ಸೋಮವಾರ, ಮಾರ್ಚ್ 1, 2021
24 °C

ಪ್ರಶ್ನೆಪತ್ರಿಕೆ ಸೋರಿಕೆ: ಕೆಪಿಎಸ್‌ಸಿ ಶುದ್ಧೀಕರಣಕ್ಕೆ ಇನ್ನಾದರೂ ಪಣ ತೊಡಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಯಾವುದೇ ಒಂದು ವ್ಯವಸ್ಥೆಯು ಸಂವೇದನೆಯನ್ನು ಕಳೆದುಕೊಂಡರೆ, ಅದು ಭಂಡತನಕ್ಕೆ ಒಗ್ಗಿಹೋಗಲು ಹೆಚ್ಚು ದಿನಗಳೇನೂ ಬೇಕಾಗದು ಎಂಬ ಮಾತಿಗೆ ನಿದರ್ಶನದಂತಿದೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯವೈಖರಿ. ಇತ್ತೀಚೆಗಂತೂ ಅದರ ಒಂದೊಂದು ನಡೆಯೂ ವಿಶ್ವಾಸಾರ್ಹತೆಗೆ ಧಕ್ಕೆಯುಂಟು ಮಾಡುವಂತಹದ್ದೇ ಆಗಿರುವುದು ಕಾಕತಾಳೀಯವೇನಲ್ಲ. ಈ ತಿಂಗಳ 24ರಂದು ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಆಯೋಗದ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಸರ್ಕಾರಿ ಉದ್ಯೋಗ ಪಡೆಯಬಯಸುವವರ ಆಕಾಂಕ್ಷೆಗೆ ತಣ್ಣೀರೆರಚುವ ಇಂತಹ ವಿದ್ಯಮಾನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪದೇ ಪದೇ ಇಂತಹ ತಪ್ಪುಗಳು ಆಗುತ್ತಿದ್ದರೂ ಅವುಗಳನ್ನು ನಿಯಂತ್ರಿಸಲು ಆಗದೇ ಇರುವುದು ನಾನಾ ಬಗೆಯ ಅನುಮಾನಗಳಿಗೆ ಕಾರಣವಾಗುತ್ತದೆ. ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದಿಂದ ಆಯೋಗವು ಲಾಗಾಯ್ತಿನಿಂದಲೂ ಕರ್ತವ್ಯಭ್ರಷ್ಟತೆಯ ಕಳಂಕಕ್ಕೆ ಗುರಿಯಾಗುತ್ತಲೇ ಬಂದಿದೆ. ಹಾಗಿದ್ದರೂ ವ್ಯವಸ್ಥೆಯನ್ನು ಸರಿದಾರಿಗೆ ತರುವ ಗಂಭೀರ ಪ್ರಯತ್ನವನ್ನು ಮಾಡಿಲ್ಲ ಎಂಬುದಕ್ಕೆ ಈಗ ಬೆಳಕಿಗೆ ಬಂದಿರುವ  ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಪುರಾವೆ ಒದಗಿಸುತ್ತದೆ. ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರು 16 ಜನರನ್ನು ಬಂಧಿಸಿದ್ದಾರೆ. ಸಣ್ಣದೊಂದು ಸಂಶಯದ ಎಳೆಯನ್ನು ಹಿಡಿದುಕೊಂಡು, ಮಫ್ತಿಯಲ್ಲಿ ಕಾರ್ಯನಿರ್ವಹಿಸಿ ಇಂತಹದ್ದೊಂದು ಪ್ರಶ್ನೆಪತ್ರಿಕೆ ಸೋರಿಕೆಯ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿರುವುದು ಶ್ಲಾಘನೀಯ. ಪ್ರಶ್ನೆಪತ್ರಿಕೆಗಳ ಗೋಪ್ಯತೆ ಕಾಪಾಡುವುದು ಆಯೋಗದ ಹೊಣೆಗಾರಿಕೆ. ಅದಕ್ಕೆ ಬೇಕಾದ ಬಿಗಿಯಾದ ವ್ಯವಸ್ಥೆ ರೂಪಿಸುವುದು ಸಾಧ್ಯವಾಗದ ಸಂಗತಿಯೇನೂ ಅಲ್ಲ. ಆದರೆ, ಅಕ್ರಮದ ಕೂಪದಲ್ಲಿ ಮುಳುಗೇಳು ವುದನ್ನೇ ಅಭ್ಯಾಸ ಮಾಡಿಕೊಂಡಂತಿರುವ ಲೋಕಸೇವಾ ಆಯೋಗಕ್ಕೆ ಇಂತಹ ವ್ಯವಸ್ಥೆ ರೂಪಿಸುವ ಆಸ್ಥೆ ಇದ್ದಂತಿಲ್ಲ. ಉದ್ಯೋಗ ಆಕಾಂಕ್ಷಿಗಳ ವಿಶ್ವಾಸ ಗಳಿಸುವುದಾಗಲೀ ನೇಮಕಾತಿ  ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮೂಡಿಸುವುದಾಗಲೀ ಅದಕ್ಕೆ ಬೇಕಿರುವಂತೆ ಕಾಣುತ್ತಿಲ್ಲ ಎಂಬುದನ್ನು ಪದೇ ಪದೇ ಬೆಳಕಿಗೆ ಬರುತ್ತಿರುವ ಇಂತಹ ಪ್ರಕರಣಗಳು ಸಾರಿ ಹೇಳುತ್ತಿವೆ.

1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ವಿವಾದಿತ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಕೆಪಿಎಸ್‌ಸಿಯನ್ನು ಮುಚ್ಚಲು ಇದು ಸಕಾಲ’ ಎಂದು ಹಿಂದೊಮ್ಮೆ ಚಾಟಿ ಬೀಸಿತ್ತು. ಆದರೆ ನ್ಯಾಯಾಲಯದ ಇಂತಹ ಕಟುಮಾತುಗಳು ಕೂಡ ಆಯೋಗದ ಕಾರ್ಯವೈಖರಿಯನ್ನು ಸುಧಾರಿಸಿದಂತೆ ಗೋಚರಿಸುತ್ತಿಲ್ಲ. ಅಧಿಕಾರಸ್ಥರ ತಾಳಕ್ಕೆ ತಕ್ಕಂತೆ ಕುಣಿಯುವ ಕೆಪಿಎಸ್‌ಸಿಯಲ್ಲಿ ವಶೀಲಿಬಾಜಿ ಎಗ್ಗಿಲ್ಲದೇ ನಡೆಯುತ್ತದೆ ಎನ್ನುವುದು ಜನಜನಿತವಾಗಿದೆ. ನೇಮಕಾತಿ ಸಂದರ್ಭದಲ್ಲಿ ನಡೆಯುವ ಭ್ರಷ್ಟಾಚಾರ ಒತ್ತಟ್ಟಿಗಿರಲಿ, ಪರೀಕ್ಷೆಯ ಹಂತವೇ ಅಕ್ರಮಗಳ ಸುಳಿಗೆ ಸಿಲುಕಿದರೆ, ಆ ಮೂಲಕ ಆಯ್ಕೆಯಾಗುವ ಸಿಬ್ಬಂದಿಯಿಂದ ಪ್ರಾಮಾಣಿಕತೆಯನ್ನು ಮತ್ತು ದಕ್ಷತೆಯನ್ನು ನಿರೀಕ್ಷಿಸಲು ಸಾಧ್ಯವೇ? ಸಾಂವಿಧಾನಿಕ ಸಂಸ್ಥೆಯೊಂದು ಪಾರದರ್ಶಕವಾಗಿರಬೇಕು ಎಂದು ಬಯಸುವುದು ನಾಗರಿಕರ ಹಕ್ಕು. ಅವರ ವಿಶ್ವಾಸ ಉಳಿಸಿಕೊಳ್ಳುವುದು ಮತ್ತು ನೇಮಕಾತಿಯು ನ್ಯಾಯಯುತವಾಗಿ ನಡೆಯುತ್ತದೆ ಎಂಬ ಭರವಸೆಯನ್ನು ಅವರಲ್ಲಿ ಮೂಡಿಸುವುದು ಆಯೋಗ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಸಂಪೂರ್ಣ ಶುದ್ಧೀಕರಣಕ್ಕೆ ಬೇಕಿರುವ ಕಠಿಣ ನಿರ್ಧಾರಗಳನ್ನು ಈಗಲಾದರೂ ತೆಗೆದುಕೊಳ್ಳಬೇಕು. ಇಲ್ಲವಾದರೆ ಚೂರುಪಾರು ಉಳಿದಿರುವ ವಿಶ್ವಾಸ ಕೂಡ ಮಣ್ಣುಪಾಲಾಗುತ್ತದೆ. ಅಂತೆಯೇ ‘ಲೋಪಗಳನ್ನು ಸರಿಪಡಿಸಲು ಸಾಧ್ಯವಿಲ್ಲದಿದ್ದರೆ, ಕೆಪಿಎಸ್‌ಸಿಯನ್ನು ರದ್ದು ಮಾಡುವುದೇ ಸೂಕ್ತ’ ಎಂಬ ಹೈಕೋರ್ಟ್‌ ಮಾತನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ಹಕ್ಕೊತ್ತಾಯ ಮುಂಚೂಣಿಗೆ ಬರಬಹುದು. ಉದ್ಯೋಗ ಆಕಾಂಕ್ಷಿಗಳು ಮಾತ್ರವಲ್ಲ ಸಾರ್ವಜನಿಕ ವಲಯವೂ ಇಂತಹದ್ದೊಂದು ಬೇಡಿಕೆಯನ್ನು ಗಂಭೀರವಾಗಿ ಮಂಡಿಸುವ ದಿನಗಳು ಬಂದರೂ ಅಚ್ಚರಿಪಡಬೇಕಾಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು