ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯತ್ತ ವಿದೇಶಿ ಬಂಡವಾಳ ಹರಿವು: ಸಕಾರಾತ್ಮಕ ಬೆಳವಣಿಗೆ

Last Updated 8 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ದೇಶಿ ಅರ್ಥ ವ್ಯವಸ್ಥೆಯ ನಾಡಿಮಿಡಿತ ಎಂದೇ ಪರಿಗಣಿಸಲಾಗುವ ಮುಂಬೈ ಷೇರುಪೇಟೆಯು ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಆಕರ್ಷಿಸುತ್ತಿದೆ. ಹೊಸ ಹಣಕಾಸು ವರ್ಷದ ಆರಂಭದ ದಿನಗಳಲ್ಲಿ ವಿದೇಶಿ ಹೂಡಿಕೆಯ ಹೆಚ್ಚಳದ ಕಾರಣಕ್ಕೆ ಷೇರುಪೇಟೆಯಲ್ಲಿ ಗೂಳಿಯ ನಾಗಾಲೋಟ ಮುಂದುವರಿದಿದೆ. ಸಂವೇದಿ ಸೂಚ್ಯಂಕವು 39 ಸಾವಿರ ಅಂಶಗಳನ್ನು ಇದೇ ಮೊದಲ ಬಾರಿಗೆ ಮುಟ್ಟಿರುವುದು ಪೇಟೆಯಲ್ಲಿನ ಖರೀದಿ ಉತ್ಸಾಹ ಧ್ವನಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2019–20) ದೇಶಿ ಆರ್ಥಿಕ ಬೆಳವಣಿಗೆ (ಜಿಡಿಪಿ) ದರವು ಶೇ 7.5ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿರುವುದೂ ಶುಭಸಂಕೇತವಾಗಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳ ಪೈಕಿ ಭಾರತದ ಅರ್ಥವ್ಯವಸ್ಥೆಯು ಸುಸ್ಥಿರ ಬೆಳವಣಿಗೆ ದಾಖಲಿಸುತ್ತಿರುವುದರಿಂದ ವಿದೇಶಿ ಬಂಡವಾಳವು ಗಮನಾರ್ಹ ಪ್ರಮಾಣದಲ್ಲಿ ಹರಿದುಬರುತ್ತಿದೆ.ಈ ವರ್ಷದ ಫೆಬ್ರುವರಿಯಿಂದ ಈಚೆಗೆ ದೇಶಿ ಷೇರು ಹಾಗೂ ಸಾಲ ಮಾರುಕಟ್ಟೆಯಲ್ಲಿಒಟ್ಟಾರೆ ₹ 65,797 ಕೋಟಿ ಹೂಡಿಕೆಯಾಗಿದೆ. ಮಾರ್ಚ್‌ ತಿಂಗಳ ಒಳಹರಿವು (₹ 45,981 ಕೋಟಿ) ಏಳು ವರ್ಷಗಳಲ್ಲಿನ ಗರಿಷ್ಠ ಮಟ್ಟವಾಗಿದೆ. 2012ರ ನಂತರದ ಅತಿಹೆಚ್ಚು ಪ್ರಮಾಣದ ಈ ಹೂಡಿಕೆ ನೆರವಿನಿಂದ ಷೇರುಪೇಟೆಯು ಮಾರ್ಚ್‌ನಲ್ಲಿ ಶೇ 8ರಷ್ಟು ಏರಿಕೆ ಕಂಡಿತ್ತು. ಏಪ್ರಿಲ್‌ ತಿಂಗಳ ಆರಂಭಿಕ ದಿನಗಳಲ್ಲಿನ ಹೂಡಿಕೆಯೂ ಉತ್ತೇಜಕವಾಗಿದೆ. ದೇಶಿ ಅರ್ಥ ವ್ಯವಸ್ಥೆಯ ಬೆಳವಣಿಗೆ ಕುರಿತ ಆಶಾದಾಯಕವಾದ ಮುನ್ನೋಟ, ಸಾರ್ವತ್ರಿಕ ಚುನಾವಣೆ ನಂತರ ಕೇಂದ್ರದಲ್ಲಿ ಅಸ್ಥಿರತೆ ಉಂಟಾಗಲಾರದು ಎಂದು ಒಂದು ವರ್ಗದ ಹೂಡಿಕೆದಾರರು ಹೊಂದಿರುವ ನಿರೀಕ್ಷೆಯು ದೇಶಿ ಷೇರುಪೇಟೆಯತ್ತ ವಿದೇಶಿ ಬಂಡವಾಳ ಗಮನಾರ್ಹ ಪ್ರಮಾಣದಲ್ಲಿ ಹರಿದುಬರಲು ಮುಖ್ಯ ಕಾರಣವಾಗಿವೆ. ಡಾಲರ್‌ ಎದುರು ರೂಪಾಯಿ ವಿನಿಮಯ ದರ ಚೇತರಿಕೆ ಕಾಣುತ್ತಿರುವುದೂ ಹೂಡಿಕೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿರಬಹುದು. ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿಪ್ರತೀ ಡಾಲರ್‌ಗೆ ₹ 74ರಂತಿದ್ದ ಕರೆನ್ಸಿ ವಿನಿಮಯ ದರವು ಈಗ ಶೇ 7ರಷ್ಟು ಹೆಚ್ಚಳಗೊಂಡು ₹ 70ರ ಆಸುಪಾಸಿನಲ್ಲಿದೆ. 2018ರಲ್ಲಿ ಭಾರತಕ್ಕೆ ಹರಿದು ಬಂದಿದ್ದ ವಿದೇಶಿ ನೇರ ಬಂಡವಾಳದ ಪ್ರಮಾಣವು (ಎಫ್‌ಡಿಐ) ಚೀನಾಕ್ಕಿಂತ ಹೆಚ್ಚಿಗೆ ಇತ್ತು. ಎರಡು ದಶಕಗಳಲ್ಲಿ ಮೊದಲ ಬಾರಿಗೆ ಈ ಪ್ರಮಾಣದ ಎಫ್‌ಡಿಐ ಹರಿದುಬಂದಿತ್ತು. ಚೀನಾದ ಆರ್ಥಿಕತೆಯು ಕಳೆದ ಒಂದು ವರ್ಷದಲ್ಲಿ ಕುಂಠಿತಗೊಂಡಿದೆ. ಇನ್ನೊಂದೆಡೆ, ಭಾರತದ ಆರ್ಥಿಕತೆಯು ತುಲನಾತ್ಮಕವಾಗಿ ವೇಗದ ಬೆಳವಣಿಗೆ ದಾಖಲಿಸುತ್ತಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತವು ಮಹತ್ವದ ಕೊಡುಗೆ ನೀಡಲಿದೆ ಎಂಬ ನಿರೀಕ್ಷೆ ಹೊಂದಿರುವ ಹೂಡಿಕೆದಾರರು, ಅದರ ಪ್ರಯೋಜನ ಬಾಚಿಕೊಳ್ಳಲು ಮುಂದಾಗಿದ್ದಾರೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಸೇರಿದಂತೆ, ಪಾಶ್ಚಿಮಾತ್ಯ ದೇಶಗಳಲ್ಲಿನ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಕಡಿಮೆ ಮಟ್ಟದಲ್ಲಿಯೇ ಮುಂದುವರಿಸಲು ತೀರ್ಮಾನಿಸಿವೆ. ಗರಿಷ್ಠ ಲಾಭ ತಂದುಕೊಡಲಿರುವ ಭಾರತದ ಮಾರುಕಟ್ಟೆಯತ್ತ ವಿದೇಶಿ ಹೂಡಿಕೆದಾರರು ಗಮನ ಕೇಂದ್ರೀಕರಿಸಲು ಇದೂ ಒಂದು ಮುಖ್ಯ ಕಾರಣ. ದೇಶಿ ಮಧ್ಯಮ ಗಾತ್ರದ ಕಂಪನಿಗಳ ಷೇರುಗಳು ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿವೆ.ವಿದೇಶಿ ಬಂಡವಾಳದ ಒಳಹರಿವು ದೇಶಿ ಆರ್ಥಿಕತೆ ಪಾಲಿಗೆ ಒಳ್ಳೆಯ ಬೆಳವಣಿಗೆ. ದೇಶಿ ನೀತಿ ನಿರೂಪಕರು ಈ ಹೂಡಿಕೆದಾರರನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು. ಹೂಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ನಿರ್ಧಾರ ಕೈಗೊಳ್ಳಬಾರದು. ಚುನಾವಣೆ ನಂತರ ಕೇಂದ್ರದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಹೂಡಿಕೆದಾರರ ವಿಶ್ವಾಸ ಕಾಯ್ದುಕೊಳ್ಳಬೇಕು. ದೇಶಿ ಆರ್ಥಿಕತೆಯ ದೀರ್ಘಾವಧಿ ಹಿತದೃಷ್ಟಿಯಿಂದ ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT