ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ವಿದ್ಯಾರ್ಥಿಗಳ ಆತ್ಮಹತ್ಯೆ ತಗ್ಗಿಸಲು ಬೇಕಿದೆ ಸಂಘಟಿತ ಪ್ರಯತ್ನ

Published : 6 ಸೆಪ್ಟೆಂಬರ್ 2024, 18:47 IST
Last Updated : 6 ಸೆಪ್ಟೆಂಬರ್ 2024, 18:47 IST
ಫಾಲೋ ಮಾಡಿ
Comments

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಯುವಸಮೂಹದ ಆರೋಗ್ಯ ಮತ್ತು ಮನೋಧರ್ಮವು ಅತ್ಯಂತ ಮುಖ್ಯವಾಗಿರುವ ಕಾರಣದಿಂದ ಈ ಬೆಳವಣಿಗೆಯು ಕಳವಳಕಾರಿಯಾದುದು.

ಕೆಲವೊಂದು ವರದಿಗಳ ಪ್ರಕಾರ, ಈಗ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು ಹಿಂದಿನ ವರ್ಷಗಳ ವಾರ್ಷಿಕ ಸರಾಸರಿಗಿಂತಲೂ ಹೆಚ್ಚಾಗಿದೆ.  ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ದತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ದೆಹಲಿಯಲ್ಲಿ ಇತ್ತೀಚೆಗೆ ನಡೆದ ಐಸಿ3 ಕಾನ್ಫರೆನ್ಸ್‌ ಆ್ಯಂಡ್‌ ಎಕ್ಸ್‌ಪೋನಲ್ಲಿ ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ, ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿನ ವಾರ್ಷಿಕ ಏರಿಕೆ ಪ್ರಮಾಣ ಶೇಕಡ 2ರಷ್ಟಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿನ ಏರಿಕೆ ಪ್ರಮಾಣ ಶೇ 4ಕ್ಕೆ ತಲುಪಿದೆ. 2022ರಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ಪುರುಷ ವಿದ್ಯಾರ್ಥಿಗಳ ಪ್ರಮಾಣ ಶೇ 53ರಷ್ಟಿತ್ತು. ಆದರೆ, ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 7ರಷ್ಟು ಏರಿಕೆಯಾಗಿತ್ತು. ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆ ಪ್ರಕರಣಗಳು ಸರಿಯಾಗಿ ವರದಿಯಾಗುವುದಿಲ್ಲ. ಇದರಿಂದಾಗಿ ಒಂದಷ್ಟು ಪ್ರಕರಣಗಳು ಅಪರಾಧ ದಾಖಲೆಗಳ ಬ್ಯೂರೊ ದತ್ತಾಂಶವನ್ನು ಸೇರುವುದಿಲ್ಲ. ವಾಸ್ತವಿಕ ಪರಿಸ್ಥಿತಿಯು ವರದಿಯಲ್ಲಿ ಉಲ್ಲೇಖಿಸಿರು
ವುದಕ್ಕಿಂತಲೂ ಗಂಭೀರವಾಗಿಯೇ ಇದೆ.

ಜೀವನದ ಮಹತ್ವದ ಘಟ್ಟ ಪ್ರವೇಶಿಸುವ ಹೊಸ್ತಿಲಲ್ಲಿರುವ ಯುವ ಸಮೂಹವು ಭವಿಷ್ಯದ ಕುರಿತು ಆಶಾ
ವಾದ ಮತ್ತು ಸಕಾರಾತ್ಮಕ ಚಿಂತನೆ ಹೊಂದಿರಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ವಿಷಯ
ವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ವಿದ್ಯಾರ್ಥಿ ಜೀವನದ ಹಂತದಲ್ಲಿ ಬಹುತೇಕರು ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಿದ ಅನುಭವವನ್ನು ಹೊಂದಿರುವುದಿಲ್ಲ. ಅದುವೇ ಹಲವರನ್ನು ಆತ್ಮಹತ್ಯೆಯತ್ತ ದೂಡುತ್ತದೆ. ವಿದ್ಯಾರ್ಥಿಗಳ ಆತ್ಮಹತ್ಯೆಯು ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದೆ. ಇದಕ್ಕೆ ಹಲವು ಅಂಶಗಳು ಕಾರಣವಾಗಿವೆ. ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಮತ್ತು ಕೌಟುಂಬಿಕ ಒತ್ತಡಗಳು ಹೆಚ್ಚುತ್ತಿವೆ. ಹಲವರು ಬಲವಂತದ ಕಾರಣಕ್ಕಾಗಿ ತಮಗೆ ಇಷ್ಟವಿಲ್ಲದ
ಶೈಕ್ಷಣಿಕ ಕೋರ್ಸ್‌ ಅಥವಾ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆ
ಪ್ರಕರಣಗಳಿಗೆ ಆರ್ಥಿಕ ಕಾರಣಗಳೂ ಇವೆ. ಭವಿಷ್ಯದ ಬಗೆಗಿನ ಉದ್ವೇಗದಿಂದಲೂ ಕೆಲವರು ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ. 2019ರಿಂದ 2023ರ ಅವಧಿಯಲ್ಲಿ 69 ಮಂದಿ ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೈಕ್ಷಣಿಕ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದ ಕೋಚಿಂಗ್‌ ಕೇಂದ್ರಗಳ ಪ್ರಧಾನ ತಾಣವಾಗಿರುವ ರಾಜಸ್ಥಾನದ ಕೋಟಾದಲ್ಲಿ ಶೈಕ್ಷಣಿಕ ಒತ್ತಡಗಳನ್ನು ತಡೆದು
ಕೊಳ್ಳಲಾಗದೇ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. 12 ವರ್ಷದಷ್ಟು ಸಣ್ಣ ವಯಸ್ಸಿನ ಮಕ್ಕಳು ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಅಥವಾ ಆತ್ಮಹತ್ಯೆಯ ಪ್ರಯತ್ನ ಮಾಡಿರುವಂತಹ ವರದಿಗಳೂ ಇವೆ.

ಶಾಲೆಗಳಲ್ಲಿ ಮಾನಸಿಕ ಆರೋಗ್ಯದ ವಿಷಯವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಕ್ರೀಡೆ ಮತ್ತು ಇತರ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಆದರೆ, ಹೆಚ್ಚಿನ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಒತ್ತು ನೀಡಿ, ಪಠ್ಯೇತರ ಚಟುವಟಿಕೆಗಳನ್ನು ಕಡೆಗಣಿಸುತ್ತಿವೆ. ವಿದ್ಯಾರ್ಥಿ
ಗಳಿಗೆ ಆಪ್ತ ಸಮಾಲೋಚನೆಯ ಸೌಲಭ್ಯ ಒದಗಿಸಬಹುದಾದ ಸಾಧ್ಯತೆಯನ್ನು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಹೊಂದಿದ್ದರೂ ಅವು ಆ ಕೆಲಸವನ್ನು ಮಾಡುತ್ತಿಲ್ಲ. ಈ ವಿಚಾರದಲ್ಲಿ ಪೋಷಕರ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಮಕ್ಕಳು ತಮ್ಮದೇ ಆದ ವೈಯಕ್ತಿಕ ಜೀವನವನ್ನು ಹೊಂದಿದ್ದಾರೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಪೋಷಕರ ಇಚ್ಛೆಗೆ ತಕ್ಕಂತೆ ಮಕ್ಕಳು ಜೀವನ ನಡೆಸಬೇಕು ಎಂದು ಅವರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಜಗತ್ತು ದಿನದಿಂದ ದಿನಕ್ಕೆ ಹೆಚ್ಚು ಸ್ಪರ್ಧಾತ್ಮಕವೂ ಮತ್ತು ವ್ಯಕ್ತಿಗತವೂ ಆಗುತ್ತಿದೆ. ಯಶಸ್ಸಿಗೆ ಒಂದೇ ಮಾದರಿ ಇರುವುದಿಲ್ಲ, ಜೀವನವನ್ನು ಹಲವು ಬಗೆಯಲ್ಲಿ ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡುವ ಜವಾಬ್ದಾರಿ ಸಮಾಜದ ಮೇಲಿದೆ. ವಿದ್ಯಾರ್ಥಿಗಳ ಆತ್ಮಹತ್ಯೆ ಸಮಸ್ಯೆಯ ಪರಿಹಾರಕ್ಕೆ ವಿವಿಧ ಹಂತಗಳಲ್ಲಿ ಕೆಲಸ ಮಾಡಬೇಕಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇದೊಂದು ಪ್ರಮುಖ ಸವಾಲು ಎಂಬುದನ್ನು ಸಮಾಜವು ಒಪ್ಪಿಕೊಂಡು, ಅದರ ನಿವಾರಣೆಗೆ ಹೆಜ್ಜೆ ಇಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT