ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಉದ್ಯೋಗ ಸೃಷ್ಟಿ ಇಲ್ಲದ ಬೆಳವಣಿಗೆ– ಕಾರ್ಯತಂತ್ರಗಳ ಪುನರವಲೋಕನ ಬೇಕು

Published 11 ಅಕ್ಟೋಬರ್ 2023, 22:35 IST
Last Updated 11 ಅಕ್ಟೋಬರ್ 2023, 22:35 IST
ಅಕ್ಷರ ಗಾತ್ರ

ಅಗತ್ಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವುದು ಭಾರತದ ಅರ್ಥವ್ಯವಸ್ಥೆಯ ದೌರ್ಬಲ್ಯಗಳ ಪೈಕಿ ಒಂದು. ಈ ದೌರ್ಬಲ್ಯವು ಈಗಲೂ ಮುಂದುವರಿದಿದೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ. ದೇಶದ ಜನಸಂಖ್ಯೆ ಮತ್ತು ದುಡಿಯುವ ವಯಸ್ಸಿನ ಜನರ ಸಂಖ್ಯೆಯು ಹೆಚ್ಚಾಗುತ್ತ ಸಾಗಿದ್ದರೂ, ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣಕ್ಕೆ ಅನುಗುಣವಾಗಿ ದೇಶದಲ್ಲಿ ಉದ್ಯೋಗ ಸೃಷ್ಟಿ ಆಗಿಲ್ಲ. ಇದರ ಪರಿಣಾಮವಾಗಿ ದೇಶದ ಜಿಡಿಪಿ ಬೆಳವಣಿಗೆಯ ಫಲವು ಬಹುಪಾಲು ಮಂದಿಗೆ ದೊರೆಯದಂತೆ ಆಗಿದೆ. ಬೇರೆ ಬೇರೆ ಅಂಕಿ–ಅಂಶಗಳನ್ನು ಆಧರಿಸಿ ಈ ಸಮಸ್ಯೆಯ ವಿಭಿನ್ನ ಮುಖಗಳ ಅಧ್ಯಯನದ ಯತ್ನಗಳು ನಡೆದಿವೆ. ಇದರಲ್ಲಿ ಅರ್ಥಶಾಸ್ತ್ರ ಮಾತ್ರವೇ ಅಲ್ಲದೆ ಬೇರೆ ಬೇರೆ ಜ್ಞಾನಶಾಖೆಗಳ ತಜ್ಞರೂ ತೊಡಗಿಸಿಕೊಂಡಿದ್ದಾರೆ. ಈಚಿನ ವರ್ಷಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆಗಳು ಆಗಿವೆ. ಇದನ್ನು ಅರ್ಥ ಮಾಡಿಕೊಳ್ಳ ಬೇಕಿರುವುದು ಮುಖ್ಯ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ನಡೆಸಿರುವ ಅಧ್ಯಯನವೊಂದು ವಿಭಿನ್ನ ಮೂಲಗಳಿಂದ ಪಡೆದ ಮಾಹಿತಿ ಆಧರಿಸಿ ಇದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ. ಕಾರ್ಮಿಕರ ಸಮೀಕ್ಷೆ, ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ, ಆರ್ಥಿಕ ಗಣತಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಸೇರಿದಂತೆ ಸರ್ಕಾರದ ಹಲವು ಸಮೀಕ್ಷೆಗಳ ವರದಿಗಳಲ್ಲಿನ ಮಾಹಿತಿಯನ್ನು ಅದು ಬಳಸಿಕೊಂಡಿದೆ.

ಯುವ ಪದವೀಧರರ ನಿರುದ್ಯೋಗ ಪ್ರಮಾಣವು ಪ್ರವೇಶ ಹಂತದಲ್ಲಿ ಶೇಕಡ 42ರಷ್ಟು ಇದೆ ಎಂದು
ವಿಶ್ವವಿದ್ಯಾಲಯದ ಅಧ್ಯಯನವು ಹೇಳಿದೆ. ತುಸು ಜಾಸ್ತಿ ವಯಸ್ಸಾದವರು ಹಾಗೂ ಕಡಿಮೆ ಶಿಕ್ಷಣ ಪಡೆದವರ ಸ್ಥಿತಿ ಉತ್ತಮವಾಗಿದೆ. ಇದರ ಅರ್ಥ ಏನೆಂದರೆ, ಯುವ ಪದವೀಧರರ ಬಳಿ ಸರಿಯಾದ ಹಾಗೂ ಅಗತ್ಯವಾದ ಕೌಶಲಗಳು ಇಲ್ಲ ಅಥವಾ ಸುಶಿಕ್ಷಿತರಿಗೆ ಅಗತ್ಯ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿಲ್ಲ. ಇವೆರಡೂ ಮಾತುಗಳಲ್ಲಿ ಸತ್ಯ ಇರಬಹುದು. ಆದರೆ ಈ ಪರಿಸ್ಥಿತಿಯು ದೇಶದ ಅರ್ಥ ವ್ಯವಸ್ಥೆಯ ಮೇಲೆ ಹಾಗೂ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಉದ್ಯೋಗವು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ, ಕೃಷಿಯೇತರ ಚಟುವಟಿಕೆಗಳಿಗೆ ವರ್ಗಾವಣೆ ಕಾಣುತ್ತಿದೆ. ಆದರೆ ಕೃಷಿ ಕ್ಷೇತ್ರದಿಂದ ಇತರ ಕ್ಷೇತ್ರಗಳಿಗೆ ಉದ್ಯೋಗ ಅರಸಿ ಬರುವವರಿಗೆ ಸಿಗುತ್ತಿರುವುದು ಕಡಿಮೆ ವೇತನ ನೀಡುವ ಕೆಲಸಗಳು ಮಾತ್ರ. ಪುರುಷರು ಕಟ್ಟಡ ನಿರ್ಮಾಣ ಕ್ಷೇತ್ರದ ಕಡೆ ಮುಖ ಮಾಡುತ್ತಿದ್ದಾರೆ. ಮಹಿಳೆಯರು ದುಡಿಯುವ ಕ್ಷೇತ್ರದಿಂದಲೇ ಕಣ್ಮರೆಯಾಗುತ್ತಿದ್ದಾರೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಿ 2000ನೇ ಇಸವಿಯಲ್ಲಿ ದುಡಿಮೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣವು ಶೇಕಡ 40ಕ್ಕಿಂತ ಹೆಚ್ಚು ಇದ್ದುದು, ಈಗ ಶೇಕಡ 28ರ ಮಟ್ಟಕ್ಕೆ ಕುಸಿದಿದೆ. ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಪ್ರಮಾಣ ಹಾಗೂ ಒಟ್ಟಾರೆಯಾಗಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಪ್ರಮಾಣ ಕಡಿಮೆ ಇರುವುದು ದೇಶದ
ಅರ್ಥವ್ಯವಸ್ಥೆಯ ಪ್ರಮುಖ ದೌರ್ಬಲ್ಯಗಳಲ್ಲಿ ಒಂದು.

ಕೆಲವು ವರ್ಷಗಳ ಅವಧಿಯಲ್ಲಿ ಕಾರ್ಮಿಕರ ಸ್ಥಿತಿಗತಿಯಲ್ಲಿ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸುಧಾರಣೆಗಳು ಕಂಡುಬಂದಿರುವುದು ಈ ಅಧ್ಯಯನದ ಪ್ರಮುಖ ಅಂಶಗಳಲ್ಲಿ ಒಂದು. ಕೂಲಿಕಾರ್ಮಿಕರ ಗಂಡುಮಕ್ಕಳು ನೌಕರಿಗೆ ಭದ್ರತೆ ಇಲ್ಲದ ಕಡೆಗಳಲ್ಲಿ ಕೆಲಸ ಮಾಡುವುದು 2004ರಲ್ಲಿ ಶೇ 80ರಷ್ಟು ಇತ್ತು. ಈ ಪ್ರಮಾಣವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿದ ಸಮುದಾಯಗಳಲ್ಲಿ 2018ರಲ್ಲಿ ಶೇ 53ಕ್ಕೆ ಇಳಿಕೆಯಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ಕಾರ್ಮಿಕರಲ್ಲಿಯೂ ಈ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ಸುಧಾರಣೆಯ ಪ್ರಮಾಣ ಕಡಿಮೆ ಇದೆ. ಜಿಡಿಪಿ ಬೆಳವಣಿಗೆಯು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಅಗತ್ಯ ಪ್ರಮಾಣದಲ್ಲಿ ನೆರವಾಗಿಲ್ಲ ಎಂಬ ಮಾತಿಗೆ ಈ ಅಧ್ಯಯನವು ಪೂರಕ ವಿವರಗಳನ್ನು ಒದಗಿಸಿದೆ. ಇದು, ದೇಶದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಕಾರ್ಯತಂತ್ರಗಳ ಪುನರ್‌ ಪರಿಶೀಲನೆ ಅಗತ್ಯ ಎಂಬುದನ್ನು ಹೇಳುತ್ತಿದೆ. ಮುಂದಿನ ವರ್ಷಗಳಲ್ಲಿ ದೇಶದ ಜನಸಂಖ್ಯೆಯು ಹೆಚ್ಚಾಗಲಿರುವ ಕಾರಣ ಇದು ಇನ್ನಷ್ಟು ಮಹತ್ವದ್ದಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT