ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ, 1975ರ ಜೂನ್ 25ರಂದು ತುರ್ತು ಪರಿಸ್ಥಿತಿಯನ್ನು ಹೇರಿದ್ದುದು ದೇಶದ ಪ್ರಜಾತಂತ್ರ ವ್ಯವಸ್ಥೆ ಕಂಡ ಅತ್ಯಂತ ಕರಾಳ ಅಧ್ಯಾಯ. ದೇಶವು ತುರ್ತು ಪರಿಸ್ಥಿತಿಯನ್ನು ಕಂಡು 50 ವರ್ಷಗಳು ಸಂದಿವೆ. ಈ ಸಂದರ್ಭವು ಸರ್ವಾಧಿಕಾರದ ಅಪಾಯಗಳ ಬಗ್ಗೆ ನೆನಪು ಮಾಡಿಕೊಡಬೇಕು. ಯಾವುದೇ ಸಮಾಜ, ಯಾವುದೇ ವ್ಯವಸ್ಥೆ ಇಂತಹ ಸರ್ವಾಧಿಕಾರದ ತೆಕ್ಕೆಗೆ ಜಾರುವ ಅಪಾಯ ಇರುತ್ತದೆ. ಸರ್ವಾಧಿಕಾರವು ಯಾವುದೇ ಸಂದರ್ಭದಲ್ಲಿ, ಬಗೆ ಬಗೆಯ ರೂಪಗಳಲ್ಲಿ ಎದುರಾಗಬಹುದು. ತುರ್ತು ಪರಿಸ್ಥಿತಿ ಜಾರಿಗೆ ಬರುವ ಮೊದಲು, ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯು ಬೇರು ಬಿಡುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ, ಜೀವಿಸುವ ಸ್ವಾತಂತ್ರ್ಯ ಸೇರಿದಂತೆ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಅಮಾನತಿನಲ್ಲಿ ಇರಿಸಿದ್ದು, ವಿರೋಧ ಪಕ್ಷಗಳ ನಾಯಕರನ್ನು ಹಾಗೂ ಸಾಂವಿಧಾನಿಕ ಹಕ್ಕುಗಳ ಪರವಾಗಿ ಹೋರಾಟ ನಡೆಸುವವರನ್ನು ಸಾರಾಸಗಟಾಗಿ ಬಂಧಿಸಿದ್ದು, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಿದ್ದು, ಸರ್ಕಾರವು ಮನಸೋಇಚ್ಛೆ ತೀರ್ಮಾನಗಳನ್ನು ಕೈಗೊಂಡಿದ್ದು, ವ್ಯಕ್ತಿಯೊಬ್ಬರ ಸುತ್ತ ಆಡಳಿತ ಮತ್ತು ರಾಜಕೀಯ ಗಿರಕಿ ಹೊಡೆದಿದ್ದು ‘ಪ್ರಜಾತಂತ್ರ’ವನ್ನು ನಿರರ್ಥಕವಾಗಿಸಿತು. ವ್ಯಂಗ್ಯವೆಂದರೆ, ತುರ್ತು ಪರಿಸ್ಥಿತಿಯ ಮೂಲಕ ಪ್ರಜಾತಂತ್ರದ ಹೆಸರಿನಲ್ಲೇ ಪ್ರಜಾತಂತ್ರವನ್ನು ಹಾಳುಮಾಡಲಾಯಿತು. ಸ್ಥಿರತೆಯ ಅಗತ್ಯ, ಪ್ರಗತಿ ಮತ್ತು ಆಡಳಿತ, ಆಂತರಿಕ ಹಾಗೂ ಬಾಹ್ಯ ಬೆದರಿಕೆಗಳು ಸರ್ವಾಧಿಕಾರವನ್ನು ಹೇರಲು ಸಿಗುವ ನೆಪಗಳು. ತುರ್ತು ಪರಿಸ್ಥಿತಿ 21 ತಿಂಗಳಿಗೆ ಕೊನೆಗೊಂಡಿತು ಎಂಬುದು ಅದರ ಕುರಿತಾಗಿನ ಒಂದು ಒಳ್ಳೆಯ ಸಂಗತಿ. ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದಕ್ಕೆ ನೈತಿಕ ಮತ್ತು ರಾಜಕೀಯ ಹೊಣೆ ಹೊರಬೇಕಿರುವುದು ಕಾಂಗ್ರೆಸ್ ಪಕ್ಷ. ಆ ಸಂದರ್ಭದಲ್ಲಿ ಅತಿರೇಕಗಳು ನಡೆದವು ಎಂಬುದನ್ನು ಕಾಂಗ್ರೆಸ್ ಒಪ್ಪಿಕೊಂಡಿದೆಯಾದರೂ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದನ್ನು ಬೇಷರತ್ತಾಗಿ ಮತ್ತು ಪೂರ್ಣವಾಗಿ ಖಂಡಿಸುವ ಕೆಲಸವನ್ನು ಅದು ಇನ್ನೂ ಮಾಡಿಲ್ಲ. ತುರ್ತು ಪರಿಸ್ಥಿತಿ ಬಗ್ಗೆ ಆಗಾಗ ಕೆಲವು ವಿವರಣೆಗಳನ್ನು ಪಕ್ಷವು ನೀಡಿದೆ. ಅವು ವಾಸ್ತವದಲ್ಲಿ ಮಾರುವೇಷದ ಸಮರ್ಥನೆಗಳು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿಯ ಸ್ಮರಣಾರ್ಥವಾಗಿ ವರ್ಷವಿಡೀ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ‘ಭಾರತದ ಪ್ರಜಾತಂತ್ರದ ಇತಿಹಾಸದಲ್ಲಿನ ಅತ್ಯಂತ ಕರಾಳ ಅವಧಿ’ಯ ಬಗ್ಗೆ ಜನರಿಗೆ ನೆನಪು ಮಾಡಿಕೊಡಲು ಸರ್ಕಾರವು ಕಾರ್ಯಕ್ರಮಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಆಗಿನ ಸಂದರ್ಭದ ದಾಳಿಗಳ ಬಗ್ಗೆ ಯಾವ ನೆನಪುಗಳೂ ಇಲ್ಲದ ಯುವಜನರಿಗೆ ಅದರ ಬಗ್ಗೆ ಹೇಳಬೇಕಾದ ಅಗತ್ಯ ಇದೆ. ಆದರೆ, ತುರ್ತು ಪರಿಸ್ಥಿತಿಯು ಈಗಲೂ ಗತ ಪದ ಅಲ್ಲ. ನಾಗರಿಕ ಸ್ವಾತಂತ್ರ್ಯಕ್ಕೆ ಈಗಲೂ ಲಗಾಮು ಬೀಳುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವು ಇಂದಿಗೂ ಬಂಧಮುಕ್ತ ಆಗಿಲ್ಲ, ಮುನ್ನೆಚ್ಚರಿಕೆಯ ಕ್ರಮಕ್ಕಾಗಿ ಬಂಧಿಸುವುದು ಮುಂದುವರಿದಿದೆ, ವಿರೋಧ ಪಕ್ಷಗಳ ನಾಯಕರನ್ನು ಮತ್ತು ನಾಗರಿಕ ಹಕ್ಕುಗಳ ಪರವಾಗಿ ಹೋರಾಟ ನಡೆಸುವವರನ್ನು ಗುರಿಯಾಗಿಸಿಕೊಳ್ಳಲು ಕಾನೂನು ಜಾರಿ ಸಂಸ್ಥೆಗಳು ಹಾಗೂ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ದೇಶದ ಪ್ರಜಾತಾಂತ್ರಿಕ ಸಂಸ್ಥೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ದೇಶದ ಸಂಸತ್ತಿನ ಮಹತ್ವವನ್ನು ಕುಗ್ಗಿಸಲಾಗಿದೆ, ಭಿನ್ನ ಅಭಿಪ್ರಾಯಗಳ ಬಗ್ಗೆ ಸಹಿಷ್ಣುತೆ ಕಾಣುತ್ತಿಲ್ಲ, ನಾಯಕನೊಬ್ಬನನ್ನು ಕೇಂದ್ರೀಕರಿಸಿಕೊಂಡು ವ್ಯಕ್ತಿಪೂಜೆ ನಡೆಯುತ್ತಿದೆ. ಇವೆಲ್ಲವೂ ತುರ್ತು ಪರಿಸ್ಥಿತಿಯ ಗುಣಲಕ್ಷಣಗಳು, ಸರ್ವಾಧಿಕಾರದ ಸೂಚಕಗಳು. ‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿ ಇದೆ’ ಎಂಬ ಮಾತನ್ನು ವಿರೋಧ ಪಕ್ಷಗಳ ಹಲವು ನಾಯಕರು ಹೇಳಿದ್ದಾರೆ. ಆದರೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದವುಗಳನ್ನು ಸಮರ್ಥಿಸಲು ಈಗಿನ ಸಂದರ್ಭದಲ್ಲಿ ಆಗುತ್ತಿರುವುದನ್ನು ಬಳಸಿಕೊಳ್ಳುವುದು ಖಂಡಿತ ತಪ್ಪು.

ತುರ್ತು ಪರಿಸ್ಥಿತಿ ಎಂಬುದು ಸರ್ವಾಧಿಕಾರಿ ಮನಃಸ್ಥಿತಿಯ ಸರ್ಕಾರ ಬಳಸಿದ ರಾಜಕೀಯ ಹಾಗೂ ಕಾನೂನು ಅಸ್ತ್ರ ಮಾತ್ರವೇ ಅಲ್ಲ. ಅದು ಸ್ವಾತಂತ್ರ್ಯಕ್ಕೆ ಮತ್ತು ಸಂವಿಧಾನದ ಅತ್ಯುತ್ತಮ ಮೌಲ್ಯಗಳಿಗೆ ವಿರುದ್ಧವಾಗಿ ವರ್ತಿಸುವ ಅಧಿಕಾರದ ಒಳಗೆ ಕೂತಿರುವ ಮನಃಸ್ಥಿತಿ. ನಮ್ಮ ಸ್ವಾತಂತ್ರ್ಯದ ವಿಚಾರದಲ್ಲಿ ಸರ್ಕಾರಗಳನ್ನು ಹಾಗೂ ರಾಜಕೀಯ ಪಕ್ಷಗಳನ್ನು ನಂಬಲು ಆಗುವುದಿಲ್ಲ ಎಂಬುದು ದೇಶ ಕಂಡ ತುರ್ತು ಪರಿಸ್ಥಿತಿಯ ವರ್ಷಾಚರಣೆಯ ಈ ಸಂದರ್ಭದಲ್ಲಿ ಅಗತ್ಯವಾಗಿ ಮನನ ಮಾಡಿಕೊಳ್ಳಬೇಕಾದ ಪಾಠ. ತಮ್ಮ ಸ್ವಾತಂತ್ರ್ಯವನ್ನು ಜನ ತಾವೇ ರಕ್ಷಿಸಿಕೊಳ್ಳಬೇಕು, ಆ ಸ್ವಾತಂತ್ರ್ಯ ಕಾಪಾಡುವ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಜನರೇ ಬಲಪಡಿಸಬೇಕು. ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮದೇ ಆಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.