ಭಾನುವಾರ, ಅಕ್ಟೋಬರ್ 25, 2020
22 °C

ಪ್ರವಾಹ: ಬೇಕು ಸಮರ್ಪಕ ನಿರ್ವಹಣೆ, ಪರಿಹಾರ ಕಾರ್ಯ ಚುರುಕಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ತಿಂಗಳ ಹಿಂದಷ್ಟೇ ರಾಜ್ಯದ ವಿವಿಧ ಭಾಗಗಳಲ್ಲಿ ಅಬ್ಬರಿಸಿದ್ದ ಮಳೆ, ಕೊಂಚ ಬಿಡುವಿನ ಬಳಿಕ ಈಗ ಮತ್ತೊಮ್ಮೆ ಅಟಾಟೋಪ ತೋರಿದೆ. ಆಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯಾಗಿತ್ತು. ಈ ಬಾರಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ವರುಣನ ಆರ್ಭಟಕ್ಕೆ ತುತ್ತಾಗಿವೆ. ವಾಯುಭಾರ ಕುಸಿತದಿಂದ ಈ ವಾರದ ಆರಂಭದಿಂದಲೇ ಸುರಿಯತೊಡಗಿದ್ದ ಮಳೆ ಪ್ರಮಾಣ ಈಗ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಅದರಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಜನ ತತ್ತರಿಸಿದ್ದಾರೆ. ಮಹಾರಾಷ್ಟ್ರದಿಂದ ಕೃಷ್ಣಾ ಹಾಗೂ ಅದರ ಉಪನದಿಗಳಿಗೆ ಹರಿದುಬರುವ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ನೂರಾರು ಗ್ರಾಮಗಳು ಜಲಾವೃತಗೊಳ್ಳುವ ಭೀತಿಗೆ ಒಳಗಾಗಿವೆ. ಕಲಬುರ್ಗಿ, ಯಾದಗಿರಿ, ಬೀದರ್‌, ಬೆಳಗಾವಿ ಜಿಲ್ಲೆಗಳಲ್ಲಿ ಉಕ್ಕಿ ಹರಿದಿರುವ ನದಿಗಳ ನೀರು ಮನೆಗಳಿಗೆ ನುಗ್ಗಿ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಇಂತಹ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಜಲಪ್ರಳಯದಿಂದ ಹೀಗೆ ಬೀದಿಗೆ ಬಂದವರಿಗೆ ಸರ್ಕಾರದ ಕಾಳಜಿ ಕೇಂದ್ರಗಳು ತಾತ್ಕಾಲಿಕ ಆಸರೆಯಾಗಿವೆಯಾದರೂ ಭವಿಷ್ಯದ ಚಿಂತೆ ಅವರನ್ನು ಕಾಡುತ್ತಿದೆ. ಸಾವಿರಾರು ಎಕರೆ ಕೃಷಿ ಭೂಮಿ ನೀರುಪಾಲಾಗಿರುವುದರಿಂದ ಮುಂದೇನು ಎಂಬ ಆತಂಕ ಅವರ ನಿದ್ದೆಗೆಡಿಸಿದೆ. ಜನರ ಮೊಗದಲ್ಲಿ ಮಂದಹಾಸ ಮೂಡಿಸಬೇಕಾದ ಮಳೆ ಪದೇ ಪದೇ ಹೀಗೆ ಅನಾಹುತಕಾರಿಯಾಗಿ ಕಾಡುವುದರಲ್ಲಿ ಮಾನವನಿರ್ಮಿತ ಕಾರಣಗಳೆಷ್ಟು ಎಂಬ ಬಗ್ಗೆ ಗಂಭೀರವಾದ ಆತ್ಮಾವ ಲೋಕನ ನಡೆಯಬೇಕು. ಇಲ್ಲದಿದ್ದರೆ, ಇಂತಹ ಸಂಕಷ್ಟಗಳು ನಿರಂತರ ವಿದ್ಯಮಾನಗಳಾಗುತ್ತವೆ. ನೂರಾರು ರಸ್ತೆ, ಸೇತುವೆಗಳು ಮುಳುಗಿವೆ. ಸಂಪರ್ಕ ತುಂಡರಿಸಿದೆ. ಜೀವಹಾನಿ ಆಗದಂತೆ ನೋಡಿಕೊಳ್ಳುವ ಗುರುತರ ಹೊಣೆ ಸರ್ಕಾರದ ಮೇಲಿದೆ.

ಪದೇ ಪದೇ ಉಂಟಾಗುವ ಪ್ರವಾಹ ಸ್ಥಿತಿಯಿಂದ ಜನ ತತ್ತರಿಸುತ್ತಿದ್ದರೂ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಮಾಧ್ಯಮಗಳ ಎದುರು ಸಂತ್ರಸ್ತರು ವ್ಯಕ್ತಪಡಿಸಿರುವ ಆಕ್ರೋಶ, ಲಘುವಾಗಿ ಪರಿಗಣಿಸುವಂತಹದ್ದಲ್ಲ. ಪ್ರವಾಹ ಪರಿಹಾರಕ್ಕೆ ಕಳೆದ ವರ್ಷ ಕೇಂದ್ರದಿಂದ ರಾಜ್ಯಕ್ಕೆ ದೊರೆತ ಹಣಕಾಸಿನ ನೆರವು ತೀರಾ ಕಡಿಮೆ. ಇಂತಹ ಸಂದರ್ಭಗಳಲ್ಲಿ ಸಮೀಕ್ಷೆ, ವರದಿಯ ಹೆಸರಿನಲ್ಲಿ ವಿಳಂಬ ಸಲ್ಲದು. ತಕ್ಷಣದ ಸ್ಪಂದನ ಅಗತ್ಯ. ಮಳೆಗೆ ಕೊಚ್ಚಿಹೋದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು. ಶಾಶ್ವತ ಪರಿಹಾರ ಕ್ರಮಗಳ ಕುರಿತೂ ಯೋಚಿಸಬೇಕು. ಉಪಚುನಾವಣೆಯ ಒತ್ತಡ, ಕೋವಿಡ್‌ ಕಾರಣದಿಂದ ಹದಗೆಟ್ಟಿರುವ ಆರ್ಥಿಕ ಸ್ಥಿತಿ ಇವ್ಯಾವುವೂ ಮಳೆ ಸಂತ್ರಸ್ತರ ಕಣ್ಣೀರೊರೆಸಲು ಅಡ್ಡಿಯಾಗಬಾರದು. ಒಂದೆಡೆ, ಭಾರಿ ಮಳೆಗೆ ಹವಾಮಾನ ಬದಲಾವಣೆ ಒಂದು ಕಾರಣ. ಇನ್ನೊಂದೆಡೆ, ಹೆಚ್ಚು ಮಳೆ ಬಿದ್ದರೂ ಪ್ರವಾಹಸ್ಥಿತಿ ಎದುರಾಗದಂತೆ ನೋಡಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಗಂಭೀರ ಚಿಂತನೆ, ಪ್ರಯತ್ನಗಳು ನಡೆಯುತ್ತಿಲ್ಲ. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.

ತಮ್ಮ ಊರಿನ ನದಿ, ಹಳ್ಳಗಳು ತುಂಬಿ ಹರಿದು ನೀರು ತಮ್ಮ ಮನೆಗಳ ತನಕ ಬರುವುದೇಕೆ ಎಂಬ ಬಗ್ಗೆ ಗ್ರಾಮಸ್ಥರೂ ಚಿಂತಿಸಬೇಕು. ನಗರಗಳು ಕಾಂಕ್ರೀಟ್ ಕಾಡುಗಳಾಗಿವೆ. ರಾಜಕಾಲುವೆಗಳು ಒತ್ತುವರಿಗೆ ಒಳಗಾಗಿವೆ. ಅದರೊಂದಿಗೆ ಅಸಮರ್ಪಕ ನಿರ್ವಹಣೆಯೂ ಸೇರಿಕೊಂಡ ಕಾರಣ ತಗ್ಗುಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಿಸುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ ಕಾಡುಮೇಡುಗಳ ಒತ್ತುವರಿ, ನದಿ ತೀರಗಳ ಅತಿಕ್ರಮಣ, ಹೂಳು ತುಂಬಿದ ಕೆರೆಕಟ್ಟೆಗಳ ಬಗೆಗಿನ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಬೆಲೆ ತೆರುವಂತಾಗಿದೆ. ಇಂತಹುದೇ ಸ್ಥಿತಿಯನ್ನು ಈಗ ತೆಲಂಗಾಣವೂ ಎದುರಿಸುತ್ತಿದೆ. ಹೈದರಾಬಾದ್‌ ನಗರದ ಹಲವು ಪ್ರದೇಶಗಳಿಗೂ ಮಳೆನೀರು ನುಗ್ಗಿದ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆನೀರು ನಿರ್ವಹಣಾ ವ್ಯವಸ್ಥೆ ಎಲ್ಲಿಯವರೆಗೆ ನಮ್ಮ ಪ್ರಮುಖ ಆದ್ಯತೆಯಾಗುವುದಿಲ್ಲವೋ ಅಲ್ಲಿಯವರೆಗೂ ಈ ಬಗೆಯ ಅನಾಹುತಗಳು ತಪ್ಪಿದ್ದಲ್ಲ. ಭಾರಿ ಮಳೆಗೆ ಹಿಂದೆ ಉತ್ತರಾಖಂಡ ನಲುಗಿತ್ತು, ಕಳೆದ ಬಾರಿ ಕೇರಳ ತೀವ್ರ ಹಾನಿಗೆ ಒಳಗಾಗಿತ್ತು. ನಮ್ಮ ಮಡಿಕೇರಿಯೂ ತತ್ತರಿಸಿತ್ತು. ಈಗ ಉತ್ತರ ಕರ್ನಾಟಕ ಹಾಗೂ ತೆಲಂಗಾಣದ ಕೆಲವು ಜಿಲ್ಲೆಗಳು ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿವೆ. ವಿಪತ್ತುಗಳಿಂದ ಪಾಠ ಕಲಿಯಬೇಕು. ಪರಿಣಾಮ ಕನಿಷ್ಠಗೊಳಿಸಲು ಮತ್ತು ಅವು ಮರುಕಳಿಸದಂತೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು