ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಶ್ರೀಮಂತ–ಬಡವರ ನಡುವಣ ಅಂತರ ಹೆಚ್ಚಳಕ್ಕೆ ಸರ್ಕಾರದ ನೀತಿಯೂ ಕಾರಣ

Last Updated 22 ಜನವರಿ 2023, 19:30 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ ಅಸಮಾನತೆ ಹೆಚ್ಚುತ್ತಲೇ ಇದೆ ಎಂಬ ನಿರಾಶಾದಾಯಕ ಚಿತ್ರಣವನ್ನು ಸರ್ಕಾರೇತರ ಸಂಸ್ಥೆ ಆಕ್ಸ್‌ಫಾಮ್‌ ಇತ್ತೀಚೆಗೆ ಪ‍್ರಕಟಿಸಿರುವ ವರದಿಯು ಮುಂದಿಟ್ಟಿದೆ. ದೇಶದ ಜನಸಂಖ್ಯೆಯ ಶೇಕಡ 1ರಷ್ಟು ಜನರು ಒಟ್ಟು ಸಂಪತ್ತಿನ ಶೇ 40ರಷ್ಟರ ಮಾಲೀಕತ್ವ ಹೊಂದಿದ್ದಾರೆ ಎಂದು ‘ಸರ್ವೈವಲ್‌ ಆಫ್‌ ದಿ ರಿಚ್ಚೆಸ್ಟ್‌: ದಿ ಇಂಡಿಯಾ ಸ್ಟೋರಿ’ ಎಂಬ ಹೆಸರಿನ ವರದಿಯು ಹೇಳಿದೆ. ಸಂಪತ್ತಿನ ಹಂಚಿಕೆಯ ಪಿರಮಿಡ್‌ನ ತಳಭಾಗದಲ್ಲಿ ಇರುವ ಶೇ 50ರಷ್ಟು ಜನರಲ್ಲಿ ಇರುವುದು ಒಟ್ಟು ಸಂಪತ್ತಿನ ಶೇ 3ರಷ್ಟು ಭಾಗ ಮಾತ್ರ. 70 ಕೋಟಿ ಜನರು ಹೊಂದಿರುವಷ್ಟು ಸಂಪತ್ತನ್ನು ದೇಶದ 21 ವ್ಯಕ್ತಿಗಳು ಹೊಂದಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನ ಜನರು ಸಂಪತ್ತನ್ನು ಕಳೆದುಕೊಂಡರೆ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಸಾಂಕ್ರಾಮಿಕ ಆರಂಭವಾದಾಗಿನಿಂದ 2022ರ ನವೆಂಬರ್‌ವರೆಗಿನ ಅವಧಿಯಲ್ಲಿ ಶತಕೋಟ್ಯಧೀಶರ ಸೊತ್ತು ಶೇ 121ರಷ್ಟು ಏರಿಕೆಯಾಗಿದೆ. ಅಥವಾ ಪ್ರತಿದಿನ ₹3,608 ಕೋಟಿಯಷ್ಟು ಹೆಚ್ಚಳವಾಗಿದೆ. 2020ರಲ್ಲಿ ಇಂತಹ ಶ್ರೀಮಂತರ ಸಂಖ್ಯೆಯು 102 ಇದ್ದರೆ, 2022ರಲ್ಲಿ ಅದು 166ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಅಸಮಾನತೆಯು ಹೆಚ್ಚುತ್ತಲೇ ಇದೆ ಎಂಬುದು ಇದರಿಂದ ಅತ್ಯಂತ ಸ್ಪಷ್ಟವಾಗಿದೆ.

ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದು ಒಂದು ಆದರ್ಶ ಮಾತ್ರ. ಆದರೆ, ಅಸಮಾನತೆ ಹೆಚ್ಚುತ್ತಲೇ ಹೋಗುತ್ತಿದೆ ಎಂದರೆ, ಬಡವರಲ್ಲಿರುವ ಸಂಪತ್ತು ಶ್ರೀಮಂತರನ್ನು ಸೇರುತ್ತಿದೆ ಎಂದು ಅರ್ಥ. ಇದು ನೈತಿಕ, ಸಾಮಾಜಿಕ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ವಿಚಾರ. ಸಂಪತ್ತು ಹೇಗೆ ಹಂಚಿಕೆ\ ಯಾಗುತ್ತಿದೆ ಎಂಬುದಕ್ಕೆ ಸರ್ಕಾರದ ನೀತಿಯ ಕೊಡುಗೆಯೂ ಇರುತ್ತದೆ. ಹಾಗಾಗಿಯೇ ಬಡತನ ಹೆಚ್ಚಳವಾದಾಗ ಮತ್ತು ಬಡವರು ಹಾಗೂ ಶ್ರೀಮಂತರ ನಡುವಣ ಅಂತರ ಹೆಚ್ಚುತ್ತಲೇ ಹೋದಾಗ ಸರ್ಕಾರ ಅದಕ್ಕೆ ಉತ್ತರ ಕೊಡಲೇಬೇಕಾಗುತ್ತದೆ. ಬಡವರಿಗೆ ನೆರವಾಗಲು ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಗಾಗ ಹೇಳುತ್ತಲೇ ಬಂದಿದೆ. ಆದರೆ, ಬಡತನ ಕಡಿಮೆ ಆಗಿದೆ ಎಂಬುದು ಅದರ ಅರ್ಥ ಅಲ್ಲ. ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ನೆರವಾಗುತ್ತವೆ ಎಂಬುದು ನಿಜ. ಆದರೆ, ಬಡತನ ನಿರ್ಮೂಲನೆ ಆಗಬೇಕಿದ್ದರೆ ಜನರ ಆದಾಯದಲ್ಲಿ ಹೆಚ್ಚಳ ಆಗಬೇಕು. ಸ್ವತಂತ್ರವಾಗಿ ಗಳಿಸುವ ವ್ಯವಸ್ಥೆ ಇರಬೇಕು ಮತ್ತು ಸರ್ಕಾರದ ಕೊಡುಗೆಗಳ ಮೇಲೆ ಅವಲಂಬನೆಯಾಗುವ ಸ್ಥಿತಿ ಇರಬಾರದು. ಕಳೆದ ದಶಕಗಳಲ್ಲಿ, ಅದರಲ್ಲೂ ವಿಶೇಷವಾಗಿ 2004ರಿಂದ 2016ರ ನಡುವಣ ಅವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಡತನ ನಿರ್ಮೂಲನೆಯ ವೇಗ ಕಡಿಮೆಯಾಗಿದೆ. ನೋಟು ರದ್ದತಿಯ ಬಳಿಕ ಮತ್ತು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಲಕ್ಷಾಂತರ ಜನರು ಮತ್ತೆ ಬಡತನಕ್ಕೆ ಜಾರಿದ್ದಾರೆ ಹಾಗೂ ಅವರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಜನರು ಬಡವರಾಗುತ್ತಿದ್ದಾರೆ ಮತ್ತು ಅನುಕೂಲವಂತ ವರ್ಗದ ಕೆಲವೇ ಕೆಲವು ಜನರು ಸಂಪತ್ತಿನ ಬಹುಭಾಗವನ್ನು ಕೂಡಿಟ್ಟುಕೊಂಡಿದ್ದಾರೆ ಎಂಬುದನ್ನು ಆಕ್ಸ್‌ಫಾಮ್‌ ವರದಿಯು ಹೇಳಿದೆ. ಇದು ಸಾಮಾಜಿಕ ಸಂಕಷ್ಟ, ಅತೃಪ್ತಿ ಮತ್ತು ಅಶಾಂತಿಗೆ ಕಾರಣವಾಗಲಿದೆ. ಭಾರತದ ರೀತಿಯಲ್ಲಿಯೇ ಜಗತ್ತಿನಲ್ಲಿ ಕೂಡ ಆಗಿದೆ. ಜಗತ್ತಿನ ಶೇ 1ರಷ್ಟು ಜನರಲ್ಲಿ 2020ರ ಬಳಿಕ ಸೃಷ್ಟಿಯಾದ ಒಟ್ಟು ಸಂಪ‍ತ್ತಿನ ಸರಿಸುಮಾರು ಮೂರನೇ ಎರಡರಷ್ಟು ಕ್ರೋಡೀಕರಣ ವಾಗಿದೆ ಎಂದು ವರದಿಯು ಹೇಳಿದೆ. 2020ರ ಬಳಿಕ ಸೃಷ್ಟಿಯಾದ ಸಂಪತ್ತಿನ ಮೌಲ್ಯ ₹ 3,400 ಲಕ್ಷ ಕೋಟಿ. ಜಗತ್ತಿನಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಬಡವರು ಭಾರತದಲ್ಲಿ ಇರುವುದರಿಂದ ಈ ವರದಿಯು ನಮ್ಮ ದೇಶಕ್ಕೆ ಹೆಚ್ಚು ಪ್ರಸ್ತುತವಾಗಿದೆ.

ಅತ್ಯಂತ ಶ್ರೀಮಂತರ ಮೇಲೆ ತೆರಿಗೆ ಹೇರಬೇಕು, ಸಂಪತ್ತು ತೆರಿಗೆ ವಿಧಿಸಬೇಕು ಮತ್ತು ಅತಿಯಾದ ಲಾಭ ಗಳಿಕೆಯ ಮೇಲೆಯೂ ತೆರಿಗೆ ಹಾಕಬೇಕು ಎಂದು ವರದಿಯು ಶಿಫಾರಸು ಮಾಡಿದೆ. ಇದರಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಣ ಅಂತರ ತಗ್ಗುತ್ತದೆ ಎಂದೂ ವರದಿಯು ಅಭಿಪ್ರಾಯಪಟ್ಟಿದೆ. ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಹೆಚ್ಚುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇದು ಭಾಗಶಃ ನೆರವಾಗಬಹುದು. ಸಮಾಜದ ತಳವರ್ಗದಲ್ಲಿ ಇರುವ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದೇ ಸಮಸ್ಯೆಗೆ ಅತ್ಯುತ್ತಮ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT