ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಏರುಗತಿಯಲ್ಲಿ ತೈಲ ದರ ಹಣದುಬ್ಬರ ಹೆಚ್ಚಳದ ಭೀತಿ

Last Updated 7 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇಕಡ 4ರ ಆಸುಪಾಸಿನಲ್ಲಿ ಇರಿಸಬೇಕು ಎಂಬುದು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ನೀಡಿರುವ ಸೂಚನೆ. ಆದರೆ, ಹಣದುಬ್ಬರ ಪ್ರಮಾಣವು ಈ ಮಟ್ಟವನ್ನು ಮೀರಿದೆ, ಶೇಕಡ 7ಕ್ಕಿಂತ ಹೆಚ್ಚಾಗಿದೆ. ಹಣದುಬ್ಬರ ಕಡಿಮೆ ಆಗುತ್ತಿಲ್ಲ
ವಾದ ಕಾರಣಕ್ಕೇ, ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರ ತಗ್ಗಿಸಲು ಮುಂದಾಗುತ್ತಿಲ್ಲ. ರೆಪೊ ದರವನ್ನು ಶೇಕಡ 4ರ ಪ್ರಮಾಣದಲ್ಲೇ ಕಾಯ್ದುಕೊಳ್ಳಲು ಸಮಿತಿಯು ಕಳೆದ ವಾರ ತೀರ್ಮಾನಿಸಿದೆ. ರೆಪೊ ದರವನ್ನು ಇನ್ನೂ ತಗ್ಗಿಸಿದರೆ, ಹಣದುಬ್ಬರ ಪ್ರಮಾಣಕ್ಕೂ ಠೇವಣಿಗಳ ಮೇಲಿನ ಬಡ್ಡಿಯ ಪ್ರಮಾಣಕ್ಕೂ ತಾಳೆಯೇ ಆಗದೆ ಹಣ ಮೌಲ್ಯ ಕಳೆದುಕೊಳ್ಳುವ ವೇಗ ಇನ್ನಷ್ಟು ತೀವ್ರವಾಗುವ ಅಪಾಯ ಇದ್ದೇ ಇದೆ. ಆದರೆ, ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸಬೇಕು ಎಂದು ಆರ್‌ಬಿಐಗೆ ಒಂದೆಡೆ ಸೂಚಿಸುವ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಹೆಚ್ಚುತ್ತಿದ್ದರೂ ಅವುಗಳ ಮೇಲಿನ ಸುಂಕ ತಗ್ಗಿಸಿ, ಮಾರುಕಟ್ಟೆಯಲ್ಲಿ ಬೆಲೆ ತಗ್ಗುವಂತೆ ಮಾಡುವ ಯತ್ನಕ್ಕೆ ಮುಂದಾಗಿಲ್ಲ! ಖಳರನ್ನು ಹಿಡಿಯುವಂತೆ ಪೊಲೀಸರಿಗೆ ಸೂಚನೆ ನೀಡಿ, ಆ ಕೆಲಸ ಮಾಡಲು ಅಗತ್ಯವಿರುವ ಸಾಧನಗಳನ್ನು ಅವರಿಗೆ ನೀಡದಿದ್ದರೆ ಏನಾಗಬಹುದೋ, ಅದೇ ರೀತಿಯ ಸ್ಥಿತಿ ಆರ್‌ಬಿಐಗೆ ಎದುರಾಗಬಹುದು! ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಸೇವೆಗಳು ಹಾಗೂ ಉತ್ಪನ್ನಗಳ ಬೆಲೆಗೂ ತೈಲೋತ್ಪನ್ನಗಳ ಬೆಲೆಗೂ ಸಂಬಂಧ ಇದ್ದೇ ಇರುತ್ತದೆ. ತೈಲದ ಬೆಲೆ ಹೆಚ್ಚಳವಾದರೆ ಅಗತ್ಯ ವಸ್ತುಗಳಿಂದ ಆರಂಭಿಸಿ ಹಲವು ಬಗೆಯ ಉತ್ಪನ್ನಗಳು ಹಾಗೂ ಸೇವೆಗಳ ಬೆಲೆಯಲ್ಲಿ ಹೆಚ್ಚಳ ಆಗುತ್ತದೆ. ಇದರಿಂದ ಚಿಲ್ಲರೆ ಹಣದುಬ್ಬರವು ಇನ್ನಷ್ಟು ಹೆಚ್ಚಾಗುತ್ತದೆ. ಈಗಾಗಲೇ ಶೇಕಡ 7ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವ ಹಣದುಬ್ಬರ ಪ್ರಮಾಣವು ತೈಲ ಬೆಲೆಯಲ್ಲಿನ ನಿರಂತರ ಏರಿಕೆಯ ಕಾರಣದಿಂದಾಗಿ ಇನ್ನಷ್ಟು ಹೆಚ್ಚಳ ಕಂಡರೆ ಸಮಾಜದ ಎಲ್ಲ ವರ್ಗಗಳೂ ತೊಂದರೆಗೆ ಸಿಲುಕುತ್ತವೆ. ಹಣದುಬ್ಬರವು ಅತಿ ಅನ್ನಿಸುವ ಮಟ್ಟ ತಲುಪುವುದು ಹಣದ ಮೌಲ್ಯವನ್ನು ಕುಗ್ಗಿಸುತ್ತದೆ ಎಂಬ ಅಂಶವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಏಪ್ರಿಲ್‌ 1ರಿಂದ ಜೂನ್‌ ಮೊದಲ ವಾರದವರೆಗೆ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಾವುದೇ ಹೆಚ್ಚಳ ಆಗಿರಲಿಲ್ಲ. ಕಠಿಣ ಲಾಕ್‌ಡೌನ್‌ ನಿಯಮಗಳ ಕಾರಣದಿಂದಾಗಿ ತೈಲೋತ್ಪನ್ನಗಳ ಬೇಡಿಕೆ ಕುಸಿದುಬಿದ್ದಿತ್ತು. ಅದಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಏರುಗತಿಯಲ್ಲಿ ಸಾಗಿದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನೇರವಾಗಿ ತೀರ್ಮಾನಿಸುವುದಿಲ್ಲ ಎಂಬುದು ನಿಜ. ಈ ಎರಡು ಇಂಧನಗಳ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿ ವರ್ಷಗಳೇ ಕಳೆದಿವೆ. ನಿಜ ಅರ್ಥದಲ್ಲಿ, ನಿಯಂತ್ರಣ ಮುಕ್ತಗೊಳಿಸಿದ ಇಂಧನಗಳ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಾಗ ದೇಶಿ ಮಾರುಕಟ್ಟೆಯಲ್ಲೂ ಅದಕ್ಕೆ ಸಮನಾಗಿ ಕಡಿಮೆ ಆಗಬೇಕಿತ್ತು. ಆದರೆ, ವಾಸ್ತವ ಹಾಗಿಲ್ಲ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಜನವರಿಯಲ್ಲಿ ಬ್ಯಾರೆಲ್‌ಗೆ 68 ಅಮೆರಿಕನ್ ಡಾಲರ್ ಇತ್ತು. ಏಪ್ರಿಲ್‌ ಮೂರು ಮತ್ತು ನಾಲ್ಕನೆಯ ವಾರದ ಹೊತ್ತಿಗೆ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಸರಿಸುಮಾರು ಶೇಕಡ 70ರಷ್ಟು ಇಳಿಕೆ ಆಗಿತ್ತು. ಹೀಗಿದ್ದರೂ, ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆಯಲ್ಲಿ ಶೇಕಡ 70ರಷ್ಟು ಇಳಿಕೆಯೇನೂ ಆಗಲಿಲ್ಲ! ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಆದ ತಕ್ಷಣ ಅದನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದಷ್ಟೇ ಅಲ್ಲ, ಅಲ್ಲಿ ಬೆಲೆ ತಗ್ಗಿದಾಗ ಇಲ್ಲಿಯೂ ಅದಕ್ಕೆ ಸಮನಾಗಿ ಬೆಲೆ ತಗ್ಗಿಸುವುದು ‘ನಿಯಂತ್ರಣ ಮುಕ್ತ’ ಎಂಬುದರ ಅರ್ಥ ಎನ್ನುವುದು ಆಳುವವರಿಗೆ ತಿಳಿದಿರಬೇಕು. ಇಲ್ಲದಿದ್ದರೆ, ‘ನಿಯಂತ್ರಣ ಮುಕ್ತ’ ಎಂಬುದು ಹಾಸ್ಯದ ವಸ್ತುವಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆದಾಗಲೆಲ್ಲ, ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಮೇಲಿನ ಸುಂಕ, ವ್ಯಾಟ್, ಸೆಸ್ ಇತ್ಯಾದಿ ಹೆಚ್ಚಿಸಿ ಬೆಲೆ ಇಳಿಕೆಯ ಪ್ರಯೋಜನ ಜನಸಾಮಾನ್ಯರಿಗೆ ದಕ್ಕದಂತೆ ಮಾಡುವುದು ನೈತಿಕವಾಗಿ ಎಷ್ಟು ಸರಿ ಎನ್ನುವ ಆತ್ಮಾವಲೋಕನಕ್ಕೂ ಆಳುವ ವರ್ಗ ಮುಂದಾದರೆ ಒಳಿತು. ತೈಲ ಬೆಲೆ ಇಳಿಸುವ ವಿಚಾರದಲ್ಲಿ ರಾಜ್ಯಗಳ ಪಾಲೂ ಇದೆ. ಅವು ಕೂಡ ತಮ್ಮ ಕೈಲಾದ ಕೆಲಸ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT