ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವ್ಯವಸ್ಥೆಯಲ್ಲಿ ಒಂದಿಷ್ಟು ಶುಭಸೂಚನೆ: ಉದ್ಯೋಗ ಸೃಷ್ಟಿಗೆ ಸಿಗಲಿ ಆದ್ಯತೆ

Last Updated 5 ಅಕ್ಟೋಬರ್ 2020, 2:51 IST
ಅಕ್ಷರ ಗಾತ್ರ

ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ ಪರಿಣಾಮವಾಗಿ ಜನಸಾಮಾನ್ಯರ ಬದುಕು ಆರ್ಥಿಕವಾಗಿ ಅದೆಷ್ಟು ಕಷ್ಟಕ್ಕೆ ಸಿಲುಕಿತು ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಒಂದು ಭಾಷಣದಲ್ಲಿ, ‘ಜೀವವನ್ನೂ, ಜೀವನೋಪಾಯವನ್ನೂ ಕಾಪಾಡಬೇಕು’ ಎಂದು ಹೇಳಿದ್ದರು. ‘ಜೀವನೋಪಾಯ’ ಎಂದು ಅವರು ಹೇಳಿದ್ದರ ಇಂಗಿತ, ಅರ್ಥವ್ಯವಸ್ಥೆ ಕುಸಿಯದಂತೆ ತಡೆಯಬೇಕು ಎಂದೂ ಆಗಿತ್ತು. ಲಾಕ್‌ಡೌನ್‌ ನಿರ್ಬಂಧಗಳ ಪರಿಣಾಮವಾಗಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ ಬೆಳವಣಿಗೆ ಪ್ರಮಾಣವು ಹಾಲಿ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡ (–)23.9ಕ್ಕೆ ಕುಸಿಯಿತು. ದೇಶದ ಅರ್ಥವ್ಯವಸ್ಥೆಯ ಆರೋಗ್ಯವನ್ನು ಸೂಚಿಸುವ ಜಿಡಿಪಿ ಬೆಳವಣಿಗೆ ದರ ಈ ಮಟ್ಟಕ್ಕೆ ಕುಸಿತ ಕಂಡಿದ್ದು, ಇಡೀ ವ್ಯವಸ್ಥೆಯಲ್ಲಿ ನಿರಾಸೆಯ ಕಾರ್ಮೋಡ ಕವಿಯುವಂತೆ ಮಾಡಿದ್ದರಲ್ಲಿ ಅತಿಶಯವಾದದ್ದು ಏನೂ ಇಲ್ಲ.

ಆದರೆ, ದೇಶದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ನಂತರ ಒಂದಿಷ್ಟು ಆಶಾದಾಯಕ ಬೆಳವಣಿಗೆಗಳು ನಿರ್ದಿಷ್ಟ ವಲಯಗಳಲ್ಲಿ ಕಾಣಿಸಲು ಆರಂಭಿಸಿವೆ.ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸೆಪ್ಟೆಂಬರ್‌ನಲ್ಲಿ ₹ 95,480 ಕೋಟಿ ಆಗಿದೆ.ಹಾಲಿ ಹಣಕಾಸು ವರ್ಷದಲ್ಲಿ ತಿಂಗಳೊಂದರಲ್ಲಿ ಸಂಗ್ರಹ ಆಗಿರುವ ಗರಿಷ್ಠ ಮೊತ್ತ ಇದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಏಪ್ರಿಲ್‌ ತಿಂಗಳಿನಲ್ಲಿ ಆಗಿದ್ದ ಜಿಎಸ್‌ಟಿ ಸಂಗ್ರಹ ₹32,171 ಕೋಟಿ ಮಾತ್ರ. ಅರ್ಥವ್ಯವಸ್ಥೆಯಲ್ಲಿ ನಡೆದ ಎಲ್ಲ ಚಟುವಟಿಕೆಗಳನ್ನು ಸೂಚ್ಯವಾಗಿ ಹೇಳುವ ಈ ಸಂಖ್ಯೆಗಳು ದುಡ್ಡಿನ ಚಲಾವಣೆ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ತಯಾರಿಕಾ ವಲಯದ ಚಟುವಟಿಕೆಗಳ ಬಗ್ಗೆ ಹೇಳುವ ಪಿಎಂಐ ಸೂಚ್ಯಂಕವು ಎಂಟು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಕೂಡ ಶುಭಸೂಚನೆಯಲ್ಲದೆ ಮತ್ತೇನೂ ಅಲ್ಲ.

ಪೆಟ್ರೋಲ್‌ ಮಾರಾಟವು ಕೋವಿಡ್–19 ಪೂರ್ವದ ಮಟ್ಟಕ್ಕೆ ಬರುತ್ತಿರುವ ಲಕ್ಷಣಗಳು ಮಾರುಕಟ್ಟೆಯಲ್ಲಿ ಗೋಚರಿಸುತ್ತಿವೆ ಎಂಬ ಮಾತನ್ನು ತೈಲ ಮಾರಾಟ ಕಂಪನಿಗಳು ಹೇಳಿವೆ. ಆದರೆ, ಡೀಸೆಲ್ ಮಾರಾಟವು ಕೋವಿಡ್–19 ಪೂರ್ವದ ಹಂತಕ್ಕೆ ಬರುತ್ತಿರುವ ಲಕ್ಷಣಗಳು ತಕ್ಷಣಕ್ಕೆ ಕಾಣುತ್ತಿಲ್ಲ. ಪೆಟ್ರೋಲ್ ಮಾರಾಟದಲ್ಲಿ ಹೆಚ್ಚಳ ಅಂದರೆ, ಜನ ವೈಯಕ್ತಿಕ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿರಬಹುದು. ಇದು ಕೂಡ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಒಳ್ಳೆಯ ಸೂಚನೆಯೇ ಆಗುತ್ತದೆ. ಸಾಲದ ಮರುಪಾವತಿ ಕಂತುಗಳನ್ನು ಪಾವತಿಸಲು ನೀಡಿದ್ದ ವಿನಾಯಿತಿ ಅವಧಿಯಲ್ಲಿ (ಮೊರಟೋರಿಯಂ ಅವಧಿ) ಸಾಲದ ಮೊತ್ತಕ್ಕೆ ಚಕ್ರ ಬಡ್ಡಿ ವಿಧಿಸದೆ ಇರುವ ನಿಲುವನ್ನು ಕೇಂದ್ರ ಸರ್ಕಾರ ತಾಳಿದೆ ಎಂದು ವರದಿಯಾಗಿದೆ. ಚಕ್ರ ಬಡ್ಡಿ ಮನ್ನಾದ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳು ಏನೇ ಇದ್ದರೂ, ಇದರಿಂದ ಸಾಲಗಾರರಿಗೆ ತುಸು ಸಮಾಧಾನ ಸಿಗಬಹುದು.
ಚಕ್ರ ಬಡ್ಡಿಯ ರೂಪದಲ್ಲಿ ಪಾವತಿ ಆಗಬೇಕಾಗಿದ್ದ ಹಣವು, ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿಗೆ ವಿನಿಯೋಗ ಆಗಬಹುದು. ದಸರಾ ಮತ್ತು ದೀಪಾವಳಿ ಹಬ್ಬಗಳು ಹತ್ತಿರವಾಗುತ್ತಿವೆ. ಅವು ಮುಗಿದ ನಂತರ ಕ್ರಿಸ್ಮಸ್‌ ಬರಲಿದೆ, ಹೊಸ ವರ್ಷ ಕೂಡ ಬರುತ್ತಿದೆ. ಹಬ್ಬಗಳ ಸಂದರ್ಭದಲ್ಲಿ ಜನಸಾಮಾನ್ಯರು ಬಟ್ಟೆ, ಚಿನ್ನಾಭರಣ, ವಾಹನ, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಖರೀದಿಸುವುದರಲ್ಲಿ ಹೆಚ್ಚಳ ಆಗುವುದು ವಾಡಿಕೆ ಆಗಿರುವ ಕಾರಣ, ಈ ಹಬ್ಬಗಳು ಕೂಡ ಅರ್ಥವ್ಯವಸ್ಥೆಯ ಚೇತರಿಕೆಗೆ ಒಂದಿಷ್ಟು ನೆರವಾಗಬಹುದು ಎಂಬ ನಿರೀಕ್ಷೆ ಹೊಂದಲು ಅಡ್ಡಿಯಿಲ್ಲ. ಅರ್ಥವ್ಯವಸ್ಥೆಯಲ್ಲಿ ಕಂಡುಬಂದಿರುವ ಈ ಎಲ್ಲ ಒಳ್ಳೆಯ ಲಕ್ಷಣಗಳು, ‘ಎಲ್ಲವೂ ಸರಿಹೋಯಿತು’ ಎಂಬ ಸೂಚನೆಯನ್ನಂತೂ ನೀಡುತ್ತಿಲ್ಲ. ಬ್ಯಾಂಕುಗಳು ನೀಡಿರುವ ವಿವಿಧ ಬಗೆಯ ಸಾಲಗಳಲ್ಲಿ ಎಷ್ಟು ಅನುತ್ಪಾದಕ (ಎನ್‌ಪಿಎ) ಆಗುತ್ತವೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಉದ್ಯೋಗ ನಷ್ಟ, ಆದಾಯ ನಷ್ಟವು ಕೊನೆಗೊಂಡು, ಉದ್ಯೋಗ ಸೃಷ್ಟಿಯು ಮಾಮೂಲಿಗಿಂತ ಹೆಚ್ಚಿನ ವೇಗದಲ್ಲಿ ಆಗಬೇಕಿದೆ. ಉದ್ದಿಮೆಗಳು ಲಾಭದ ಹಳಿಗೆ ಮರಳಿ, ಅವು ತಮ್ಮಲ್ಲಿ ಕೆಲಸ ಮಾಡುತ್ತಿರುವವರಿಗೆ ಕೋವಿಡ್–19 ಪೂರ್ವದ ವೇತನ ನೀಡಲು ಶಕ್ತವಾಗಬೇಕಿದೆ. ಇವೆಲ್ಲ ಆಗಲು ಇನ್ನಷ್ಟು ಸಮಯ ಬೇಕಾಗಬಹುದು. ಅದು ಆಗುವವರೆಗೂ ಅರ್ಥವ್ಯವಸ್ಥೆಯ ವಿಚಾರದಲ್ಲಿ ಮೈಮರೆವು ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT