ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ವಿದ್ಯಮಾನ ನ್ಯಾಯಾಂಗದಿಂದ ನೆರವಿನ ಹಸ್ತ

Last Updated 3 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಭಾರತದ ಮ್ಯೂಚುವಲ್‌ ಫಂಡ್‌ ಉದ್ಯಮಕ್ಕೆ ‘ಅತ್ಯುತ್ತಮ’ ಶ್ರೇಯಾಂಕವು ಈಚೆಗೆ ದೊರೆತಿತ್ತು. ಹೂಡಿಕೆಯ ವಿವರಗಳನ್ನು ಸರಿಯಾಗಿ ಬಹಿರಂಗಪಡಿಸುವ ಮತ್ತು ಶುಲ್ಕ ಎಷ್ಟೆಂಬುದನ್ನು ಹೂಡಿಕೆದಾರರಿಗೆ ಪಾರದರ್ಶಕವಾಗಿ ತಿಳಿಸುವ ವಿಭಾಗಗಳಲ್ಲಿ ಈ ಶ್ರೇಯಾಂಕ ಸಿಕ್ಕಿತ್ತು. ಮಾರ್ನಿಂಗ್‌ಸ್ಟಾರ್‌ ಸಂಸ್ಥೆಯು ಉತ್ತರ ಅಮೆರಿಕ, ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಒಟ್ಟು 26 ಮಾರುಕಟ್ಟೆಗಳಲ್ಲಿ ಮ್ಯೂಚುವಲ್‌ ಫಂಡ್‌ ಮೂಲಕ ಹೂಡಿಕೆ ಮಾಡಿರುವವರ ಅನುಭವಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಿತ್ತು. ಭಾರತದಲ್ಲಿ ಮ್ಯೂಚುವಲ್‌ ಫಂಡ್‌ ಉದ್ಯಮವು ಸಣ್ಣ ಹೂಡಿಕೆದಾರರ ವಿಶ್ವಾಸವನ್ನು ಬಹುಮಟ್ಟಿಗೆ ಗಳಿಸಿಕೊಂಡಿದೆ ಎಂಬುದು ನಿಜ. ಈಕ್ವಿಟಿ ಮಾರುಕಟ್ಟೆಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ದೊಡ್ಡ ಪ್ರಮಾಣದ ಬಂಡವಾಳ ಇಲ್ಲದವರು, ನೇರ ಹೂಡಿಕೆಗೆ ಅಗತ್ಯವಾದ ಮಾಹಿತಿ ಇಲ್ಲದವರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡುವುದಿದೆ. ವ್ಯವಸ್ಥಿತ ಹೂಡಿಕೆ ಯೋಜನೆಗಳು (ಎಸ್‌ಐಪಿ) ಶುರುವಾದ ನಂತರ, ಈಕ್ವಿಟಿ ಮಾರುಕಟ್ಟೆಗಳಲ್ಲಿ ಸಣ್ಣ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವ ವರದಿಗಳು ಇವೆ. ₹ 100ರಷ್ಟು ಸಣ್ಣ ಮೊತ್ತ ಇಟ್ಟುಕೊಂಡು ಕೂಡ ಈಗ ಈಕ್ವಿಟಿ ಮಾರುಕಟ್ಟೆಗಳಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಅವಕಾಶಗಳು ತೆರೆದುಕೊಂಡಿವೆ. ಭಾರತದ ಬೆಳವಣಿಗೆಯ ಪಯಣದಲ್ಲಿ ಸಣ್ಣ ಹೂಡಿಕೆದಾರರೂ ಜೊತೆಯಾಗಲು ಇಂತಹ ಅವಕಾಶಗಳು ಅತ್ಯಗತ್ಯ. ಆದರೆ, ಮ್ಯೂಚುವಲ್‌ ಫಂಡ್‌ ಉದ್ಯಮದ ಬಗ್ಗೆ ಸಣ್ಣ ಹೂಡಿಕೆದಾರರು ಹೊಂದಿರುವ ವಿಶ್ವಾಸಕ್ಕೆ ಒಂದಿಷ್ಟು ಪೆಟ್ಟು ನೀಡಿದ್ದು ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ವಿದ್ಯಮಾನ. ಭಾರತದ ಮ್ಯೂಚುವಲ್‌ ಫಂಡ್ ಉದ್ಯಮದಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದ ಈ ಕಂಪನಿಯು ಸಾಲಪತ್ರ ಮಾರುಕಟ್ಟೆಯಲ್ಲಿ ನಗದು ಲಭ್ಯತೆಯ ಕೊರತೆ ಇದೆ ಎಂಬ ಕಾರಣ ನೀಡಿ, ತನ್ನ ಆರು ಮ್ಯೂಚುವಲ್‌ ಫಂಡ್‌ಗಳನ್ನು ಸ್ಥಗಿತಗೊಳಿಸಿತ್ತು. ಇದು ಸಣ್ಣ
ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಈಗ ಸುಪ್ರೀಂ ಕೋರ್ಟ್‌, ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಕಂಪನಿಯು ತನ್ನ ಆರು ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದವರಿಗೆ ಮೂರು ವಾರಗಳಲ್ಲಿ ಒಟ್ಟು ₹ 9,122 ಕೋಟಿ ಹಣ ಮರಳಿಸಬೇಕು ಎಂದು ಆದೇಶ ನೀಡಿದೆ. ಹೂಡಿಕೆದಾರರ (ಫಂಡ್‌ಗಳಲ್ಲಿ ಯೂನಿಟ್‌ ಹೊಂದಿರುವವರು) ಅನುಮತಿ ಇಲ್ಲದೆ, ಫಂಡ್‌ಗಳನ್ನು ಸ್ಥಗಿತಗೊಳಿಸುವ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ ಎಂದು ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಹೇಳಿತ್ತು. ನ್ಯಾಯಾಂಗ ನೀಡಿದ ಆದೇಶಗಳು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸುವಂತೆ ಇವೆ. ಆರು ಫಂಡ್‌ಗಳನ್ನು ಸ್ಥಗಿತಗೊಳಿಸುವ ತೀರ್ಮಾನವು ಸರಿಸುಮಾರು ಮೂರು ಲಕ್ಷ ಹೂಡಿಕೆದಾರರ ಮೇಲೆ ಪರಿಣಾಮ ಬೀರುವಂಥದ್ದು ಎಂಬ ಅಂದಾಜು ಇದೆ. ಈಗ ನ್ಯಾಯಾಂಗವು ನೆರವಿನ ಹಸ್ತ ಚಾಚಿರುವ ಕಾರಣ ಈ ಹೂಡಿಕೆದಾರರು ಸಮಾಧಾನದ ನಿಟ್ಟುಸಿರು ಬಿಡಬಹುದು. ಸಂಪೂರ್ಣವಾಗಿ ಡಿಜಿಟಲ್‌ ಪ್ರಕ್ರಿಯೆ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡುವ ಅವಕಾಶ ಇದ್ದರೂ, ದೊಡ್ಡ ಗಾತ್ರದ ಮ್ಯೂಚುವಲ್‌ ಫಂಡ್‌ ಉದ್ದಿಮೆ ಭಾರತದಲ್ಲಿ ಬೆಳೆದು ನಿಂತಿದ್ದರೂ, ಈಕ್ವಿಟಿ ಮಾರುಕಟ್ಟೆಗಳಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಇಂದಿಗೂ ಕಡಿಮೆ ಇದೆ. ಅಂದರೆ, ದೇಶದ ದುಡಿಯುವ ವರ್ಗದಲ್ಲಿನ ದೊಡ್ಡ ಸಂಖ್ಯೆಯ ಜನರ ಹಣ ಈಕ್ವಿಟಿ ಮಾರುಕಟ್ಟೆಗಳತ್ತ ಬರುತ್ತಿಲ್ಲ. ಈಕ್ವಿಟಿ ಮಾರುಕಟ್ಟೆಗಳಲ್ಲಿ ಸಣ್ಣ ಹೂಡಿಕೆದಾರರ ಪಾಲು ಹೆಚ್ಚುತ್ತ ಸಾಗಿದರೆ, ಷೇರುಮಾರುಕಟ್ಟೆಯಲ್ಲಿ ನೋಂದಾಯಿತ ಆಗಿರುವ ಖಾಸಗಿ ಹಾಗೂ ಸರ್ಕಾರಿ ಕಂಪನಿಗಳಿಗೆ ಬಂಡವಾಳ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಆಗ ಅವು ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಬಹುದು. ಉದ್ಯಮವೂ ಬೆಳೆಯುತ್ತದೆ, ಹೂಡಿಕೆದಾರರೂ ಬೆಳೆಯುತ್ತಾರೆ. ಇದನ್ನು ಸಾಧ್ಯವಾಗಿಸುವಲ್ಲಿ ಮ್ಯೂಚುವಲ್‌ ಫಂಡ್‌ ಉದ್ಯಮ ವಲಯದ ಕಂಪನಿಗಳ ಪಾತ್ರ ಮಹತ್ವದ್ದು. ಈಕ್ವಿಟಿ ಮಾರುಕಟ್ಟೆ ಬಗ್ಗೆ ಹೆಚ್ಚು ಅರಿವಿಲ್ಲದ ಸಣ್ಣ ಹೂಡಿಕೆದಾರರ ಹಣವನ್ನು ವೃತ್ತಿಪರವಾಗಿ ನಿಭಾಯಿಸಿ, ಅವರ ಹಣ ಒಳ್ಳೆಯ ಕಂಪನಿಗಳತ್ತ ಹರಿಯುವಂತೆ ಮಾಡುವುದು, ಆ ಹೂಡಿಕೆದಾರರಿಗೆ ಒಳ್ಳೆಯ ಲಾಭ ತಂದುಕೊಡುವುದು ಈ ಕಂಪನಿಗಳ ಹೊಣೆ. ಸಣ್ಣ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ ಉದ್ಯಮದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನಂಬಿಕೆ ಇರಿಸಬೇಕು ಎಂದಾದರೆ, ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ವಿದ್ಯಮಾನ ಇನ್ನೆಂದೂ ಮರುಕಳಿಸಬಾರದು. ಹಾಗೆ ಆಗದಂತೆ ನೋಡಿಕೊಳ್ಳುವ ಹೊಣೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ ಮೇಲೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT