ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ದುರ್ಗಮ ಪ್ರದೇಶದಲ್ಲಿ ಮೂಲಸೌಕರ್ಯ ಕೊರತೆ ನೀಗಲು ತುರ್ತು ಕ್ರಮ ಅಗತ್ಯ

Last Updated 14 ಜೂನ್ 2021, 1:46 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮಚ್ಚಳ್ಳಿ ಎಂಬ ಜನವಸತಿ ಪ್ರದೇಶದಿಂದ, ಅನಾರೋಗ್ಯಕ್ಕೊಳಗಾಗಿದ್ದ ಮಹಿಳೆಯೊಬ್ಬರನ್ನು ಏಳು ಕಿಲೊಮೀಟರ್ ದೂರದವರೆಗೆ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿರುವುದು ವರದಿಯಾಗಿದೆ.

ಮಚ್ಚಳ್ಳಿ ಪ್ರಕರಣವು ಬೆಳಕಿಗೆ ಬಂದ ಒಂದು ಉದಾಹರಣೆಯಷ್ಟೆ. ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸರಿಯಾದ ರಸ್ತೆ, ಸೇತುವೆ ಸಂಪರ್ಕಗಳಿಲ್ಲದ ನೂರಾರು ಹಳ್ಳಿಗಳಿವೆ. ಇಂತಹ ಬಹುಪಾಲು ಹಳ್ಳಿಗಳು ಆಸ್ಪತ್ರೆಗಳು, ಶಾಲಾ–ಕಾಲೇಜುಗಳು, ಬ್ಯಾಂಕ್‌, ಸರ್ಕಾರಿ ಕಚೇರಿಗಳಿಂದಲೂ ಹೆಚ್ಚು ದೂರದಲ್ಲೇ ಇವೆ. ಮಲೆನಾಡಿನ ಘಟ್ಟ ಪ್ರದೇಶಗಳು ಹಾಗೂ ಕರಾವಳಿಯ ಕಾಡಂಚಿ ನಲ್ಲಿರುವ ಹಳ್ಳಿಗಳ ಜನರು ಸಣ್ಣ ಕೆಲಸಗಳಿಗೂ ಬೆಟ್ಟ, ಗುಡ್ಡಗಳನ್ನು ಹತ್ತಿ–ಇಳಿದು, ಹತ್ತಾರು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾದ ಸ್ಥಿತಿ ಈಗಲೂ ಇದೆ.

ನದಿ, ಹಳ್ಳಗಳಿಗೆ ಸೇತುವೆ, ಕಾಲು ಸಂಕಗಳಿಲ್ಲದೇ ಜನರು ಜೀವವನ್ನೇ ಪಣಕ್ಕಿಟ್ಟು ಓಡಾಡುತ್ತಿರುವುದು ಅನೇಕ ಹಳ್ಳಿಗಳಲ್ಲಿ ಕಾಣಸಿಗುತ್ತದೆ. ರೋಗಿಗಳನ್ನು ಚಿಕಿತ್ಸೆಗಾಗಿ ಕಿಲೊಮೀಟರ್‌ಗಟ್ಟಲೆ ದೂರ ಹೊತ್ತೊಯ್ಯುವಂತಹ ದಯನೀಯ ಸ್ಥಿತಿ, ಪಡಿತರವನ್ನು ಹೆಗಲ ಮೇಲೆ ಹೊತ್ತುಕೊಂಡೇ ಸಾಗಿಸಬೇಕಾದ ಅನಿವಾರ್ಯವು ಗ್ರಾಮೀಣ ಜನವಸತಿಗಳಲ್ಲಿರುವ ಮೂಲಸೌಕರ್ಯದ ಕೊರತೆ ಯನ್ನು ಸಾರುತ್ತವೆ. ತುಂಬಿ ಹರಿಯುವ ಹಳ್ಳ, ನದಿಗಳನ್ನು ದಾಟಲು ಯತ್ನಿಸುವಾಗ ಜನರು ಕೊಚ್ಚಿಹೋಗುವಂತಹ ದುರ್ಘಟನೆಗಳು ಪ್ರತೀ ಮಳೆಗಾಲದಲ್ಲೂ ಸಂಭವಿಸುತ್ತಲೇ ಇವೆ. ದುರ್ಘಟನೆಗಳು ನಡೆದಾಗಲೆಲ್ಲ ಗ್ರಾಮೀಣ ಪ್ರದೇಶ ದಲ್ಲಿನ ಮೂಲಸೌಕರ್ಯದ ಕೊರತೆಯ ವಿಚಾರ ಚರ್ಚೆಯ ಮುನ್ನೆಲೆಗೆ ಬರುತ್ತದೆ. ಅಷ್ಟೇ ವೇಗವಾಗಿ ಮರೆಯೂ ಆಗುತ್ತದೆ.

ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವೇಗ ಹೆಚ್ಚುವುದಿಲ್ಲ ಎಂಬುದಕ್ಕೆ ರಾಜ್ಯದ ಉದ್ದಗಲಕ್ಕೂ ನೂರಾರು ನಿದರ್ಶನಗಳು ಸಿಗುತ್ತವೆ. ಕೊರೊನಾ ಸಾಂಕ್ರಾಮಿಕ ಸೃಷ್ಟಿಸಿರುವ ಬಿಕ್ಕಟ್ಟಿನ ಈ ದಿನಗಳಲ್ಲಿ ಇಂತಹ ಹಳ್ಳಿಗಳ ಜನರ ಸಂಕಷ್ಟ ದುಪ್ಪಟ್ಟಾಗಿದೆ. ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯುವುದಕ್ಕೆ ಹರಸಾಹಸಪಡಬೇಕಾದ ಸ್ಥಿತಿ ಅನೇಕ ಹಳ್ಳಿಗಳಲ್ಲಿ ಈಗಲೂ ಇದೆ. ಕೋವಿಡ್‌ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಪಡೆಯುವುದಕ್ಕೆ ಆರೋಗ್ಯ ಕೇಂದ್ರ ತಲುಪುವುದೇ ಇಲ್ಲಿನ ಜನರಿಗೆ ಬಹುದೊಡ್ಡ ಸವಾಲಾಗಿದೆ.

ಮಲೆನಾಡು ಮತ್ತು ಕರಾವಳಿಯ ಗುಡ್ಡಗಾಡು ಪ್ರದೇಶದ ಹಳ್ಳಿಗಳಲ್ಲಿರುವ ಈ ದುಃಸ್ಥಿತಿಗೆ ಗ್ರಾಮ ಪಂಚಾಯಿತಿಯಿಂದ ರಾಜ್ಯ ಸರ್ಕಾರದವರೆಗೆ ಎಲ್ಲರೂ ಹೊಣೆಗಾರರು. ಜನರಿಗೆ ರಸ್ತೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣದಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಇದಕ್ಕಾಗಿಯೇ ಹತ್ತಾರು ಯೋಜನೆಗಳೂ ಚಾಲ್ತಿಯಲ್ಲಿವೆ. ಆದರೂ, ನೂರಾರು ಹಳ್ಳಿಗಳ ಸಂಕಷ್ಟ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಗ್ರಾಮೀಣ ಪ್ರದೇಶದ ಜನವಸತಿಗಳಿಗೆ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಇರುವ ಬದ್ಧತೆಯ ಕೊರತೆ‌ಯನ್ನು ಇದು ಎತ್ತಿತೋರಿಸುತ್ತದೆ.

ಅಧ್ಯಯನ ವರದಿಯೊಂದರ ಪ್ರಕಾರ, 2019ರ ಮಾರ್ಚ್‌ ಅಂತ್ಯಕ್ಕೆ ರಾಜ್ಯದಲ್ಲಿ 1,90,862 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳಿದ್ದವು. ಅವುಗಳಲ್ಲಿ 1,12,315 ಕಿ.ಮೀ. ಉದ್ದದ (ಶೇ 58.85) ರಸ್ತೆಗಳು ಮಣ್ಣು ಮತ್ತು ಕಲ್ಲಿನಿಂದ ಕೂಡಿದ ಕಚ್ಚಾ ರಸ್ತೆಗಳು ಎಂಬುದು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತದೆ. 2018ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಶಾಲಾ ಬಾಲಕಿಯೊಬ್ಬಳು ಹಳ್ಳದಲ್ಲಿ ಕೊಚ್ಚಿಹೋದ ಪ್ರಕರಣದ ಬಳಿಕ ಕಾಲುಸಂಕಗಳ ನಿರ್ಮಾಣ ಮತ್ತು ನಿರ್ವಹಣೆಗೆ ರಾಜ್ಯ ಸರ್ಕಾರ ಆಸಕ್ತಿ ತೋರಿತ್ತು. ಆದರೆ, ಆ ಯೋಜನೆಯೂ ಕುಂಟುತ್ತಾ ಸಾಗಿದೆ. ಸಂಪರ್ಕದ ತೀವ್ರ ಸಮಸ್ಯೆಯು ಜನರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯದಂತಹ ಅಗತ್ಯ ಸೇವೆಗಳನ್ನು ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ. ಇದಕ್ಕೆ ಪರಿಹಾರ ಒದಗಿಸಲು ಗ್ರಾಮ ಪಂಚಾಯಿತಿಯಿಂದ ರಾಜ್ಯ ಸರ್ಕಾರದವರೆಗೆ ಎಲ್ಲ ಹಂತದ ಆಡಳಿತ ವ್ಯವಸ್ಥೆ ಸಮರೋಪಾದಿಯಲ್ಲಿ ಸ್ಪಂದಿಸಬೇಕಿದೆ.

ಕೋವಿಡ್‌ ಬಿಕ್ಕಟ್ಟು ವೈದ್ಯಕೀಯ ಸೌಕರ್ಯದ ಅನಿವಾರ್ಯವನ್ನು ದ್ವಿಗುಣಗೊಳಿಸಿದೆ. ಸಂಚಾರಿ ಕ್ಲಿನಿಕ್‌ಗಳು, ಆಂಬುಲೆನ್ಸ್‌ ಸೇವೆ, ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಿಸುವಂತಹ ಕ್ರಮಗಳ ಮೂಲಕ ಗುಡ್ಡಗಾಡು ಪ್ರದೇಶದ ಜನರಿಗೆ ವೈದ್ಯಕೀಯ ಸೌಲಭ್ಯವನ್ನು ಇನ್ನಷ್ಟು ಸನಿಹವಾಗಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT