ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಚುನಾವಣೆ ಪ್ರಚಾರ: ಮಾರ್ಗಸೂಚಿಪದೇ ಪದೇ ಉಲ್ಲಂಘನೆ ಅಕ್ಷಮ್ಯ

Last Updated 25 ಏಪ್ರಿಲ್ 2021, 18:07 IST
ಅಕ್ಷರ ಗಾತ್ರ

ಈ ತಿಂಗಳ 27ರಂದು ರಾಜ್ಯದ ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಬಳ್ಳಾರಿ ಮಹಾನಗರ ಪಾಲಿಕೆ, 5 ನಗರಸಭೆಗಳು, ತಲಾ ಎರಡು ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳು ಚುನಾವಣೆ ಎದುರಿಸಲಿವೆ. ಎರಡು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆಕೊರೊನಾ ಅಬ್ಬರದ ನಡುವೆ ಈಗಾಗಲೇ ಉಪಚುನಾವಣೆ ನಡೆದಿದೆ. ಉಪಚುನಾವಣೆಯ ನಂತರ, ರಾಜ್ಯದಲ್ಲಿ ಕೊರೊನಾ ವೈರಸ್ ಶರವೇಗದಲ್ಲಿ ಹರಡುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯೂ ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆಯ ವೇಗ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೇಶದ ಪ್ರಧಾನಿಯೂ ಸೇರಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಚುನಾವಣಾ ರ‍್ಯಾಲಿಗಳನ್ನು ನಡೆಸಿ ಕೋವಿಡ್‌ ತಡೆ ಮಾರ್ಗಸೂಚಿಗಳನ್ನುಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ. ರಾಜಕಾರಣಿಗಳ ಈ ನಡೆಯು ಅತ್ಯಂತ ಬೇಜವಾಬ್ದಾರಿತನದ್ದು. ಈಗಂತೂ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ವೈದ್ಯಕೀಯ ಆಮ್ಲಜನಕ ಕೊರತೆ ವಿಪರೀತಕ್ಕೆ ಹೋಗಿದೆ. ಆಮ್ಲಜನಕ ಸಿಗದೆ ಕೋವಿಡ್ ಬಾಧಿತರು ಸಾಯುತ್ತಿದ್ದಾರೆ. ಕೋವಿಡ್–19 ರೋಗಿಗಳಿಗೆ ನೀಡುವ ರೆಮ್‌ಡಿಸಿವಿರ್ ಚುಚ್ಚುಮದ್ದು ಕೂಡಾ ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಅಂತ್ಯ ಸಂಸ್ಕಾರಕ್ಕೂ ಜನರು ಪರದಾಡುವಂತಾಗಿದೆ.

ವಾರಾಂತ್ಯದ ಎರಡು ದಿನ ಕರ್ಫ್ಯೂ ವಿಧಿಸಲಾಗಿದೆ. ಜನರು ಮನೆಯಿಂದ ಹೊರಗೆ ಬರಬಾರದು ಎಂದು ಸರ್ಕಾರ ಮನವಿ ಮಾಡಿಕೊಳ್ಳುತ್ತಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದರೆ ಕೊರೊನಾ ವೈರಸ್ ಹರಡುವಿಕೆ ಇನ್ನೂ ಹೆಚ್ಚು ವೇಗ ಪಡೆಯಬಹುದು ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಆದರೆ, ಮತಬೇಟೆಯಲ್ಲಿ ತೊಡಗಿದ ನಮ್ಮ ರಾಜಕಾರಣಿ ಗಳಿಗೆ ಈ ಎಚ್ಚರಿಕೆ ನಾಟುತ್ತಿಲ್ಲ. ನಾಯಕರ ಈ ನಡೆ ಪ್ರಜೆಗಳಿಗೆ ಕಂಟಕವಾಗಿ ಪರಿಣಮಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಕೊರೊನಾ ತಡೆ ಮಾರ್ಗಸೂಚಿಯನ್ನು ಗಾಳಿಗೆ ತೂರಲಾಗಿತ್ತು. ಕಾರ್ಯಕರ್ತರು ಗುಂಪುಗೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ಚುನಾವಣೆಗಳನ್ನು ಮುಂದೂಡಬಹುದಿತ್ತು. ಆದರೆ ಚುನಾ ವಣಾ ಆಯೋಗ ಅದಕ್ಕೆ ಮನಸ್ಸು ಮಾಡಲಿಲ್ಲ. ಚುನಾ ವಣೆ ಮುಂದೂಡದೇ ಇದ್ದರೂ ಕೊರೊನಾ ತಡೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಾಡಬಹುದಿತ್ತು. ಅದೂ ಆಗಿಲ್ಲ.

ಮಾರ್ಗಸೂಚಿಯನ್ನು ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಎಂದು ರಾಜ್ಯ ಹೈಕೋರ್ಟ್ ಆದೇಶಿಸಿದ್ದರೂ ಅದರ ಪಾಲನೆಯಾಗಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳದಿರುವುದೇ ರಾಜಕಾರಣಿಗಳು ಮೇರೆ ಮೀರುವುದಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದರ ಹಿಂದೆ ಒಂದರಂತೆ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದು, ಉಪಚುನಾವಣೆಗಳಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಕೈಗೊಂಡದ್ದು ಹೊಣೆ ಅರಿತ ನಾಯಕರ ನಡೆಯಲ್ಲ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವ ಹಾಗೆ ರಾಜ್ಯದ ಸಚಿವರು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಜೋರು ಪ್ರಚಾರ ನಡೆಸಿದರು. ಕೆಲವು ಕಡೆ ಜನರೇ ಪ್ರಚಾರಕ್ಕೆ ಕಡಿವಾಣ ಹಾಕಿದ್ದಾರೆ. ‘ನಮ್ಮ ಬಡಾವಣೆಗೆ, ನಮ್ಮ ಮನೆಗೆ ಪ್ರಚಾರಕ್ಕೆ ಯಾರೂ ಬರುವುದು ಬೇಡ’ ಎಂಬ ಫಲಕವನ್ನು ಹಾಕಿದ್ದಾರೆ. ಅಷ್ಟಾದರೂ ನಮ್ಮ ರಾಜಕಾರಣಿಗಳಿಗೆ ಬುದ್ಧಿ ಬಂದಿಲ್ಲ. ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಅವರಿಗೆ ಅಧಿಕಾರ ಪಡೆಯುವುದೇ ಮುಖ್ಯವಾದಂತೆ ಇದೆ. ಇದು ನಾಚಿಕೆಗೇಡಿನ ಸಂಗತಿ. ಜನಪ್ರತಿನಿಧಿಗಳಿಗೆ ಜನರ ಆರೋಗ್ಯವೇ ಎಲ್ಲಕ್ಕಿಂತ ಮಿಗಿಲಾಗಬೇಕಿತ್ತು. ಆದರೆ, ಅದನ್ನೇ ಕಡೆಗಣಿಸಿ ಪ್ರಚಾರದಲ್ಲಿ ತೊಡಗಿದ್ದು ಅಕ್ಷಮ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಪ್ರಚಾರ ನಡೆಸುವುದಕ್ಕೆ ಅವಕಾಶ ಇದೆ. ಆದರೆ, ಅದಕ್ಕೆ ಭಾರಿ ಬಹಿರಂಗ ಸಭೆ ಇಲ್ಲವೇ ರ್‍ಯಾಲಿಗಳೇ ಆಗಬೇಕೆಂದೇನಿಲ್ಲ. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮತದಾರರನ್ನು ಮುಟ್ಟಲು ಮತ್ತು ಮನಗೆಲ್ಲಲು ಈಗ ವಿಪುಲ ಅವಕಾಶಗಳಿವೆ. ಆದರೂ ಹಟಕ್ಕೆ ಬಿದ್ದು ಜನರು ಗುಂಪುಗೂಡುವ ರೀತಿಯಲ್ಲಿ ಪ್ರಚಾರ ನಡೆಸಿದ್ದು ಸರಿಯಲ್ಲ.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ಮತದಾನದ ದಿನವಾದರೂ ಮತದಾರರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮತಗಟ್ಟೆಯಲ್ಲಿ ಜನರು ಗುಂಪುಗೂಡುವುದನ್ನು ತಡೆಯ ಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಮಾಡಬೇಕು. ಮತದಾನದ ನಂತರ ಕೊರೊನಾ ಹರಡುವಿಕೆ ಇನ್ನಷ್ಟು ಜಾಸ್ತಿಯಾದರೆ ಅದರ ಹೊಣೆಯನ್ನು ರಾಜಕಾರಣಿಗಳ ಜೊತೆಗೆ ಚುನಾವಣಾ ಆಯೋಗ ಕೂಡ ಹೊರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT