ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜೋಶಿಮಠ: ಮಾಹಿತಿ ಹಂಚಿಕೊಳ್ಳುವುದಕ್ಕೆ ಎನ್‌ಡಿಎಂಎ ಸಲ್ಲದ ನಿರ್ಬಂಧ

Last Updated 16 ಜನವರಿ 2023, 21:12 IST
ಅಕ್ಷರ ಗಾತ್ರ

ಜೋಶಿಮಠದಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಹಂಚಿಕೊಳ್ಳಬಾರದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ಸರ್ಕಾರಿ ಸಂಸ್ಥೆಗಳು ಮತ್ತು ಅಲ್ಲಿ ಕೆಲಸ ಮಾಡುವ ತಜ್ಞರಿಗೆ ತಾಕೀತು ಮಾಡಿರುವುದು ತಪ್ಪು, ಇದರಿಂದ ಒಳಿತಾಗುವುದು ಏನೂ ಇಲ್ಲ. ಜೋಶಿಮಠದಲ್ಲಿ ಭೂಕುಸಿತ ಆಗುತ್ತಿರುವ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಬಾರದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಯಾವುದೇ ಅನಿಸಿಕೆ ಹಂಚಿಕೊಳ್ಳಬಾರದು ಎಂದು ಸರ್ಕಾರಿ ಸಂಸ್ಥೆಗಳು ಮತ್ತು ಅಲ್ಲಿನ ತಜ್ಞರಿಗೆ ಎನ್‌ಡಿಎಂಎ ಸೂಚನೆ ನೀಡಿದೆ. ಈ ಸೂಚನೆಯನ್ನು ಸರಿಸುಮಾರು ಒಂದು ಡಜನ್ ಸರ್ಕಾರಿ ಸಂಸ್ಥೆಗಳಿಗೆ ನೀಡಲಾಗಿದೆ. ಪರಿಸ್ಥಿತಿ ಕುರಿತು ಅವರು ನೀಡುತ್ತಿರುವ ವ್ಯಾಖ್ಯಾನಗಳು ಜೋಶಿಮಠದಲ್ಲಿ ತೊಂದರೆಗೆ ಒಳಗಾಗಿರುವ ನಿವಾಸಿಗಳಲ್ಲಿ ಮಾತ್ರವೇ ಅಲ್ಲದೆ ದೇಶದ ಇತರೆಡೆಗಳಲ್ಲಿನ ಪ್ರಜೆಗಳಲ್ಲಿಯೂ ಗೊಂದಲ ಸೃಷ್ಟಿಸುತ್ತಿದೆ ಎಂದು ಎನ್‌ಡಿಎಂಎ ತನ್ನ ಸೂಚನೆಯಲ್ಲಿ ಹೇಳಿದೆ. ಜೋಶಿಮಠ ಕುರಿತ ಯಾವುದೇ ವರದಿಯು ಮೊದಲಿಗೆ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅನುಮೋದನೆ ಪಡೆದುಕೊಳ್ಳಬೇಕು ಎಂದು ಎನ್‌ಡಿಎಂಎಗೆ ಉತ್ತರಾಖಂಡ ಸರ್ಕಾರ ಹೇಳಿದ ನಂತರದಲ್ಲಿ ಈ ಬಗೆಯ ಸೂಚನೆ ಬಂದಿದೆ. ಏಳು ತಿಂಗಳ ಅವಧಿಯಲ್ಲಿ ಜೋಶಿಮಠವು ಸರಿಸುಮಾರು 9 ಸೆಂಟಿಮೀಟರ್‌ನಷ್ಟು ಕುಸಿದಿದೆ ಎಂದು ಹೇಳುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಉಪಗ್ರಹ ಆಧಾರಿತ ವರದಿಯೊಂದು ಈ ರೀತಿಯ ಸೂಚನೆಯನ್ನು ಹೊರಡಿಸಿರುವುದಕ್ಕೆ ಕಾರಣ ಆಗಿರಬಹುದು. ಡಿಸೆಂಬರ್‌ 27ರ ನಂತರದಲ್ಲಿ 12 ದಿನಗಳ ಅವಧಿಯಲ್ಲಿ ಜೋಶಿಮಠ ಪ್ರದೇಶದಲ್ಲಿ ಭೂಮಿಯು 5 ಸೆಂಟಿಮೀಟರ್‌ನಷ್ಟು ಕುಸಿದಿದೆ ಎಂದು ಆ ವರದಿ ಹೇಳಿತ್ತು. ಇಸ್ರೊ ಈಗ ಆ ವರದಿಯನ್ನು ಹಿಂಪಡೆದಿದೆ.

ಸಾರ್ವಜನಿಕರೆಲ್ಲರ ಗಮನಕ್ಕೆ ಬಂದಿರುವ ವಿದ್ಯಮಾನವೊಂದನ್ನು, ಅದರಲ್ಲೂ ಒಂದು ದುರಂತವನ್ನು ಕೆಟ್ಟದ್ದಾಗಿ ಹೇಗೆ ನಿಭಾಯಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಆಧುನಿಕ ದೃಷ್ಟಿಕೋನಗಳ ಪ್ರಕಾರ, ಸಾರ್ವಜನಿಕರ ಜೊತೆ ಮಾಹಿತಿ ಹಂಚಿಕೊಳ್ಳಬೇಕಿರುವುದು ಮಹತ್ವದ್ದು. ವಿಪತ್ತಿನ ಪರಿಣಾಮಗಳನ್ನು ತಗ್ಗಿಸಲು ಇದು ಪರಿಣಾಮಕಾರಿ ಕೂಡ ಎಂದು ಪರಿಗಣಿಸಲಾಗಿದೆ. ವಿಪತ್ತುಗಳ ವಿಚಾರದಲ್ಲಿ ಪಾರದರ್ಶಕವಾಗಿ ಇಲ್ಲದೆ ಇರುವುದು, ಮಾಹಿತಿಯ ಹರಿವಿಗೆ ಅಡ್ಡಿಪಡಿಸುವುದು ಹಾಗೂ ತಪ್ಪು ಮಾಹಿತಿ ಹರಿಯುವುದಕ್ಕೆ ಅವಕಾಶ ಕೊಡುವುದರಿಂದ ವಿಪತ್ತು ನಿರ್ವಹಣೆ ಪ್ರಯತ್ನಗಳಿಗೆ ಅಡ್ಡಿ ಉಂಟಾಗುತ್ತದೆ ಎಂಬುದನ್ನು ಅಧ್ಯಯನಗಳು ಕಂಡುಕೊಂಡಿವೆ. ಜೋಶಿಮಠದಲ್ಲಿ ಇನ್ನಷ್ಟು ಬಿರುಕುಗಳು ಉಂಟಾಗಿರುವ ಹಾಗೂ ಭೂಕುಸಿತ ಇನ್ನಷ್ಟು ಆಗಿರುವ ವರದಿಗಳು ಬರುತ್ತಿವೆ. ಇಂಥವುಗಳ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದಾಗ ಗಾಳಿಸುದ್ದಿಗಳು ಹಾಗೂ ಊಹೆಯನ್ನು ಆಧರಿಸಿದ ಸುದ್ದಿಗಳು ಹೆಚ್ಚು ಹರಡುತ್ತವೆ. ಜನರಲ್ಲಿ ಭೀತಿ ಉಂಟಾಗದೆ ಇರಲಿ ಎಂಬ ಉದ್ದೇಶದಿಂದ ಮಾಹಿತಿ ಹಂಚಿಕೊಳ್ಳುವುದರ ಮೇಲೆ ನಿರ್ಬಂಧ ವಿಧಿಸುವ ಆಲೋಚನೆ ಬಂತು ಎಂದು ಉತ್ತರಾಖಂಡ ಸರ್ಕಾರ ಹೇಳಿದೆ. ಆದರೆ ಸರಿಯಾದ ಮಾಹಿತಿಗಿಂತಲೂ ತಪ್ಪು ಮಾಹಿತಿಯು ಹೆಚ್ಚು ಭೀತಿ ಸೃಷ್ಟಿಸುತ್ತದೆ. ಪರಿಸ್ಥಿತಿಯ ಬಗ್ಗೆ ಎನ್‌ಡಿಎಂಎ ತಜ್ಞರ ಸಮಿತಿಯ ಅಂತಿಮ ವರದಿ ಬರುವವರೆಗೂ ಈ ನಿರ್ಬಂಧವು ಮುಂದುವರಿಯಲಿದೆ ಎಂದು ಹೇಳಲಾಗಿದೆ. ಅಂತಿಮ ವರದಿ ಬರುವವರೆಗೆ ತಪ್ಪು ಮಾಹಿತಿಗಳು ಸುಮ್ಮನೆ ಕೂರುವುದಿಲ್ಲ. ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಳ್ಳಬಾರದು ಎಂಬ ಸೂಚನೆಯು ಮಾಹಿತಿಯನ್ನು ಹತ್ತಿಕ್ಕುವ ಅಥವಾ ನಿಯಂತ್ರಿಸುವ ಉದ್ದೇಶವು ಅಧಿಕಾರಿಗಳಿಗೆ ಇದೆ ಎಂಬ ಭಾವನೆಯನ್ನು ಮೂಡಿಸಿದೆ. ಹೀಗಾಗಿ, ತಜ್ಞರ ಸಮಿತಿ ನೀಡುವ ವರದಿಯ ವಿಶ್ವಾಸಾರ್ಹತೆಯೂ ಪ್ರಶ್ನೆಗೆ ಒಳಗಾಗಬಹುದು.

ನಿರ್ಬಂಧವು ಎಷ್ಟರಮಟ್ಟಿಗೆ ಅಪೇಕ್ಷಣೀಯ ಹಾಗೂ ಎಷ್ಟರಮಟ್ಟಿಗೆ ಪ್ರಯೋಜನಕಾರಿ ಎಂಬ ಪ್ರಶ್ನೆಯನ್ನು ತಜ್ಞರು ಮುಂದಿಟ್ಟಿದ್ದಾರೆ. ಜೋಶಿಮಠದಲ್ಲಿ ಆಗಿರುವ ಭೂಕುಸಿತದ ಕುರಿತು ವಿದೇಶದ ಸಂಸ್ಥೆಗಳು ಉಪಗ್ರಹದ ಮೂಲಕ ತೆಗೆದಿರುವ ಚಿತ್ರಗಳು ಲಭ್ಯವಾಗಬಹುದು. ಹಾಗಾಗಿ, ದೇಶದ ಒಳಗಡೆ ಮಾತ್ರ ಅನ್ವಯವಾಗುವ ನಿರ್ಬಂಧಕ್ಕೆ ಹೆಚ್ಚಿನ ಅರ್ಥ ಇರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜೋಶಿಮಠದಲ್ಲಿ ಆಗಿರುವ ಭೂಕುಸಿತವು ದೇಶದ ಹೊರಗಡೆಯೂ ಹಲವರ ಗಮನ ಸೆಳೆದಿದೆ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಹಿತಿ ಹಂಚಿಕೊಳ್ಳುವುದರ ವಿಚಾರವಾಗಿ ಜಾರಿಗೆ ತಂದ ಕೆಲವು ನಿರ್ಬಂಧಗಳು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದ್ದವು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂತಹ ನಿರ್ಬಂಧಗಳು ಮಾಮೂಲಾಗಬಾರದು. ಇವು ಮಾಮೂಲು ಎಂಬಂತೆ ಆದರೆ, ಮುಂದೆ ಇವೇ ಒಂದು ನೀತಿಯಾಗಿ ಜಾರಿಗೆ ಬರಬಹುದು. ಕುಲಾಂತರಿ ಸಾಸಿವೆ ಕುರಿತ ಮಾಹಿತಿಗೆ ಈಚೆಗೆ ನಿರ್ಬಂಧ ಹೇರಲಾಗಿತ್ತು. ಯಾವುದೇ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಇಂತಹ ನಿರ್ಬಂಧಗಳು ಕೆಟ್ಟ ಪರಿಣಾಮ ಉಂಟುಮಾಡಬಹುದು. ಎನ್‌ಡಿಎಂಎ ತನ್ನ ಸೂಚನೆಯನ್ನು ಹಿಂದಕ್ಕೆ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT