ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಭಿವೃದ್ಧಿಯಲ್ಲಿ ಮುಂದೆ ಸಮಾನತೆಯಲ್ಲಿ ಹಿಂದೆ?

Last Updated 4 ನವೆಂಬರ್ 2020, 16:19 IST
ಅಕ್ಷರ ಗಾತ್ರ

ಹಿರಿಯ ವಿಜ್ಞಾನಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ. ಕೆ.ಕಸ್ತೂರಿ ರಂಗನ್ ನೇತೃತ್ವದ ಸಾರ್ವಜನಿಕ ಆಡಳಿತ ಕೇಂದ್ರ (ಪಿಎಸಿ) ಬಿಡುಗಡೆ ಮಾಡಿರುವ ವರದಿಯ ಬೆಳವಣಿಗೆಯ ಸೂಚ್ಯಂಕದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೆಯ ಸ್ಥಾನದಲ್ಲಿ ಇದೆ. ಆದರೆ, ಅದೇ ವರದಿಯಲ್ಲಿ ಇರುವ ಸಮಾನತೆಯ ಸೂಚ್ಯಂಕದಲ್ಲಿ ರಾಜ್ಯವು ಹನ್ನೆರಡನೆಯ ಸ್ಥಾನದಲ್ಲಿ ಇದೆ. ಅಭಿವೃದ್ಧಿ ಅಂದರೆ ಯಾವ ಬಗೆಯ ಅಭಿವೃದ್ಧಿ, ಸಮಾನತೆಯ ಬಗ್ಗೆ ಗಮನ ನೀಡದೆ ಅಭಿವೃದ್ಧಿ ಸಾಧ್ಯವೇ ಎಂಬ ಚರ್ಚೆಗಳಿಗೆ ಈ ವರದಿಯು ಇನ್ನಷ್ಟು ಇಂಬು ಕೊಡಬಹುದು. ಪಿಎಸಿ ಸಿದ್ಧಪಡಿಸಿರುವ ಈ ವರದಿಯು ಮೂರು ಪ್ರಮುಖ ಅಂಶಗಳನ್ನು ಆಧರಿಸಿದೆ. ಸಮಾನತೆ, ಬೆಳವಣಿಗೆ ಮತ್ತು ಸುಸ್ಥಿರತೆಯು ಆ ಮೂರು ಪ್ರಮುಖ ಅಂಶಗಳು. ಆರ್ಥಿಕ, ಸಾಮಾಜಿಕ ಹಾಗೂ ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ರಾಜ್ಯಗಳು ಎಷ್ಟರಮಟ್ಟಿಗೆ ಸಾಧನೆ ತೋರಿವೆ ಎಂಬುದನ್ನು ವರದಿಯು ಪರಿಶೀಲಿಸಿದೆ. ಸಮಾನತೆಯ ಸೂಚ್ಯಂಕದಲ್ಲಿ, ದೇಶದ 18 ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶವು ಮೊದಲ ಸ್ಥಾನದಲ್ಲಿ ಇದೆ. ಕರ್ನಾಟಕವು 12ನೆಯ ಸ್ಥಾನದಲ್ಲಿದೆ. ಕೇರಳ ಮತ್ತು ಛತ್ತೀಸಗಡ ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿ ದಕ್ಷಿಣದ ಬೇರೆ ಯಾವ ರಾಜ್ಯವೂ ಕರ್ನಾಟಕಕ್ಕಿಂತ ಕೆಳಗಿನ ಸ್ಥಾನದಲ್ಲಿ ಇಲ್ಲ ಎಂಬುದು ಗಮನಾರ್ಹ. ಹಾಗೆಯೇ, ರಾಜ್ಯದ ಸ್ಥಿತಿಯ ಬಗ್ಗೆ ಆಳುವ ವರ್ಗದ ಮುಖಕ್ಕೆ ಹಿಡಿದ ಕನ್ನಡಿಯೂ ಹೌದು ಇದು. ಸುಸ್ಥಿರ ಬೆಳವಣಿಗೆಯ ಪಟ್ಟಿಯಲ್ಲಿ ಕರ್ನಾಟಕವು ಎರಡನೆಯ ಸ್ಥಾನದಲ್ಲಿ ಇರುವುದು ಸಮಾಧಾನದ, ಖುಷಿಯ ಸಂಗತಿ. ಈ ಪಟ್ಟಿಯಲ್ಲಿ ಕೇರಳವು ಮೊದಲ ಸ್ಥಾನದಲ್ಲಿದೆ. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಇರುವ ಉತ್ತರಪ್ರದೇಶ ರಾಜ್ಯವು ದೊಡ್ಡ ರಾಜ್ಯಗಳ ಸಾಲಿನಲ್ಲಿ ಕೊನೆಯ ಸ್ಥಾನದಲ್ಲಿದೆ.

ಸುಸ್ಥಿರತೆಯ ಅಂಶವು, ಮಾನವ ಜನಾಂಗ, ಪರಿಸರ ಮತ್ತು ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡಬಲ್ಲ ಸಂಪನ್ಮೂಲಗಳು ಎಷ್ಟು ಲಭ್ಯವಿವೆ, ಅವುಗಳನ್ನು ಎಷ್ಟು ಸುಸ್ಥಿರವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ನಿಕಷಕ್ಕೆ ಒಳಪಡಿಸಿದೆ. ಇದಕ್ಕೆ ಸಂಬಂಧಿಸಿದ ಸೂಚ್ಯಂಕದಲ್ಲಿ ದೊಡ್ಡ ರಾಜ್ಯಗಳ ಪೈಕಿ ಕೇರಳವು ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಐದನೆಯ ಸ್ಥಾನದಲ್ಲಿದೆ. ಆರ್ಥಿಕ ಬೆಳವಣಿಗೆಯ ವಿಚಾರದಲ್ಲಿ ಕರ್ನಾಟಕವು ಮುಂಚೂಣಿ ರಾಜ್ಯಗಳ ಸಾಲಿನಲ್ಲೇ ಈಗಲೂ ಇದೆ ಎಂಬುದನ್ನು ಈ ಸೂಚ್ಯಂಕವು ಸ್ಪಷ್ಟಪಡಿಸಿದೆ. ಇದು ಕನ್ನಡಿಗರಲ್ಲಿ ಸಂತಸ ಮೂಡಿಸುವ ಸಂಗತಿ. ಆದರೆ, ಸಂಪನ್ಮೂಲಗಳ ಸಮಾನ ಹಂಚಿಕೆಯ ವಿಚಾರದಲ್ಲಿ ಕರ್ನಾಟಕದ ಸಾಧನೆ ಏನೇನೂ ಸಾಲದು ಎಂಬುದನ್ನು ಸೂಚ್ಯಂಕವು ಖಚಿತವಾಗಿ ಹೇಳುತ್ತಿದೆ. ಹಾಗೆಯೇ ಲಿಂಗಸಮಾನತೆಯನ್ನು ಸಾಧಿಸುವಲ್ಲಿ ಕೂಡ ಕರ್ನಾಟಕದ ಸಾಧನೆ ಕಳಪೆಯೇ ಆಗಿದೆ ಎನ್ನುವುದು ಕೂಡ ಈ ವರದಿಯಲ್ಲಿ ವ್ಯಕ್ತವಾಗಿರುವ ಇನ್ನೊಂದು ಪ್ರಮುಖ ಅಂಶ. ಆರ್ಥಿಕವಾಗಿ ಎಷ್ಟೇ ಬೆಳವಣಿಗೆ ಸಾಧಿಸಿದರೂ ಸಾಮಾಜಿಕ, ಆರ್ಥಿಕ ಹಾಗೂ ಲಿಂಗಸಮಾನತೆಯನ್ನು ಸಾಧಿಸಲು ಸಾಧ್ಯವಾಗದಿದ್ದರೆ, ಆ ಆರ್ಥಿಕ ಬೆಳವಣಿಗೆಯು ಸುಸ್ಥಿರವಾಗಿ ಇರುವುದಿಲ್ಲ ಎಂದು ಹೇಳಲು ಆಧಾರಗಳು ಸಿಗುತ್ತವೆ. ಹಾಗಾಗಿ, ಆಳುವ ವರ್ಗವು ಈ ವರದಿಯ ಮುಖ್ಯಾಂಶಗಳನ್ನು ಗಮನಿಸಿ, ಲೋಪಗಳನ್ನುಸರಿಪಡಿಸಿಕೊಳ್ಳಲು ಕಾರ್ಯತತ್ಪರ ಆಗಬಹುದು. ಕರ್ನಾಟಕದ ಆರ್ಥಿಕ ಬೆಳವಣಿಗೆ ದರವು ದೇಶದ ಇತರ ಹಲವು ರಾಜ್ಯಗಳಿಗಿಂತ ಉತ್ತಮವಾಗಿದೆ ಎನ್ನುವುದನ್ನು ಹಲವು ಸೂಚ್ಯಂಕಗಳು ಹೇಳುತ್ತವೆ. ನಿರುದ್ಯೋಗದ ಪ್ರಮಾಣ ಕಡಿಮೆ ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬುದನ್ನು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆ ಕಲೆ ಹಾಕಿರುವ
ಅಂಕಿ–ಅಂಶಗಳು ಹೇಳುತ್ತವೆ. ಆದರೆ, ಆರ್ಥಿಕ ಬೆಳವಣಿಗೆಯ ಪ್ರಯೋಜನಗಳು ಹೆಚ್ಚಿನ ಜನರಿಗೆ ಸಿಗುವಂತೆ ಮಾಡಲು ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ. ನೀತಿ ನಿರೂಪಣೆಯ ಸ್ಥಾನಗಳಲ್ಲಿ ಮಹಿಳೆಯರಿಗೆ ಇನ್ನಷ್ಟು ಅವಕಾಶ ಕಲ್ಪಿಸಿ, ಆ ಮೂಲಕ ಲಿಂಗಸಮಾನತೆ ಸಾಧಿಸುವ ದಿಸೆಯಲ್ಲೂ ಮುಂದಡಿ ಇರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT