ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚುನಾವಣಾ ಬಾಂಡ್‌ ಕುರಿತ ಅರ್ಜಿ ನ್ಯಾಯನಿರ್ಣಯ ಶೀಘ್ರ ಆಗಲಿ

Last Updated 8 ಅಕ್ಟೋಬರ್ 2022, 1:40 IST
ಅಕ್ಷರ ಗಾತ್ರ

ವಿಚಾರಣೆ ನಡೆಸಲು ಹಾಗೂ ನ್ಯಾಯತೀರ್ಮಾನ ಮಾಡಲು ಸುಪ್ರೀಂ ಕೋರ್ಟ್‌ಗೆ ಆಗದಿರುವ, ಅತ್ಯಂತ ತೀವ್ರವಾದ ಪರಿಣಾಮಗಳನ್ನು ಬೀರಬಹುದಾದ ಅರ್ಜಿಗಳಲ್ಲಿ ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಕೂಡ ಒಂದು. ಚುನಾವಣಾ ಬಾಂಡ್‌ ಹೊರಡಿಸುವುದನ್ನು ಪ್ರಶ್ನಿಸಿ ಮೊದಲ ಅರ್ಜಿಯನ್ನು 2017ರಲ್ಲಿ ಸಲ್ಲಿಸಲಾಯಿತು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಚುನಾವಣಾ ಬಾಂಡ್‌ಗಳನ್ನು ಹೊರಡಿಸುವುದನ್ನು ಘೋಷಿಸಿದ ತಕ್ಷಣ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ಸಂಸ್ಥೆ ಇದನ್ನು ಸಲ್ಲಿಸಿತು. ನಂತರದಲ್ಲಿ ಬೇರೆ ಬೇರೆ ಅರ್ಜಿಗಳು ಸಲ್ಲಿಕೆಯಾದವು. ಸಾರ್ವಜನಿಕ ಹಿತದ ದೃಷ್ಟಿಯಿಂದ ಬಹಳ ಮಹತ್ವದ್ದೂ, ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವಂಥದ್ದೂ ಆಗಿರುವ ಈ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ತ್ವರಿತಗತಿಯಲ್ಲಿ ನಡೆಸುತ್ತಿಲ್ಲದಿರುವುದು ಆಶ್ಚರ್ಯಕರ. ಅದರಲ್ಲೂ, ಈ ಅರ್ಜಿಯ ವಿಚಾರವಾಗಿ ಆದಷ್ಟು ಬೇಗ ನ್ಯಾಯನಿರ್ಣಯ ಕೊಡಬೇಕು ಎಂದು ಅರ್ಜಿದಾರ ಸಂಸ್ಥೆ ಹಾಗೂ ಇತರರು ಕಾಲಕಾಲಕ್ಕೆ ಮನವಿ ಮಾಡಿದ್ದರೂ ಇದು ಇನ್ನೂ ಇತ್ಯರ್ಥ ಆಗಿಲ್ಲ. ಎನ್.ವಿ. ರಮಣ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿದ್ದಾಗ, ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ, ವಿಚಾರಣೆಗೆ ಕೈಗೆತ್ತಿಕೊಳ್ಳುವ ಪ್ರಕರಣಗಳ ಪಟ್ಟಿಯಲ್ಲಿ ಇದನ್ನು ಶೀಘ್ರದಲ್ಲಿಯೇ ಸೇರಿಸಲಾಗುವುದು ಎಂದು ಹೇಳಿದ್ದರು. ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಪ್ರಕರಣಗಳ ಪಟ್ಟಿಯಲ್ಲಿ ಇದು ಸೆಪ್ಟೆಂಬರ್ 19ರಂದು ನಮೂದಾಗಿತ್ತು. ಆದರೆ ಪ್ರಕರಣದ ವಿಚಾರಣೆಯನ್ನು ಯಾವುದೇ ಪೀಠಕ್ಕೆ ವಹಿಸಿರಲಿಲ್ಲ. ಬಾಂಡ್ ಯೋಜನೆಗೆ ಮಧ್ಯಂತರ ತಡೆ ನೀಡಬೇಕು ಎಂಬ ಮನವಿಗಳನ್ನು ಕೋರ್ಟ್‌ ಈ ಹಿಂದೆ ಎರಡು ಬಾರಿ ತಿರಸ್ಕರಿಸಿದೆ.

ರಾಜಕೀಯ ಪಕ್ಷಗಳಿಗೆ ಹಣಕಾಸಿನ ದೇಣಿಗೆ ನೀಡಲು ಚುನಾವಣಾ ಬಾಂಡ್ ಬಳಸಿಕೊಳ್ಳಬಹುದು. ಇಲ್ಲಿ ದೇಣಿಗೆ ನೀಡುವ ವ್ಯಕ್ತಿ ಯಾರು ಎಂಬುದು ಬಹಿರಂಗ ಆಗುವುದೇ ಇಲ್ಲ. ಆದರೆ, ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದರಿಂದ ಕಪ್ಪುಹಣದ ಚಲಾವಣೆಗೆ ಕಡಿವಾಣ ಬೀಳುತ್ತದೆ ಎಂಬುದು ಸರ್ಕಾರ ನೀಡಿರುವ ವಿವರಣೆ. ಪಾರದರ್ಶಕತೆಯ ಕೊರತೆ, ಆಡಳಿತ ಪಕ್ಷಕ್ಕೆ ಅನುಕೂಲ ಆಗುವಂತೆ ಇರುವುದು, ದೇಣಿಗೆ ನೀಡುವವರು ಯಾರು ಎಂಬುದು ಗೋಪ್ಯವಾಗಿಯೇ ಉಳಿಯುವುದು ಮುಂತಾದ ಕಾರಣಗಳಿಂದಾಗಿ ಈ ಯೋಜನೆಯು ಟೀಕೆಗೆ ಗುರಿಯಾಗಿದೆ. ಈ ಯೋಜನೆಯ ಅಡಿಯಲ್ಲಿ ಸಂಗ್ರಹ ಆಗಿರುವ ₹ 9,000 ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ದೊಡ್ಡ ಪಾಲು ಆಡಳಿತಾರೂಢ ಬಿಜೆಪಿ ಕಡೆ ಹರಿದಿದೆ. ಇಡೀ ಯೋಜನೆಯು ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಆಗುವಂತೆ ಇದೆ ಎಂದು ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಪ್ರತೀ ತ್ರೈಮಾಸಿಕದ ಆರಂಭದ ಹತ್ತು ದಿನಗಳ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಅಕ್ಟೋಬರ್ 1ರಿಂದಲೂ ಬಾಂಡ್‌ ಖರೀದಿಗೆ ಸಮಯಾವಕಾಶ ನೀಡಲಾಗಿದೆ. ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಇದನ್ನು, ಸರ್ಕಾರದಿಂದ ಪ್ರಯೋಜನ ಪಡೆದುಕೊಂಡವರಿಗೆ ಅದಕ್ಕೆ ಪ್ರತಿಯಾಗಿ ‘ಋಣ ಸಂದಾಯ’ ಮಾಡಲು ಒಂದು ಅವಕಾಶ ಎಂದು ಬಣ್ಣಿಸಿದ್ದಾರೆ.

ಇದು ರಾಜಕೀಯ ಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದ ವಿಚಾರ ಮಾತ್ರವೇ ಅಲ್ಲ. ಚುನಾವಣಾ ಬಾಂಡ್ ಯೋಜನೆಯ ವೈಶಿಷ್ಟ್ಯಗಳು ಚುನಾವಣಾ ಪ್ರಜಾತಂತ್ರದ ಮೂಲಭೂತ ನಿಯಮಗಳನ್ನು ಕೂಡ ಉಲ್ಲಂಘಿಸುತ್ತವೆ. ಚುನಾವಣೆಗಾಗಿ ಯಾರು, ಯಾವ ಪಕ್ಷಕ್ಕೆ, ಎಷ್ಟು ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇರುತ್ತದೆ. ದೇಣಿಗೆಗಳು ಪಕ್ಷದ ಅಥವಾ ಸರ್ಕಾರದ ತೀರ್ಮಾನದ ಮೇಲೆ ಪ್ರಭಾವ ಬೀರುತ್ತವೆಯೇ ಎಂಬುದು ಕೂಡ ಅವರಿಗೆ ಗೊತ್ತಾಗಬೇಕು. ಆದರೆ, ಈ ಯೋಜನೆಯನ್ನು ಭ್ರಷ್ಟಾಚಾರವನ್ನು ಸಕ್ರಮಗೊಳಿಸುವ ರೀತಿಯಲ್ಲಿ ರೂಪಿಸಲಾಗಿದೆ. ಇದು ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಲ್ಲದು. ಈ ವಿಚಾರವಾಗಿ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಚುನಾವಣಾ ಆಯೋಗವು ಇದರ ಬಗ್ಗೆ ತನ್ನ ಅಸಮ್ಮತಿಯನ್ನು ತಿಳಿಸಿದೆ. ‘ದೇಶದಲ್ಲಿ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯದ ಮೇಲೆ ಭಾರಿ ಪರಿಣಾಮ ಬೀರುವ ಘನವಾದ ಸಂಗತಿಗಳನ್ನು ಇದು ಒಳಗೊಂಡಿದೆ’ ಎಂದು ಸ್ವತಃ ಸುಪ್ರೀಂ ಕೋರ್ಟ್‌ ಒಂದು ಬಾರಿ ಹೇಳಿದೆ. ಚುನಾವಣಾ ಬಾಂಡ್ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ನ್ಯಾಯಾಲಯ ಇನ್ನೂ ವಿಳಂಬ ಮಾಡಿದರೆ ಸಾರ್ವಜನಿಕರು ಹೊಂದಿರುವ ನ್ಯಾಯ ಕೇಳುವ ಹಕ್ಕು ಹಾಗೂ ನ್ಯಾಯಸಮ್ಮತ ಚುನಾವಣೆಯ ಹಕ್ಕನ್ನು ನಿರಾಕರಿಸಿದಂತೆ ಆಗುತ್ತದೆ. ಈ ಎರಡು ಹಕ್ಕುಗಳು ಪ್ರಜಾತಂತ್ರದ ಅಡಿಪಾಯ ಇದ್ದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT