ಏಕಕಾಲಕ್ಕೆ ಮೂರು ಬಾರಿ ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ನೀಡುವುದನ್ನು ನಿಷೇಧಿಸುವ, ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಗೊಂಡಿರುವ ‘ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆ’ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಗುರುವಾರ ಅಂಕಿತ ಹಾಕಿದ್ದಾರೆ.

ಅದರ ಅನ್ವಯ, ಇಷ್ಟು ದಿನ ಸಿವಿಲ್ ವ್ಯಾಜ್ಯವೆಂದು ಪರಿಗಣಿಸಲಾಗುತ್ತಿದ್ದ ತ್ರಿವಳಿ ತಲಾಖ್, ಇನ್ನು ಮುಂದೆ ಕ್ರಿಮಿನಲ್ ದಾವೆಯಾಗಿ ಬದಲಾಗಲಿದೆ. ತ್ರಿವಳಿ ತಲಾಖ್ ನೀಡುವ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ಅಲ್ಲದೇ, ಆತ ಜೈಲಿನಲ್ಲಿ ಇದ್ದರೂ ಸಂತ್ರಸ್ತೆಗೆ ಜೀವನಾಂಶ ಕೊಡಬೇಕಾಗಬಹುದು. ಜೈಲಿನಲ್ಲಿ ಇರುವ ವ್ಯಕ್ತಿಯಿಂದ ಜೀವನಾಂಶ ಕೊಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಇದೆ.

ಈ ಮಸೂದೆಯು ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ ವಿರೋಧ ಪಕ್ಷಗಳ ತೀವ್ರ ವಿರೋಧದಿಂದಾಗಿ ರಾಜ್ಯಸಭೆಯಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. 16ನೇ ಲೋಕಸಭೆಯ ಅವಧಿ ಮುಗಿದ ಕಾರಣದಿಂದಾಗಿ ಸಹಜವಾಗಿಯೇ ಸಿಂಧುತ್ವ ಕಳೆದುಕೊಂಡಿದ್ದ ಮಸೂದೆಯು ಪ್ರಸಕ್ತ ಅವಧಿಯಲ್ಲಿ ಎರಡೂ ಸದನಗಳಲ್ಲಿ ಅಂಗೀಕೃತಗೊಳ್ಳುವಂತೆ ನೋಡಿಕೊಳ್ಳುವಲ್ಲಿ ಆಡಳಿತ ಪಕ್ಷ ಯಶಸ್ವಿಯಾಗಿದೆ.

ಪತಿಯೊಬ್ಬ ಪರಿಹಾರವನ್ನೂ ನೀಡದೆ ಏಕಪಕ್ಷೀಯವಾಗಿ ಪತ್ನಿಯನ್ನು ನಡುನೀರಿನಲ್ಲಿ ಕೈಬಿಡಲು ಅವಕಾಶ ಕಲ್ಪಿಸುವ ತ್ರಿವಳಿ ತಲಾಖ್ ಅತ್ಯಂತ ಅಮಾನವೀಯ ಎಂಬುದು ನಿರ್ವಿವಾದ. ಆದರೆ, ಯಾವುದೇ ಕಾನೂನು ರೂಪಿಸುವಾಗ ಎಲ್ಲ ಮಗ್ಗುಲುಗಳನ್ನೂ ಪರಿಗಣಿಸಲೇಬೇಕಾಗುತ್ತದೆ. ತೀವ್ರ ವಿವಾದಕ್ಕೆ ಒಳಗಾಗಿದ್ದ ಪ್ರಸಕ್ತ ಮಸೂದೆಯು ವಿರೋಧ ಪಕ್ಷಗಳ ಸಂಖ್ಯಾಬಲ ಹೆಚ್ಚಾಗಿರುವ ರಾಜ್ಯಸಭೆಯಲ್ಲೂ ಈ ಬಾರಿ ನಿರಾಯಾಸವಾಗಿ ಅನುಮೋದನೆ ಪಡೆದುಕೊಂಡಿರುವ ರೀತಿಯು ಹಲವು ಪ್ರಶ್ನೆಗಳನ್ನು ಹುಟ್ಟಿಸುವಂತಿದೆ.

ಮಸೂದೆಯಲ್ಲಿನ ಆಕ್ಷೇಪಾರ್ಹ ಅಂಶಗಳ ಕೂಲಂಕಷ ಪರಿಶೀಲನೆಗೆ ಅದನ್ನು ರಾಜ್ಯಸಭೆಯ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕೆಂಬ ಬೇಡಿಕೆಗೆ ಮನ್ನಣೆ ಕೊಡದೆ, ಸಣ್ಣಪುಟ್ಟ ಸಂಗತಿಗಳಿಗಷ್ಟೇ ತಿದ್ದುಪಡಿ ತರಲಾಗಿದೆ. ತ್ರಿವಳಿ ತಲಾಖ್ ನೀಡುವ ವ್ಯಕ್ತಿಯನ್ನು ಕಾನೂನಿನ ಕುಣಿಕೆಗೆ ಸಿಲುಕಿಸುವವರು ಯಾರು ಎಂಬ ಪ್ರಶ್ನೆಗೆ ಹಿಂದಿನ ಮಸೂದೆಯಲ್ಲಿ ಉತ್ತರ ಇರಲಿಲ್ಲ. ಈಗ, ಸಂತ್ರಸ್ತೆ ಅಥವಾ ಆಕೆಯ ಸಂಬಂಧಿ ದೂರಿತ್ತರೆ ಪ್ರಕರಣ ಮಾನ್ಯವಾಗುತ್ತದೆ. ಮುಸ್ಲಿಂ ಮಹಿಳೆಯರ ಬಗೆಗಿನ ಕಳಕಳಿಯಿಂದಾಗಿ ಈ ಮಸೂದೆಯನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ, ಇದರ ಹಿಂದೆ ರಾಜಕೀಯಪ್ರೇರಿತ ಅಂಶಗಳು ಕೆಲಸ ಮಾಡಿರುವುದನ್ನು ನಿರಾಕರಿಸಲಾಗದು.

ಈ ಮಸೂದೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳು, ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಸಂದರ್ಭದಲ್ಲಿ ಜವಾಬ್ದಾರಿಯಿಂದ ನುಣುಚಿಕೊಂಡಂತೆ ಕಾಣಿಸಿತು. ಕೆಲವು ಪಕ್ಷಗಳು ಸಭಾತ್ಯಾಗ ಮಾಡಿದವು. ಕೆಲವು ಸದಸ್ಯರು ಗೈರುಹಾಜರಾಗುವ ಮೂಲಕ ಮಸೂದೆ ಅಂಗೀಕಾರವಾಗುವಂತೆ ನೋಡಿಕೊಂಡರು. ತಾವು ಸ್ಪಷ್ಟವಾಗಿ ವಿರೋಧಿಸುತ್ತಿದ್ದ ಮಸೂದೆಯೊಂದನ್ನು ಮತಕ್ಕೆ ಹಾಕುವ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದು, ತಮ್ಮ ನಿಲುವನ್ನು ದಾಖಲಿಸಬೇಕಾದ ಸಂಸದೀಯ ಪ್ರಜ್ಞೆಯನ್ನು ಮರೆತದ್ದು ವಿಪರ್ಯಾಸ. ಕಳೆದ ಅವಧಿಯಲ್ಲಿ ಈ ಮಸೂದೆಗೆ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಖ್ಯಾಬಲ ಹೆಚ್ಚಿದೆ.

ಆದರೆ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕೆನ್ನುವ ತಮ್ಮ ಬೇಡಿಕೆಗೆ ಬಲ ತುಂಬುವ ಕೆಲಸ ಮಾಡಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ ಬಳಿಕ, ಪ್ರಬಲ ವಿರೋಧ ಪಕ್ಷದ ಕೊರತೆ ದೇಶವನ್ನು ಕಾಡುತ್ತಿದೆ. ಸಂಖ್ಯಾಬಲದಲ್ಲಿ ಕಡಿಮೆ ಇದ್ದರೂ ವಿರೋಧ ಪಕ್ಷಗಳು ರಚನಾತ್ಮಕವಾಗಿ ಕಾರ್ಯನಿರ್ವಹಿಸಿ, ಸರ್ಕಾರದ ನಡೆಯ ಮೇಲೆ ನಿಗಾ ಇರಿಸುವ ಕೆಲಸ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ತ್ರಿವಳಿ ತಲಾಖ್ ವಿಷಯದಲ್ಲಿ ಅವು ಇದ್ದೂ ಇಲ್ಲದಂತೆ ನಡೆದುಕೊಂಡಿರುವ ರೀತಿಯಿಂದಾಗಿ, ಯಾವ ಮಸೂದೆಗೆ ಬೇಕಾದರೂ ಅಂಗೀಕಾರ ಪಡೆದುಕೊಳ್ಳಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಆಡಳಿತ ಪಕ್ಷದಲ್ಲಿ ಮೂಡಿದರೆ ಅಚ್ಚರಿಯಿಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶುಭಸೂಚಕವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.