ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಒಲಿಂಪಿಕ್ಸ್‌ನತ್ತ ಸರ್ಕಾರದ ಚಿತ್ತಘೋಷಣೆಯಷ್ಟೇ ಗುರಿ ಮುಟ್ಟಿಸದು

Last Updated 23 ಆಗಸ್ಟ್ 2021, 22:00 IST
ಅಕ್ಷರ ಗಾತ್ರ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಏಳು ಪದಕಗಳನ್ನು ಜಯಿಸಿರುವ ಭಾರತದ ಕ್ರೀಡಾಪಟುಗಳ ಸಾಧನೆ ದೇಶದಾದ್ಯಂತ ರಾಜ್ಯ ಸರ್ಕಾರಗಳಲ್ಲಿ ಸಂಚಲನ ಮೂಡಿಸಿದೆ. ದೇಶದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಕ್ರೀಡೆಗೆ ರಾಜ್ಯ ಸರ್ಕಾರಗಳು ಈಗ ಉತ್ತೇಜನ ನೀಡಲು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕರ್ನಾಟಕದಿಂದ 75 ಅಥ್ಲೀಟ್‌ಗಳು ಭಾರತ ತಂಡದಲ್ಲಿ ಇರುವಂತೆ ನೋಡಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ರಾಜ್ಯ ಸರ್ಕಾರ, ಅದಕ್ಕೆ ಪೂರಕವಾದ ಉಪಕ್ರಮ ಕೈಗೊಳ್ಳಲು ಮುಂದಾಗಿದೆ. ಈ ದಿಸೆಯಲ್ಲಿ ಕ್ರೀಡಾ ಸಚಿವರ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯೊಂದನ್ನೂ ರಚಿಸಿದೆ.

ಒಡಿಶಾ, ಜಾರ್ಖಂಡ್, ಮಣಿಪುರ, ಹರಿಯಾಣ, ಪಂಜಾಬ್ ರಾಜ್ಯಗಳು ಕ್ರೀಡೆಗೆ ನೀಡುತ್ತಿರುವ ಉತ್ತೇಜನವು ಒಲಿಂಪಿಕ್ಸ್‌ನಲ್ಲಿ ಯಶಸ್ಸು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅವುಗಳ ಮಾದರಿಯಲ್ಲೇ ಕ್ರೀಡೆಯನ್ನು ಉತ್ತೇಜಿಸಲು ನಮ್ಮ ರಾಜ್ಯದಲ್ಲೂ ವಿಪುಲ ಅವಕಾಶಗಳಿವೆ. ಒಡಿಶಾ, ಜಾರ್ಖಂಡ್‌ನಲ್ಲಿ ಆದಿವಾಸಿ ಹಾಡಿಗಳಲ್ಲಿರುವ ಪ್ರತಿಭೆಗಳನ್ನು ಹುಡುಕಿ ವಸತಿ, ತರಬೇತಿ, ಶಿಕ್ಷಣ ಮತ್ತು ಉದ್ಯೋಗ ಸೌಲಭ್ಯ ನೀಡಲಾಗಿದೆ. ಹರಿಯಾಣ ಸರ್ಕಾರವು ಕುಸ್ತಿ, ಬಾಕ್ಸಿಂಗ್, ಟ್ರ್ಯಾಕ್‌ ಮತ್ತು ಫೀಲ್ಡ್‌ ಕ್ರೀಡೆಗಳಿಗೆ ಯಥೇಚ್ಛ ನೆರವು ನೀಡುತ್ತಿದೆ. ಕುರುಕ್ಷೇತ್ರ, ಸೋನಿಪತ್‌ನಲ್ಲಿ ತರಬೇತಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದೆ. ಪಂಜಾಬ್ ಸರ್ಕಾರ ಕೂಡ ಕ್ರೀಡಾಪಟುಗಳ ತರಬೇತಿಗೆ ಅಗತ್ಯ ವ್ಯವಸ್ಥೆ ಮಾಡಿದೆ.

