ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹೊಸ ಸಂಸತ್‌ ಭವನ ಉದ್ಘಾಟನೆ: ಸರ್ಕಾರದ ಪಕ್ಷಪಾತಿ ನಡೆ ದುರದೃಷ್ಟಕರ

Published 28 ಮೇ 2023, 22:37 IST
Last Updated 28 ಮೇ 2023, 22:37 IST
ಅಕ್ಷರ ಗಾತ್ರ

ಭಾರತದ ಹೊಸ ಸಂಸತ್‌ ಭವನದ ಉದ್ಘಾಟನೆಯ ಸುತ್ತ ಹಲವು ವಿವಾದಗಳು ಸುತ್ತಿಕೊಂಡಿರುವುದು ದುರದೃಷ್ಟಕರ. ಹಲವು ಪ್ರಮುಖ ವಿರೋಧ ಪಕ್ಷಗಳಿಂದ ಸಮಾರಂಭ ಬಹಿಷ್ಕಾರ, ಅಸಹಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೇಚ್ಛೆಯಿಂದ ಕೈಗೊಂಡ ನಿರ್ಧಾರಗಳು ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿ ಎದ್ದು ಕಂಡ ಅಂಶಗಳು. ಮೋದಿ ಅವರು ಹೊಸ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ, ಸ್ಪೀಕರ್‌ ‍‍ಪೀಠದ ಬಳಿ ಸೆಂಗೋಲ್‌ (ರಾಜದಂಡ) ಸ್ಥಾಪಿಸಿದರು. ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರ ಆದುದರ ಸಂಕೇತ ಈ ರಾಜದಂಡ ಎಂದು ಹೇಳಲಾಗುತ್ತಿದೆ. ಹಲವು ವಿಧಿವಿಧಾನಗಳು, ಮಂತ್ರಘೋಷ ಮತ್ತು ಪ್ರಧಾನಿಯವರಿಂದ ಸಾಷ್ಟಾಂಗ ನಮಸ್ಕಾರ ಮುಂತಾದ ಕ್ರಿಯೆಗಳಿಂದಾಗಿ ಉದ್ಘಾಟನೆಯು ಧಾರ್ಮಿಕ ಕಾರ್ಯಕ್ರಮವೊಂದರ ಸ್ವರೂಪ ಪಡೆದುಕೊಂಡಿತು. ಕಾರ್ಯಕ್ರಮಕ್ಕೆ ಸಂಬಂಧಿಸಿ ಇದು ಕೂಡ ಪ್ರಶ್ನಾರ್ಹವೇ ಆಗಿದೆ. ಪ್ರಧಾನಿ ಮೋದಿ ಅವರು ಎಲ್ಲ ವಿಧಿವಿಧಾನಗಳ ಕೇಂದ್ರ ಬಿಂದುವಾಗಿದ್ದರು. ಪ್ರಜಾಸತ್ತೆಯ ಅತ್ಯುನ್ನತ ವೇದಿಕೆಯಾದ ಸಂಸತ್‌ ಭವನವನ್ನು ಉದ್ಘಾಟಿಸುವ ಹಕ್ಕು ನಿಜವಾಗಿಯೂ ಇರುವುದು ದೇಶದ ಮುಖ್ಯಸ್ಥೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ. ಆದರೆ, ರಾಷ್ಟ್ರಪತಿಯ ಹಕ್ಕನ್ನು ನಿರ್ಲಕ್ಷಿಸಲಾಯಿತು. 

ರಾಜದಂಡವನ್ನು ಸಂಸತ್ತಿನಲ್ಲಿ ಸ್ಥಾಪಿಸುವುದರೊಂದಿಗೆ ವಿವಾದಾತ್ಮಕವಾದ ಹೊಸ ಸಂಕೇತವೊಂದನ್ನು ಸೃಷ್ಟಿಸಲಾಗಿದೆ. ಚೋಳ ವಂಶದ ದೊರೆಗಳು ಬಳಸುತ್ತಿದ್ದ ರಾಜದಂಡವನ್ನು ತಮಿಳುನಾಡಿನ ಹಿಂದೂ ಮಠವೊಂದರ ಸ್ವಾಮೀಜಿಗಳು ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಈ ರಾಜದಂಡವು ಅಧಿಕಾರ ಹಸ್ತಾಂತರದ ಸಂಕೇತ ಎಂದು ಸರ್ಕಾರ ಹೇಳುತ್ತಿರುವುದಕ್ಕೆ ಚಾರಿತ್ರಿಕ ಪುರಾವೆಯೇನೂ ಇಲ್ಲ. ರಾಜದಂಡವು ಒಂದು ತಟಸ್ಥ ಸಂಕೇತ. ಆದರೆ, ಈಗ ಅದಕ್ಕೆ ಸಂಬಂಧಿಸಿ ನಡೆದ ಚಟುವಟಿಕೆಗಳು ಅದನ್ನೊಂದು ಧಾರ್ಮಿಕ ಸಂಕೇತವನ್ನಾಗಿ ಮಾರ್ಪಡಿಸಿವೆ. ಜೊತೆಗೆ, ಈ ರಾಜದಂಡವು ಪ್ರಜಾಪ್ರಭುತ್ವದಲ್ಲಿ ರಾಜಸತ್ತೆಯ ಸಂಕೇತವಾಗಿ ಸಂಸತ್ತಿನಲ್ಲಿ ಉಳಿಯಲಿದೆ. ವಸಹಾತುಪೂರ್ವ ಕಾಲದ ಜೊತೆಗೆ ದೇಶದ ಭವಿಷ್ಯವನ್ನು ಈ ರಾಜದಂಡವು ಬೆಸೆಯಲಿದೆ ಎಂದು ಮೋದಿ ಅವರು ಹೇಳುವ ಮೂಲಕ, ರಾಜದಂಡವು ಸಂಕೇತವಾಗಿ ಉಳಿಯಲಿದೆ ಎಂಬ ಸುಳಿವು ಕೊಟ್ಟಿದ್ದಾರೆ. ಭಾರತದ ಭೂತಕಾಲ, ವರ್ತಮಾನ ಮತ್ತು ಭವಿಷ್ಯವನ್ನು ಬೆಸೆಯಲು ಹೊಸದೊಂದು ಸಂಕೇತವನ್ನು ಸೃಷ್ಟಿಸಿಕೊಳ್ಳುವ ಅಗತ್ಯ ಇರಲಿಲ್ಲ. ಜೊತೆಗೆ, ವಿಚಾರಗಳು ಮತ್ತು ಘಟನೆಗಳನ್ನು ತಪ್ಪಾಗಿ ಬಿಂಬಿಸಿ ಸಂಕೇತವೊಂದನ್ನು ಸೃಷ್ಟಿಸಿದ್ದು ದುರದೃಷ್ಟಕರವೇ ಆಗಿದೆ. ಇದು ಮಿಥ್ಯೆ ಸೃಷ್ಟಿ ಹಾಗೂ ಇತ್ತೀಚಿನ ವರ್ಷಗಳಲ್ಲಿ ಆರಂಭಿಸಲಾದ ಇತಿಹಾಸ ಮರುರೂಪಿಸುವಿಕೆಯ ಭಾಗ. ಸತ್ಯಮೇವ ಜಯತೇ ಎಂಬ ಧ್ಯೇಯವನ್ನು ಹೊಂದಿರುವ ನಮ್ಮ ಸಂಸತ್ತಿನ ಪಡಸಾಲೆಯೊಳಕ್ಕೆ ಇದು ಈಗ ಪ್ರವೇಶ ಪಡೆದಿದೆ. 

ಸಂಸತ್‌ ಭವನದ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರ, ಆಡಳಿತಾರೂಢ ಪಕ್ಷ ಮತ್ತು ಈ ಪಕ್ಷದ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಪಕ್ಷಗಳು ಮಾತ್ರ ಭಾಗಿಯಾಗಿವೆ. ಹೆಚ್ಚಿನ ವಿರೋಧ ಪಕ್ಷಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಬಂದಿಲ್ಲ. ದೇಶದ ಮುಖ್ಯಸ್ಥೆ ಎಂದೇ ಪರಿಗಣಿಸಲಾಗುವ ರಾಷ್ಟ್ರಪತಿಯು ಸಂಸತ್‌ ಭವನವನ್ನು ಉದ್ಘಾಟಿಸಬೇಕು ಎಂದು ಒತ್ತಾಯಿಸಿ 20 ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿದ್ದು ನ್ಯಾಯಯುತವಾಗಿಯೇ ಇದೆ. ವಿರೋಧ ಪಕ್ಷಗಳ ಈ ಬೇಡಿಕೆಗೆ ಸರ್ಕಾರವು ಮಣಿಯಬೇಕಿತ್ತು. ಅದರ ಬದಲಿಗೆ, ಇಡೀ ಕಾರ್ಯಕ್ರಮವು ಮೋದಿ ಅವರ ಸುತ್ತವೇ ನಡೆಯಿತು. ಸಂಸತ್‌ ಭವನವು ಎಲ್ಲ ಜನರು ಮತ್ತು ಎಲ್ಲ ಪಕ್ಷಗಳಿಗೆ ಸೇರಿದ್ದು. ಅದಕ್ಕೆ ಅನುಗುಣವಾಗಿಯೇ ರಾಜಕೀಯ ಮತ್ತು ಪಕ್ಷಾಪಾತಕ್ಕೆ ಎಡೆ ಇಲ್ಲದ ರೀತಿಯಲ್ಲಿ ರಾಷ್ಟ್ರೀಯ ಏಕತೆಯ ಸಂಕೇತದ ರೀತಿಯಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಸರ್ಕಾರವು ಪಕ್ಷಪಾತಿಯಾಗಿ ವರ್ತಿಸಿ, ಈ ಸಂದರ್ಭದ ಘನತೆಯು ಮುಕ್ಕಾಗುವಂತೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT