ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹೈದರಾಬಾದ್ ಎನ್‌ಕೌಂಟರ್; ತಪ್ಪೆಸಗಿದ ಪೊಲೀಸರಿಗೆ ಶಿಕ್ಷೆಯಾಗಲಿ

Last Updated 25 ಮೇ 2022, 19:19 IST
ಅಕ್ಷರ ಗಾತ್ರ

ಹೈದರಾಬಾದ್‌ನಲ್ಲಿ 26 ವರ್ಷ ವಯಸ್ಸಿನ ಪಶುವೈದ್ಯೆಯೊಬ್ಬರ ಮೇಲೆ 2019ರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆ ಮಾಡಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದಿದ್ದಾರೆ ಎಂಬ ಅನುಮಾನಕ್ಕೆ, ಸುಪ್ರೀಂ ಕೋರ್ಟ್‌ ನೇಮಿಸಿದ್ದ ಆಯೋಗದ ವರದಿಯು ಪುಷ್ಟಿ ನೀಡಿದೆ. ಆರೋಪಿಗಳ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ್ದ ವಿವರಣೆಯು ಸತ್ಯಕ್ಕೆ ದೂರ ಮತ್ತು ಕಟ್ಟುಕತೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಸಿರ್ಪುರಕರ್ ನೇತೃತ್ವದ ಆಯೋಗವು ಹೇಳಿದೆ. ಅಪರಾಧ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಅವರನ್ನು ಕೊಲ್ಲುವ ಉದ್ದೇಶದಿಂದಲೇ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಆಯೋಗವು ವರದಿ ನೀಡಿದೆ.

ಆರೋಪಿಗಳು ಪೊಲೀಸರ ಪಿಸ್ತೂಲುಗಳನ್ನು ಕಸಿದುಕೊಂಡು, ಕೆಲವು ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದರು. ಎನ್‌ಕೌಂಟರ್‌ನಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡವನ್ನು ರಕ್ಷಿಸಲು ಕೆಲವು ದಾಖಲೆಗಳನ್ನು ತಿದ್ದುವ ಯತ್ನವೂ ನಡೆದಿತ್ತು. ನಕಲಿ ಎನ್‌ಕೌಂಟರ್‌ಗೆ ಯೋಜನೆ ರೂಪಿಸುವಲ್ಲಿ, ನಂತರ ಸಾಕ್ಷ್ಯಗಳನ್ನು ನಾಶ ಮಾಡುವಲ್ಲಿ ಪೊಲೀಸರು ಹಲವು ಹಂತಗಳಲ್ಲಿ ಭಾಗಿಯಾಗಿದ್ದಾರೆ. 10 ಮಂದಿ ಪೊಲೀಸರ ವಿರುದ್ಧ ಕೊಲೆಯ ದೋಷಾರೋಪ ನಿಗದಿ ಮಾಡುವಂತೆ ಆಯೋಗವು ಶಿಫಾರಸು ಮಾಡಿದೆ.

ಎನ್‌ಕೌಂಟರ್ ವಿಚಾರವಾಗಿ ಪೊಲೀಸರು ನೀಡಿದ್ದ ವಿವರಣೆಯು 2019ರಲ್ಲಿಯೇ ಕೆಲವರಲ್ಲಿ ಅನುಮಾನಗಳನ್ನು ಮೂಡಿಸಿತ್ತು. ಏಕೆಂದರೆ, ಅವರು ನೀಡಿದ್ದ ವಿವರಣೆಯು ಎಲ್ಲ ನಕಲಿ ಎನ್‌ಕೌಂಟರ್‌ಗಳ ವಿಚಾರದಲ್ಲಿ ಪೊಲೀಸರು ನೀಡುವ ವಿವರಣೆಯಂತೆಯೇ ಇತ್ತು. ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯನ್ನು ಕೊಂದ ರೀತಿಯು ಸಮಾಜದಲ್ಲಿ ಆಕ್ರೋಶ ಮೂಡಿಸಿತ್ತು ಎಂಬುದು ನಿಜ. ಈ ಪ್ರಕರಣದಲ್ಲಿ ತ್ವರಿತವಾಗಿ ಕ್ರಮ ಜರುಗಿಸಬೇಕಾದ ಒತ್ತಡ ಪೊಲೀಸರ ಮೇಲೆ ಇತ್ತು. ಆದರೆ, ಕಾನೂನಿಗೆ ಅನುಗುಣವಾಗಿ ರಚನೆಯಾಗಿರುವ ಪೊಲೀಸ್ ತಂಡವು ಕಾನೂನನ್ನು ತಾನೇ ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಶಂಕಿತರು ಹಾಗೂ ಆರೋಪಿಗಳಿಗೆ ತಾನೇ ಶಿಕ್ಷೆ ವಿಧಿಸಿ ತಕ್ಷಣಕ್ಕೆ ನ್ಯಾಯ ಕೊಡಿಸುವ ಕೆಲಸಕ್ಕೆ ಕೈಹಾಕಬಾರದು. ಕಾನೂನಿಗೆ ಅನುಗುಣವಾಗಿ ನ್ಯಾಯದಾನ ನಡೆಯಬೇಕಿರುವ ಸಮಾಜದಲ್ಲಿ, ಕಾನೂನಿನ ಪ್ರಕ್ರಿಯೆಯನ್ನು ಪರಿಪೂರ್ಣವಾಗಿ ಪಾಲಿಸದೆ ಯಾರಿಗೂ ಶಿಕ್ಷೆ ಜಾರಿಗೊಳಿಸಬಾರದು. ಕಾನೂನನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಿರುವುದು ಪೊಲೀಸರ ಕರ್ತವ್ಯ. ಅವರು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರ್ವಥಾ ಸರಿಯಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸಬೇಕು. ಆರೋಪಿಗಳನ್ನು ಬಂಧಿಸಿ, ಸಾಕ್ಷ್ಯ ಕಲೆಹಾಕಬೇಕು. ನ್ಯಾಯಾಲಯವು ಸಾಕ್ಷ್ಯಗಳನ್ನು ಪರಿಶೀಲಿಸಿ, ಆರೋಪಿಗಳಿಗೆ ಶಿಕ್ಷೆ ಏನು ಎಂಬುದನ್ನು ನಿರ್ಧರಿಸಬೇಕು. ಇವೆಲ್ಲವೂ ಬಹಳ ಸಂಕೀರ್ಣ ಕೆಲಸಗಳು, ಅಪಾರ ಬದ್ಧತೆ ಬಯಸುವ ಕೆಲಸಗಳು. ಹೀಗಿದ್ದರೂ, ಇಂತಹ ಪ್ರಕ್ರಿಯೆಯ ಮೂಲಕವೇ ಶಿಕ್ಷೆ ಜಾರಿಯಾಗಬೇಕು.

ಪೊಲೀಸರು ಹಾಗೂ ಕೆಲವು ಕಾನೂನು ಜಾರಿ ಸಂಸ್ಥೆಗಳು ನಕಲಿ ಎನ್‌ಕೌಂಟರ್‌ಗಳ ಮೊರೆ ಹೋಗಿದ್ದು ಹಿಂದೆಯೂ ಆಗಿದೆ. ಅದಕ್ಕೆ ಕಾರಣಗಳು ಹಲವು ಇವೆ. ಸರ್ಕಾರಗಳು ಹಾಗೂ ರಾಜಕಾರಣಿಗಳ ಸೂಚನೆ ಆಧರಿಸಿಯೂ ನಕಲಿ ಎನ್‌ಕೌಂಟರ್‌ಗಳು ನಡೆದಿರಬಹುದು. ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳು ಇವೆ. ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವುದು ವಿಳಂಬ ಆಗಬಹುದು. ಪೊಲೀಸ್ ವ್ಯವಸ್ಥೆಯಲ್ಲಿ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲದಿರಬಹುದು. ಅವರಿಗೆ ಸೂಕ್ತವಾದ ತರಬೇತಿ ಇಲ್ಲದಿರಬಹುದು ಹಾಗೂ ಅವರ ಮೇಲೆ ಕೆಲಸದ ಒತ್ತಡ ಅತಿಯಾಗಿ ಇದ್ದಿರಬಹುದು. ವ್ಯವಸ್ಥೆ ಹೀಗಿರುವಾಗ ಪೊಲೀಸರಲ್ಲಿ ಕೆಲವರಿಗೆ ಹಾಗೂ ಸಮಾಜದಲ್ಲಿ ಒಂದು ವರ್ಗಕ್ಕೆ ಕ್ರಿಮಿನಲ್ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಅತ್ಯುತ್ತಮ ಮಾರ್ಗ ಎನ್‌ಕೌಂಟರ್‌ಗಳು ಎಂದು ಅನ್ನಿಸಬಹುದು. ಹಾಗೆ ಮಾಡುವುದರಿಂದ ಅಪರಾಧ ಪ್ರಕರಣಗಳು ಕಡಿಮೆ ಆಗಬಹುದು ಎಂದೂ ಅವರಿಗೆ ಅನ್ನಿಸಬಹುದು. ತಕ್ಷಣಕ್ಕೆ ಶಿಕ್ಷೆ ವಿಧಿಸುವ, ಸಮಾಜವನ್ನು ಅರಾಜಕತೆಗೆ ನೂಕುವ ಪ್ರವೃತ್ತಿಯೂ ದೇಶದಲ್ಲಿ ಬೆಳೆಯುತ್ತಿದೆ. ಆದರೆ, ಪೊಲೀಸರು ಇಂತಹ ಕ್ರಮಕ್ಕೆ ಮುಂದಾಗುವುದನ್ನು ಸಮರ್ಥಿಸುವ ಸಮಾಜವು ಮುಂದೆ ಒಂದು ದಿನ ಪ್ರತೀ ವ್ಯಕ್ತಿಯ ಸ್ವಾತಂತ್ರ್ಯವನ್ನು, ಜೀವವನ್ನು ನಿರಂತರ ಅಪಾಯಕ್ಕೆ ಸಿಲುಕಿಸುತ್ತದೆ ಎಂಬುದನ್ನು ಪ್ರಜೆಗಳು ಅರ್ಥ ಮಾಡಿಕೊಳ್ಳಬೇಕು. ತಪ್ಪು ಮಾಡಿರುವ ಹೈದರಾಬಾದ್‌ ಪೊಲೀಸರನ್ನು ತ್ವರಿತವಾಗಿ ವಿಚಾರಣೆಗೆ ಗುರಿಪಡಿಸಬೇಕು, ಅವರಿಗೆ ಶಿಕ್ಷೆಯಾಗಬೇಕು. ಅವರಿಗೆ ಆಗುವ ಶಿಕ್ಷೆಯು ಇತರರಿಗೆ ಎಚ್ಚರಿಕೆಯ ಪಾಠವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT