ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನಿನ ಬದಲು ಸಕ್ಕರೆಪಾಕ: ಕಲಬೆರಕೆ ತಡೆ ತುರ್ತು ಅಗತ್ಯ

ಸಂಪಾದಕೀಯ
Last Updated 4 ಡಿಸೆಂಬರ್ 2020, 21:45 IST
ಅಕ್ಷರ ಗಾತ್ರ

ದೇಶದ ಮಾರುಕಟ್ಟೆಯಲ್ಲಿ ಹತ್ತು ಹಲವು ಕಂಪನಿಗಳು ‘ಶುದ್ಧ ಜೇನುತುಪ್ಪ’ವನ್ನು ಮಾರಾಟ ಮಾಡುವುದಾಗಿ ಹೇಳಿಕೊಳ್ಳುತ್ತಿವೆ. ವಿಶ್ವದಲ್ಲಿ ಪ್ರತಿವರ್ಷ ಸುಮಾರು 19 ಲಕ್ಷ ಟನ್ ಜೇನುತುಪ್ಪ ಉತ್ಪಾದನೆ ಆಗುತ್ತದೆ. ಇದರಲ್ಲಿ ಸರಿಸುಮಾರು ಶೇಕಡ 24ರಷ್ಟು ಜೇನುತುಪ್ಪ ಉತ್ಪಾದನೆ ಆಗುವುದು ಚೀನಾದಲ್ಲಿ. ವಿಶ್ವದ ಒಟ್ಟು ಉತ್ಪಾದನೆಗೆ ಭಾರತವು ತೀರಾ ಕಡಿಮೆ ಕೊಡುಗೆ ನೀಡುತ್ತಿದೆ ಎಂದು ವರದಿಯೊಂದು ಹೇಳುತ್ತದೆ. ಜಾಗತಿಕ ಮಟ್ಟದಲ್ಲಿ ಪ್ರತೀ ವ್ಯಕ್ತಿ ವರ್ಷವೊಂದರಲ್ಲಿ ಸರಾಸರಿ 250ರಿಂದ 300 ಗ್ರಾಂ ಜೇನುತುಪ್ಪ ಸೇವಿಸುತ್ತಾನೆ. ಆದರೆ, ಭಾರತದಲ್ಲಿ ಪ್ರತೀ ವ್ಯಕ್ತಿ ವಾರ್ಷಿಕ ಸರಾಸರಿ 50 ಗ್ರಾಂ ಜೇನುತುಪ್ಪವನ್ನು ಮಾತ್ರ ಸೇವಿಸುತ್ತಾನೆ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಜೇನಿನ ಬಳಕೆಯ ಪ್ರಮಾಣಕ್ಕೂ ಭಾರತದಲ್ಲಿ ಆಗುತ್ತಿರುವ ಜೇನಿನ ಬಳಕೆಯ ಪ್ರಮಾಣಕ್ಕೂ ದೊಡ್ಡ ವ್ಯತ್ಯಾಸ ಇರುವುದನ್ನು ಈ ಅಂಕಿ–ಅಂಶಗಳೇ ಹೇಳುತ್ತಿವೆ. ಹಾಗಂತ, ಭಾರತದಲ್ಲಿ ಜೇನಿನ ‍ಪ್ರಯೋಜನಗಳ ಬಗ್ಗೆ ಅರಿವು ಇಲ್ಲವೆಂದಲ್ಲ. ದೇಶಿ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಕೂಡ ಜೇನಿನ ಔಷಧೀಯ ಮಹತ್ವಗಳ ಬಗ್ಗೆ ಉಲ್ಲೇಖವಿದೆ. ಆಧುನಿಕ ಸಂದರ್ಭದಲ್ಲಿ, ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಗ್ರೀನ್‌ ಟೀ ಜೊತೆ ಜೇನುತುಪ್ಪ ಬೆರೆಸಿ ಸೇವಿಸುವುದು, ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸ ಬೆರೆಸಿ ಕುಡಿಯುವುದು ನಗರವಾಸಿಗಳಲ್ಲಿ ಜನಪ್ರಿಯವಾಗುತ್ತಿರುವುದನ್ನು ಕಾಣಬಹುದು. ಆದರೆ, ‘ಬ್ರ್ಯಾಂಡ್‌ಗಳ ಹೆಸರಿನಲ್ಲಿ ಸಿಗುವ ಜೇನುತುಪ್ಪದಲ್ಲಿ, ಜೇನಿನ ಮಾಧುರ್ಯಕ್ಕಿಂತ ಸಕ್ಕರೆಪಾಕದ ಸಿಹಿಯೇ ಹೆಚ್ಚಿರುತ್ತದೆ’ ಎಂಬ ಮಾತನ್ನು ನೈಸರ್ಗಿಕ ಜೇನುತುಪ್ಪದ ಸ್ವಾದ ಗೊತ್ತಿದ್ದವರು ಮತ್ತೆ ಮತ್ತೆ ಹೇಳುತ್ತಲೇ ಇದ್ದರು. ಈಗ, ಅವರ ಮಾತಿಗೆ ಬಹುದೊಡ್ಡ ಪುಷ್ಟಿಯ ರೀತಿಯಲ್ಲಿ ಬಂದಿದೆ ಸೆಂಟರ್ ಫಾರ್ ಸೈನ್ಸ್‌ ಆ್ಯಂಡ್ ಎನ್ವಿರಾನ್‌ಮೆಂಟ್‌ (ಸಿಎಸ್‌ಇ) ಸಂಸ್ಥೆ ಸಿದ್ಧಪಡಿಸಿರುವ ವರದಿ.

ಭಾರತದ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬಹುತೇಕ ಬ್ರ್ಯಾಂಡ್‌ಗಳ ಜೇನುತುಪ್ಪವು ಕಲಬೆರಕೆಗೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣ ಆಗುತ್ತಿತ್ತು, ಕಲಬೆರಕೆ ಆಗಿದ್ದರೂ ಅದು ತಿಳಿಯುತ್ತಿರಲಿಲ್ಲ ಎಂದು ಸಿಎಸ್‌ಇ ವರದಿ ಹೇಳುತ್ತದೆ. ಜೇನುತುಪ್ಪದಲ್ಲಿ ಸಕ್ಕರೆಪಾಕದ ಅಂಶವೇ ಬಹಳಷ್ಟು ಇದೆ ಎಂದೂ ಅದು ಹೇಳಿದೆ. ಇದು ಬಹಳ ಗಂಭೀರ ವಿಚಾರ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ, ಸಕ್ಕರೆಯ ಬಗ್ಗೆ ತಿರಸ್ಕಾರವಿರುವ ಒಂದು ಜನವರ್ಗವು ಸಕ್ಕರೆಯ ಬದಲು ಜೇನುತುಪ್ಪವನ್ನು ಬಳಸುತ್ತಿದೆ. ಸಿಎಸ್‌ಇ ವರದಿಯಲ್ಲಿರುವ ಮಾತು ಸತ್ಯವೆಂದಾದರೆ, ಸಕ್ಕರೆ ಬೇಡ ಎಂದು ಜೇನುತುಪ್ಪದ ಮೊರೆಹೋದವರು, ಸಕ್ಕರೆಪಾಕವನ್ನು ಸೇವಿಸುವಂತಾಗಿದೆ ಎನ್ನಬೇಕಾಗುತ್ತದೆ! ಇದು ಗ್ರಾಹಕರಿಗೆ ಮಾಡಿದ ವಂಚನೆಯಾಗುತ್ತದೆ. ಆಹಾರ ಕಲಬೆರಕೆಯನ್ನು ತಡೆಯುವ ವಿಚಾರದಲ್ಲಿ ಬಹಳ ಶ್ರೇಷ್ಠವಾದ ಸ್ಥಾನವನ್ನೇನೂ ಹೊಂದಿರದ ನಮ್ಮ ದೇಶದ ಆಡಳಿತಯಂತ್ರವು, ಈಗ ಜೇನುತುಪ್ಪದ ವಿಚಾರವಾಗಿ ಬಹಿರಂಗವಾಗಿರುವ ಅಧ್ಯಯನ ವರದಿಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದು ಕುತೂಹಲಕರ. ಸರ್ಕಾರ ನಿಗದಿ ಮಾಡಿರುವ ಪರೀಕ್ಷೆಗಳ ಕಣ್ಣಿಗೇ ಮಣ್ಣೆರಚಿ, ಕಲಬೆರಕೆಯೇ ಗೊತ್ತಾಗದಂತೆ ಮಾಡುತ್ತಿದ್ದವು ಕೆಲವು ಬ್ರ್ಯಾಂಡ್‌ಗಳು ಎಂದು ಸಿಎಸ್‌ಇ ವರದಿಯಲ್ಲಿ ಹೇಳಿರುವ ಮಾತು ನಿಜವೇ ಆಗಿದ್ದರೆ, ಸರ್ಕಾರವು ಕಲಬೆರಕೆ ವಿಚಾರದಲ್ಲಿನ ಪರೀಕ್ಷಾ ವಿಧಾನವನ್ನೇ ಬದಲಿಸಿಕೊಳ್ಳಬೇಕಾದ ತುರ್ತು ಎದುರಾದಂತೆ. ಕಂಪನಿಗಳು ಜೇನುತುಪ್ಪಕ್ಕೆ ಸಕ್ಕರೆಪಾಕ ಸೇರಿಸಿಯೂ ಸರ್ಕಾರದ ಪರೀಕ್ಷೆಗಳಿಗೆ ಅದು ಗೊತ್ತಾಗದಂತೆ ಮಾಡಿಕೊಂಡಿದ್ದವು ಎಂದಾದರೆ, ಪರೀಕ್ಷಾ ವಿಧಾನಗಳು ಅದೆಷ್ಟು ಸವಕಲಾಗಿದ್ದವು ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳೇ ದೇಶದ ಎದುರು ವಿವರಿಸಿ ಹೇಳಬೇಕಾಗುತ್ತದೆ. ಜನಪ್ರಿಯ ಬ್ರ್ಯಾಂಡ್‌ಗಳಿಂದ ಗ್ರಾಹಕರಿಗೆ ಶುದ್ಧ ಜೇನುತುಪ್ಪ ಒದಗಿಸಲು ಆಗದು ಎಂದಾದರೆ, ಆ ಕೆಲಸ ನಿಭಾಯಿಸುವ ಹೊಣೆಯನ್ನು ಸ್ಥಳೀಯ ಮಟ್ಟದ ಸಹಕಾರ ಸಂಘಗಳಿಗೆ, ಸ್ವಸಹಾಯ ಸಂಘಗಳಿಗೆ ವಹಿಸುವ ಬಗ್ಗೆ ಆಲೋಚಿಸಬಹುದು. ಸ್ಥಳೀಯ ಮಟ್ಟದಲ್ಲಿ ಜೇನು ಸಾಕಣೆ, ಜೇನುತುಪ್ಪ ಸಂಗ್ರಹಿಸುವ ವಿಧಾನ ಹಾಗೂ ಅದರ ಸಂಸ್ಕರಣಾ ವಿಧಾನದ ಬಗ್ಗೆ ಸಮುದಾಯವೇ ನಿಗಾ ಇರಿಸಲು ಸಾಧ್ಯವಿದೆ. ಈ ವ್ಯವಸ್ಥೆಯನ್ನು ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತಂದಿರುವ ಉದಾಹರಣೆಗಳೂ ಇವೆ. ಅಧಿಕಾರಸ್ಥರು ಈ ಬಗ್ಗೆ ಗಮನ ನೀಡಬಹುದು. ಹಾಗೆಯೇ, ಸಕ್ಕರೆ ಬೇಡವೆಂದು ಜೇನುತುಪ್ಪ ಬಯಸುವವರಿಗೆ, ಸಕ್ಕರೆಪಾಕ ತಿನ್ನಿಸುವಂತಹ ವ್ಯವಸ್ಥೆಯನ್ನು ಕೊನೆಗಾಣಿಸಲು ಅವರು ಮುಂದಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT