ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜಾತಿ ಆಧಾರಿತ ನಿಗಮ ಸ್ಥಾಪನೆ; ಓಲೈಕೆಯ ರಾಜಕಾರಣ ಸಲ್ಲದು

Last Updated 18 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಜಾತಿ, ಸಮುದಾಯಗಳ ಹೆಸರಿನಲ್ಲಿ ರಾಜ್ಯ ಸರ್ಕಾರವು ನಿಗಮಗಳನ್ನು ಒಂದರ ಹಿಂದೆ ಇನ್ನೊಂದರಂತೆ ಸ್ಥಾಪಿಸಲು ಮುಂದಾಗಿದೆ. ಈ ಮೂಲಕ, ಸಮುದಾಯಗಳ ಓಲೈಕೆ ರಾಜಕಾರಣದಲ್ಲಿ ಸರ್ಕಾರವು ಬಹಿರಂಗವಾಗಿಯೇ ತೊಡಗಿಕೊಂಡಂತಿದೆ. ಸಮುದಾಯಗಳಲ್ಲಿನ ಬಡವರನ್ನು ಗುರುತಿಸಿ, ಅವರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲು ಜಾತಿ ಆಧರಿಸಿದ ನಿಗಮ ಅಗತ್ಯವೆಂದು ಸರ್ಕಾರ ಭಾವಿಸಿದಂತಿದೆ. ಆದರೆ, ಹೀಗೆ ಜಾತಿಗೊಂದು ನಿಗಮ ಸ್ಥಾಪಿಸುವ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯವೆನ್ನುವುದಕ್ಕೆ ಸರ್ಕಾರ ಯಾವುದೇ ಪುರಾವೆಯನ್ನು ಜನರ ಮುಂದಿರಿಸಿಲ್ಲ. ಕೆಲವು ಸಮುದಾಯಗಳು ಜಾತಿ ಕಾರಣಕ್ಕೇ ಶೋಷಣೆಗೆ ಗುರಿಯಾಗಿ, ಹಿಂದುಳಿದಿರುವುದು ನಿಜ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶೋಷಣೆಗೊಳಗಾದ ಇಂತಹ ಜಾತಿಗಳ ಅಭಿವೃದ್ಧಿಗೆ ನಿಗಮಗಳನ್ನು ರಚಿಸಿರುವುದಕ್ಕೆ ತಾತ್ವಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ. ಆದರೆ, ರಾಜ್ಯದಲ್ಲಿ ಪ್ರಬಲರೆಂದು ಗುರುತಿಸಿಕೊಂಡಿರುವ ಜಾತಿಗಳ ಹೆಸರಿನಲ್ಲಿ ಸಂಸ್ಥೆಗಳನ್ನು ರೂಪಿಸಿರುವುದಕ್ಕೆ ಯಾವ ತಾತ್ವಿಕ ಕಾರಣವೂ ಇಲ್ಲ. ರಾಜ್ಯದಲ್ಲಿ ಈಗಾಗಲೇ ಬ್ರಾಹ್ಮಣ, ವಿಶ್ವಕರ್ಮ, ಆರ್ಯವೈಶ್ಯ ಸಮುದಾಯಗಳ ಅಭಿವೃದ್ಧಿ ನಿಗಮಗಳಿವೆ. ಇಂಥ ನಿಗಮಗಳಿಂದ ಈವರೆಗೆ ಆ ಸಮುದಾಯಗಳ ಎಷ್ಟು ಮಂದಿ ಬಡವರ ಅಭಿವೃದ್ಧಿ ಆಗಿದೆ ಮತ್ತು ಯಾವ ರೀತಿಯಲ್ಲಿ ಆಗಿದೆ ಎಂದು ಸರ್ಕಾರ ಹೇಳಬೇಕಾಗಿದೆ. ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಇದರ ಬೆನ್ನಿಗೇ ವೀರಶೈವ– ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯ ನಿರ್ಧಾರವೂ ಹೊರಬಿದ್ದಿದೆ. ಈ ಹಿಂದೆ,
ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಯ ಆದೇಶವನ್ನು ಸರ್ಕಾರವು ತರಾತುರಿಯಲ್ಲಿ ಹೊರಡಿಸಿತ್ತು. ಇಂಥ ನಿಗಮಗಳಿಂದ ಆಡಳಿತಾರೂಢ ಪಕ್ಷಕ್ಕೆ ಚುನಾವಣೆಯಲ್ಲಿ ಒಂದಷ್ಟು ಲಾಭವಾಗಬಹುದು ಹಾಗೂ ಕೆಲವು ಅಧಿಕಾರ ಕೇಂದ್ರಗಳ ರಚನೆಯಾಗಿ, ಆ ಸ್ಥಾನಗಳನ್ನು ಹಿಡಿದವರ ಅಭಿವೃದ್ಧಿಯಾಗಬಹುದೇ ವಿನಾ ಬಡವರ ಏಳಿಗೆಗೆ ಇವುಗಳಿಂದ ಆಗಿರುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲ.

ಕೊರೊನಾ ಸೋಂಕಿನ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಸರ್ಕಾರ ಒದ್ದಾಡುತ್ತಿದೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಸಮುದಾಯಗಳ ಹೆಸರಿನಲ್ಲಿ ನಿಗಮಗಳನ್ನು ರಚಿಸಿ ಸರ್ಕಾರ ಕೋಟಿಗಟ್ಟಲೆ ಹಣ ನೀಡುವುದು ವಿವೇಕದ ನಡೆಯಲ್ಲ. ಮರಾಠಾ ಅಭಿವೃದ್ಧಿ ನಿಗಮದ ರಚನೆಯನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡಲು ಚೌಕಾಸಿ ಮಾಡುವ ಸರ್ಕಾರವು ಜಾತಿಯ ಹೆಸರಿನಲ್ಲಿ ರಚನೆಯಾಗಿರುವ ಇಂಥ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಕೊಡುವ ಔದಾರ್ಯ ತೋರಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯ ತೀರ್ಮಾನ ಹೊರಬಿದ್ದ ಕೂಡಲೇ ಒಕ್ಕಲಿಗ ಸಮುದಾಯದ ಹೆಸರಿನಲ್ಲೂ ನಿಗಮ ಸ್ಥಾಪಿಸಬೇಕೆನ್ನುವ ಬೇಡಿಕೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಸಮುದಾಯಗಳೂ ತಂತಮ್ಮ ಜಾತಿಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಬೇಕೆಂದು ಒತ್ತಾಯಗಳನ್ನು ಮಂಡಿಸಬಹುದು. ಹೀಗಾದಲ್ಲಿ, ಜಾತಿಗೊಂದು ನಿಗಮ ಸ್ಥಾಪಿಸುವುದು ಹಾಗೂ ಅವುಗಳಿಗೆ ಅನುದಾನ ನೀಡುವುದೇ ಸರ್ಕಾರದ ಕೆಲಸವಾಗಿಬಿಡುತ್ತದೆ.

ಸಮುದಾಯ ಓಲೈಕೆಯ ರಾಜಕಾರಣವನ್ನು ವಿರೋಧಿಸುವುದಾಗಿ ಹೇಳುವ ಪಕ್ಷದ ನೇತೃತ್ವದ ಸರ್ಕಾರವೇ, ಈಗ ಹೊಸ ನಿಗಮಗಳ ಮೂಲಕ ತಾನು ಮಾಡಲು ಹೊರಟಿರುವುದೇನು ಎನ್ನುವುದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮುದಾಯಗಳ ಹೆಸರಿನಲ್ಲಿ ನಿಗಮ ಸ್ಥಾಪಿಸುವ ‘ಓಲೈಕೆಯ ರಾಜಕಾರಣ’ದಿಂದ ಸರ್ಕಾರ ಹೊರಬರಬೇಕು. ಹತ್ತು ಹಲವು ಸಮುದಾಯಗಳು ತಮಗೂ ಒಂದು ನಿಗಮ ಸ್ಥಾಪಿಸಿ ಎಂದು ಬೇಡಿಕೆ ಸಲ್ಲಿಸುವ ಸ್ಥಿತಿ ಉಂಟಾಗದಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT