ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ನಾವೀನ್ಯ: ಕ್ರಮಿಸಬೇಕಾದ ಹಾದಿ ಇನ್ನೂ ಬಹು ದೂರವಿದೆ

Last Updated 27 ಜುಲೈ 2022, 2:44 IST
ಅಕ್ಷರ ಗಾತ್ರ

ನೀತಿ ಆಯೋಗವು ಸಿದ್ಧಪಡಿಸಿದ ‘ಭಾರತ ನಾವೀನ್ಯ ಸೂಚ್ಯಂಕ–2021’ರಲ್ಲಿ ದೇಶದ ಪ್ರಮುಖ ರಾಜ್ಯಗಳ ವಿಭಾಗದಲ್ಲಿ ಕರ್ನಾಟಕ ಮೊದಲ ಸ್ಥಾನ ಗಳಿಸಿರುವುದು ಅಚ್ಚರಿಯ ಸಂಗತಿಯೇನಲ್ಲ. ಏಕೆಂದರೆ,ಇದುವರೆಗೆ ಬಂದ ಮೂರೂ ಸೂಚ್ಯಂಕಗಳಲ್ಲಿ ರಾಜ್ಯವು ಅಗ್ರಸ್ಥಾನವನ್ನು ಕಾಯ್ದುಕೊಳ್ಳು ತ್ತಲೇ ಬಂದಿದೆ.ಸಾಂಸ್ಥಿಕ ಬೆಂಬಲ,ನಾವೀನ್ಯಕ್ಕೆ ಉತ್ತೇಜನ,ಮಾರುಕಟ್ಟೆ ಲಭ್ಯತೆ,ಸರ್ಕಾರದಿಂದ ದೊರೆತ ಪೋಷಣೆ,ಹಣಕಾಸು ನೆರವು,ಸಾಮರ್ಥ್ಯವೃದ್ಧಿ ಅವಕಾಶ ಮತ್ತು ಮಾರ್ಗದರ್ಶನ– ಈ ಅಂಶಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ನವೋದ್ಯಮಕ್ಕೆ ಉತ್ತೇಜನ ಕೊಡುವುದು ಮತ್ತು ರಾಜ್ಯಗಳಲ್ಲಿ ಅನುಸರಿಸುತ್ತಿರುವ ಅತ್ಯುತ್ತಮ ಪದ್ಧತಿಗಳು ಪರಸ್ಪರರಿಗೆ ತಿಳಿಯುವಂತೆ ಮಾಡುವುದು ಶ್ರೇಣೀಕರಣದ ಉದ್ದೇಶ. ಕರ್ನಾಟಕದ ಸಾಧನೆ ತೃಪ್ತಿಕರವಾಗಿ
ದ್ದರೂ ಅದೇ ಖುಷಿಯಲ್ಲಿ ಮೈಮರೆಯುವಂತಿಲ್ಲ.ಈ ಸಲದ ಸೂಚ್ಯಂಕದಲ್ಲಿ,ಈಶಾನ್ಯ ರಾಜ್ಯಗಳ ವಿಭಾಗದಲ್ಲಿ ಮಣಿಪುರ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಚಂಡೀಗಡ ಮೊದಲ ಸ್ಥಾನ ಪಡೆದಿವೆ.ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಯಾವ ರಾಜ್ಯ,ಎಷ್ಟೊಂದು ಪ್ರಗತಿ ಸಾಧಿಸಿದೆ ಎನ್ನುವುದಕ್ಕೂ ಈ ಸೂಚ್ಯಂಕವನ್ನು ಒಂದು ಮಾನದಂಡವಾಗಿ ನೋಡಲಾಗುತ್ತದೆ. ಕೈಗಾರಿಕೆ,ಕೃಷಿ ಮತ್ತು ಸೇವಾ ವಲಯದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಗೆ ವೇಗವನ್ನು ನೀಡುವಲ್ಲಿ ವಿಜ್ಞಾನ,ತಂತ್ರಜ್ಞಾನ ಮತ್ತು ನಾವೀನ್ಯವು ಚಾಲನಾ ಶಕ್ತಿಯಾಗಿವೆ. ಹೊಸ ಆಲೋಚನೆಗಳು ಮತ್ತು ತಂತ್ರಜ್ಞಾನಗಳಿಂದ ಕೂಡಿದ ನಾವೀನ್ಯವು ನವ ಉತ್ಪನ್ನ ಹಾಗೂ ಸೇವೆಗಳ ಜನಕ ಎನಿಸಿದೆ. ಅಸ್ತಿತ್ವ ದಲ್ಲಿರುವ ಸೇವೆಗಳ ಕ್ಷಮತೆ ಹೆಚ್ಚಿಸುವಲ್ಲಿಯೂ ಅದರ ನೆರವು ಸಿಗುತ್ತದೆ. ಯಾವ ದೇಶ ಮತ್ತು ಸಮುದಾಯವು ನಾವೀನ್ಯದಲ್ಲಿ ಮುಂದಿರುವುದಿಲ್ಲವೋ ಅದು ಅಭಿವೃದ್ಧಿಯ ವಿಷಯದಲ್ಲಿ ಉಳಿದ ವರಿಗೆ ಸಮಾನವಾಗಿ ಹೆಜ್ಜೆ ಹಾಕುವುದು ಕಷ್ಟ.

ದೇಶದಲ್ಲಿ ನಾವೀನ್ಯವು ಇಷ್ಟೊಂದು ಸದ್ದು ಮಾಡಲು ನವೋದ್ಯಮಗಳೇ ಕಾರಣ. ಅದರಲ್ಲೂ ಕರ್ನಾಟಕದಲ್ಲಿ ನವೋದ್ಯಮಗಳ ಬೆಳವಣಿಗೆಗೆ ‍ಪೂರಕವಾದ ವಾತಾವರಣ ಇದೆ.ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲದ ವಿಷಯದಲ್ಲಿಯೂ ಬೇರೆ ರಾಜ್ಯಗಳಿಗಿಂತ ಶ್ರೀಮಂತವಾಗಿದೆ. 2016–17ರಲ್ಲಿ 733ರಷ್ಟಿದ್ದ ನವೋದ್ಯಮಗಳು 2020–21ರ ವೇಳೆಗೆ 67,128ಕ್ಕೆ ತಲುಪಿವೆ. ಕೋವಿಡ್‌ ಪೀಡಿತ ವರ್ಷಗಳಲ್ಲೂ ಶಿಕ್ಷಣ ಸೇರಿದಂತೆ ಕೆಲವು ಕ್ಷೇತ್ರಗಳು ನಾವೀನ್ಯದಿಂದಾಗಿ ಅತ್ಯಧಿಕ ಲಾಭ ಪಡೆದಿವೆ. ಹೊಸ ಆವಿಷ್ಕಾರಗಳಿಂದ ಆ ಕ್ಷೇತ್ರಗಳಲ್ಲಿ ಭಾರಿ ಬದಲಾವಣೆಗಳೂ ಆಗಿವೆ. ಆದರೆ,ಜಾಗತಿಕ ನಾವೀನ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ಗಮನಿಸಿದರೆ ಅಭಿವೃದ್ಧಿಯ ಹಾದಿಯಲ್ಲಿ ಅದು ಇನ್ನೂ ಬಹಳಷ್ಟು ದೂರ ಕ್ರಮಿಸಬೇಕಾಗಿದೆ. 2021ರ ಸೂಚ್ಯಂಕದಲ್ಲಿ ನಮ್ಮ ದೇಶ 46ನೇ ಸ್ಥಾನದಲ್ಲಿದೆ. ಅತ್ಯಧಿಕ ಜನಸಂಖ್ಯೆಯ ವಿಚಾರದಲ್ಲಿ ಇನ್ನೇನು ಚೀನಾವನ್ನು ಹಿಂದಿಕ್ಕಲಿರುವ ಭಾರತ,ಅಷ್ಟೊಂದು ಜನಸಂಖ್ಯೆಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಪ್ರತಿಯೊಂದು ಕ್ಷೇತ್ರದಲ್ಲಿಯೂ ನಾವೀನ್ಯದೊಂದಿಗೆ ದಾಪುಗಾಲು ಹಾಕಬೇಕಿದೆ.

ಜಾಗತಿಕ ನಾವೀನ್ಯ ಸೂಚ್ಯಂಕದ ಮೊದಲ 25 ರಾಷ್ಟ್ರಗಳಲ್ಲಿ ತಾನೂ ಒಂದಾಗಬೇಕು ಎಂಬ ಕನಸನ್ನೇನೋ ಭಾರತ ಕಾಣುತ್ತಿದೆ. ಅದಕ್ಕೆ ಏನೇನು ಮಾಡಬೇಕು ಎಂಬುದನ್ನೂ ನೀತಿ ಆಯೋಗದ ವರದಿಯಲ್ಲಿ ಪಟ್ಟಿ ಮಾಡಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವ್ಯಯಿಸುತ್ತಿರುವ ನಿವ್ವಳ ಆಂತರಿಕ ವೆಚ್ಚದ (ಜಿಡಿಇಆರ್‌ಡಿ) ಪ್ರಮಾಣವನ್ನು ಹೆಚ್ಚಿಸಬೇಕು ಎನ್ನುವುದು ಅವುಗಳಲ್ಲಿ ಒಂದು. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸದ್ಯ ಖರ್ಚು ಮಾಡುತ್ತಿರುವ ಪ್ರಮಾಣವು ನಿವ್ವಳ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 0.7ರಷ್ಟು ಮಾತ್ರ. ಆ ಪ್ರಮಾಣವನ್ನು ಕನಿಷ್ಠ ಶೇ 2ಕ್ಕೆ ಹೆಚ್ಚಿಸಬೇಕು ಎಂದು ವರದಿ ಒತ್ತಾಯಿಸುತ್ತದೆ. ಕೈಗಾರಿಕಾ ವಲಯಕ್ಕೆ ಅಗತ್ಯವಿರುವ ಪ್ರತಿಭಾವಂತರ ಪ್ರಮಾಣ ಹಾಗೂ ಈಗ ಶಿಕ್ಷಣ ಸಂಸ್ಥೆಗಳಿಂದ ಸಿಗುತ್ತಿರುವ ಪ್ರತಿಭಾವಂತರ ಪ್ರಮಾಣದ ನಡುವೆ ಇರುವ ಅಂತರವನ್ನು ಕಡಿಮೆ ಮಾಡಬೇಕು ಎನ್ನುವ ಶಿಫಾರಸನ್ನೂ ಮಾಡಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಖಾಸಗಿ ಪಾಲುದಾರಿಕೆ ಎಷ್ಟೊಂದು ಮಹತ್ವದ್ದು ಎನ್ನುವುದು ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆದಿರುವ ಬೆಳವಣಿಗೆಗಳನ್ನು ನೋಡಿದರೆ ಗೊತ್ತಾಗುತ್ತದೆ. ನಾವೀನ್ಯವನ್ನು ಉತ್ತೇಜಿಸಲು ವಿಶ್ವವಿದ್ಯಾಲಯಗಳು,ಕೈಗಾರಿಕೆಗಳು,ನಿಯಂತ್ರಣಾ ಪ್ರಾಧಿಕಾರಗಳು ಒಟ್ಟಾಗಿ ಕೆಲಸ ಮಾಡುವಂತಹ ಮತ್ತು ಸಮರ್ಪಕ ನೀತಿಗಳ ಮೂಲಕ ಈ ಸಂಶೋಧನಾ ಚಟುವಟಿಕೆಗಳಿಗೆ ಬೆಂಬಲವನ್ನೂ ನೀಡುವಂತಹ ವಾತಾವರಣ ನಿರ್ಮಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT