ್ಸನ್ ಆ್ಯಂಡ್ ಟೂಬ್ರೊ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸುಬ್ರಹ್ಮಣ್ಯನ್ ಅವರು ಕೆಲಸಗಾರರ ಉತ್ಪಾದಕತೆ ಹೆಚ್ಚಳವಾಗಬೇಕು ಎಂಬ ಕುರಿತು ನೀಡಿದ ಹೇಳಿಕೆಯೊಂದು ಭಾರಿ ಚರ್ಚೆಗೆ ಕಾರಣವಾಗಿದೆ. ಅವರ ಈ ಹೇಳಿಕೆಗೆ ಕೆಲವರಿಂದ ಬೆಂಬವೂ ವ್ಯಕ್ತವಾಗಿದೆ. ಈ ಎಲ್ಲವನ್ನೂ ಗಮನಿಸಿದರೆ, ನಮ್ಮ ದೇಶದಲ್ಲಿ ಜನರ ಕೆಲಸ ಮತ್ತು ನಿತ್ಯದ ಬದುಕಿನ ವಾಸ್ತವ ಏನಿದೆ ಎಂಬುದರ ಅರಿವು ಉದ್ಯಮ ರಂಗದ ನಾಯಕರಿಗೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಹೇಳಿಕೆಯು ಅಸಂಗತವಾಗಿದೆ ಎಂಬ ಕಾರಣಕ್ಕೆ ಮಾತ್ರವಲ್ಲ, ಅದರ ಒರಟುತನದಿಂದಾಗಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಸ್ತುವಾಗಿದೆ.

ಉದ್ಯೋಗಿಗಳು ವಾರಕ್ಕೆ 90 ತಾಸು ಕೆಲಸ ಮಾಡಬೇಕು, ವಾರಾಂತ್ಯಗಳಲ್ಲಿಯೂ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ. ಜೊತೆಗೆ ಕೀಳು ಅಭಿರುಚಿಯ ವಾಕ್ಯವೊಂದನ್ನೂ ಸೇರಿಸಿದ್ದರು. ‘ಎಷ್ಟು ಹೊತ್ತು ಹೆಂಡತಿಯ ಮುಖವನ್ನೇ ನೋಡುತ್ತಾ ಕುಳಿತಿರುತ್ತೀರಿ, ಹೆಂಡತಿ ನಿಮ್ಮ ಮುಖವನ್ನು ಎಷ್ಟು ಹೊತ್ತು ನೋಡುತ್ತಾ ಕುಳಿತಿರಬೇಕು’ ಎಂದು ಅವರು ಹೇಳಿದ್ದರು. ಈ ಹೇಳಿಕೆಯು ಕುಟುಂಬಗಳಲ್ಲಿನ ಮಾನವ ಸಂಬಂಧದ ಕುರಿತು ಸಂವೇದನೆರಹಿತ ಮತ್ತು ಅಹಂಕಾರದ ಅಭಿವ್ಯಕ್ತಿಯಾಗಿದೆ. ತಮಾಷೆ ಎಂದು ಪರಿಗಣಿಸಿದರೂ ಇದು ಕೆಟ್ಟದಾಗಿಯೇ ಕಾಣಿಸುತ್ತದೆ. ಜನಸಾಮಾನ್ಯರ ಕುರಿತು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರ ಕೀಳು ಅಭಿಪ್ರಾಯ ಇದು ಎಂದು ಕೆಲವರು ಪರಿಗಣಿಸ ಬಹುದು.

ಸುಬ್ರಹ್ಮಣ್ಯನ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವು ಕೆಲಸದ ಅವಧಿಗೆ ಸಂಬಂಧಿಸಿದ ಅಂಕಿಅಂಶ ಮತ್ತು ವಾಸ್ತವಕ್ಕೆ ವಿರುದ್ಧವಾಗಿದೆ. ಜಗತ್ತಿನ ಬೇರೆಡೆಗೆ ಹೋಲಿಸಿದರೆ ಭಾರತವೂ ಒಳಗೊಂಡಂತೆ ಏಷ್ಯಾದ ಉದ್ಯೋಗಿಗಳು ಹೆಚ್ಚು ಹೊತ್ತು ಕೆಲಸದ ಸ್ಥಳದಲ್ಲಿ ಇರುತ್ತಾರೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಉದ್ಯೋಗಿಗಳು ನಿಗದಿಗಿಂತ ಹೆಚ್ಚು ಕೆಲಸ ಮಾಡುವ ದೇಶಗಳಲ್ಲಿ ಭಾರತವು 13ನೇ ಸ್ಥಾನದಲ್ಲಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್ಒ) ವರದಿ ಹೇಳಿದೆ. ಕೆಲಸದ ಅವಧಿಯು ಸುದೀರ್ಘವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ ಎಂದು ಈ ವರದಿ ಹೇಳಿದೆ. ಉದ್ಯೋಗಿಗಳಿಂದ ಇನ್ನೂ ಹೆಚ್ಚು ಹೊತ್ತು ಕೆಲಸ ಮಾಡಿಸಬೇಕು ಎಂದು ದೇಶದ ಉದ್ಯಮ ರಂಗದ ನಾಯಕರು ಭಾವಿಸಿದರೆ, ಕೆಲಸಗಾರರ ಕುರಿತು ಅವರು ಹೊಂದಿರುವ ಗಾಢ ನಿರ್ಲಕ್ಷ್ಯವನ್ನು ಮತ್ತು ಸಹಾನುಭೂತಿಯ ಕೊರತೆಯನ್ನು ಅದು ತೋರಿಸುತ್ತದೆ.

ಉತ್ಪಾದಕತೆ ಎಂಬುದು ಎಷ್ಟು ಹೊತ್ತು ಕೆಲಸ ಮಾಡಿದ್ದಾರೆ ಎಂಬುದನ್ನು ಅವಲಂಬಿಸಿರಬೇಕಾಗಿಲ್ಲ. ಫಲಿತಾಂಶ ಏನು ಎಂಬುದೇ ಉತ್ಪಾದಕತೆಯನ್ನು ಅಳೆಯುವ ಮಾನದಂಡ. ಉದ್ಯೋಗಿಗಳು ವಿಶ್ರಾಂತಿ ಪಡೆಯುವ ಮತ್ತು ಮನೆಯಲ್ಲಿ ಇರುವ ಅವಧಿಯೂ ಉತ್ಪಾದಕತೆಗೆ ಮುಖ್ಯವಾಗುತ್ತದೆ. ಮನೆಯಲ್ಲಿನ ಮಕ್ಕಳ ಆರೈಕೆ, ಕೆಲಸದ ಸ್ಥಳದಿಂದ ಹೊರಗೆ ಅವರು ಕಳೆಯುವ ಸಮಯ ಎಲ್ಲವೂ ಇದರಲ್ಲಿ ಒಳಗೊಳ್ಳುತ್ತವೆ. ಬದುಕು ಮತ್ತು ಕೆಲಸದ ನಡುವೆ ಸಮತೋಲನ ಇರಬೇಕು. ಲಾರ್ಸನ್ನಿಂದ ಟೂಬ್ರೊವನ್ನು ಹೇಗೆ ಪ್ರತ್ಯೇಕಿಸುವುದು ಸಾಧ್ಯವಿಲ್ಲವೋ ಇವುಗಳನ್ನೂ ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಈ ಸಮತೋಲನವು ಕಳೆದುಹೋದರೆ ಉದ್ಯೋಗಿಗೂ ಕಂಪನಿಗೂ ನಷ್ಟ ಉಂಟಾಗುತ್ತದೆ.

ಭಾರತದ ಉದ್ಯೋಗಿಗಳಿಗೆ ಅಗತ್ಯ ಇರುವ ಮತ್ತು ಅವರು ಅರ್ಹರೂ ಆಗಿರುವ ಸಾಮಾಜಿಕ ಸುರಕ್ಷೆ ಅಥವಾ ಕಲ್ಯಾಣ ಕಾರ್ಯಕ್ರಮಗಳ ಬೆಂಬಲ ಇಲ್ಲ. ಮಹಿಳಾ ಉದ್ಯೋಗಿಗಳ ಪರಿಸ್ಥಿತಿ ಇನ್ನೂ ಚಿಂತಾಜನಕ. ಶೋಷಣೆ ವ್ಯಾಪಕವಾಗಿದೆ; ಕೆಲಸದ ಪರಿಸ್ಥಿತಿಯು ಅನುಕೂಲಕರ ಅಥವಾ ಆರೋಗ್ಯಕರವಾಗಿ ಇಲ್ಲ. ಸುದೀರ್ಘ ಹೋರಾಟದ ಬಳಿಕವೇ ಕೆಲಸಕ್ಕೆ ಸಂಬಂಧಿಸಿದ ನಿಯಮಗಳು ರೂಪುಗೊಂಡವು. ಈ ನಿಯಮಗಳಿಗೆ ಕಾನೂನಿನ ಮಾನ್ಯತೆ ಇದೆ ಮತ್ತು ಅವುಗಳನ್ನು ಸಾಮಾನ್ಯ ಹಕ್ಕುಗಳು ಎಂದೇ ಪರಿಗಣಿಸ ಲಾಗುತ್ತಿದೆ. ಈ ನಿಯಮಗಳನ್ನು ಪ್ರಶ್ನಿಸುವುದು ಪ್ರತಿಗಾಮಿ ಮನಃಸ್ಥಿತಿ.

ಸಾಮಾಜಿಕ ದಮನಕಾರಿ ನಿಲುವು ಎಂದೇ ಇದನ್ನು ಭಾವಿಸಬೇಕಾಗುತ್ತದೆ. ಜಗತ್ತಿನ ಅತ್ಯುತ್ತಮ ಉದ್ಯೋಗದಾತ ಸಂಸ್ಥೆಗಳಲ್ಲಿ ಲಾರ್ಸನ್ ಆ್ಯಂಡ್ ಟೂಬ್ರೊ ಕೂಡ ಒಂದು ಎಂದು ಪರಿಗಣಿಸಲಾಗುತ್ತಿದೆ. ಭಾರತದಲ್ಲಿಯೂ ಈವರೆಗೆ ಇಂತಹ ಭಾವನೆಯೇ ಇತ್ತು. ಆದರೆ, ಸಂಸ್ಥೆಯ ಅಧ್ಯಕ್ಷರು ಈಗ ಆಡಿರುವ ಮಾತು ಈ ಗೌರವಕ್ಕೆ ಹೊಂದುವಂತೆ ಇಲ್ಲ. ವಿರಾಮದ ಮಹತ್ವವನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಅವರು ಮುನ್ನಡೆಸುತ್ತಿರುವ ಕಂಪನಿಯು ಪ್ರತಿಪಾದಿಸಿಕೊಂಡು ಬಂದಿರುವ ಮೌಲ್ಯಗಳನ್ನೂ ಅರಿತುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.