ನಮ್ಮ ರಾಜ್ಯದಲ್ಲಿ ಸಹ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತೀ ಜಿಲ್ಲೆಯೂಅದರದ್ದೇ ಆದ ಹವಾಮಾನ, ಆಹಾರ ಭಿನ್ನತೆ ಹೊಂದಿರುವಂತೆ ಕ್ರೀಡಾ ವೈವಿಧ್ಯವನ್ನೂ ಹೊಂದಿದೆ. ಉದಾಹರಣೆಗೆ ವಿಜಯ ಪುರ, ಬಾಗಲಕೋಟೆ ಭಾಗದಲ್ಲಿ ಸೈಕ್ಲಿಂಗ್, ಕಬಡ್ಡಿ; ಧಾರವಾಡ, ಗದಗ, ಕೊಡಗು ಭಾಗದಲ್ಲಿ ಹಾಕಿ; ಬೆಳಗಾವಿ, ಮೈಸೂರು ಭಾಗದಲ್ಲಿ ಕುಸ್ತಿ, ಫುಟ್‌ಬಾಲ್; ಮಂಗಳೂರು, ಉಡುಪಿ, ಉತ್ತರ ಕನ್ನಡದಲ್ಲಿ ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಪವರ್‌ಲಿಫ್ಟಿಂಗ್‌; ಬೆಂಗಳೂರಿನಲ್ಲಿ ಈಜು, ಬ್ಯಾಡ್ಮಿಂಟನ್, ಟೆನಿಸ್ ಕ್ರೀಡೆಯ ಗಟ್ಟಿ ಬೇರುಗಳಿವೆ. ಅವುಗಳಿಗೆ ನೀರೆರೆದು ಪೋಷಿಸುವ ಕೆಲಸ ಆಗಬೇಕಿದೆ. ಬೆಂಗಳೂರಿನಲ್ಲೇನೋ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸೌಲಭ್ಯಗಳಿವೆ.

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪುರುಷರ ತಂಡ ಮತ್ತು ನಾಲ್ಕನೇ ಸ್ಥಾನ ಗಳಿಸಿದ ಮಹಿಳೆಯರ ತಂಡವು ಉದ್ಯಾನನಗರಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿಯೇ ಅಭ್ಯಾಸ ಮಾಡಿದ್ದವು. ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ ಅವರು ವಿಜಯನಗರದ ಜೆಎಸ್‌ಡಬ್ಲ್ಯು ಅಕಾಡೆಮಿಯಲ್ಲಿ ಬಹುಕಾಲ ಅಭ್ಯಾಸ ಮಾಡಿದ್ದರು. ಒಲಿಂಪಿಯನ್ ಕುಸ್ತಿಪಟುಗಳಿಗೂ ಈ ಅಕಾಡೆಮಿಯೇ ಪ್ರಾಯೋಜಕತ್ವ ನೀಡಿರುವುದು ಗಮನಾರ್ಹ. ರಾಜ್ಯದಲ್ಲಿರುವ ಇಂತಹ ಇನ್ನಷ್ಟು ಉದ್ಯಮಗಳು ಕಾರ್ಪೊರೇಟ್ ಸಾಮಾಜಿಕ ಹೊಣೆಯಡಿ (ಸಿಎಸ್‌ಆರ್) ಕ್ರೀಡೆಯತ್ತ ನೆರವಿನಹಸ್ತ ಚಾಚುವಂತೆ ಮಾಡಲು ಸರ್ಕಾರ ಉತ್ತೇಜಿಸಬೇಕು.

ಕ್ರೀಡಾ ವೈದ್ಯಕೀಯ ಮತ್ತು ವಿಜ್ಞಾನದ ಅತ್ಯಾಧುನಿಕ ಸೌಲಭ್ಯಗಳು ರಾಜ್ಯದಲ್ಲೂ ಅಭಿವೃದ್ಧಿಗೊಳ್ಳಬೇಕು. ಕ್ರೀಡಾ ಆಡಳಿತದಲ್ಲೂ ಇಲಾಖೆ ಮಟ್ಟದಲ್ಲಿ ಕೆಲವು ಸುಧಾರಣೆಗಳನ್ನು ತರಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ವಿಭಜಿಸಿ, ಕ್ರೀಡಾ ಇಲಾಖೆಯನ್ನು ಪ್ರತ್ಯೇಕಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇದೆ. ಈ ದಿಸೆಯಲ್ಲಿ ಸರ್ಕಾರ ಚಿಂತನೆ ನಡೆಸಬೇಕು. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಇರುವಂತೆಯೇ ಕರ್ನಾಟಕದಲ್ಲೂ ಕ್ರೀಡಾಪಟುಗಳಿಗೆ ಉದ್ಯೋಗ, ಬಡ್ತಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ರಾಜ್ಯದ ಕ್ರೀಡಾ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರದಂತೆ ನೋಡಿಕೊಳ್ಳಬೇಕು. ಈ ಸಂಸ್ಥೆಗಳಲ್ಲಿರುವ ಪಟ್ಟಭದ್ರರನ್ನು ಕೆಳಗಿಳಿಸಲು ದಿಟ್ಟಕ್ರಮ ಕೈಗೊಳ್ಳಬೇಕು.

ಕ್ರೀಡಾ ಸಂಸ್ಥೆಗಳ ಆಡಳಿತದ ಚುಕ್ಕಾಣಿಯು ಕ್ರೀಡಾತಜ್ಞರು ಇಲ್ಲವೇ ಹಿರಿಯ ಕ್ರೀಡಾಪಟುಗಳಿಗಷ್ಟೇ ಸಿಗುವಂತೆ ನಿಯಮ ರೂಪಿಸಬೇಕು. ಯಾವ ಜಿಲ್ಲೆಯಲ್ಲಿ ಯಾವ ಕ್ರೀಡೆಯ ಪಾರಮ್ಯ ಇದೆಯೋ ಅಲ್ಲಿ ಆ ಕ್ರೀಡೆಯ ತರಬೇತಿಗೆ ಸಕಲ ಸೌಲಭ್ಯವನ್ನೂ ಕಲ್ಪಿಸಬೇಕು. ಕ್ರೀಡಾಚಟುವಟಿಕೆಗಳು ರಾಜ್ಯದ ಎಲ್ಲ ಭಾಗಗಳಲ್ಲೂ ಸಮಾನವಾಗಿ ನಡೆಯಬೇಕು. ತಳಮಟ್ಟದಿಂದಲೇ ಕ್ರೀಡಾ ಪ್ರತಿಭೆಗಳ ಶೋಧಕ್ಕೆ ದಕ್ಷ ವ್ಯವಸ್ಥೆಯೊಂದನ್ನು ರೂಪಿಸಬೇಕು. ಅದರ ಮೂಲಕ ಗ್ರಾಮಗಳು ಹಾಗೂ ಹಾಡಿಗಳಲ್ಲಿರುವ ಅನನ್ಯ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕು.ವಿವಿಧ ವಯೋಮಾನದ ಹಂತಗಳಲ್ಲಿ ನಿರಂತರವಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಬೇಕು.

ಸದ್ಯ ನಮ್ಮ ರಾಜ್ಯದಲ್ಲಿ ದಸರಾ ಕ್ರೀಡಾಕೂಟವೊಂದೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಆದರೆ, ಅಲ್ಲಿ ಪ್ರತಿವರ್ಷ ಕ್ರೀಡಾಪಟುಗಳ ಸಾಧನೆಗಿಂತ ಅವ್ಯವಸ್ಥೆಯೇ ಹೆಚ್ಚು ಸದ್ದು ಮಾಡುತ್ತದೆ. ಪಾರದರ್ಶಕತೆ ಹೆಚ್ಚಿಸಲು ಪ್ರತಿಯೊಂದು ಕ್ರೀಡೆಯಲ್ಲಿ ಭಾಗವಹಿಸುವ ಸ್ಪರ್ಧಿಗಳ ಸಾಧನೆ, ವೈಫಲ್ಯಗಳ ದತ್ತಾಂಶಗಳು ದಾಖಲಾಗಬೇಕು. ಶಾಲೆಗಳು, ಕಾಲೇಜು ಮತ್ತು ವಿಶ್ವ
ವಿದ್ಯಾಲಯಗಳಲ್ಲಿ ಮಂಕಾಗಿರುವ ಕ್ರೀಡಾ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು. ಮಧ್ಯಮ ವರ್ಗದ ಬಹುತೇಕ ಕುಟುಂಬಗಳ ಮಕ್ಕಳಲ್ಲಿ ವೃತ್ತಿಪರ ಶಿಕ್ಷಣದ ಕಡೆಗೇ ಹೆಚ್ಚಿನ ಒಲವು.

ಕ್ರೀಡೆಯಲ್ಲಿಯೂ ತಮ್ಮ ಮಕ್ಕಳ ಭವಿಷ್ಯ ರೂಪುಗೊಳ್ಳಬಹುದು ಎಂಬ ಭರವಸೆ ಪಾಲಕರಲ್ಲಿ ಮೂಡುವಂತೆ ಕ್ರೀಡಾಪಟುಗಳಿಗೆ ಸೌಲಭ್ಯಗಳು ಸಿಗಬೇಕು. ಕ್ರೀಡಾಪಟುಗಳನ್ನು ತಯಾರು ಮಾಡುವುದೆಂದರೆ ಸಸಿ ನೆಟ್ಟು ಮರವಾಗಿ ಬೆಳೆಸಿದಂತೆ. ಫಲ ಕೊಡಲು ವರ್ಷಗಳಷ್ಟು ಸಮಯಾವಕಾಶ ಬೇಕು. ಅಲ್ಲಿಯವರೆಗೆ ಕ್ರೀಡಾಪ್ರತಿಭೆ ಸೊರಗದಂತೆ ನಿರಂತರವಾಗಿ ನೀರೆರೆಯಲು ಪ್ರಬಲ ಇಚ್ಛಾಶಕ್ತಿಯನ್ನೂ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT