ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯ, ಕಾಂಗ್ರೆಸ್‌ ಮಾದರಿ ನಡೆ

Last Updated 14 ಜನವರಿ 2022, 19:31 IST
ಅಕ್ಷರ ಗಾತ್ರ

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡುವ ಕಾಂಗ್ರೆಸ್‌ ಪಕ್ಷದ ನಿರ್ಧಾರವು ರಾಜಕಾರಣದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರೇರಣೆ ನೀಡುವಂತಹದ್ದು. 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ್ದು, ಅದರಲ್ಲಿ 50 ಮಂದಿ ಮಹಿಳೆಯರಿದ್ದಾರೆ. ಈ ಪಟ್ಟಿಯಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರರು ಹಾಗೂ ವಿವಿಧ ಅಪರಾಧ ಕೃತ್ಯಗಳ ಸಂತ್ರಸ್ತರು ಸೇರಿದ್ದಾರೆ. ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ತಾಯಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರ್ತಿ ಹಾಗೂ ಆಶಾ ಕಾರ್ಯಕರ್ತೆಗೆ ಟಿಕೆಟ್‌ ನೀಡಿರುವುದು, ಮಹಿಳಾ ಪ್ರಾತಿನಿಧ್ಯದ ಬಗ್ಗೆ ಉತ್ತರಪ್ರದೇಶ ಕಾಂಗ್ರೆಸ್‌ ಘಟಕವು ಗಂಭೀರವಾಗಿರುವುದನ್ನು ಸೂಚಿಸುವಂತಿದೆ.ಶೇ 40ರಷ್ಟು ಯುವಜನರಿಗೆ ಟಿಕೆಟ್‌ ನೀಡುವುದಾಗಿಯೂ ಪಕ್ಷ ಪ್ರಕಟಿಸಿದೆ. ಮಹಿಳಾಶಕ್ತಿ ಮತ್ತು ಯುವಶಕ್ತಿ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವುದು ಪ್ರಜಾತಂತ್ರದ ಚೆಲುವನ್ನು ಹೆಚ್ಚಿಸುವ ಪ್ರಯತ್ನವಾಗಿದೆ.

ಅನ್ಯಾಯಕ್ಕೆ ಒಳಗಾದವರು ತಮ್ಮ ಹಕ್ಕುಗಳ ಬಗ್ಗೆ ದನಿಯೆತ್ತಲು ರಾಜಕೀಯ ವೇದಿಕೆ ಕಲ್ಪಿಸಿಕೊಡುವುದಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ‘ರಾಜಕೀಯಕ್ಕೆ ಬನ್ನಿ, ಅಧಿಕಾರಕ್ಕೆ ಬನ್ನಿ, ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಿ’ ಎನ್ನುವ ಕಾಂಗ್ರೆಸ್‌ನ ಘೋಷಣೆ ಆಕರ್ಷಕವಾಗಿದೆ ಹಾಗೂ ರಾಜಕಾರಣಕ್ಕೆ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಅನಿವಾರ್ಯವಾದ ನಡೆಯಾಗಿದೆ.ಈವರೆಗೂ ಮತಬ್ಯಾಂಕ್‌ ರೂಪದಲ್ಲಷ್ಟೇ ಮಹಿಳೆಯರನ್ನು ನೋಡಲಾಗಿದೆ. ಧನಬಲ, ತೋಳ್ಬಲ ಹಾಗೂ ಕುಟುಂಬದ ಹೆಸರಿಲ್ಲದೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲವೆನ್ನುವ ಕಾರಣಗಳನ್ನು ನೀಡಿ ಅಧಿಕಾರ ಕೇಂದ್ರಗಳಿಂದ ಹೆಣ್ಣುಮಕ್ಕಳನ್ನು ಆದಷ್ಟೂ ದೂರವಿಡುವ ಪರಿಪಾಟಕ್ಕೆ ವಿರುದ್ಧವಾದ ಚಲನೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ವ್ಯಕ್ತವಾಗುತ್ತಿದೆ.ಮಹಿಳಾ ಪ್ರಾತಿನಿಧ್ಯದಿಂದಾಗಿ ಉತ್ತರ
ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಸಾಧಿಸುತ್ತದೆಯೋ ಇಲ್ಲವೋ ಎನ್ನುವುದು ಕಾಲಕ್ಕೆ ಬಿಟ್ಟ ಪ್ರಶ್ನೆ. ಆದರೆ, ಚುನಾವಣೆಯ ಯಶಸ್ಸು ಹಾಗೂ ಅಧಿಕಾರದ ಲೆಕ್ಕಾಚಾರಗಳನ್ನು ಮೀರಿದ ಮಹತ್ವವು ಕಾಂಗ್ರೆಸ್‌ ಆರಂಭಿಸಿರುವ ಮಹಿಳಾ ಪ್ರಾತಿನಿಧ್ಯಕ್ಕಿದೆ. ಲೋಕಸಭೆ ಹಾಗೂ ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಅವಕಾಶ ಕಲ್ಪಿಸುವ ಉದ್ದೇಶದ ಮಸೂದೆಗೆ ಇಪ್ಪತ್ತೈದು ವರ್ಷಗಳ ನಂತರವೂ ಸಂಸತ್ತಿನ ಅನುಮೋದನೆ ಪಡೆಯುವುದು ಸಾಧ್ಯವಾಗಿಲ್ಲ. 1996ರಲ್ಲಿ ಸಂಸತ್ತಿನ ಮುಂದೆ ಬಂದ ಮಸೂದೆಗೆ ಅಂಗೀಕಾರದ ಮುದ್ರೆ ದೊರೆಯದೇ ಇರುವುದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪಾತ್ರವೂ ಇದೆ. ಕೆಲವೇ ಕೆಲವು ಮಹಿಳೆಯರು ಶಾಸನಸಭೆಗಳನ್ನು ಪ್ರವೇಶಿಸಿದರೂ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವುದು ಸುಲಭವಲ್ಲ. ಸದ್ಯದ ಮಹಿಳಾ ಪ್ರಾತಿನಿಧ್ಯವು ಆಲಂಕಾರಿಕ ಹುದ್ದೆಗಳ ರೂಪದಲ್ಲಷ್ಟೇ ಇದೆ.

ರಾಜಕಾರಣದಲ್ಲಿ ಲಿಂಗಸಮಾನತೆಯ ಆದರ್ಶ ಕಾರ್ಯರೂಪಕ್ಕೆ ಬರಬೇಕಾದರೆ, ಪಕ್ಷಗಳ ಟಕೆಟ್‌ ಹಂಚಿಕೆಯ ಹಂತದಲ್ಲೇ ಪ್ರಾತಿನಿಧ್ಯ ಸಾಧ್ಯವಾಗಬೇಕು. ಮಹಿಳಾ ಮೀಸಲಾತಿ ಕಾಯ್ದೆಗೆ ಕಾಯದೆ ಸ್ವಯಂ ಪ್ರೇರಣೆಯಿಂದ ಪ್ರಾತಿನಿಧ್ಯ ನೀಡಲು ರಾಜಕೀಯ ಪಕ್ಷಗಳು ಮುಂದಾಗಬೇಕು. ಅಂಥದೊಂದು ದಿಟ್ಟತನವನ್ನು ಕಾಂಗ್ರೆಸ್‌ ಪ್ರದರ್ಶಿಸಿದೆ. ಕಾಂಗ್ರೆಸ್‌ನ ಈ ಮಾದರಿಯನ್ನು ಉಳಿದ ಪಕ್ಷಗಳೂ ಅನುಸರಿಸಬೇಕು. ಶೇ 40ರಷ್ಟು ಅಲ್ಲದಿದ್ದರೂ ಗಣನೀಯ ಪ್ರಮಾಣದ ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಸಮಾಜದ ಅರ್ಧ ಭಾಗದಷ್ಟಿರುವ ಮಹಿಳೆಯರಿಗೆ ಚುನಾವಣಾ ರಾಜಕಾರಣದಲ್ಲಿ ನ್ಯಾಯ ದೊರೆಯುತ್ತಿಲ್ಲ ಎನ್ನುವ ಕಟುವಾಸ್ತವವು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ರಾಜಕಾರಣ ದಲ್ಲಿನ ವಿರೋಧಾಭಾಸದಂತಿದೆ. ಸಮಾಜದ ಎಲ್ಲ ಹಂತಗಳಲ್ಲಿ ಮಹಿಳಾ ಸಮಾನತೆ ನಿಜವಾದ ಅರ್ಥದಲ್ಲಿ ಕಾರ್ಯರೂಪಕ್ಕೆ ಬರಬೇಕಾದಲ್ಲಿ ಮೊದಲು ಶಾಸನಸಭೆಗಳಲ್ಲಿ ಸಮಾನತೆ ಸಾಧ್ಯವಾಗಬೇಕು. ಶಾಸನಸಭೆ ಮತ್ತು ಸಚಿವ ಸಂಪುಟಗಳಿಂದ ಮಹಿಳೆಯರನ್ನು ದೂರವಿಟ್ಟು ಮಹಿಳೆಯರ ಹಿತಾಸಕ್ತಿಯ ಬಗ್ಗೆ ಮಾತನಾಡುವ ಕಪಟ ರಾಜಕಾರಣದಿಂದ ರಾಜಕೀಯ ಪಕ್ಷಗಳು ಇನ್ನಾದರೂ ಹೊರಬರಬೇಕು. ಅಧಿಕಾರದ ಸ್ಥಾನಗಳಿಂದ ಮಹಿಳೆಯರನ್ನು ದೂರವಿಟ್ಟು ನಡೆಸುವ ರಾಜಕಾರಣವು ಪ್ರಜಾಪ್ರಭುತ್ವದ ಘನತೆ ಹೆಚ್ಚಿಸುವಂತಹದ್ದಲ್ಲ. ನೀತಿ ನಿಯಮಗಳನ್ನು ರೂಪಿಸುವ ರಾಜಕೀಯ ಅಧಿಕಾರದ ಸ್ಥಾನಗಳಲ್ಲಿ ಮಹಿಳೆಯರು ಗಣನೀಯ ಸಂಖ್ಯೆಯಲ್ಲಿ ಇಲ್ಲದೆ ಹೋದರೆ ಸಮಾನತೆ ಎನ್ನುವುದಕ್ಕೆ ಅರ್ಥವೂ ಇಲ್ಲ. ಲಿಂಗತಾರತಮ್ಯವನ್ನು ತೊಡೆದುಹಾಕುವ ಪ್ರಯತ್ನ ಸಕ್ರಿಯ ರಾಜಕಾರಣದಿಂದಲೇ ಆರಂಭವಾಗಬೇಕು. ಚುನಾವಣಾ ರಾಜಕಾರಣ ಮತ್ತು ಅಧಿಕಾರ ರಾಜಕಾರಣದಿಂದ ಮಹಿಳೆಯರನ್ನು ದೂರವಿಡುವಲ್ಲಿ ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳದೂ ಸಮಾನ ಪಾತ್ರವಿದೆ. ಈಗ ತನ್ನ ತಪ್ಪನ್ನು ತಿದ್ದಿಕೊಳ್ಳುವ ದಿಸೆಯಲ್ಲಿ ಕಾಂಗ್ರೆಸ್‌ ತಡವಾಗಿಯಾದರೂ ಸರಿಯಾದ ನಿರ್ಧಾರ ಕೈಗೊಂಡಿದೆ. ದೇಶದ ಅತಿ ದೊಡ್ಡ ಚುನಾವಣಾ ಕಣದಲ್ಲಿ ನಡೆಯುತ್ತಿರುವ ಈ ಪ್ರಯೋಗವನ್ನು ಉಳಿದ ರಾಜ್ಯಗಳಿಗೂ ಕಾಂಗ್ರೆಸ್‌ ವಿಸ್ತರಿಸಬೇಕು. ಉಳಿದ ರಾಜಕೀಯ ಪಕ್ಷಗಳೂ ಮಹಿಳಾ ಕಾಳಜಿಯ ಕುರಿತು ಮಾತಿನ ರೂಪದಲ್ಲೇ ಉಳಿದಿರುವ ತಮ್ಮ ಬದ್ಧತೆಯನ್ನು ಕೃತಿ ರೂಪಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಚುನಾವಣೆಯಲ್ಲಿ ಹಾಗೂ ಸರ್ಕಾರ ರಚನೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಕಲ್ಪಿಸುವುದು ಅವರಿಗೆ ಮಾಡುವ ಉಪಕಾರವಾಗಿರದೆ, ತಪ್ಪು ತಿದ್ದಿಕೊಳ್ಳುವ ಪ್ರಾಂಜಲ ಪ್ರಯತ್ನವಾಗಿದೆ ಎನ್ನುವುದನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT