ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Editorial | ಚಂಡಮಾರುತ ತಂದ ಹಾನಿ: ಸಜ್ಜಾಗಲು ಇನ್ನೊಂದು ಎಚ್ಚರಿಕೆ

Published 6 ಡಿಸೆಂಬರ್ 2023, 23:38 IST
Last Updated 6 ಡಿಸೆಂಬರ್ 2023, 23:38 IST
ಅಕ್ಷರ ಗಾತ್ರ

ದೇಶದ ಪೂರ್ವ ಕರಾವಳಿಯಲ್ಲಿ ‘ಮಿಚಾಂಗ್’ ಚಂಡಮಾರುತವು ಭಾರಿ ಪ್ರಮಾಣದಲ್ಲಿ ಹಾನಿ ಉಂಟುಮಾಡಿದೆ. ತಮಿಳುನಾಡಿನ ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವು ಕಡೆಗಳಲ್ಲಿ ಹಾನಿ ಉಂಟಾಗಿದೆ. ಎರಡು ದಿನಗಳ ಅವಧಿಯಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆ ಹಾಗೂ ಚೆನ್ನೈನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯು ಜನರ ರಕ್ಷಣೆಗೆ ಮತ್ತು ಪರಿಹಾರ ಕಾರ್ಯಕ್ಕೆ ಸೇನಾ ಸಿಬ್ಬಂದಿಯನ್ನು ಕರೆಸಿಕೊಳ್ಳುವಂತೆ ಮಾಡಿದೆ. ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಎನ್‌ಡಿಆರ್‌ಎಫ್‌ನ ಸರಿಸುಮಾರು 30 ತಂಡಗಳು ನಿಯೋಜನೆಗೊಂಡಿವೆ ಎಂಬ ವರದಿಗಳಿವೆ. ಡಿಸೆಂಬರ್‌ 4ರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಚೆನ್ನೈನಲ್ಲಿ 151 ಮಿ.ಮೀ. ಮಳೆ ಸುರಿದಿದೆ. ಅಲ್ಲಿ 24 ಗಂಟೆಗಳ ಅವಧಿಯಲ್ಲಿ ಸುರಿದ ಮೂರನೆಯ ಅತ್ಯಂತ ಗರಿಷ್ಠ ಪ್ರಮಾಣದ ಮಳೆ ಇದು. ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿನ ಪರಿಸ್ಥಿತಿಯು ಇನ್ನಷ್ಟು ಕಠಿಣವಾಗಿತ್ತು. ರಾಜ್ಯದ ಆಡಳಿತಯಂತ್ರ ಹಾಗೂ ವಿಪತ್ತು ಪರಿಹಾರ ಏಜೆನ್ಸಿಗಳು ಕೂಡ ಜನರ ರಕ್ಷಣೆಯಲ್ಲಿ ತೊಡಗಿವೆ. ಚೆನ್ನೈ ಮತ್ತು ಅದರ ಸುತ್ತಲಿನ ಜಿಲ್ಲೆಗಳಲ್ಲಿ ಮಳೆಯಿಂದಾಗಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಚೆನ್ನೈನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ದೈನಂದಿನ ಜೀವನಕ್ಕೆ ಏಟು ಬಿದ್ದಿದೆ. 2015ರಲ್ಲಿ ಆಗಿದ್ದ ಪ್ರವಾಹದ ನೆನಪುಗಳು ಜನರನ್ನು ಕಾಡಲು ಆರಂಭಿಸಿವೆ. ಪರಿಸ್ಥಿತಿಯು ಬುಧವಾರ ತುಸು ಸುಧಾರಿಸಿದೆ. ಚಂಡಮಾರುತವು ಸಮುದ್ರ ತೀರಕ್ಕೆ ಅಪ್ಪಳಿಸಿದ ಕಾರಣ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ಹವಾಮಾನ ವೈಪರೀತ್ಯಗಳು, ನಗರ ಪ್ರದೇಶ
ಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದು ಈಗ ಅಪರೂಪದ ವಿದ್ಯಮಾನಗಳಾಗಿ ಉಳಿದಿಲ್ಲ. ದೇಶದ ದೊಡ್ಡ ನಗರಗಳಾದ ಮುಂಬೈ, ಬೆಂಗಳೂರು, ದೆಹಲಿ ಕಳೆದ ಐದು ವರ್ಷಗಳಲ್ಲಿ ಪ್ರವಾಹ
ಗಳನ್ನು ಕಂಡಿವೆ. ಹೀಗೆ ಆಗುತ್ತಿರುವುದಕ್ಕೆ ಸ್ಥಳೀಯ ಕಾರಣಗಳೂ ಇವೆ, ಜಾಗತಿಕ ಕಾರಣಗಳೂ ಇವೆ. ನಗರಗಳಲ್ಲಿ ಆಗುತ್ತಿರುವ ಜನಸಂಖ್ಯಾ ಹೆಚ್ಚಳಕ್ಕೆ ಅನುಗುಣವಾಗಿ ಮೂಲಸೌಕರ್ಯದ ಅಭಿವೃದ್ಧಿ ಆಗಿಲ್ಲ. ಕೆರೆಗಳು, ನದಿ ಹರಿವಿನ ಪಾತ್ರಗಳು ಒತ್ತುವರಿ ಆಗಿವೆ. ಇದರಿಂದಾಗಿ, ಜೋರು ಮಳೆ ಸುರಿದಾಗ ನೀರು ಸರಾಗವಾಗಿ ಹರಿದುಹೋಗಲು ಅವಕಾಶವೇ ಇಲ್ಲದಂತೆ ಆಗಿದೆ. ನಗರಗಳಲ್ಲಿ ಚರಂಡಿಗಳ ನಿರ್ವಹಣೆ ಸರಿಯಾಗಿಲ್ಲ. ವಾಸ್ತವದಲ್ಲಿ, ನಗರ ಆಡಳಿತ ವ್ಯವಸ್ಥೆಯ ಪಾಡು ಹಲವೆಡೆ ನಾಯಿಪಾಡಾಗಿದೆ. ಹವಾಮಾನ ವೈಪರೀತ್ಯದಿಂದ ಉಂಟಾಗುವ ಪರಿಸ್ಥಿತಿ ಯನ್ನು ನಿಭಾಯಿಸಲು ಇನ್ನಷ್ಟು ಹೆಚ್ಚು ಸದೃಢವಾದ, ತಾಳಿಕೊಳ್ಳಬಹುದಾದ ಮೂಲಸೌಕರ್ಯದ ನಿರ್ಮಾಣ ಆಗಬೇಕಿದೆ. ಜನರ ಜೀವನಶೈಲಿಯಲ್ಲಿ ಬದಲಾವಣೆ ಬೇಕಿದೆ. ಒಂದು ವರ್ಷದ ಅವಧಿಯಲ್ಲಿ ಆಗುವ ಮಳೆಯು ಕೆಲವು ಸಂದರ್ಭಗಳಲ್ಲಿ ಒಂದೆರಡು ದಿನಗಳಲ್ಲಿ ಸುರಿಯುತ್ತದೆ. ಇಂತಹ ಸಂದರ್ಭ ಗಳಲ್ಲಿ ಅತ್ಯಂತ ಹೆಚ್ಚು ತೊಂದರೆಗೆ ಒಳಗಾಗುವವರು ಬಡವರು.

ನೈಸರ್ಗಿಕ ವಿಕೋಪಗಳು, ಹವಾಮಾನ ವೈಪರೀತ್ಯಗಳು ಜನಜೀವನದ ಮೇಲೆ ಗಂಭೀರ ಪರಿಣಾಮ ಉಂಟುಮಾಡಿವೆ, ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿವೆ. ಲಿಬಿಯಾ, ಗ್ರೀಸ್ ಮತ್ತು ಟರ್ಕಿ
ಸೆಪ್ಟೆಂಬರ್‌ನಲ್ಲಿ ಬಿರುಗಾಳಿಗೆ ತತ್ತರಿಸಿದ್ದವು. ಲಿಬಿಯಾದಲ್ಲಿ 11 ಸಾವಿರ ಮಂದಿ ಪ್ರಾಣ ಕಳೆದುಕೊಂಡರು. ಈಗ ಭಾರತದ ಪೂರ್ವ ಕರಾವಳಿಯಲ್ಲಿ ಚಂಡಮಾರುತಗಳು ಮತ್ತೆ ಮತ್ತೆ ಸೃಷ್ಟಿಯಾಗುತ್ತಿವೆ. ಈ ವರ್ಷದ ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಭಾರತವು ಸರಿಸುಮಾರು ಪ್ರತಿದಿನವೂ ಹವಾಮಾನ ವೈಪರೀತ್ಯವನ್ನು ಎದುರಿಸಿದೆ. ಇದರಿಂದಾಗಿ ಮೂರು ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ ಸಂಸ್ಥೆಯ ವರದಿಯೊಂದು ಹೇಳಿದೆ. ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಟ್ಟದ್ದಾಗಲಿದೆ ಎಂದು ವರದಿಯು ಎಚ್ಚರಿಸಿದೆ. 2023ನೇ ಇಸವಿಯು ವಿಶ್ವ ಕಂಡ ಅತ್ಯಂತ ಹೆಚ್ಚಿನ ತಾಪಮಾನದ ವರ್ಷ ಎಂದು ವಿಶ್ವ ಹವಾಮಾನ ಸಂಘಟನೆ ಹೇಳಿದೆ. ಹವಾಮಾನ ವೈಪರೀತ್ಯದಿಂದ ಹೆಚ್ಚು ತೊಂದರೆಗೆ ಒಳಗಾಗುವ ಸಾಧ್ಯತೆ ಇರುವ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಆದರೆ ಇದರ ಪರಿಣಾಮಗಳನ್ನು ತಡೆಯುವ ವಿಚಾರದಲ್ಲಿ ದೇಶವು ಗಂಭೀರವಾಗಿಲ್ಲ. ಮಿಚಾಂಗ್‌ ಚಂಡಮಾರುತವು ಈ ವಿಚಾರಗಳಲ್ಲಿ ದೇಶಕ್ಕೆ ಇನ್ನೊಂದು ಎಚ್ಚರಿಕೆಯಂತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT