ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ರಾಜಕೀಯ ಬೆಳವಣಿಗೆಯು ರಾಜ್ಯದ ಅಧಿಕಾರದ ಸಮೀಕರಣದಲ್ಲಿ ಮಾತ್ರ ಬದಲಾವಣೆ ಉಂಟು ಮಾಡಿಲ್ಲ, ರಾಜ್ಯದ ಆಚೆಗಿನ ರಾಜಕೀಯದ ಮೇಲೆಯೂ ಅದು ಪರಿಣಾಮ ಬೀರಲಿದೆ.
ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಮತ್ತು ಎನ್‌ಸಿಪಿಯ ಎಂಟು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದಾಗಿ ಏಕನಾಥ ಶಿಂದೆ ನೇತೃತ್ವದ ಬಿಜೆಪಿ–ಶಿವಸೇನಾ ಮೈತ್ರಿಕೂಟದ ಸರ್ಕಾರ ಇನ್ನಷ್ಟು ಗಟ್ಟಿಯಾಗಿದೆ. ಎನ್‌ಸಿಪಿ ವಿಭಜನೆಯಾಗಿದ್ದರಿಂದಾಗಿ ಶರದ್ ಪವಾರ್ ನೇತೃತ್ವದ ಪಕ್ಷಕ್ಕೆ ಭಾರಿ ಹೊಡೆತ ಬಿದ್ದಿದೆ.
ಅಜಿತ್ ಪವಾರ್ ಅವರು ಪಕ್ಷವನ್ನು ಇಬ್ಭಾಗ ಮಾಡಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಸೇರಬೇಕು ಎಂಬ ಕಾತರ ಅವರಲ್ಲಿ ಹಿಂದಿನಿಂದಲೂ ಇತ್ತು. 2019ರಲ್ಲಿಯೇ ಇಂತಹದೊಂದು ಪ್ರಯತ್ನವನ್ನು ಅವರು ಮಾಡಿದ್ದರು. ಆಗ ರಚನೆಯಾಗಿದ್ದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅವರು ಉಪಮುಖ್ಯಮಂತ್ರಿಆಗಿದ್ದರು. ಆದರೆ ಪಕ್ಷವನ್ನು ಇಬ್ಭಾಗ ಮಾಡಲು ಅಜಿತ್ ಪವಾರ್ ಅವರಿಗೆ ಸಾಧ್ಯವಾಗದ ಕಾರಣ ಆ ಸರ್ಕಾರ ಉರುಳಿತ್ತು. ಅದಾದ ಬಳಿಕವೂ ಅವರ ಒಲವು ಆ ಕಡೆಗೇ ಇತ್ತು. ಜಾರಿ ನಿರ್ದೇಶನಾಲಯದಲ್ಲಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕೂಡ ಈ ಒಲವನ್ನು ನಿರ್ಧರಿಸುವಲ್ಲಿ ಪಾತ್ರ ವಹಿಸಿರಬಹುದು. ಅವರ ಜೊತೆಗೆ ಸಚಿವರಾಗಿ ಸೇರ್ಪಡೆ ಆದವರ ವಿಚಾರದಲ್ಲಿಯೂ ಇದು ನಿಜ. ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವವರು ಈಗ ಶುದ್ಧಹಸ್ತರಾಗಿ ಹೊರಹೊಮ್ಮಲಿದ್ದಾರೆ.
ಶಿಂದೆ–ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರವು ತನ್ನ ಬುಡವನ್ನು ಗಟ್ಟಿಗೊಳಿಸಿಕೊಂಡಿದೆ.
ಶಿವಸೇನಾದ 16 ಶಾಸಕರ ಮೇಲೆ ಅನರ್ಹತೆಯ ತೂಗುಗತ್ತಿ ಈಗಲೂ ಇರುವುದರಿಂದ ಇಂತಹ ಬೆಂಬಲದ ಅಗತ್ಯವೂ ಮೈತ್ರಿಕೂಟಕ್ಕೆ ಇತ್ತು. ಎನ್‌ಸಿಪಿಯನ್ನು ಒಡೆದು ಬಂದಿರುವ ಶಾಸಕರಿಗೂ ಅನರ್ಹತೆಯ ಭೀತಿ ಇದೆ. ಆದರೆ, ಅದಕ್ಕೆ ಇನ್ನೂ ಸಮಯ ಇದೆ. ಎನ್‌ಸಿಪಿಯ ಹೆಚ್ಚಿನ ಶಾಸಕರ ಬೆಂಬಲ ಅಜಿತ್ ಪವಾರ್ ಅವರಿಗೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಇಡೀ ಪ್ರಹಸನದಲ್ಲಿ ಶರದ್ ಪವಾರ್ ಪಾತ್ರ ಏನು ಎಂಬ ಪ್ರಶ್ನೆಯೂ ಎದ್ದಿದೆ. ಶರದ್ ಪವಾರ್ ಅವರ ಅತ್ಯಂತ ನಿಷ್ಠಾವಂತರಲ್ಲಿ ಹಲವರು ಅಜಿತ್ ಪವಾರ್ ಅವರ ಜೊತೆಗೆ ಹೋಗಿದ್ದಾರೆ.
ಶರದ್ ಅವರ ಅರಿವಿನೊಂದಿಗೆ ಅಥವಾ ಅವರ ಪರೋಕ್ಷ ಬೆಂಬಲದಿಂದಲೇ ಇದು ನಡೆದಿದೆ ಎಂಬ ಸಂದೇಹಕ್ಕೆ ಇದು ಕಾರಣವಾಗಿದೆ. ಆದರೆ ಪವಾರ್ ಅವರು ಇದನ್ನು ಬಲವಾಗಿ ಅಲ್ಲಗಳೆದಿದ್ದಾರೆ. ಆಡಳಿತಾರೂಢ ಹೊಸ ಮೈತ್ರಿಕೂಟದ ವಿರುದ್ಧ ಹೋರಾಡುವುದಾಗಿ ಶಪಥ ಮಾಡಿದ್ದಾರೆ. ಶರದ್ ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಅವರನ್ನು ಪಕ್ಷದ ಕಾರ್ಯಾಧ್ಯಕ್ಷೆಯನ್ನಾಗಿ ನೇಮಕ ಮಾಡಿರುವುದರಿಂದ ಅಸಮಾಧಾನಗೊಂಡ ಹಿರಿಯ ಮುಖಂಡರು ಪಕ್ಷ ತೊರೆದಿದ್ದಾರೆ ಎಂದೂ ಹೇಳಲಾಗುತ್ತಿದೆ.
ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯ ಒಂದಷ್ಟು ಶಾಸಕರು ರಾಜಕೀಯ ಲೆಕ್ಕಾಚಾರದ ಕಾರಣಕ್ಕೆ ಅಥವಾ ಜಾರಿ ನಿರ್ದೇಶನಾಲಯ ಮತ್ತು ಇತರ ಸಂಸ್ಥೆಗಳು ಸೃಷ್ಟಿಸಿದ ಒತ್ತಡದಿಂದಾಗಿ ಬಿಜೆಪಿ ಸೇರಿದ್ದಾರೆ. ಯಾವುದೇ ತತ್ವ ಇಲ್ಲದ ಪಕ್ಷಾಂತರಗಳು, ಪಕ್ಷದ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ಸಾರಾಸಗಟಾಗಿ ಬೇರೆ ಪಕ್ಷಕ್ಕೆ ಹೋಗುವುದು, ಜನಪ್ರತಿನಿಧಿಗಳ ಖರೀದಿ ಮತ್ತು ಬ್ಲ್ಯಾಕ್‌ಮೇಲ್ ತಂತ್ರಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ ಎಂಬುದು ಸತ್ಯ. ಪ್ರಧಾನಿ ನರೇಂದ್ರ ಮೋದಿ ಅವರು, ಎನ್‌ಸಿಪಿಯಲ್ಲಿ ಇರುವವರು ಭ್ರಷ್ಟರು ಎಂದು ಕಳೆದ ವಾರವಷ್ಟೇ ಟೀಕಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಅದೇ ‘ಭ್ರಷ್ಟ’ ಮುಖಂಡರನ್ನು ತಮ್ಮ ಪಕ್ಷದ ನೇತೃತ್ವದ ಮೈತ್ರಿಕೂಟಕ್ಕೆ ಸೇರಿಸಿಕೊಂಡಿದ್ದಾರೆ.
ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳನ್ನು ಒಗ್ಗೂಡಿಸಲು ನಡೆದಿರುವ ಪ್ರಯತ್ನಗಳ ಮೇಲೆ ಮಹಾರಾಷ್ಟ್ರದ ಬೆಳವಣಿಗೆಯು ಪರಿಣಾಮ ಬೀರಬಹುದು. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಸಭೆಯು ಮುಂದೂಡಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಸೃಷ್ಟಿ ಆಗಿರುವ ಆಡಳಿತ ವಿರೋಧಿ ಅಲೆಯು ಎನ್‌ಸಿಪಿ ಶಾಸಕರು ಎನ್‌ಡಿಎ ಸೇರಿದ್ದರಿಂದಾಗಿ ಮರೆಯಾಗುವುದಿಲ್ಲ. ಹಾಗೆಯೇ ಬಿಜೆಪಿಯೇತರ ಪಕ್ಷಕ್ಕೆ ಇರುವ ಅವಕಾಶವು ಕೈತಪ್ಪಿ ಹೋಗಲಾರದು. ಕಾಂಗ್ರೆಸ್ ಅಥವಾ ಶರದ್ ಪವಾರ್ ಅವರ ಎನ್‌ಸಿಪಿ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿದೆಯೇ ಎಂಬ ಪ್ರಶ್ನೆ ಮಾತ್ರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.